ಕೇಂದ್ರ ಸರ್ಕಾರದಿಂದ ರಾಜ್ಯಕ್ಕೆ ಅನ್ಯಾಯ; ಸಿಎಂ ಸಿದ್ದರಾಮಯ್ಯ ಆಕ್ರೋಶ: ರಾಜ್ಯಕ್ಕೆ 2,53,287 ಕೋಟಿ ರೂ. ರಾಜಸ್ವ ನಷ್ಟ

Most read

ಬೆಂಗಳೂರು: 2025-26ರ ಆಯವ್ಯಯವು ನಾನು ಮಂಡಿಸಿರುವ 16ನೇ ಆಯವ್ಯಯವಾಗಿದೆ. ನಾನು ಈವರೆಗೂ ಮಂಡಿಸಿರುವ ಪ್ರತಿ ಆಯವ್ಯಯದಲ್ಲಿಯೂ ವಿತ್ತೀಯ ಶಿಸ್ತನ್ನು ಪಾಲಿಸುವುದರ ಜೊತೆಗೆ ಬಡವರ, ಮಹಿಳೆಯರ, ಶೋಷಿತರ, ದುರ್ಬಲ ವರ್ಗದವರ ಏಳಿಗೆಗೆ ಹಲವು ಜನಕಲ್ಯಾಣ ಕಾರ್ಯಕ್ರಮಗಳನ್ನು ಜಾರಿಗೆ ತಂದಿರುತ್ತೇನೆ. ಅಲ್ಲದೆ, ರಾಜ್ಯದ ಆರ್ಥಿಕ ಪ್ರಗತಿಗಾಗಿ ಬಂಡವಾಳ ಯೋಜನೆಗಳಿಗೆ ಹೆಚ್ಚಿನ ಅನುದಾನ ನೀಡಿರುತ್ತೇನೆ. ನಾನು ಮಂಡಿಸಿರುವ ಈ 16ನೇ ಆಯವ್ಯಯವು ಇದೇ ಧ್ಯೇಯದೊಂದಿಗೆ ರೂಪಿತವಾಗಿದೆ.

ರಾಜ್ಯಕ್ಕೆ ಕೇಂದ್ರ ಸರ್ಕಾರದಿಂದ ಸ್ವೀಕೃತವಾಗುವ ರಾಜಸ್ವವು ಗಣನೀಯವಾಗಿ ಕಡಿಮೆಯಾಗಿದೆ. ಜಿ.ಎಸ್.ಟಿ ಪರಿಹಾರ ನಿಲ್ಲಿಸಿರುವುದರಿಂದ, 15ನೇ ಹಣಕಾಸು ಆಯೋಗದಲ್ಲಿ ರಾಜ್ಯದ ತೆರಿಗೆ ಪಾಲು ಕಡಿಮೆಯಾಗಿರುವುದರಿಂದ, ಕೇಂದ್ರ ಸರ್ಕಾರ ವಿಧಿಸುವ ಸೆಸ್ ಮತ್ತು ಸರ್ ಚಾರ್ಜ್ ಗಳನ್ನು ರಾಜ್ಯಗಳಿಗೆ ಹಂಚಿಕೆ ಮಾಡದ ಕಾರಣ ಮತ್ತು ಹಣಕಾಸು ಆಯೋಗವು ರಾಜ್ಯಕ್ಕೆ ಶಿಫಾರಸ್ಸು ಮಾಡಿದ ವಿಶೇಷ ಅನುದಾನವನ್ನು ಬಿಡುಗಡೆ ಮಾಡದ ಕಾರಣ ರಾಜ್ಯಕ್ಕೆ 2,53,287 ಕೋಟಿ ರೂ.ಗಳ ರಾಜಸ್ವ ನಷ್ಟವಾಗಿರುತ್ತದೆ. ಕೇಂದ್ರ ಸರ್ಕಾರದ ಈ ಮಲತಾಯಿ ಧೋರಣೆಗೆ ಎದೆಗುಂದದೆ, ಸ್ವಂತ ಸಂಪನ್ಮೂಲವನ್ನು ಕ್ರೋಢೀಕರಿಸುವ ಮೂಲಕ ರಾಜ್ಯದ ವೆಚ್ಚ ನಿರ್ವಹಣೆಯನ್ನು ಯಶಸ್ವಿಯಾಗಿ ನಿರ್ವಹಿಸಲಾಗಿರುತ್ತದೆ.

2025-26ನೇ ಸಾಲಿನ ಆಯವ್ಯಯ ಗಾತ್ರವು 4,09,549 ಕೋಟಿ ರೂ.ಗಳಾಗಿರುತ್ತದೆ. ಮೊದಲ ಬಾರಿಗೆ ನಮ್ಮ ರಾಜ್ಯದ ಆಯವ್ಯಯ ಗಾತ್ರ ೪ ಲಕ್ಷ ಕೋಟಿ ರೂ. ಗಳ ಗಡಿ ದಾಟಿರುವುದು, ಒಂದು ಹೊಸ ಮೈಲುಗಲ್ಲು. 2024-25ನೇ ಸಾಲಿನ ಆಯವ್ಯಯಕ್ಕೆ ಹೋಲಿಸಿದರೆ 2025-26ನೇ ಸಾಲಿನಲ್ಲಿ ಆಯವ್ಯಯ ಗಾತ್ರವು ಶೇ.10.3 ರಷ್ಟು ಹೆಚ್ಚಳವಾಗಿದೆ. ಕಳೆದ ಎರಡು ವರ್ಷಗಳಲ್ಲಿ ರಾಜ್ಯದ ಆಯವ್ಯಯ ಗಾತ್ರವು ಗಣನೀಯವಾಗಿ ಹೆಚ್ಚಳವಾಗಿದೆ. 2022-23ರಲ್ಲಿ 2,65,720 ಕೋಟಿ ರೂ.ಗಳಷ್ಟಿದ್ದ ಆಯವ್ಯಯ ಗಾತ್ರವು 2025-26ರ ಆಯವ್ಯಯದಲ್ಲಿ 4,09,549 ಕೋಟಿ ರೂ.ಗಳಿಗೆ ಹೆಚ್ಚಳವಾಗಿದೆ. ಆಯವ್ಯಯ ಗಾತ್ರವು ಶೇ.54ರಷ್ಟು ಹೆಚ್ಚಳವಾಗಿದೆ.

ನಮ್ಮ ಸರ್ಕಾರವು ಅಧಿಕಾರಕ್ಕೆ ಬಂದ ಆರಂಭದಲ್ಲಿ ವಿಪಕ್ಷದವರು ಗ್ಯಾರಂಟಿ ಯೋಜನೆಗಳನ್ನು ಟೀಕಿಸಿದರು ಹಾಗೂ ಈ ಯೋಜನೆಗಳು ಯಶಸ್ವಿಯಾಗುವುದಿಲ್ಲ ಎಂಬ ನಕಾರಾತ್ಮಕ ಧೋರಣೆ ವ್ಯಕ್ತಪಡಿಸಿದರು. ಆದರೆ ನಮ್ಮ ಸರ್ಕಾರವು ಅಧಿಕಾರಕ್ಕೆ ಬಂದಾಗಿನಿಂದ ಅಗತ್ಯ ಅನುದಾನ ಒದಗಿಸುವ ಮೂಲಕ ಐದು ಗ್ಯಾರಂಟಿ ಯೋಜನೆಗಳನ್ನು ಯಶಸ್ವಿಯಾಗಿ ಜಾರಿಗೆ ತಂದಿರುತ್ತೇವೆ. 2025-26ನೇ ಆಯವ್ಯಯದಲ್ಲಿ ಗ್ಯಾರಂಟಿ ಯೋಜನೆಗಳಿಗೆ ಒಟ್ಟು 51,034 ಕೋಟಿ ರೂ.ಗಳ ಅನುದಾನ ಒದಗಿಸಲಾಗಿದೆ. ಗ್ಯಾರಂಟಿ ಯೋಜನೆಗಳನ್ನು ಟೀಕಿಸಿದ ವಿಪಕ್ಷದವರು ಈಗ ತಾವು ಆಡಳಿತದಲ್ಲಿರುವ ರಾಜ್ಯಗಳಲ್ಲಿ ನಮ್ಮ ರಾಜ್ಯದ ಮಾದರಿಯಲ್ಲಿ ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತಂದಿರುತ್ತಾರೆ.

ಬಂಡವಾಳ ಯೋಜನೆಗಳಿಗೆ ಗಣನೀಯ ಹಂಚಿಕೆ ಮಾಡುವ ಮೂಲಕ ರಾಜ್ಯದ ಆರ್ಥಿಕ ಅಭಿವೃದ್ಧಿಗೆ ಹೊಸ ದಿಕ್ಸೂಚಿಯನ್ನು ಒದಗಿಸುವ ಕಾರಣಕ್ಕೆ 2025-26ನೇ ಸಾಲಿನ ಆಯವ್ಯಯವು ಮಹತ್ವಪೂರ್ಣವಾಗಿದೆ. ಬಂಡವಾಳ ಯೋಜನೆಗಳಿಗೆ ನೀಡಿರುವ ಒಟ್ಟು ಅನುದಾನವು (Gross) 2024-25ರಲ್ಲಿ ಅಂದಾಜಿಸಿದ್ದ 56,492 ಕೋಟಿ ರೂ.ಗಳಿಂದ 2025-26ನೇ ಸಾಲಿನಲ್ಲಿ 83,200 ಕೋಟಿ ರೂ.ಗಳಿಗೆ ಹೆಚ್ಚಳವಾಗಿದೆ. ಇದು ಕಳೆದ ವರ್ಷಕ್ಕೆ ಹೋಲಿಸಿದರೆ ಶೇ. 47.3 ರಷ್ಟು ಹೆಚ್ಚಳವನ್ನು ಕಂಡಿದೆ. ಬಂಡವಾಳ ವೆಚ್ಚದ ಈ ಹೆಚ್ಚಳವು ಐತಿಹಾಸಿಕ ಎಂದು ಹೇಳಲು ನಾನು ಹೆಮ್ಮೆ ಪಡುತ್ತೇನೆ. ಇದು ರಾಜ್ಯದ ಒಟ್ಟಾರೆ ಆಂತರಿಕ ಉತ್ಪನ್ನದ (GSDP) ಶೇ. 2.32 ರಷ್ಟಿದೆ. ಕಳೆದ ವರ್ಷ ಇದು ಶೇ. 1.99 ರಷ್ಟಿತ್ತು. GSDP ಹೆಚ್ಚಳಕ್ಕೆ ಅನುಗುಣವಾಗಿ ರಾಜ್ಯದ ಬಂಡವಾಳವನ್ನು ಸಹ ಹೆಚ್ಚಿಸಲಾಗಿದೆ. ಕರ್ನಾಟಕವನ್ನು ದೇಶದ ನಂ. 1 ಆರ್ಥಿಕತೆಯನ್ನಾಗಿ ಮಾಡುವತ್ತ ನಾವು ದಿಟ್ಟ ಹೆಜ್ಜೆಯಿಟ್ಟಿದ್ದೇವೆ. 2025-26ನೇ ಸಾಲಿನಲ್ಲಿ ಪ್ರಮುಖವಾಗಿ ನೀರಾವರಿ, ರಸ್ತೆ ಅಭಿವೃದ್ಧಿ, ಮೂಲಭೂತ ಸೌಕರ್ಯ ಮತ್ತು ಬೆಂಗಳೂರಿನ ಸಮಗ್ರ ಅಭಿವೃದ್ಧಿಗೆ ಆದ್ಯತೆ ನೀಡಲಾಗಿದೆ.
ಕೇಂದ್ರ ಸರ್ಕಾರದ ಬಂಡವಾಳ ವೆಚ್ಚವು 2024-25ನೇ ಸಾಲಿನ ಆಯವ್ಯಯದಲ್ಲಿನ ಅಂದಾಜು 11.11 ಲಕ್ಷ ಕೋಟಿ ರೂ.ಗಳಿಂದ 2025-26ನೇ ಸಾಲಿನಲ್ಲಿ 11.21 ಲಕ್ಷ ಕೋಟಿ ರೂ.ಗಳಿಗೆ ಹೆಚ್ಚಳವಾಗಿರುತ್ತದೆ. ಕಳೆದ ಸಾಲಿಗೆ ಹೋಲಿಸಿದರೆ 9,979 ಕೋಟಿ ರೂ.ಗಳು ಅಂದರೆ ಕೇವಲ ಶೇ. 0.9ರಷ್ಟು ಮಾತ್ರ ಹೆಚ್ಚಳವಾಗಿರುತ್ತದೆ. ಅಲ್ಲದೆ, ರಾಜ್ಯದ ಹಲವಾರು ಮೂಲಸೌಕರ್ಯ ಯೋಜನೆಗಳಿಗೆ ಕೇಂದ್ರ ಸರ್ಕಾರವು ಸಮರ್ಪಕವಾಗಿ ಹಣ ಹಂಚಿಕೆಯನ್ನು ಮಾಡಲು ವಿಫಲವಾಗಿದೆ.

ರಾಜ್ಯ ರಾಜಧಾನಿಯ ಮೂಲಸೌಕರ್ಯ ಅಗತ್ಯಗಳನ್ನು ಪೂರೈಸಲು, ಮುಂದಿನ ಮೂರು ವರ್ಷಗಳಲ್ಲಿ ರೂ. 54,000 ಕೋಟಿ ಹೂಡಿಕೆಯೊಂದಿಗೆ 120 ಕಿ.ಮೀ. ಫ್ಲೈಓವರ್ ಮತ್ತು ಗ್ರೇಡ್ ಸೆಪರೇಟರ್, ಕಾಲುವೆಗಳ ಬಫರ್ ವಲಯಗಳ ಉದ್ದಕ್ಕೂ 320 ಕಿ.ಮೀ. ಹೊಸ ರಸ್ತೆಗಳು, ಹೆಚ್ಚು ವಾಹನ ಸಾಮರ್ಥ್ಯವಿರುವ ರಸ್ತೆಗಳ ಸುಧಾರಣೆ ಮತ್ತು ಡಬಲ್ ಡೆಕ್ಕರ್ ಫ್ಲೈಓವರ್ನಂತಹ ಯೋಜನೆಗಳನ್ನು ಕೈಗೊಳ್ಳಲ್ಲಿದ್ದೇವೆ. ಇದಲ್ಲದೆ, ಬೆಂಗಳೂರಿಗೆ 27,000 ಕೋಟಿ ರೂ.ಗಳ ವೆಚ್ಚದಲ್ಲಿ ಹೊಸ Peripheral Ring Road ಮತ್ತು ವಾಹನ ದಟ್ಟಣೆಯನ್ನು ಕಡಿಮೆ ಮಾಡಲು 40,000 ಕೋಟಿ ರೂ.ಗಳ ವೆಚ್ಚದಲ್ಲಿ ಭೂ ಸುರಂಗ ರಸ್ತೆಯನ್ನು ನಿರ್ಮಿಸಲಾಗುವುದು. 2025-26ನೇ ಸಾಲಿನಲ್ಲಿ, ಬೆಂಗಳೂರಿನ ಮೂಲಸೌಕರ್ಯ ಅಭಿವೃದ್ಧಿಗಾಗಿ ಒದಗಿಸಲಾಗುವ ಅನುದಾನವನ್ನುರೂ. 3,000 ಕೋಟಿಗಳಿಂದ ರೂ. 7,000 ಕೋಟಿಗಳಿಗೆ ಹೆಚ್ಚಿಸಲಾಗಿದೆ.

ಬೆಂಗಳೂರು ಹೊರತು ಪಡಿಸಿ, ಇತರೆ ನಗರಗಳಗಲ್ಲೂ ನಾವೀನ್ಯತೆ ಮತ್ತು ಉದ್ಯಮಶೀಲತೆಯನ್ನು ಉತ್ತೇಜಿಸಲು, 1,000 ಕೋಟಿ ರೂ. ವೆಚ್ಚದ ಸ್ಥಳೀಯ ಆರ್ಥಿಕ ಆಕ್ಸಿಲರೇಟರ್ ಕಾರ್ಯಕ್ರಮ -LEAP ಪ್ರಾರಂಭಿಸಲಾಗುವುದು. 2025-26ರಲ್ಲಿ ಈ ಯೋಜನೆಗೆ 200 ಕೋಟಿ ರೂ. ಅನುದಾನ ಒದಗಿಸಲಾಗುವುದು.
ಕೇಂದ್ರ ಸರ್ಕಾರದಿಂದ ರಾಜ್ಯಕ್ಕೆ ರಾಜಸ್ವ ನಷ್ಟವಾಗಿದ್ದರೂ ಸಹ ನಾನು ಮಂಡಿಸಿರುವ ಈ ಆಯವ್ಯಯದಲ್ಲಿ ರಾಜಸ್ವ ಕೊರತೆಯನ್ನು 2024-25ರಲ್ಲಿ ಅಂದಾಜಿಸಿದ್ದ 27,354 ಕೋಟಿ ರೂ.ಗಳಿಗೆ (ಜಿ.ಎಸ್.ಡಿ.ಪಿ ಯ ಶೇ.0.96) ಎದುರಾಗಿ 2025-26ನೇ ಸಾಲಿನಲ್ಲಿ 19,262 ಕೋಟಿ ರೂ.ಗಳಿಗೆ (ಜಿ.ಎಸ್.ಡಿ.ಪಿ ಯ ಶೇ.0.63) ಕಡಿಮೆ ಮಾಡಲಾಗಿದೆ. ಗ್ಯಾರಂಟಿ ಯೋಜನೆಗಳಿಗೆ ಅಗತ್ಯ ಅನುದಾನ ಒದಗಿಸುವುದರೊಂದಿಗೆ ಹಾಗು ಆಶಾ, ಅಂಗನವಾಡಿ ಕಾರ್ಯಕರ್ತರು, ಬಿಸಿಯೂಟ ತಯಾರಕರು, ಅತಿಥಿ ಶಿಕ್ಷಕರು ಹಾಗೂ ಪದವಿ ಪೂರ್ವ ಉಪನ್ಯಾಸಕರ ಗೌರವಧನ ಮತ್ತು ಪತ್ರಕರ್ತರು, ಕಲಾವಿದರು, ಕುಸ್ತಿಪಟುಗಳ ಮಾಸಾಶನ ಹೆಚ್ಚಿಸಿ ಇತರೆ ಕಲ್ಯಾಣ ಕಾರ್ಯಕ್ರಮಗಳಿಗೂ ಅಗತ್ಯ ಅನುದಾನ ಒದಗಿಸಲಾಗಿದೆ. ಅಂತೆಯೇ ಹಿಂದೂ, ಜೈನ್ ಮತ್ತು ಸಿಖ್ ಧರ್ಮದ ಅರ್ಚಕರು, ಪೇಶ್ ಇಮಾಮ್, ಮೋಜನ್ಗಳ ಗೌರವಧನ ಹೆಚ್ಚಿಸಲು ಸಹ ಈ ಆಯವ್ಯಯದಲ್ಲಿ ಪ್ರಸ್ತಾಪಿಸಲಾಗಿದೆ. ಈ ಎಲ್ಲಾ ವೆಚ್ಚ ನಿರ್ವಹಣೆ ಮಾಡುವುದರ ಜೊತೆಗೆ ಈ ಸಾಲಿನಲ್ಲಿ ರಾಜಸ್ವ ಕೊರತೆಯನ್ನು ಕಡಿಮೆ ಮಾಡಿರುವುದು ಹೆಮ್ಮೆಯ ಸಂಗತಿ. ಅಲ್ಲದೆ, ಮುಂದಿನ ವರ್ಷಗಳಲ್ಲಿ ನಮ್ಮ ಸರ್ಕಾರವು ರಾಜಸ್ವ ಹೆಚ್ಚುವರಿಯನ್ನು ಸಾಧಿಸಲಿದೆ ಎಂಬುದು ಇದರಿಂದ ಸ್ಪಷ್ಟವಾಗಿದೆ.

ಆರ್ಥಿಕ ಬೆಳವಣಿಗೆಯ ಹಿತದೃಷ್ಟಿಯಿಂದ ಬಂಡವಾಳ ಯೋಜನೆಗಳಿಗೆ ಹೆಚ್ಚಿನ ಅನುದಾನ ಒದಗಿಸಿದರೂ ಸಹ ನಮ್ಮ ಸರ್ಕಾರವು ವಿತ್ತೀಯ ಶಿಸ್ತನ್ನು ಉಲಂಘಿಸಿರುವುದಿಲ್ಲ. 2025-26ನೇ ಸಾಲಿನಲ್ಲಿ ವಿತ್ತೀಯ ಕೊರತೆಯನ್ನು ಜಿ.ಎಸ್.ಡಿ.ಪಿಯ ಶೇ.2.95ರಷ್ಟು ಅಂದಾಜಿಸಲಾಗಿರುತ್ತದೆ. ವಿತ್ತೀಯ ಕೊರತೆ ಹಾಗು ಒಟ್ಟು ಹೊಣೆಗಾರಿಕೆಯನ್ನು ಕರ್ನಾಟಕ ಆರ್ಥಿಕ ಹೊಣೆಗಾರಿಕೆ ಅಧಿನಿಯಮದಲ್ಲಿ ಸೂಚಿಸಿರುವ ಮಿತಿಯೊಳಗೆ ಪಾಲನೆ ಮಾಡಲಾಗಿರುತ್ತದೆ.
2025-26ನೇ ಸಾಲಿನ ಆಯವ್ಯಯ ಗಾತ್ರವು 4,09,549 ಕೋಟಿ ರೂ.ಗಳು ಎಂದು ಅಂದಾಜಿಸಲಾಗಿದೆ. 2024-25ನೇ ಸಾಲಿನ ಆಯವ್ಯಯ ಗಾತ್ರವು 3,71,383 ಕೋಟಿ ರೂ.ಗಳು ಎಂದು ಅಂದಾಜಿಸಲಾಗಿತ್ತು. 2024-25ನೇ ಸಾಲಿಗೆ ಹೋಲಿಸಿದರೆ 2025-26ನೇ ಸಾಲಿನ ಆಯವ್ಯಯ ಗಾತ್ರವು ಶೇ.10.3ರಷ್ಟು ಬೆಳವಣಿಗೆಯೊಂದಿಗೆ 38,166 ಕೋಟಿ ರೂ.ಗಳಷ್ಟು ಹೆಚ್ಚಳವಾಗಿದೆ. ಒಟ್ಟು ವೆಚ್ಚದಲ್ಲಿ 3,11,739 ಕೋಟಿ ರೂ.ಗಳ ರಾಜಸ್ವ ವೆಚ್ಚವಾಗಿರುತ್ತದೆ. 2024-25ಕ್ಕೆ ಹೊಲಿಸಿದರೆ ಶೇ.7.3 ರಷ್ಟು ಹೆಚ್ಚಳವಾಗಿದೆ. ಬಂಡವಾಳ ವೆಚ್ಚ (Gross) ಕಳೆದ ಸಾಲಿಗೆ ಹೋಲಿಸಿದರೆ ಶೇ.47.3 ರಷ್ಟು ಹೆಚ್ಚಳವಾಗಿದೆ ಎಂದು ತಿಳಿಸಿದ್ದಾರೆ.

More articles

Latest article