ಮಹಿಳಾ ಸಬಲೀಕರಣ, ಕಾರ್ಯತಂತ್ರ, ಕಾನೂನು, ಸಂವಿಧಾನದ ರಕ್ಷಣೆ,ಇದ್ದಾಗಲೂ ಪ್ರತಿದಿನ ಮಹಿಳೆಯರ ಮೇಲೆ ವಿವಿಧ ರೀತಿಯ ಅಪರಾಧಗಳು ನಡೆಯುತ್ತಿರುವುದು ಅತ್ಯಂತ ದುರದೃಷ್ಟಕರ. ನಾಗರೀಕ ಸಮಾಜ ತಲೆತಗ್ಗಿಸುವಂತದ್ದು. ಸರ್ಕಾರಗಳು, ಸಂಘ-ಸಂಸ್ಥೆಗಳು ಈ ಕುರಿತು ಎಚ್ಚರ ವಹಿಸುವುದು ತೀರ ಅಗತ್ಯ ಮತ್ತು ಅನಿವಾರ್ಯವಾಗಿದೆ – ಡಾ. ಗಂಗಾಧರಯ್ಯ ಹಿರೇಮಠ, ವಿಶ್ರಾಂತ ಪ್ರಾಧ್ಯಾಪಕರು.
ಮಹಿಳೆಯರ ಸಬಲೀಕರಣವೆಂಬುದು ಅತ್ಯಂತ ಸಂಕೀರ್ಣವಾದ, ಬಹುಮಖಿಯಾದ, ಬಹುಹಂತದ ಹಾಗೂ ಬಹು ಶಿಸ್ತೀಯವಾದ ಪರಿಭಾವನೆ, ಪರಿಕಲ್ಪನೆ, ಸರ್ಕಾರ, ಸರ್ಕಾರೇತರ ಸಂಘ-ಸಂಸ್ಥೆಗಳು ವಿವಿಧ ಯೋಜನೆಗಳನ್ನು, ಕಾರ್ಯಕ್ರಮಗಳನ್ನು ಮಹಿಳೆಯರಿಗಾಗಿ ರೂಪಿಸಿದ್ದರೂ, ಅವು ಸಮಾಜದ ಎಲ್ಲ ಮಹಿಳೆಯರನ್ನು ತಲುಪುವಲ್ಲಿ ಸಾಧ್ಯವಾಗಿಲ್ಲ. ‘ಮಹಿಳೆಯರ ಸಮಗ್ರ ಕಲ್ಯಾಣ’ ಎಂದು ಹೇಳಿದರೂ ದೇಶದ ಜನಸಂಖ್ಯೆಯ ಅರ್ಧದಷ್ಟಿರುವ ಮಹಿಳೆಯರು ಅನುಭವಿಸುತ್ತಿರುವ ಎಲ್ಲ ರೀತಿಯ ಸಮಸ್ಯೆಗಳು, ಈ ಕಲ್ಯಾಣ ಕಾರ್ಯಕ್ರಮದಲ್ಲಿ ಸೇರ್ಪಡೆಯಾಗಿಲ್ಲ. ಅನುಷ್ಠಾನದಲ್ಲಿ ಮಹಿಳೆಯರು ಅವಕಾಶ ವಂಚಿತರಾಗಿಯೇ ಉಳಿದಿದ್ದಾರೆ.
ಮಹಿಳಾ ಸಬಲೀಕರಣ ಎಂದರೇನು?
ಕೇವಲ ಶಿಕ್ಷಣ, ಆರೋಗ್ಯ ಎಂದು ಭಾವಿಸುವಂತಿಲ್ಲ, ಮಹಿಳೆಯರ ಆರ್ಥಿಕ, ಸಾಮಾಜಿಕ, ರಾಜಕೀಯ, ಹಾಗೂ ಸಾಂಸ್ಕೃತಿಕವಾಗಿಯೂ ಮಹಿಳೆಯರು ಸಬಲೀಕರಣಗೊಳ್ಳುವುದು. ಅವರಲ್ಲಿ ಆತ್ಮವಿಶ್ವಾಸ, ಅಭಿವ್ಯಕ್ತಿ ಸಾಮರ್ಥ್ಯ, ಸ್ವ-ಅರಿವನ್ನು ಉಂಟುಮಾಡುವುದಾಗಿದೆ. ಕಾನೂನು, ಸರ್ಕಾರದ ಕಾರ್ಯನೀತಿಗಳ ಮಾಹಿತಿ, ಅವುಗಳ ಬಳಕೆ, ತಮ್ಮ ಹಕ್ಕುಗಳ ಅರಿವಿನಿಂದ ತಮ್ಮನ್ನು ತಾವು ರಕ್ಷಿಸಿಕೊಳ್ಳುವ ಪ್ರಕ್ರಿಯೆ ಆಗಿದೆ. ‘ಸಬಲೀಕರಣ’ ಎಂಬುದು ಸ್ತ್ರೀಯರ ಅಭಿವೃದ್ಧಿಗಷ್ಟೇ ಸೀಮಿತವಾಗದೇ ಇಡೀ ಸಮಾಜದ ಅಭಿವೃದ್ಧಿಗೆ ಪೂರಕವಾದ ಸಾಧನವಾಗಿದೆ. ಮಹಿಳೆಯರ ಸ್ವ-ಸಾಮರ್ಥ್ಯದ ಅರಿವು, ಪರಿವರ್ತನೆಯೇ ಸಬಲೀಕರಣ.
ಸಬಲೀಕರಣ ಬಹುಮುಖಿ ಆಂದೋಲನ:
ಮಹಿಳಾ ಸಬಲೀಕರಣ ವಿವಿಧ ಆಯಾಮಗಳನ್ನು ಒಳಗೊಂಡ ಬಹುಮುಖಿ ಆಂದೋಲನವಾಗಿದೆ. ಆರೋಗ್ಯ, ಪೌಷ್ಠಿಕತೆ, ಆಹಾರ, ಬೆಳವಣಿಗೆ, ಜೀವಿತಾವಧಿಯನ್ನು ಭೌತಿಕ ಸಬಲೀಕರಣ ಒಳಗೊಂಡಿದೆ. ಸಾಕ್ಷರತೆ, ಆತ್ಮವಿಶ್ವಾಸ, ವೃತ್ತಿಪರ ಕೌಶಲ್ಯ, ತರಬೇತಿ ಮಾನಸಿಕ ಸಬಲೀಕರಣವಾದರೆ, ಕುಟುಂಬದಲ್ಲಿ ಅಂತಸ್ತು, ವಿವಾಹದ ವಯಸ್ಸು, ಆಯ್ಕೆ, ಕುಟುಂಬ ಯೋಜನೆ, ಸಮಾನತೆ, ಸ್ವಾತಂತ್ರ್ಯವು ಸಾಮಾಜಿಕ ಸಬಲೀಕರಣದಲ್ಲಿದೆ. ಆಸ್ತಿಹಕ್ಕು, ಉದ್ಯೋಗಾವಕಾಶ, ಉದ್ಯಮಶೀಲತೆ, ಆದಾಯ, ಸಂಪನ್ಮೂಲಗಳ ನಿಯಂತ್ರಣ, ಒಡೆತನ ಹಾಗೂ ಜೀವನಮಟ್ಟದ ಸುಧಾರಣೆ ಆರ್ಥಿಕ ಸಬಲೀಕರಣದಲ್ಲಿದೆ. ಮೂಲಭೂತ ಹಕ್ಕುಗಳು, ಸಂವಿಧಾನದ ರಕ್ಷಣೆಗಳು, ಮಹಿಳಾ ಕಲ್ಯಾಣಕ್ಕೆ ಕಾನೂನಿನ ಅವಕಾಶಗಳು, ಲಿಂಗತಾರತಮ್ಯದ ವಿರುದ್ಧ ರಕ್ಷಣೆ ಶಾಸನಾತ್ಮಕ ಸಬಲೀಕರಣವಾಗಿದೆ. ಧಾರ್ಮಿಕ ಕಟ್ಟುಪಾಡು, ಕಂದಾಚಾರಗಳಿಂದ ವಿಮೋಚನೆ, ನೀತಿ, ಪ್ರಾಮಾಣಿಕತೆ, ನೈತಿಕಬದ್ಧತೆ, ಸಚ್ಚಾರಿತ್ರ್ಯ, ವೈಚಾರಿಕತೆ, ಕಳಕಳಿ, ಮಾನವೀಯ ಮೌಲ್ಯಗಳ ಸಂರಕ್ಷಣೆ ಮತ್ತು ಧಾರ್ಮಿಕ ಸ್ವಾತಂತ್ರ್ಯವನ್ನು ಧಾರ್ಮಿಕ ಸಬಲೀಕರಣ ಒಳಗೊಂಡಿದೆ.
ಸಬಲೀಕರಣದ ಕಾರ್ಯತಂತ್ರಗಳು:
ವಿವಿಧ ಆಯಾಮಗಳ ಸಬಲೀಕರಣವನ್ನು ಸರ್ಕಾರ ಮತ್ತು ಸಾಮಾಜಿಕ ಸಂಸ್ಥೆಗಳು ಒಟ್ಟುಗೂಡಿ ಮಹಿಳೆಯರ ಬಹುಮುಖಿ ಸಬಲೀಕರಣಕ್ಕೆ ಕಾರ್ಯತಂತ್ರಗಳನ್ನು, ಕ್ರಮಗಳನ್ನು ಕೈಗೊಳ್ಳುವುದು ಭಾರತದಂತಹ ಅಭಿವೃದ್ಧಿಶೀಲ ದೇಶದಲ್ಲಿ ಅತ್ಯವಶ್ಯಕ. ಸ್ತ್ರೀಯರ ರಾಜಕೀಯ ಸಹಭಾಗಿತ್ವಕ್ಕೆ ಕನಿಷ್ಟ ಶೇ.33ರಷ್ಟು ಸ್ಥಾನಗಳಲ್ಲಿ ಮಹಿಳೆಯರಿಗೆ ಮೀಸಲಾತಿ, ನೌಕರಶಾಹಿಯ ಅಧಿಕಾರದ ಹುದ್ದೆಗಳಲ್ಲಿ ಮೀಸಲಾತಿ, ಆರ್ಥಿಕ ರಂಗದಲ್ಲಿ ಆದಾಯ ನೀಡುವಂತಹ ಯೋಜನೆಗಳನ್ನು ಸ್ತ್ರೀಯರಿಗಾಗಿ, ಸರ್ಕಾರದ ವಿವಿಧ ಯೋಜನೆಗಳ ಫಲಾನುಭವಿಗಳು ಸ್ತ್ರೀಯರಾಗುವಂತೆ, ಸ್ತ್ರೀಯರ ಸಾಕ್ಷರತೆ, ಗುಣಮಟ್ಟದ ಶಿಕ್ಷಣ, ಕೌಶಲ್ಯಗಳ ತರಬೇತಿ, ಮಾನವಹಕ್ಕುಗಳ ಅನುಷ್ಠಾನ, ಮಹಿಳೆಯರ ವಿರುದ್ಧ ದೌರ್ಜನ್ಯ ತಡೆ, ಲಿಂಗತಾರತಮ್ಯ ಹೋಗಲಾಡಿಸುವುದು, ಮಾಧ್ಯಮಗಳಲ್ಲಿ ಸೂಕ್ತ ಪ್ರಚಾರ, ಸಬಲೀಕರಣಕ್ಕೆ ಪೂರಕವಾಗಿವೆ.
ಮಹಿಳೆಯರಿಗೆ ಕಾನೂನಿನ ರಕ್ಷಣೆ:
ಭಾರತೀಯ ದಂಡ ಸಂಹಿತೆ (ಐ.ಪಿ.ಸಿ) ಪ್ರಕಾರ ಸ್ತ್ರೀಯರ ವಿರುದ್ಧ ನಡೆಸಲ್ಪಡುವ ಅಪರಾಧ ಪ್ರಕರಣಗಳಿಗೆ ಕೆಲವು ಸೆಕ್ಷನ್‍ಗಳು ಮಹಿಳೆಯರಿಗೆ ನ್ಯಾಯ ಮತ್ತು ಸೂಕ್ತ ರಕ್ಷಣೆಯನ್ನು ನೀಡುತ್ತವೆ. ಸೆಕ್ಷನ್ 363, 373 ಸ್ತ್ರೀಯರ ಅಪಹರಣಕ್ಕೆ ಸಂಬಂಧಿಸಿವೆ. 376 ಲೈಂಗಿಕ ಅತ್ಯಾಚಾರ, 354 ಸ್ತ್ರೀಯರ ಪೀಡನೆ, 498ಎ ದೈಹಿಕ, ಮಾನಸಿಕ ಹಿಂಸೆ ನೀಡುವಿಕೆ, 509 ಲೈಂಗಿಕ ಉಪಟಳ, 302, 304ಬಿ ವರದಕ್ಷಿಣೆ ಕೊಲೆ (ಸಾವು) ಹೀಗೆ ಮಹಿಳೆಯರಿಗೆ ಕಾನೂನು ರೀತ್ಯಾ ರಕ್ಷಣೆ, ಶಿಕ್ಷೆಯ ಕ್ರಮ, ದಂಡ, ಹಾಗೂ ಸೆರೆಮನೆವಾಸ (ಜೈಲು) ಅನುಭವಿಸುವಂತೆ ತಿಳಿಸುತ್ತದೆ.
ಮಹಿಳೆಯರಿಗಾಗಿ ಕಾರ್ಯನೀತಿ, ಯೋಜನೆ:
ರಾಜ್ಯಸರ್ಕಾರ ಮತ್ತು ಭಾರತ ಸರ್ಕಾರ ಮಹಿಳಾ ಅಭಿವೃದ್ಧಿಗೆಂದು ವಿವಿಧ ಕಾರ್ಯನೀತಿ, ಹಾಗೂ ಯೋಜನೆಗಳನ್ನು ಹಮ್ಮಿಕೊಂಡಿದವೆ. ಸ್ತ್ರೀಯರಿಗಾಗಿ ಸಂವಿಧಾನದಲ್ಲಿ ನಾಗರಿಕ, ರಾಜಕೀಯ, ಸಾಮಾಜಿಕ, ಆರ್ಥಿಕ ಹಾಗೂ ಶೈಕ್ಷಣಿಕ ವಿಶೇಷ ಹಕ್ಕುಗಳನ್ನು ಪುರುಷರಿಗೆ ಸರಿಸಮನಾಗಿ 14, 15, 16 ಮತ್ತು 24ನೇ ವಿಧಿಗಳಲ್ಲಿ ದಾಖಲಿಸುತ್ತದೆ. ಬ್ರಿಟಿಷ್ ಆಳ್ವಿಕೆಯ ಕಾಲದಿಂದಲೂ ಪ್ರಸ್ತುತ ಸಂದರ್ಭಗಳವರೆಗೆ ಹಲವಾರು ಶಾಸನಗಳನ್ನು ಸ್ತ್ರೀಯರ ಹಿತಾಸಕ್ತಿ ಹಾಗೂ ಕಲ್ಯಾಣಾಭಿವೃದ್ಧಿಗಾಗಿ ಕೈಗೊಳ್ಳಲಾಗಿದೆ. 1856 ಪುನರ್ವಿವಾಹ ಕಾಯ್ದೆ, 1872 ವಿಚ್ಛೇದನಕಾಯ್ದೆ, 1956 ಅನೈತಿಕ ಪ್ರತಿಬಂಧಕ ಕಾಯ್ದೆ, 1961 ವರದಕ್ಷಿಣೆ ನಿಷೇಧ ಕಾಯ್ದೆ, 1961 ಪ್ರಸೂತಿಕಾ ಸೌಲಭ್ಯ ಕಾಯ್ದೆ, 1971 ವೈದ್ಯಕೀಯ ಗರ್ಭನಿವಾರಣಾ ಕಾಯ್ದೆ, 1994 ಪ್ರಸವ ಪೂರ್ವಲಿಂಗ ಪರೀಕ್ಷೆಗಳ ಕಾಯ್ದೆ, 1984 ಕುಟುಂಬ ನ್ಯಾಯಾಲಯ ಕಾಯ್ದೆ, 1987 ಸತೀ ಆಚರಣೆಯ ಪ್ರತಿಬಂಧಕ ಕಾಯ್ದೆ, 1986 ಮುಸ್ಲಿಂ ಮಹಿಳೆಯರ ಹಕ್ಕುಗಳ ರಕ್ಷಣಾ ಕಾಯ್ದೆ, 1990 ರಾಷ್ಟ್ರೀಯ ಮಹಿಳಾ ಆಯೋಗದ ಕಾಯ್ದೆಗಳು, ಹೀಗೆ ಮಹಿಳೆಯರಿಗೆ ಕಾನೂನಿನ ರಕ್ಷಣೆ ನೀಡುತ್ತವೆ.
ಅಂತಾರಾಷ್ಟ್ರೀಯ ಮಹಿಳಾದಿನ
ಮಹಿಳಾ ಸಬಲೀಕರಣಕ್ಕೆ ವಿಶ್ವಸಂಸ್ಥೆ ಅನೇಕ ಕಾರ್ಯನೀತಿಗಳನ್ನು ರೂಪಿಸಿತು. 1948ರಲ್ಲಿ ಮಾನವ ಹಕ್ಕುಗಳ ಘೋಷಣೆಯಲ್ಲಿ ಮಹಿಳೆಯರ ಹಕ್ಕುಗಳನ್ನು ಗುರುತಿಸಿತು. ತನ್ನ ಸದಸ್ಯ ರಾಷ್ಟ್ರಗಳಲ್ಲಿ ಮಹಿಳೆಯಸ್ಥಾನ, ಬೆಳವಣಿಗೆ ಕುರಿತು ವಾಸ್ತವಾಂಶ ತಿಳಿಯಲು ಸರ್ಕಾರಗಳ ಮೂಲಕ ಕ್ಷೇತ್ರಾಧ್ಯಯನ, ಸಮೀಕ್ಷೆ ನಡೆಸಿ ವರದಿ ತಯಾರಿಸಿತು. 1974ರಲ್ಲಿ ಭಾರತ ಸರ್ಕಾರ ಕ್ಷೇತ್ರಾಧ್ಯಯನ ನಡೆಸಿ ‘ಟುವರ್ಡ್ಸ್ ಈಕ್ವಾಲಿಟಿ’ ಎಂಬ ವರದಿ ಸಲ್ಲಿಸಿತು. 1975 ಮಾರ್ಚ್-8 ರಂದು ಮಹಿಳಾ ವರ್ಷ ಹಾಗೂ 1976-85ರ ದಶಕವನ್ನು ಅಂತಾರಾಷ್ಟ್ರೀಯ ಮಹಿಳಾ ದಶಕವೆಂದು ಘೋಷಿಸಿ, ಅನೇಕ ಮಹಿಳಾಪರ ಕಾರ್ಯಕ್ರಮಗಳನ್ನು ಕೈಗೊಂಡಿತು. ವಿಶ್ವಸಂಸ್ಥೆಯ ಸದಸ್ಯ ರಾಷ್ಟ್ರವಾಗಿ ಭಾರತ ಎಲ್ಲ ಯೋಜನೆ, ಒಡಂಬಡಿಕೆಗಳನ್ನು ಅಳವಡಿಸಿಕೊಂಡು ಮಹಿಳೆಯರಿಗಾಗಿ ವಿಶೇಷ ಕಾರ್ಯನೀತಿ, ಹಾಗೂ ಯೋಜನೆಗಳನ್ನು ಹಮ್ಮಿಕೊಂಡು ಪ್ರತಿ ವರ್ಷ ಮಾರ್ಚ್-8 ರಂದು ಮಹಿಳಾ ದಿನಾಚರಣೆಯನ್ನು ಆಚರಿಸುತ್ತಿದೆ.
ಮಹಿಳಾ ಸಬಲೀಕರಣ, ಕಾರ್ಯತಂತ್ರ, ಕಾನೂನು, ಸಂವಿಧಾನದ ರಕ್ಷಣೆ, ಇದ್ದಾಗಲೂ ಪ್ರತಿದಿನ ಮಹಿಳೆಯರ ಮೇಲೆ ವಿವಿಧ ರೀತಿಯ ಅಪರಾಧಗಳು ನಡೆಯುತ್ತಿರುವುದು ಅತ್ಯಂತ ದುರದೃಷ್ಟಕರ. ನಾಗರೀಕ ಸಮಾಜ ತಲೆತಗ್ಗಿಸುವಂತದ್ದು. ಸರ್ಕಾರಗಳು, ಸಂಘ-ಸಂಸ್ಥೆಗಳು ಈ ಕುರಿತು ಎಚ್ಚರ ವಹಿಸುವುದು ತೀರ ಅಗತ್ಯ ಮತ್ತು ಅನಿವಾರ್ಯವಾಗಿದೆ.
ಡಾ. ಗಂಗಾಧರಯ್ಯ ಹಿರೇಮಠ
ವಿಶ್ರಾಂತ ಪ್ರಾಧ್ಯಾಪಕರು
ಮೊ: 9880093613
ಇದನ್ನೂ ಓದಿ- ಹೆಣ್ಣು ಮತ್ತು ಅವಳ ಬಿಕ್ಕಟ್ಟುಗಳು