ವಾಟಾಳ್‌ ಅವರ ಕರ್ನಾಟಕ ಬಂದ್ ಗೆ ಕರ್ನಾಟಕ ರಕ್ಷಣಾ ವೇದಿಕೆ‌ ಬೆಂಬಲವಿಲ್ಲ

Most read

ಹಿರಿಯ ಕನ್ನಡ ಹೋರಾಟಗಾರ, ಮಾಜಿ ಶಾಸಕ ವಾಟಾಳ್‌ ನಾಗರಾಜ್ ಅವರ ನೇತೃತ್ವದಲ್ಲಿ ಕರೆ ನೀಡಿರುವ ಕರ್ನಾಟಕ‌ ಬಂದ್ ಗೆ ಕರ್ನಾಟಕ ರಕ್ಷಣಾ‌ ವೇದಿಕೆ ಬೆಂಬಲ ನೀಡುವುದಿಲ್ಲ ಎಂದು ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷ ಟಿ.ಎ.ನಾರಾಯಣಗೌಡ ಸ್ಪಷ್ಟನೆ ನೀಡಿದ್ದಾರೆ. ಈ ಬಂದ್ ನಲ್ಲಿ ಕರವೇ ಯಾವುದೇ ಸ್ವರೂಪದಲ್ಲೂ ಪಾಲ್ಗೊಳ್ಳುವುದಿಲ್ಲ ಎಂದೂ ಹೇಳಿದ್ದಾರೆ.
ಬೆಳಗಾವಿ ಬಸ್ ನಿರ್ವಾಹಕನ ಮೇಲೆ ನಡೆದ ಹಲ್ಲೆ ಸಂಬಂಧ ಕಳೆದ ಮಂಗಳವಾರ ಬೆಳಗಾವಿಯಲ್ಲಿ ದೊಡ್ಡ ಸ್ವರೂಪದ ಚಳವಳಿ ನಡೆಸಿದ್ದೇನೆ. ನಾನು ಅಲ್ಲಿಗೆ ಹೋದ ನಂತರ ನಿರ್ವಾಹಕನ ಮೇಲೆ ಹೂಡಲಾಗಿದ್ದ ಸುಳ್ಳು ಪೋಕ್ಸೋ ದೂರನ್ನು ಹಿಂದಕ್ಕೆ ಪಡೆಯಲಾಗಿದೆ. ಮೊಕದ್ದಮೆ ದಾಖಲಿಸಿಕೊಂಡಿದ್ದ ಇನ್ಸ್ ಪೆಕ್ಟರ್ ವರ್ಗಾವಣೆ ಮಾಡಲಾಗಿದೆ. ಬೆಳಗಾವಿಯ ರಾಣಿ ಚೆನ್ನಮ್ಮ ವೃತ್ತದಲ್ಲಿ ನಡೆಯುತ್ತಿದ್ದ ಪ್ರತಿಭಟನಾ ಸ್ಥಳಕ್ಕೆ ಸ್ವತಃ ತಾವೇ ಆಗಮಿಸಿದ ಬೆಳಗಾವಿ ಪೊಲೀಸ್ ಕಮಿಷನರ್ ಎಡಾ ಮಾರ್ಟಿನ್ ಅವರು ಕನ್ನಡಿಗರ ಮೇಲೆ ಬೆಳಗಾವಿ ಜಿಲ್ಲೆಯಲ್ಲಿ ಯಾವುದೇ ಸ್ವರೂಪದ ದೌರ್ಜನ್ಯ ನಡೆಯದಂತೆ ಎಚ್ಚರವಹಿಸುವುದಾಗಿ ಭರವಸೆ ನೀಡಿದ್ದಾರೆ ಎಂದು ಗೌಡರು ತಿಳಿಸಿದ್ದಾರೆ.
ಮಹಾರಾಷ್ಟ್ರದಲ್ಲಿ ಕರ್ನಾಟಕದ ಬಸ್ ಗಳ ಮೇಲೆ ದಾಳಿ ನಡೆಸಿ ಬಸ್ ಚಾಲಕ, ನಿರ್ವಾಹಕರ ಮೇಲೆ ದಾಳಿಗಳು ಮುಂದವರೆದಲ್ಲಿ ಕರವೇ ಕ್ರಿಯೆಗೆ ಪ್ರತಿಕ್ರಿಯೆ ನೀಡಲು ಸಿದ್ಧವಾಗಿದೆ. ಈ ಸಂಘರ್ಷ ಮುಂದುವರೆಯುವುದು ಬೇಡವೆನ್ನುವುದಾದರೆ ಕರ್ನಾಟಕ ಮತ್ತು ಮಹಾರಾಷ್ಟ್ರ ಸರ್ಕಾರಗಳು ಸೂಕ್ತ ಕ್ರಮ ಕೈಗೊಂಡು ಕನ್ನಡಿಗರ ಮೇಲಿನ ದಾಳಿಗಳನ್ನು ತಡೆಗಟ್ಟಬೇಕು. ಮೊದಲಿನಿಂದ ಕರ್ನಾಟಕ ರಕ್ಷಣಾ‌ ವೇದಿಕೆ ತೀರಾ ಅನಿವಾರ್ಯ ಸಂದರ್ಭಗಳನ್ನು ಹೊರತುಪಡಿಸಿ “ಕರ್ನಾಟಕ‌ ಬಂದ್” ಕರೆಗಳಿಗೆ ಕೈಜೋಡಿಸಿಲ್ಲ. ಬಂದ್ ನಿಂದ ಜನ ಸಾಮಾನ್ಯರಿಗೆ, ಅದರಲ್ಲೂ ವಿಶೇಷವಾಗಿ ಅಂದಿನ ಅನ್ನ ಸಂಪಾದಿಸಲು ದಿನಗೂಲಿ ಮಾಡುವ ಬಡಪಾಯಿಗಳಿಗೆ ತೊಂದರೆಯಾಗುತ್ತದೆ. ನಮಗೆ ನಾವೇ ತೊಂದರೆ ಕೊಟ್ಟುಕೊಂಡು‌ ಬಂದ್ ನಡೆಸುವುದರಲ್ಲಿ ಅರ್ಥವಿಲ್ಲ ಎಂದು ಅಭಿಪ್ರಾಯಪಟ್ಟಿದ್ದಾರೆ.
ಮೇಲಾಗಿ ಮಾರ್ಚ್ ತಿಂಗಳಿನಲ್ಲಿ ಶಾಲಾ ಮಕ್ಕಳಿಗೆ ಪರೀಕ್ಷೆಗಳು ಇರುತ್ತವೆ. ಈ ಸಂದರ್ಭದಲ್ಲಿ ‌ಬಂದ್ ನಡೆಸುವುದರಿಂದ‌ ಅವರಿಗೆ ಅನಾನುಕೂಲವಾಗುತ್ತದೆ. ಕರ್ನಾಟಕ ರಕ್ಷಣಾ ವೇದಿಕೆ ಯಾವಾಗಲೂ ‘ಬಂದ್’ ಹೋರಾಟಗಾರರ ಕೊನೆಯ ಅಸ್ತ್ರವಾಗಿರಬೇಕು ಎಂದು ನಂಬಿಕೊಂಡು ಬಂದಿದೆ.‌ ಎಲ್ಲ ಸಮಸ್ಯೆಗಳಿಗೂ ಬಂದ್ ಪರಿಹಾರವಲ್ಲ. ಹೋರಾಟಕ್ಕೆ ನಾನಾ ಮಾರ್ಗಗಳು ಇವೆ. ನಾವು ಅಂಥ ಮಾರ್ಗಗಳನ್ನು ಹಿಡಿದು ಚಳವಳಿಯನ್ನು ಸಂಘಟಿಸುತ್ತ ಬಂದಿದ್ದೇವೆ ಎಂದಿದ್ದಾರೆ.
ಕರ್ನಾಟಕ ರಕ್ಷಣಾ ವೇದಿಕೆ ಈಗ ಕೆಪಿಎಸ್ ಸಿ ಪರೀಕ್ಷೆಗಳಲ್ಲಿ ಅನ್ಯಾಯಕ್ಕೆ ಒಳಗಾಗಿರುವ ಸುಮಾರು 70,000 ಕ್ಕೂ‌ ಹೆಚ್ಚು ಕನ್ನಡ ಮಾಧ್ಯಮದಲ್ಲಿ ಕಲಿತ ಕನ್ನಡದ ಮಕ್ಕಳ ಪರವಾಗಿ ಚಳವಳಿ‌ ಸಂಘಟಿಸುತ್ತಿದೆ. ಇದು ಕನ್ನಡಿಗರ ಬದುಕಿನ‌ ಪ್ರಶ್ನೆ, ಕನ್ನಡದ ಅಸ್ಮಿತೆಯ ಪ್ರಶ್ನೆಯಾಗಿದೆ. ಹಿರಿಯರಾದ ವಾಟಾಳ್ ನಾಗರಾಜ್ ಅವರ ಕುರಿತು ಅಪಾರವಾಗಿ ಗೌರವವಿಟ್ಟುಕೊಂಡೇ ಅವರು ಮಾರ್ಚ್ 22ರಂದು ಕರೆ ನೀಡಿರುವ “ಕರ್ನಾಟಕ ಬಂದ್” ನಿಂದ ಕರ್ನಾಟಕ ರಕ್ಷಣಾ‌ ವೇದಿಕೆ ದೂರ ಉಳಿಯುತ್ತದೆ‌ ಎಂದು ಈ‌ ಮೂಲಕ ಸ್ಪಷ್ಟಪಡಿಸುತ್ತದೆ ಎಂದು ನಾರಾಯಣಗೌಡರು ತಿಳಿಸಿದ್ದಾರೆ.

More articles

Latest article