ಬೆಂಗಳೂರು: ಬೆಂಗಳೂರು ನಗರದಲ್ಲಿ ಬ್ಲಾಕ್ ಆ್ಯಂಡ್ ವೈಟ್ ದಂಧೆ ಹೆಸರಿನಲ್ಲಿ ಒಂದು ಕೋಟಿ ರೂ. ರೂ ದರೋಡೆ ಮಾಡಿದ್ದ ಮೂವರು ಆರೋಪಿಗಳನ್ನು ವಿದ್ಯಾರಣ್ಯಪುರ ಪೊಲೀಸರು ಬಂಧಿಸಿದ್ದಾರೆ. ಶ್ರೀನಿವಾಸ್, ಅಂಬರೀಶ್ ಹಾಗೂ ಮಾರ್ಟಿನ್ ಎಂಬುವರನ್ನು ಪೊಲೀಸರು ಹೆಡೆಮುರಿ ಕಟ್ಟಿದ್ದಾರೆ. ನಾಪತ್ತೆಯಾಗಿರುವ ಸಚಿನ್, ರವಿ, ವೆಂಕಟೇಶ್ ಎಂಬ ಇತರ
ಮೂವರಿಗೆ ಬಲೆ ಬೀಸಿದ್ದಾರೆ.
1 ಕೋಟಿ ರೂ ನಗದು ನೀಡಿದರೆ ಬ್ಯಾಂಕ್ ಖಾತೆಗೆ 1 ಕೋಟಿ ರೂ. ಜತೆಗೆ 20 ಲಕ್ಷ ರೂ. ಸೇರಿಸಿ 1.20 ಕೋಟಿ ಹಣ ನೀಡುವ ಹೊಸ ಜಾಲ ಹುಟ್ಟಿಕೊಂಡಿದೆ ಎಂದು ಹೇಳಲಾಗುತ್ತಿದೆ. ಈ ಹೆಸರಿನಲ್ಲಿ ಚನ್ನಪಟ್ಟಣ ಮೂಲದ ಜಯಚಂದ್ರ ಎಂಬುವರ ಬಳಿ ಇಂದಿರಾನಗರ ನಿವಾಸಿ ಶ್ರೀನಿವಾಸ್ ಎಂಬಾತ ಇಂತಹುದ್ದೊಂದು ಪ್ರಸ್ತಾವನೆ ತಂದಿದ್ದ.
ನಮ್ಮದೇ ಒಂದು ಕಂಪನಿ ಇದೆ. ಅಕೌಂಟ್ ಮೂಲಕ ವಹಿವಾಟು ನಡೆಸಿದರೆ ಹೆಚ್ಚಿನ ಹಣ ತೆರಿಗೆ ರೂಪದಲ್ಲಿ ಕಡಿತವಾಗುತ್ತದೆ. ಆದ್ದರಿಂದ ನಮಗೆ ನಗದು ಹಣ ಬೇಕು. ನಗದು ಕೊಟ್ಟರೆ ನಿಮ್ಮ ಅಕೌಂಟ್ ಗೆ 1.20 ಕೋಟಿ ಹಣ ಜಮಾ ಮಾಡುತ್ತೇವೆ ಎಂದು ನಂಬಿಸಿದ್ದಾರೆ. ಜಯಚಂದ್ರ ಅವರೂ ಸಹ 20 ಲಕ್ಷ ರೂ. ಹಣಕ್ಕೆ ಆಸೆ ಬಿದ್ದು ಈ ಡೀಲ್ ಗೆ ಸರಿ ಎಂದು ಒಪ್ಪಿಕೊಂಡಿದ್ದಾರೆ. ಮೂರು ದಿನಗಳ ಹಿಂದೆ ರಾತ್ರಿ ವೇಳೆ ವಿದ್ಯಾರಣ್ಯಪುರದ ಕಚೇರಿಯೊಂದರಲ್ಲಿ ಎಲ್ಲರೂ
ಸೇರಿದ್ದಾರೆ. ಜಯಚಂದ್ರ 1 ಕೋಟಿ ರೂ ನಗದು ತಂದು ಟೇಬಲ್ ಮೇಲಿಟ್ಟಿದ್ದಾರೆ. ನಂತರ ಅಕೌಂಟ್ ಗೆ 1.20 ಕೋಟಿ ಹಣ ಜಮಾ ಮಾಡಲು ಹೇಳಿದ್ದಾರೆ.
ಜಯಚಂದ್ರ 1 ಕೋಟಿ ರೂ ಹಣವನ್ನು ಮುಂದಿಡುತ್ತಿದ್ದಂತೆ ಆರೋಪಿಗಳು ಆ ಹಣವನ್ನು ಎಣಿಸಿಕೊಳ್ಳಲು ಮುಂದಾಗಿದ್ದಾರೆ. ಅನುಮಾನಗೊಂಡ ಜಯಚಂದ್ರ ಮೊದಲು, ಅಕೌಂಟ್ಗೆ ಹಣ ಹಾಕಿ ಆಮೇಲೆ ದುಡ್ಡು ತೆಗೆದುಕೊಳ್ಳಿ ಎಂದಿದ್ದಾರೆ. ಈ ಮಾತುಕತೆ ನಡೆಯುತ್ತಿರುವಾಗಲೇ ಕಚೇರಿಯಲ್ಲಿ ದಿಢೀರ್ ಎಂದು ವಿದ್ಯುತ್ ಕಡಿತವಾಗಿದೆ. ಆರೋಪಿಗಳು 1 ಕೋಟಿ ರೂ.
ಹಣದೊಂದಿಗೆ ಪರಾರಿಯಾಗಿದ್ದಾರೆ. ಜಯಚಂದ್ರ ಆರೋಪಿಗಳಲ್ಲಿ ಒಬ್ಬನಾದ ಮಾರ್ಟಿನ್ ನನ್ನು ಹಿಡಿದುಕೊಂಡು 112ಗೆ ಕರೆ ಮಾಡಿದ್ದಾರೆ. ಕೂಡಲೇ ಸ್ಥಳಕ್ಕೆ ಬಂದ ಪೊಲೀಸರು, ಇಡೀ ವಿದ್ಯಾರಣ್ಯಪುರವನ್ನು ಸುತ್ತುವರೆದು ಕೆಲವೇ ಗಂಟೆಗಳಲ್ಲಿ ಶ್ರೀನಿವಾಸ್, ಮಾರ್ಟಿನ್ ಮತ್ತು ಅಂಬರೀಶ್ ಅವರನ್ನು ಬಂಧಿಸಿ ಹಣವನ್ನು ವಶಕ್ಕೆ ಪಡೆದಿದ್ದಾರೆ.