ಅಸಹಾಯಕ ಮಹಿಳೆಯ ಅಸಾಮಾನ್ಯ ಸಾಹಸ ತೋರಿಸುವ ಸಿನೆಮಾ “ಶಂಬಾಲಾ”

Most read

ದೇಶ ಪ್ರದೇಶ ಯಾವುದಾದರೇನು ಪುರುಷ ಪ್ರಧಾನ ವ್ಯವಸ್ಥೆಯಲ್ಲಿ ಮಹಿಳೆ ಸಾರ್ವಕಾಲಿಕ ಶೋಷಿತೆ ಎನ್ನುವುದು ಸಂಪ್ರದಾಯದ ಭಾಗವೇ ಆಗಿದೆ. ಚಿತ್ರವಿಚಿತ್ರ ಸಂಪ್ರದಾಯಗಳ ಬೌದ್ಧ ಧರ್ಮೀಯರ ನಾಡಾದ ನೇಪಾಳದಲ್ಲೂ ಸಹ ಮಹಿಳೆ ತನ್ನ ಅಸ್ತಿತ್ವಕ್ಕಾಗಿ, ತನ್ನ ಚಾರಿತ್ರ್ಯದ ಮೇಲೆ ಹೇರಲಾದ ಆರೋಪದ ನಿರಾಕರಣೆಗಾಗಿ ಎಷ್ಟೊಂದು ಕಷ್ಟನಷ್ಟಗಳಿಗೆ ಈಡಾಗಬೇಕಾಗುತ್ತದೆ ಎಂಬುದನ್ನು ತೋರಿಸುವ ಪ್ರಯತ್ನವೇ “ಶಂಭಾಲಾ”.‌

ನೇಪಾಳಿ ಭಾಷೆಯ ನೇಪಾಳ ಹಾಗೂ ಟಿಬೇಟ್ ಪ್ರದೇಶದ ಈ ಸಿನೆಮಾವನ್ನು ಮಿನ್ ಬಹಾದ್ದೂರ್ ಬಾಮ್ ನಿರ್ದೇಶಿಸಿದ್ದು ಬೆಂಗಳೂರಿನಲ್ಲಿ ಆಯೋಜಿಸಿರುವ 16ನೇ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಮಾರ್ಚ್ 4 ರಂದು ಪ್ರದರ್ಶನಗೊಂಡಿತು. 

ಬಹುಪತಿತ್ವ ಆಚರಣೆ ಜಾರಿಯಲ್ಲಿರುವ ಹಿಮಾಲಯದ ತಪ್ಪಲಿನ ಹಳ್ಳಿಯಲ್ಲಿ ‘ಪೆಮಾ’ಳನ್ನು ಮೂವರು ಅಣ್ಣ ತಮ್ಮಂದಿರು ಮದುವೆಯಾಗುತ್ತಾರೆ. ಕಿರಿಯವನು ಇನ್ನೂ ಶಾಲೆಗೆ ಹೋಗುವ ಬಾಲಕ. ಇನ್ನೊಬ್ಬ ಕರ್ಮ ಎನ್ನುವಾತ ಮಾಂಕ್ ಅಂದರೆ ಬೌದ್ಧ ಸನ್ಯಾಸತ್ವ ಪಡೆದಾತ. ಹಿರಿಯಣ್ಣ ಮಾತ್ರ ಪೇಮಾಳನ್ನು ಇಷ್ಟಪಟ್ಟು ಕೂಡಿದಾತ. ಶೋಬನದ ಮಾರನೆಯ ದಿನ ವ್ಯಾಪಾರಕ್ಕೆಂದು ಲಾಸಾ ಪಟ್ಟಣದತ್ತ ಹೊರಟ ಹಿರಿಯ ಗಂಡ ಟೆಶಿ ನಾಲ್ಕು ತಿಂಗಳಾದರೂ ಊರಿಗೆ ಮರಳಿ ಬಾರದೇ ಇದ್ದಾಗ ಗರ್ಭಿಣಿಯಾಗಿದ್ದ ಪೇಮಾ ಆತಂಕಿತಳಾಗುತ್ತಾಳೆ. ಕಿರಿಯ ಗಂಡನ ಶಾಲಾ ಮೇಷ್ಟ್ರು ಆಕೆಯ ಹೊಟ್ಟೆಯಲ್ಲಿರು ಮಗುವಿಗೆ ಕಾರಣ ಎಂದು ಯಾರೋ ಆಕೆಯ ಗಂಡ ಟೆಶಿಗೆ ಹೇಳಿದ್ದರಿಂದ ಹತಾಶೆಗೊಳಗಾದ ಆತ ಮರಳಿ ಬರಲಿಲ್ಲ ಎಂಬುದು ಪೇಮಾಳಿಗೆ ಗೊತ್ತಾಗುತ್ತದೆ. ಇಷ್ಟ ಇಲ್ಲದಿದ್ದರೂ ಗುರುವಿನ ಆದೇಶದ ಮೇರೆಗೆ ಟೆಶಿ ಯನ್ನು ಹುಡುಕಲು ಹಾಗೂ ಸತ್ಯವನ್ನು ಮನವರಿಕೆ ಮಾಡಿಕೊಡಲು ಪೇಮಾ ಜೊತೆ ಕರ್ಮ ಕೂಡಾ ಹೊರಡುತ್ತಾನೆ. ಅಲ್ಲಿಂದ ಎಷ್ಟೊಂದು ಸಮಸ್ಯೆಗಳು ಎದುರಾಗುತ್ತವೆ, ಈ ಮಹಿಳೆ ಹೇಗೆ ಎಲ್ಲವನ್ನು ಎದುರಿಸುತ್ತಾಳೆ ಎನ್ನುವುದೇ ಈ ಸಿನೆಮಾದ ಕುತೂಹಲಕಾರಿ ಸಂಗತಿಗಳಾಗಿವೆ. 

ಅದ್ಯಾಕೆ ಬೌದ್ಧ ಸನ್ಯಾಸದೀಕ್ಷೆ ಪಡೆದಾತನಿಗೆ ಮದುವೆ ಮಾಡಲಾಯ್ತೋ ಗೊತ್ತಿಲ್ಲ. ಆದರೆ ಮದುವೆ ಎನ್ನುವುದೂ ಕರ್ತವ್ಯದ ಭಾಗ ಎಂಬುದು ಸಂಪ್ರದಾಯವಂತೆ. ಆದರೆ ಕರ್ಮ ಎನ್ನುವಾತ ಮದುವೆಯ ಮಾರನೆಯ ದಿನವೇ ಗುರುಮನೆ ಸೇರಿಕೊಂಡಿರುತ್ತಾನೆ. ಮಹಿಳೆ ಅಬಲೆ, ಅಸಹಾಯಕಿಯಾದ್ದರಿಂದ ಒಬ್ಬ ಗಂಡನ ಉದಾಸೀನತೆ ಅಥವಾ ಅನುಪಸ್ಥಿತಿಯಲ್ಲಿ  ಇನ್ನೊಬ್ಬ ಗಂಡ ಆಕೆಗೆ ಬೆಂಗಾವಲಾಗಿ ನೋಡಿಕೊಳ್ಳಲಿ ಎನ್ನುವುದೇ ಈ ಬಹುಪತಿತ್ವದ ಹಿಂದಿರುವ ಅಸಲಿ ಉದ್ದೇಶವಾದಂತಿದೆ. 

ಆದರೆ ಧರ್ಮ ಯಾವುದಾದರೇನು ಈ ಸಂಪ್ರದಾಯಗಳು ಮಹಿಳೆಯರನ್ನು ಅಸಹಾಯಕರು ಎಂದೇ ಪರಿಗಣಿಸಿ ಅವರ ರಕ್ಷಣೆಯ ಹೆಸರಲ್ಲಿ ಗೋಡೆಗಳನ್ನು ಕಟ್ಟಿ ಗಂಡಾಳ್ವಿಕೆಯ ಕಣ್ಗಾವಲಿನಲ್ಲಿಡಲಾಗುತ್ತಲೇ ಬರಲಾಗಿದೆ.

ಮಹಿಳೆಯರ ಶೀಲದ ಮೇಲೆ ಶಂಕೆ ವ್ಯಕ್ತಪಡಿಸುತ್ತಲೇ ಅಕ್ರಮ ಸಂಬಂಧದ ಆರೋಪವನ್ನೇ ಅಸ್ತ್ರವನ್ನಾಗಿಸಿಕೊಂಡಿರುವ ಪಿತೃಪ್ರಧಾನ ಸಮಾಜ ಹೆಣ್ಣು ಕುಲವನ್ನು ಹತೋಟಿಯಲ್ಲಿಡಲು ನೋಡುತ್ತದೆ. ಚಾರಿತ್ರ್ಯ ಮತ್ತು ಪಾವಿತ್ರ್ಯವನ್ನು ಹೆಣ್ಣು ಕಾಪಾಡಿಕೊಂಡೇ ಬದುಕಬೇಕು ಎನ್ನುವುದು ಗಂಡಾಳ್ವಿಕೆಯ ಬಯಕೆ. ಆರೋಪ ಬಂದಲ್ಲಿ ಅದನ್ನು ತಪ್ಪೆಂದು ಸಾಬೀತು ಪಡಿಸುವುದೂ ಸಹ ಮಹಿಳೆಯರ ಜವಾಬ್ದಾರಿ. ಈ ಸಿನೆಮಾದ ನಾಯಕಿ ಹೊರಡುವುದೇ ಗರ್ಭದಲ್ಲಿರುವ ಮಗುವಿನ ತಂದೆ ನೀನೇ ಎಂದು ಪತಿಗೆ ಮನದಟ್ಟು ಮಾಡಲು. ಕಟ್ಟಕಡೆಗೆ ಮನೆಗೆ ಬಂದರೆ ಅಲ್ಲಿ ಗಂಡ ಟೆಶಿ “ಹೊಟ್ಟೆಯಲ್ಲಿರುವ ಮಗು ಯಾರದಾದರೇನು ಗರ್ಭಪಾತ ಮಾಡಿಸು ಎಂದು ಒತ್ತಾಯಿಸುತ್ತಾನೆ. ಅದನ್ನು ನಿರಾಕರಿಸುವ ಪೇಮಾ ತನ್ನ ಪಾವಿತ್ರ್ಯತೆಯ ಪರೀಕ್ಷೆಗೆ ಒಳಗೊಳ್ಳಲು ಬಯಸುತ್ತಾಳೆ.

ಅದು ಹೇಗೆ ರಾಮಾಯಣದ ಸೀತೆ ಅಗ್ನಿಪ್ರವೇಶ ಮಾಡಿ ತನ್ನ ಪಾವಿತ್ರ್ಯತೆಯನ್ನು ಸಾಬೀತು ಪಡಿಸುತ್ತಾಳೋ ಹಾಗೆಯೇ ಇಲ್ಲಿಯ ಸಂಪ್ರದಾಯದಂತೆ ನೆರೆದ ಜನರ ನಡುವೆ ಬೊಂಬೆಗೆ ಬಾಣ ಹೊಡೆದು ತಾನು ಪವಿತ್ರಳು ಎಂದು ತೋರಿಸುತ್ತಾಳೆ. ಕಾಲ ಯಾವುದಾದರೇನು ಹೆಣ್ಣು ಮಕ್ಕಳಿಗೆ ಈ ಅಗ್ನಿದಿವ್ಯ ತಪ್ಪದು. ಅದರಲ್ಲಿ ಗೆದ್ದರೂ ಶೀಲದ ಮೇಲಿನ ಶಂಕೆ ಮಾತ್ರ ಕೊನೆಯಾಗದು. ಅದಕ್ಕೆ ತಾನೇ ಮರ್ಯಾದಾ ಪುರುಷೋತ್ತಮನಾದ ಶ್ರೀರಾಮ ಕೊನೆಗೂ ಗರ್ಭಿಣಿಯಾಗಿದ್ದ ಸೀತೆಯನ್ನು ಕಾಡಿಗಟ್ಟಿ ಗಂಡಾಳ್ವಿಕೆಯ ಶ್ರೇಷ್ಠತೆಯನ್ನು ಎತ್ತಿ ಹಿಡಿದದ್ದು.  

ಕೊನೆಗೆ ಪೆಮಾ ಎಲ್ಲವನ್ನೂ ನಿರಾಕರಿಸಿ ಬೌದ್ಧ ಗುರು ಸಾನಿಧ್ಯದಲ್ಲಿ ಐಕ್ಯಳಾಗುವಂತಹ ಊಹಾತ್ಮಕ ಸನ್ನಿವೇಶವನ್ನು ತೋರಿಸಿರುವ ಈ ಶಂಬಾಲಾ ಸಿನೆಮಾದ ನಿರ್ದೇಶಕರು ಗಂಡಾಳ್ವಿಕೆಯಲ್ಲಿ ನೊಂದ ಮಹಿಳೆಗೆ ಬಿಡುಗಡೆಯ ದಾರಿಯನ್ನು ತೋರಿಸಿದ್ದಾರೆ. ಅದೂ ಸಹ ಸೀತೆಯ ಮಾದರಿಯದೇ. ಗಂಡಾಳ್ವಿಕೆಯ ದೋಷಣೆ ಶೋಷಣೆಗಳನ್ನು ಎದುರಿಸಿ ಬದುಕುವ ಬದಲು ಹೀಗೆ ಬದುಕಿಗೆ ಬೆನ್ನು ತೋರಿ ಅಂತ್ಯ ಕಾಣುವುದು ಖಂಡಿತಾ ಸೂಕ್ತ ನಿರ್ಧಾರವಂತೂ ಅಲ್ಲ. ಇದನ್ನೇ ಸೀತೆ ಮಾಡಿದ್ದು, ಭೂಗರ್ಭ ಸೇರಿದ್ದು. ಇದನ್ನೇ ಅಕ್ಕಮಹಾದೇವಿ ಮಾಡಿದ್ದು, ಶ್ರೀಶೈಲಕ್ಕೆ ಹೋಗಿ ಐಕ್ಯಳಾಗಿದ್ದು. ಸಮಾಜ ಒಡ್ಡುವ ಸವಾಲುಗಳಿಗೆ ಬದುಕಿನ ಅಂತ್ಯವೊಂದೇ ದಾರಿಯಲ್ಲ ಎಂಬುದು ನೊಂದ ಮಹಿಳೆಯರಿಗೆ ಮಾದರಿಯಾಗುವಂತಹ ಸಂದೇಶವಾಗಬಹುದಾಗಿತ್ತು. ಆದರೆ ಈ ಸಿನೆಮಾದ ಅಂತಿಮ ಸಂದೇಶವೂ ನಕಾರಾತ್ಮಕವಾಗಿಯೇ ಮೂಡಿಬಂದಿರುವುದು ಅನಪೇಕ್ಷಿತ. 

ಈ ಸಿನೆಮಾದ ನಿರ್ದೇಶಕರು ಬೌದ್ಧ ತತ್ವಶಾಸ್ತ್ರದಲ್ಲಿ ಎಂಎ ಮಾಡಿ ನಂತರ ಪಿಹೆಚ್‌ಡಿ ಮಾಡಿದವರು. ಬೌದ್ಧ ಧರ್ಮದ ಸಾಂಪ್ರದಾಯಿಕ ಆಚರಣೆಗಳ ಜೀವವಿರೋಧಿ ಅಂಶಗಳನ್ನು ಎತ್ತಿ ತೋರುವ ಬದಲು ಧಾರ್ಮಿಕ ಪರಂಪರೆ ಕಟ್ಟಿಕೊಟ್ಟ ನಂಬಿಕೆಗಳನ್ನೇ ತೋರಿಸುತ್ತಾ ಹೋಗಿರುವುದು ಅಸಮಂಜಸ ಎನ್ನಿಸುತ್ತದೆ. ಆದರೆ ಸಂಪ್ರದಾಯಗಳನ್ನೇ ಸರ್ವಶ್ರೇಷ್ಠ ಎಂದು ನಂಬಿದವರಿಗೆ ಈ ಮಾದರಿಯ ಸಿನೆಮಾಗಳು ಮೌಲ್ಯಾಧಾರಿತ ಎನ್ನಿಸಬಹುದೇನೋ. 

ಇರಲಿ, ಅದು ಆಯಾ ನಿರ್ದೇಶಕರ ಅಭಿವ್ಯಕ್ತಿಗೆ ಬಿಟ್ಟ ವಿಚಾರ. ಆದರೆ ಈ ಸಿನೆಮಾದ ಕೇಂದ್ರವಾದ ಪೇಮಾಳು ಪತಿಯ ಆನ್ವೇಷಣೆಯಲ್ಲಿ ದಿಟ್ಟವಾಗಿ ಎದುರಿಸಿದ ಸವಾಲುಗಳು ಮಾತ್ರ ಮಹಿಳೆಯ ಗಟ್ಟಿತನವನ್ನು ಸಾಬೀತು ಪಡಿಸುತ್ತದೆ. ಪ್ರೀತಿ ಮತ್ತು ಪತಿಯ ಅಗಲಿಕೆಯ ಭೀತಿಗಳು ಎಷ್ಟೊಂದು ಕಷ್ಟ ನಷ್ಟಗಳನ್ನು ಎದುರಿಸುವ ಸ್ಥೈರ್ಯವನ್ನು ಮಹಿಳೆಗೆ ಕೊಡುತ್ತದೆ ಎನ್ನುವುದಕ್ಕೆ ಈ ಸಿನೆಮಾದ ನಾಯಕಿ ಸಾಕ್ಷಿಯಾಗಿದ್ದಾಳೆ. 

ಎರಡೂವರೆ ಗಂಟೆಯಲ್ಲಿ ನಿಧಾನವಾಗಿ ಚಲಿಸುವ ಈ ಚಲನಚಿತ್ರ ನೋಡುಗರ ಸಹನೆ ಬೇಡುತ್ತದೆ. ತಾಳ್ಮೆ ಇದ್ದರೆ ಹಿಮಾಲಯದ ತಪ್ಪಲಿನ ಅದ್ಭುತ ಸೌಂದರ್ಯವನ್ನು ಸಿನೆಮಾದಾದ್ಯಂತ ಸವಿಯಬಹುದಾಗಿದೆ. ಗಿಡಮರಗಳೇ ಬೆಳೆಯದ ಪರ್ವತಗಳ ಸಾಲುಗಳು, ಆಗಾಗ ಆಗುವ ಹಿಮಪಾತ, ಅವುಗಳ ನಡುವೆಯೇ ಅನೇಕ ಅನಾನುಕೂಲತೆಗಳ ನಡುವೆ ಬದುಕು ಕಟ್ಟಿಕೊಂಡಿರುವ ಜನರು ಹಾಗೂ ಅವರ ಬಣ್ಣಬಣ್ಣದ ಪೋಷಾಕುಗಳನ್ನು ಈ ಸಿನೆಮಾ ಅನಾವರಣಗೊಳಿಸುತ್ತದೆ. ನಿಧಾನವೇ ಪ್ರಧಾನ ಎಂದು ಸಾಗುವ ಈ ಸಿನೆಮಾವನ್ನು ಸ್ವಲ್ಪ ತಾಳ್ಮೆವಹಿಸಿ ನೋಡಿದರೆ ಬೇರೆಯದೇ ಲೋಕವೊಂದರ ದರ್ಶನವಾಗುತ್ತದೆ. ಧಾರ್ಮಿಕ ನಂಬಿಕೆಗಳ ಸುತ್ತ ಹುತ್ತಗಟ್ಟಿದ ಹಲವಾರು ಸಾಂಪ್ರದಾಯಿಕ ಆಚರಣೆಗಳನ್ನೂ ಈ ಸಿನೆಮಾದಲ್ಲಿ ನೋಡಬಹುದಾಗಿದೆ. ಹೀಗಾಗಿ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ನೋಡಬಹುದಾದ ಸಿನೆಮಾಗಳ ಪಟ್ಟಿಯಲ್ಲಿ ಇರಬಹುದಾದ ಸಿನೆಮಾ “ಶಂಬಾಲಾ”.

ಶಶಿಕಾಂತ ಯಡಹಳ್ಳಿ

ರಂಗಕರ್ಮಿ

ಇದನ್ನೂ ಓದಿ- ʼಧರ್ಮದಾವರಣದೊಳಗಿದ್ದು ಆಂತರಿಕ ವಿಮರ್ಶೆ ಮಾಡುವುದೂ ಮುಖ್ಯ’-ಝಕಿಯಾ ಸೋಮನ್

More articles

Latest article