ಬೆಂಗಳೂರು: ಸನ್ಮಾನ್ಯ ಮುಖ್ಯಮಂತ್ರಿ ಸಿದ್ದರಾಮಯ್ಯನವರು ತಮ್ಮ ದಾಖಲೆಯ 16 ನೇ ಬಜೆಟ್ ಮಂಡಿಸಿದ್ದು ಇದೊಂದು ಅತ್ಯಂತ ಜನಸ್ನೇಹಿ, ರೈತ ಪರ, ಮಹಿಳಾ ಪರ ರಾಜ್ಯದ ಸಮಗ್ರ ಅಭಿವೃದ್ಧಿಯ ಗ್ಯಾರಂಟಿ ಬಜೆಟ್ ಆಗಿದೆ. 2 ಕೋಟಿವರೆಗಿನ ಕಾಮಗಾರಿಗಳಿಗೆ ಮೀಸಲಾತಿ ನೀಡಿರುವುದು ಕೆಳವರ್ಗದವರೂ ಗುತ್ತಿಗೆ ಪಡೆಯಲು ಅನುಕೂಲವಾಗಲಿದೆ. ಪ್ರತಿಯೊಂದು ವರ್ಗಕ್ಕೂ ನ್ಯಾಯ ಒದಗಿಸುವ ದೂರದೃಷ್ಟಿ ಬಜೆಟ್ ಆಗಿದೆ. ಈ ಮೂಲಕ ‘ಬಡವರ’ರಾಮಯ್ಯ ಎಂಬುದನ್ನು ಮತ್ತೊಮ್ಮೆ ಸಾಬೀತುಪಡಿಸಿದ್ದಾರೆ ಎಂದು ಅಬಕಾರಿ ಮತ್ತು ಬಾಗಲಕೋಟೆ ಜಿಲ್ಲಾ ಉಸ್ತುವಾರಿ ಸಚಿವ ಆರ್ ಬಿ ತಿಮ್ಮಾಪೂರ ಹೇಳಿದ್ದಾರೆ.
ಪ್ರೀಮಿಯಂ ಮದ್ಯದ ಬೆಲೆಗಳನ್ನು ನೆರೆ ರಾಜ್ಯದ ಬೆಲೆಗೆ ಅನುಸಾರವಾಗಿ ಅಬಕಾರಿ ಸ್ಲ್ಯಾಬ್ಗಳ ಪರಿಷ್ಕರಣೆ ಮಾಡಲಾಗುತ್ತದೆ. 2025-26 ರಲ್ಲಿಯೂ ಅಬಕಾರಿ ಸ್ಲ್ಯಾಬ್ಗಳನ್ನು ತರ್ಕಬದ್ಧಗೊಳಿಸುವ ಪ್ರಕ್ರಿಯೆ ಮುಂದುವರಿಯಲಿದೆ. ಖಾಲಿ ಅಥವಾ ಲಭ್ಯವಿರುವ ಮದ್ಯದ ಪರವಾನಗಿಗಳನ್ನು ಎಲೆಕ್ಟ್ರಾನಿಕ್ ಹರಾಜಿನ ಮೂಲಕ ಹಂಚಿಕೆಗೆ ಪ್ರಸ್ತಾಪ- ಹೆಚ್ಚುವರಿ ರಾಜಸ್ವ ಸಂಗ್ರಹ ನಿರೀಕ್ಷೆ ಇಟ್ಟುಕೊಳ್ಳಲಾಗಿದೆ. ಆಡಳಿತದಲ್ಲಿ ದಕ್ಷತೆ ಮತ್ತು ಸಾರ್ವಜನಿಕ ಸೇವೆ ಮತ್ತಷ್ಟು ಸುಧಾರಿಸಲು ಅಬಕಾರಿ ಸೇವೆಗಳಿಗೆ ತಂತ್ರಾಂಶ- ಆನ್ ಲೈನ್ ಸೇವೆ ನೀಡಲು ಘೋಷಿಸಲಾಗಿದೆ. 2024-25 ಸಾಲಿನಲ್ಲಿ 36,500 ಕೋಟಿ ನಿರೀಕ್ಷೆ ಇದೆ. 2025-26 ನೇ ಸಾಲಿನಲ್ಲಿ 40 ಸಾವಿರ ಕೋಟಿಗಳ ಸಂಗ್ರಹಣಾ ಗುರಿ ಹೊಂದಲಾಗಿದೆ ಎಂದಿದ್ದಾರೆ.
ಮುಧೋಳದಲ್ಲಿ 50 ಹಾಸಿಗೆ ಸಾಮರ್ಥ್ಯದ ತಾಯಿ ಮತ್ತು ಮಕ್ಕಳ ಸ್ಥಾಪನೆಗೆ ಅನುಮೋದನೆ ಸಿಕ್ಕಿದೆ. ಕೃಷ್ಣಾ ಮೇಲ್ದಂಡೆ 3ರ ವ್ಯಾಪ್ತಿಯ ಆಲಮಟ್ಟಿ ಗೇಟನ್ನು 524.256 ಮೀಟರ್ ಎತ್ತರಿಸುವುದರಿಂದ ಮುಳುಗಡೆಯಾಗುವ ಜಮೀನುಗಳನ್ನು ಐ ತೀರ್ಪಿನ ಮುಖಾಂತರ ಒಂದೇ ಹಂತದಲ್ಲಿ ಭೂಸ್ವಾಧೀನ- ರೈತರಿಗೆ ಪರಿಹಾರ ವಿತರಣೆಗೆ ಕ್ರಮ. ಅಲ್ಲದೇ 2.01 ಲಕ್ಷ ಎಕರೆ ನೀರಾವರಿ ಸಾಮರ್ಥ್ಯ ಕಲ್ಪಿಸುವ ಬಾಕಿ ಕಾಮಗಾರಿ ಅನುಷ್ಠಾನಗೊಳಿಸಲು ಕ್ರಮ ವಹಿಸಲಾಗಿದೆ. ಕೃಷ್ಣ ಕಣಿವೆಯಲ್ಲಿ ವಿವಿಧ ಯೋಜನೆಯಡಿಯಲ್ಲಿ ಬಾಕಿ ಇರುವ ಕಾಮಗಾರಿಗಳನ್ನು ಕೈಗೆತ್ತಿಕೊಂಡು ಪ್ರಸಕ್ತ ಸಾಲಿನಲ್ಲಿ ಪೂರ್ಣಗೊಳಿಸಲು ಕ್ರಮದ ಭರವಸೆ ಸಿಕ್ಕಿದೆ ಎಂದು ತಿಳಿಸಿದ್ದಾರೆ.
ಕೃಷ್ಣಾ ಕಣಿವೆಯ ಅನುಷ್ಠಾನ ಹಂತದಲ್ಲಿರುವ ಆಧುನೀಕರಣ ಹಾಗೂ ಏತ ನೀರಾವರಿ ಯೋಜನೆಗಳನ್ನು PMKSY-AIBP ಯೋಜನೆಯಡಿ ಕೇಂದ್ರ ಸರ್ಕಾರದ ಸಹಾಯಧನ ಪಡೆಯಲು ಸೂಕ್ತ ಪ್ರಸ್ತಾವನೆ ಸಲ್ಲಿಸಲು ನಿರ್ಧಾರ ಮಾಡಲಾಗಿದೆ. ಕೃಷ್ಣಾ ಮೇಲ್ದಂಡೆ ಯೋಜನೆಯಡಿ ಭೂಸ್ವಾಧೀನ ಕುರಿತು ನ್ಯಾಯಾಲಯಗಳಲ್ಲಿ ದಾಖಲಿಸಿರುವ ಪ್ರಕರಣಗಳ ಶೀಘ್ರ ವಿಲೇವಾರಿಗೆ ಬಾಗಲಕೋಟೆಯಲ್ಲಿ Fast Track ಕೋರ್ಟ್ ಸ್ಥಾಪನೆಗೆ ಕ್ರಮ ವಹಿಸಲಾಗಿದೆ. ಬಾಗಲಕೋಟೆಯಲ್ಲಿ ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನ ವಿಶ್ವವಿದ್ಯಾಲಯದ ಘಟಕ ವೈದ್ಯಕೀಯ ಕಾಲೇಜು ಸ್ಥಾಪನೆ (ಖಾಸಗಿ ಸಹಭಾಗಿತ್ವ)ಯಾಗಲಿದೆ. ಬಾದಾಮಿ ತಾಲ್ಲೂಕಿನ ಕುಳಗೇರಿ ಕ್ರಾಸ್ನಲ್ಲಿ ಸುಸಜ್ಜಿತ ಟ್ರಾಮಾ ಕೇರ್ ಕೇಂದ್ರ ಸ್ಥಾಪನೆ. ಬಾದಾಮಿಯ ಚಾಲುಕ್ಯ ಉತ್ಸವದಲ್ಲಿ ನೃತ್ಯೋತ್ಸವ ಕಾರ್ಯಕ್ರಮವನ್ನು ಆಯೋಜಿಸಲು 2 ಕೋಟಿ ಮೀಸಲಿಡಲಾಗಿದೆ ಎಂದು ಸಚಿವರು ತಿಳಿಸಿದ್ದಾರೆ.