ಅಹಮದಾಬಾದ್: ಪಕ್ಷದ ಹಿತದೃಷ್ಠಿಯಿಂದ ಬಿಜೆಪಿ ಪರ ಕೆಲಸ ಮಾಡುತ್ತಿರುವ ನಾಯಕರು ಹಾಗೂ ಕಾರ್ಯರ್ತರನ್ನು ಪಕ್ಷದಿಂದ ಹೊರಗಿಡುವ ಅಗತ್ಯ ಇದೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹೇಳಿದ್ದಾರೆ.
ಗುಜರಾತ್ ಪ್ರವಾಸ ಕೈಗೊಂಡಿರುವ ರಾಹುಲ್ ಅವರು, ಅಹಮದಾಬಾದ್ ನಲ್ಲಿ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡುತ್ತಾ ಕಾಂಗ್ರೆಸ್ ಕಾರ್ಯಕರ್ತರು ಹಾಗೂ ನಾಯಕರಲ್ಲಿರುವ ಎರಡು ಗುಂಪುಗಳನ್ನು ಬೇರ್ಪಡಿಸುವುದು ಪಕ್ಷದ ಮೊದಲ ಕೆಲಸ. ಕಾಂಗ್ರೆಸ್‌ನ ಸಿದ್ಧಾಂತವನ್ನು ತಮ್ಮ ಹೃದಯದಲ್ಲಿ ಇಟ್ಟುಕೊಂಡು, ಸದಾ ಸಾರ್ವಜನಿಕರೊಂದಿಗೆ ನಿಲ್ಲುವವರು ಒಂದು ಗುಂಪಿನಲ್ಲಿದ್ದಾರೆ. ಸಾರ್ವಜನಿಕರಿಂದ ಸಂಪರ್ಕ ಕಡಿದುಕೊಂಡಿರುವವರು ಮತ್ತೊಂದು ಗುಂಪಿನಲ್ಲಿದ್ದು, ಅವರಲ್ಲಿ ಹೆಚ್ಚಿನವರು ಬಿಜೆಪಿ ಜೊತೆಗಿದ್ದಾರೆ ಎಂದು ಹೇಳಿದ್ದಾರೆ.
2027 ವಿಧಾನಸಭೆ ಚುನಾವಣೆಯನ್ನು ಗಮನದಲ್ಲಿರಿಸಿ ರಾಜ್ಯಕ್ಕೆ ಎರಡು ದಿನಗಳ ಭೇಟಿ ನೀಡಿರುವ ರಾಹುಲ್, ಪಕ್ಷದ ರಾಜ್ಯ ಘಟಕದಲ್ಲಿ ಪ್ರಮುಖ ಬದಲಾವಣೆಗಳನ್ನು ತರುವ ಸುಳಿವು ಹಾಗೂ ಬಿಜೆಪಿಯನ್ನು ಸೋಲಿಸುವ ನಿಟ್ಟಿನಲ್ಲಿ ಕಾರ್ಯತಂತ್ರ ರೂಪಿಸುವ ಭರವಸೆ ನೀಡಿದ್ದಾರೆ.
ಗುಜರಾತ್ ಕಾಂಗ್ರೆಸ್ ನಾಯಕರು ಹಾಗೂ ಕಾರ್ಯಕರ್ತರಲ್ಲಿ ಎರಡು ರೀತಿಯವರಿದ್ದಾರೆ. ಅದರಲ್ಲಿ, ಜನರೊಂದಿಗೆ ಪ್ರಾಮಾಣಿಕವಾಗಿ ನಡೆದುಕೊಳ್ಳುವವರು, ಅವರಿಗಾಗಿ ಹೋರಾಟ ಮಾಡುವವರು, ಸಾರ್ವಜನಿಕರನ್ನು ಗೌರವಿಸುವವರು ಮತ್ತು ಕಾಂಗ್ರೆಸ್ ಸಿದ್ಧಾಂತವನ್ನು ಹೃದಯದಲ್ಲಿ ಇಟ್ಟುಕೊಂಡಿರುವವರು ಇದ್ದಾರೆ. ಮತ್ತೊಂದು ಕಡೆ, ಜನಸಾಮಾನ್ಯರಿಂದ ಅಂತರ ಕಾಯ್ದುಕೊಂಡು, ಅವರಿಗೆ ಗೌರವವನ್ನೂ ನೀಡದಿರುವವರೂ ಇದ್ದಾರೆ. ಅವರಲ್ಲಿ ಹೆಚ್ಚಿನವರು ಬಿಜೆಪಿ ಪರ ಇದ್ದಾರೆ ಎಂದು ರಾಹುಲ್ ಹೇಳಿದ್ದಾರೆ.
ಪಕ್ಷದಲ್ಲಿದ್ದುಕೊಂಡೇ ಬಿಜೆಪಿ ಪರ ಇರುವ ನಾಯಕರನ್ನು ಪಕ್ಷದಿಂದ ಹೊರಗಿಡುವ ಕಠಿಣ ಕ್ರಮ ಕೈಗೊಂಡರೂ ಸರಿ, ಈ ಗುಂಪುಗಳನ್ನು ಪ್ರತ್ಯೇಕಿಸುವುದು ಪಕ್ಷದ ಮೊದಲ ಕೆಲಸವಾಗಬೇಕು. ಈ ಗುಂಪುಗಳು ಬೇರೆ ಬೇರೆಯಾಗುವವರೆಗೆ ಗುಜರಾತ್ ರಾಜ್ಯದ ಜನರು ಪಕ್ಷವನ್ನು ನಂಬುವುದಿಲ್ಲ. ಪಕ್ಷವು ನಮ್ಮ ನಾಯಕರ ಹೃದಯದಲ್ಲಿ ಸ್ಥಾನ ಪಡೆಯಬೇಕು. ಅಂತಹ ನಾಯಕರ ರಕ್ತದಲ್ಲಿ ಕಾಂಗ್ರೆಸ್ ಬೆರೆತಿರಬೇಕು. ಚುನಾವಣೆಯಲ್ಲಿ ಗೆಲುವು,ಸೋಲಿನ ವಿಚಾರವನ್ನು ಪಕ್ಕಕ್ಕಿಡಿ ಎಂದು ಸಲಹೆ ನೀಡಿದ್ದಾರೆ. ರಾಜ್ಯದ ಜನರು, ವಜ್ರ, ಜವಳಿ ಮತ್ತು ಸೆರಾಮಿಕ್ ಉದ್ಯಮವು ಸಂಕಷ್ಟದಲ್ಲಿದೆ ಎಂದೂ ಕಾಂಗ್ರೆಸ್ ನಾಯಕ ಕಳವಳ ವ್ಯಕ್ತಪಡಿಸಿದ್ದಾರೆ.
ಗುಜರಾತ್ ರೈತರು ಹೊಸ ದೃಷ್ಟಿಕೋನವನ್ನು ಎದುರು ನೋಡುತ್ತಿದ್ದಾರೆ. ಕಳೆದ 20–25 ವರ್ಷಗಳಲ್ಲಿ ಸರ್ಕಾರದ ಯೋಜನೆಗಳು ವಿಫಲವಾಗಿವೆ. ಕಾಂಗ್ರೆಸ್ ಆ ನಿಟ್ಟಿನಲ್ಲಿ ಹೊಸ ದೂರದೃಷ್ಟಿಯನ್ನು ಒದಗಿಸಬಲ್ಲದು. ಆದರೆ, ಪಕ್ಷದಲ್ಲಿರುವ ಎರಡು ರೀತಿಯ ಜನರನ್ನು ಪತ್ತೆ ಹಚ್ಚಿ ಬೇರ್ಪಡಿಸದ ಹೊರತು ಅದು ಸಾಧ್ಯವಿಲ್ಲ ಎಂದು ಪ್ರತಿಪಾದಿಸಿದ್ದಾರೆ. ಗುಜರಾತ್ ವಿಧಾನಸಭೆಯು 182 ಸದಸ್ಯ ಬಲವನ್ನು ಹೊಂದಿದೆ. 2022ರಲ್ಲಿ ನಡೆದ ಚುಣಾವಣೆಯಲ್ಲಿ ಕಾಂಗ್ರೆಸ್ ಕೇವಲ 17 ಸ್ಥಾನಗಳನ್ನು ಗೆದ್ದಿತ್ತು.