ಡಿಕೆ ಲವ್ಸ್ ಬಿಜೆಪಿ ಎಂಬ ಪ್ಲಾಂಟೆಡ್‌ ಸ್ಟೋರಿಯ  ಲೆಕ್ಕಾಚಾರಗಳೇನು?

Most read

ಡಿ.ಕೆ. ಶಿವಕುಮಾರ್‌ ಗೆ ಒಂದುಕಡೆ ರಾಜ್ಯ ಹಿರಿಯ ನಾಯಕರ ಒತ್ತಾಸೆಯಿಲ್ಲ, ಮತ್ತೊಂದೆಡೆ ಶಾಸಕರ ದೊಡ್ಡ ಬಲವಿಲ್ಲ, ಇರುವ ಕೆಲವು ಶಾಸಕರು ಕೂಡಾ ತನ್ನ ಕೆಪಿಸಿಸಿ ಅಧ್ಯಕ್ಷಗಿರಿಯ ಪ್ರಭಾವಕ್ಕೆ ಒಳಗಾಗಿ ಜೊತೆಗಿರುವವರು. ಈಗ ಕೆಪಿಸಿಸಿ ಅಧ್ಯಕ್ಷಗಾದಿಗೂ ಸಂಚಕಾರ ಬಂದಿರುವುದರಿಂದ ಅವರ ವಿಶ್ವಾಸದ ಬಗ್ಗೆಯೂ ಖಾತ್ರಿಯಿಲ್ಲ. ಇಂತಹ ಸಂದರ್ಭದಲ್ಲಿ, ಹೈಕಮಾಂಡ್‌ ನಾಯಕರಿಂದಲೂ ಅಂತರ ಹೆಚ್ಚಾಗುತ್ತಿದೆ. ಒಬ್ಬ ಮನುಷ್ಯ ರಾಜಕೀಯವಾಗಿ ಉದ್ವಿಗ್ನಗೊಳ್ಳಲು ಇಷ್ಟು ಸಾಕಲ್ಲವೇ? ಕಲಿವೀರಯ್ಯ ಸಣ್ಣಗೌಡ, ರಾಜಕೀಯ ವಿಶ್ಲೇಷಕರು.

ಡಿ.ಕೆ. ಶಿವಕುಮಾರ್ ಬಿಜೆಪಿ ಸೇರ್ತಾರಾ? ಈ ಪ್ರಶ್ನೆಗೆ ಸ್ಪಷ್ಟ ಉತ್ತರ ಹೇಳಲು ಕಾಲವಿನ್ನೂ ಪಕ್ವವಾಗಿಲ್ಲ. ಆದರೆ ಡಿಕೆ ಬಿಜೆಪಿ ಸೇರ್ತಾರೆ ಎಂಬ ಸುದ್ದಿಯೊಂದು ದಿಢೀರ್ ಹುಟ್ಟಿಕೊಂಡು ಹರಿದಾಡುತ್ತಿದೆಯಲ್ಲ, ಅದರ ಹಿಂದೆ ಕೆಲವು ಉದ್ದೇಶಿತ ರಾಜಕೀಯ ಲೆಕ್ಕಾಚಾರಗಳಿರುವುದು ಮಾತ್ರ ಸತ್ಯ. ಯಾಕಂದ್ರೆ, ಇದು ಬೇರೆ ಯಾರೋ ಹುಟ್ಟುಹಾಕಿರುವ ಸುದ್ದಿಯಲ್ಲ; ಸ್ವತಃ ಡಿ ಕೆ ಶಿವಕುಮಾರ್‍‌ ಬಳಗ ವ್ಯವಸ್ಥಿತವಾಗಿ ಪ್ಲ್ಯಾಂಟ್‌ ಮಾಡಿರುವ ಸುದ್ದಿ ಎನ್ನಲಾಗುತ್ತಿದೆ!

ನೀವು ಡೀಕೆ ಯವರ ಇತ್ತೀಚಿನ ಪೊಲಿಟಿಕಲ್‌ ಸ್ಟ್ರಾಟಜಿಗಳನ್ನು ಸೂಕ್ಷ್ಮವಾಗಿ ಗಮನಿಸುತ್ತಾ ಬಂದರೆ ಇದು ಮನದಟ್ಟಾಗುತ್ತೆ. ಡೀಕೆ ರಾಜಕೀಯ ಮಹತ್ವಾಕಾಂಕ್ಷೆ ಹೊಂದಿರುವ ವ್ಯಕ್ತಿ. ಸದ್ಯದ ಮಟ್ಟಿಗೆ ಸಿಎಂ ಆಗಬೇಕೆಂಬುದೇ ಆ ಮಹತ್ವಾಕಾಂಕ್ಷೆ. ಈ ತುಡಿತ ಅವರಲ್ಲಿ ಎಷ್ಟು ಕುದಿಯುತ್ತಿದೆಯೆಂದರೆ, ಎಲ್ಲಿ ಆ ಅವಕಾಶ ತನ್ನ ಕೈತಪ್ಪುವುದೋ ಎಂಬ ಸ್ವಯಂಕೃತ ಧಾವಂತದಲ್ಲಿ ಅನಗತ್ಯ ಯಡವಟ್ಟುಗಳನ್ನು ಮಾಡಿಕೊಂಡು ಇಂಚಿಂಚೇ ತಮ್ಮ ಮಹತ್ವಾಕಾಂಕ್ಷೆಯಿಂದ ತಾವೇ ದೂರಾಗುತ್ತಾ ಬರುತ್ತಿದ್ದಾರೆ. ಚುನಾವಣೆಗಳನ್ನು ಗೆಲ್ಲುವುದಕ್ಕೂ, ಗೆದ್ದ ಶಾಸಕರನ್ನೆಲ್ಲ ವಿಶ್ವಾಸದಲ್ಲಿಟ್ಟುಕೊಂಡು ಸರ್ಕಾರದ ನೇತೃತ್ವ ವಹಿಸುವುದಕ್ಕೂ ಬಹಳಷ್ಟು ವ್ಯತ್ಯಾಸವಿದೆ. ಬಹುಶಃ ಕರ್ನಾಟಕದ ಸಂದರ್ಭದಲ್ಲಿ, ಇದನ್ನು ಯಡಿಯೂರಪ್ಪನವರಿಗಿಂತ ಚೆನ್ನಾಗಿ ಅರ್ಥ ಮಾಡಿಕೊಂಡವರು ಮತ್ತೊಬ್ಬರಿಲ್ಲ. ಬಿಜೆಪಿ ಗೆಲುವಿನಲ್ಲಿ ಅವರ ಪಾತ್ರ ಎಷ್ಟು ಪ್ರಧಾನವೆಂಬುದು ಎಲ್ಲರಿಗೂ ಗೊತ್ತಿರುವ ಸಂಗತಿ. ಆದರೆ ಎರಡು ಸಲ ಮುಖ್ಯಮಂತ್ರಿಯಾಗಿದ್ದಾಗಲೂ ತಮ್ಮದೇ ಪಕ್ಷದವರ ವಿಶ್ವಾಸವಿಲ್ಲದೆ ಅವರು ಕುರ್ಚಿಯನ್ನು ತ್ಯಜಿಸಬೇಕಾಯ್ತು. 

ಡಿ.ಕೆ. ಶಿವಕುಮಾರ್‍‌ ತಮ್ಮ ಸಿಎಂ ಕನಸಿನಿಂದ ದೂರಾಗುತ್ತಿರುವುದೇ ಇಲ್ಲಿ. ಹೈಕಮಾಂಡ್‌ ಬೆಂಬಲ ಮತ್ತು ಡೋಂಟ್‌ ಕೇರ್‍‌ ದಾಢಸಿತನ, ಇವೆರಡಿದ್ದರೆ ನಾನು ಸಿಎಂ ಆಗಿಬಿಡಬಹುದೆನ್ನುವ ಸುಲಭ ಲೆಕ್ಕಾಚಾರದಲ್ಲಿದ್ದ ಅವರು, ಶಾಸಕರ ವಿಶ್ವಾಸವನ್ನು ಉತ್ಪಾದಿಸಿಕೊಳ್ಳಲು ಮುಂದಾಗುತ್ತಿರುವುದೇ ಕಾಂಗ್ರೆಸ್‌ನೊಳಗಿನ ಈ  ಗೊಂದಲದ ಮೂಲ ಧಾತು. ತನಗಿರುವ ಕೆಪಿಸಿಸಿ ಅಧ್ಯಕ್ಷಗಿರಿಯನ್ನು ಬಳಸಿಕೊಂಡು, ಹಿರಿಯ ನಾಯಕರನ್ನು ಕೇರ್‍‌ ಮಾಡದೆ, ಒಂದಷ್ಟು ಬೆರಳೆಣಿಕೆಯ ಹೊಸ ಮುಖಗಳಿಗೆ ಅಧಿಕಾರದ ಆಸೆ ಹುಟ್ಟಿಸಿ, ಆ ಮೂಲಕ ತಾನು ಸಿಎಂ ಆಗುವ ಧಾವಂತದಲ್ಲಿದ್ದಾರೆ. ಅವರ ಈ ನಡೆ ಹಿರಿಯ ಕಾಂಗ್ರೆಸ್‌ ನಾಯಕರು ಬಂಡೇಳುವಂತೆ ಮಾಡುತ್ತಿದೆ. ರಾಜಣ್ಣ, ಸತೀಶ್‌ ಜಾರಕಿಹೊಳಿ, ಎಚ್‌ ಸಿ ಮಹದೇವಪ್ಪ, ಜಮೀರ್‍‌, ದಿನೇಶ್‌ ಗುಂಡೂರಾವ್ ತರಹದ ನಾಯಕರನ್ನು ಬಿಟ್ಟುಬಿಡಿ; ಅವರೆಲ್ಲ ಸಿದ್ದರಾಮಯ್ಯನವರ ಜೊತೆ ಆಪ್ತವಾಗಿ ಗುರುತಿಸಿಕೊಂಡವರು. ಆದರೆ ಜಿ ಪರಮೇಶ್ವರ್‍‌ ತರಹದ ವ್ಯಕ್ತಿ ಕೂಡಾ ಡಿಕೆ ಶಿವಕುಮಾರ್‍‌ ವಿರುದ್ಧ ಮಾತನಾಡಲು ಶುರು ಮಾಡಿರೋದು ನಮಗೆ ಸಮಸ್ಯೆಯ ಮೂಲವನ್ನು ಅರ್ಥ ಮಾಡಿಸುತ್ತೆ. ಯಾಕೆಂದ್ರೆ, ಪರಮೇಶ್ವರ್‍‌ ಈ ಮೊದಲು ಸಿದ್ದರಾಮಯ್ಯನವರ ಆಪ್ತರೆಂದು ಗುರುತಿಸಿಕೊಂಡವರಲ್ಲ. ನಿಜ ಹೇಳಬೇಕೆಂದರೆ, 2013ರಲ್ಲಿ ಸಿಎಂ ಸ್ಥಾನಕ್ಕೆ ಸಿದ್ದರಾಮಯ್ಯನವರಿಗೆ ಪ್ರಬಲ ಪೈಪೋಟಿ ನೀಡಿದ ವ್ಯಕ್ತಿಗಳಲ್ಲಿ ಅವರೂ ಒಬ್ಬರು.

ಅಂತವರು ಇದೀಗ ದಿಢೀರ್‍‌ ಡಿ.ಕೆ. ಶಿವಕುಮಾರ್‍‌ ವಿರುದ್ಧ ತಿರುಗಿ ಬೀಳುತ್ತಾರೆಂದರೆ, ಡೀಕೆ ಸಿಎಂ ಆಗುವ ಧಾವಂತದಲ್ಲಿ ಮಾಡಿಕೊಳ್ಳುತ್ತಿರುವ ಯಡವಟ್ಟುಗಳು ಅನಾವರಣವಾಗುತ್ತವೆ. ಸಿದ್ದರಾಮಯ್ಯನವರೂ ಸೇರಿದಂತೆ ತನ್ನ ಸಿಎಂ ಕನಸಿಗೆ ಅಡ್ಡಿಯಾಗಬಹುದಾದ ಎಲ್ಲಾ ಹಿರಿಯ ನಾಯಕರನ್ನು ಒಂದೇ ಉಸಿರಿಗೆ ತೆಗೆದು ಬಿಸಾಡದೆ ಹೋದರೆ, ತಾನು ಸಿಎಂ ಆಗಲು ಸಾಧ್ಯವಿಲ್ಲ ಅನ್ನೋದು ಡಿ.ಕೆ. ಶಿವಕುಮಾರ್‍‌ ಅವರ ಲೆಕ್ಕಾಚಾರ. ಹಾಗಾಗಿ ತಮ್ಮದೇ ಸಂಪುಟದ ಮುಕ್ಕಾಲು ಭಾಗ ಸಚಿವರುಗಳ ವಿರೋಧವನ್ನು ತಾವಾಗಿಯೇ ಸೃಷ್ಟಿಸಿಕೊಳ್ಳುತ್ತಿದ್ದಾರೆ. 

ಇದೊಂದೇ ಅಲ್ಲ, ತಾವೇ ಸೃಷ್ಟಿಸಿಕೊಂಡ ಈ ವಿರೋಧವನ್ನು ಮೆಟ್ಟಿ ನಿಲ್ಲುವ ಧಾವಂತದಲ್ಲಿ ಅವರು ಹೈಕಮಾಂಡ್‌ನ ಕೆಂಗಣ್ಣಿಗೆ ಗುರಿಯಾಗುವ ಯಡವಟ್ಟುಗಳನ್ನು ಮೈಮೇಲೆ ಎಳೆದು ಕೊಳ್ಳುತ್ತಿದ್ದಾರೆ. ಕೆಲ ದಿನಗಳ ಹಿಂದಿನ ಒಂದು ವಿದ್ಯಮಾನ ನಿಮಗೆ ನೆನಪಿರಬಹುದು. ಸಿದ್ದರಾಮಯ್ಯನವರ ಅಭಿಮಾನಿಗಳು ಹಾಸನದಲ್ಲಿ ಸ್ವಾಭಿಮಾನಿ ಸಮಾವೇಶ ನಡೆಸಲು ಮುಂದಾಗಿದ್ದ ಸಂದರ್ಭ. ಅದನ್ನು ತಪ್ಪಿಸಲು ಸಾಕಷ್ಟು ಪ್ರಯತ್ನಿಸಿ ವಿಫಲರಾದ ಡಿ.ಕೆ. ಶಿವಕುಮಾರ್‍‌, ಕೊನೆಗೆ ಪಕ್ಷದ ವೇದಿಕೆಯಿಂದಲೇ ತನ್ನ ಉಪಸ್ಥಿತಿಯಲ್ಲೆ ಅದು ನಡೆಯುವಂತೆ ನೋಡಿಕೊಂಡರಾದರೂ, ಆ ಸಮಾವೇಶದ ರಾಜಕೀಯ ಪ್ರಭಾವದ ಬಗ್ಗೆ ಅವರಿಗೆ ಸಾಕಷ್ಟು ಆತಂಕವಿತ್ತು. ಹಾಗಾಗಿ, ಆ ಸಮಾವೇಶ ನಡೆಯುವುದಕ್ಕು ಒಂದು ದಿನ ಹಿಂದೆ ಖಾಸಗಿ ನ್ಯಾಷನಲ್‌ ನ್ಯೂಸ್ ಚಾನೆಲ್‌ ಒಂದಕ್ಕೆ ಸಂದರ್ಶನ ನೀಡಿ, “ನಾನು ಹೈಕಮಾಂಡ್‌ ಅನ್ನು ಬ್ಲ್ಯಾಕ್‌ ಮೇಲ್‌ ಮಾಡುವ ತರಹದ ರಾಜಕಾರಣಿ ಅಲ್ಲ” ಎಂಬ ಮಾತನ್ನು ಡಿ.ಕೆ. ಶಿವಕುಮಾರ್‍‌ ಉದ್ದೇಶಪೂರ್ವಕವಾಗಿ ಒತ್ತಿಹೇಳಿದರು. ಅಂದರೆ ಸಿದ್ದರಾಮಯ್ಯನವರ ಬೆಂಬಲಿಗರು ನಡೆಸುತ್ತಿರುವ ಆ ಸಮಾವೇಶ ಹೈಕಮಾಂಡನ್ನು ಬ್ಲ್ಯಾಕ್‌ ಮೇಲ್‌ ಮಾಡುವ ರೀತಿಯದ್ದು ಎಂದು ದೂರುವ ಇರಾದೆ ಅವರ ಮಾತಿನಲ್ಲಿ ಇದ್ದಂತಿತ್ತು. ಯಾಕೆಂದರೆ ಆ ಇಡೀ ಸಂದರ್ಶನ ಡೀಕೆ ಬಳಗವೇ ಆಯೋಜಿಸಿದ್ದ ಪ್ಲಾಂಟೆಡ್‌ ಸಂದರ್ಶನ ಎಂಬ ಮಾತುಗಳು ಕೇಳಿಬಂದವು. ತನ್ನ ಮನದ ಕಿರಿಕಿರಿಯನ್ನು ಹೈಕಮಾಂಡ್‌ಗೆ ದಾಟಿಸುವ ಸಲುವಾಗಿಯೇ ನ್ಯಾಷನಲ್‌ ನ್ಯೂಸ್ ಚಾನೆಲ್‌ನ ಇಂಗ್ಲಿಷ್‌ ಸಂದರ್ಶನವನ್ನು ಆಯ್ಕೆ ಮಾಡಲಾಗಿತ್ತು. ಆದರೆ, ಡೀಕೆ ಬಳಗ ಅಲ್ಲೊಂದು ಯಡವಟ್ಟು ಮಾಡಿಕೊಂಡಿತು. ಪೇಯ್ಡ್‌ ಸಂದರ್ಶನಕ್ಕಾಗಿ ಅದು ಆಯ್ಕೆ ಮಾಡಿಕೊಂಡದ್ದು, ರಾಷ್ಟ್ರೀಯ ಮಟ್ಟದಲ್ಲಿ ಅಗ್ರಗಣ್ಯ ಗೋದಿ ಮೀಡಿಯಾ ಎಂದು ಸ್ವತಃ ತಮ್ಮದೇ ಪಾರ್ಟಿಯಿಂದ ಮೂದಲಿಕೆಗೆ ತುತ್ತಾಗಿದ್ದ  ನ್ಯೂಸ್ ಚಾನೆಲನ್ನು! ಡೀಕೆ ಮಾಡಿದ್ದ ಈ ಸಣ್ಣತನದ ತಂತ್ರಗಾರಿಕೆಯ ಹಿಂದಿರುವ ಉದ್ದೇಶ ಮಾತ್ರವಲ್ಲದೆ, ಅದಕ್ಕಾಗಿ ಆಯ್ಕೆ ಮಾಡಿಕೊಂಡಿದ್ದ ನ್ಯೂಸ್‌ ಚಾನೆಲ್‌ನ ಹಿನ್ನೆಲೆಯ ಕಾರಣದಿಂದಲೂ ರಾಹುಲ್ ಗಾಂಧಿ ಆದಿಯಾಗಿ ಹಲವು ಹೈಕಮಾಂಡ್‌ ನಾಯಕರು ಡೀಕೆ ವಿರುದ್ಧ ಅಸಮಾಧಾನಗೊಂಡರು. ತನ್ನ ಈ ಯಡವಟ್ಟನ್ನು ಸರಿ ಮಾಡಿಕೊಳ್ಳುವ ಸಲುವಾಗಿ, ಮಾರನೇ ದಿನದ ಸಮಾವೇಶದ ವೇದಿಕೆಯಲ್ಲಿ “ಸಿದ್ದರಾಮಯ್ಯನವರ ಜೊತೆಗೆ ಈ ಬಂಡೆ ಸಾಯುವವರೆಗೆ ನಿಲ್ಲುತ್ತದೆ” ಎಂದು ಸಂಪೂರ್ಣ ರಾಜಕೀಯ ಶರಣಾಗತಿಯಂತಹ ಹೇಳಿಕೆ ನೀಡಬೇಕಾದ ಅನಿವಾರ್ಯತೆ ತಂದುಕೊಂಡರು.

ಕುಂಭಮೇಳದಲ್ಲಿ ಡಿಕೆಶಿ ದಂಪತಿಗಳು

ಕೇವಲ ಇದೊಂದು ವಿದ್ಯಮಾನ ಮಾತ್ರವಲ್ಲದೆ, ಇತ್ತೀಚೆಗೆ ಡೀಕೆ ಮಾಡಿಕೊಳ್ಳುತ್ತಿರುವ ಇಂತಹ ಹಲವು ಯಡವಟ್ಟುಗಳಿಂದ ಅವರು ಹೈಕಮಾಂಡ್‌ನ ಒಲವನ್ನು ಕಳೆದುಕೊಳ್ಳುತ್ತಾ ಬರುತ್ತಿದ್ದಾರೆ. ಪಕ್ಷದ ನಿಲುವಿಗೆ ವಿರುದ್ಧವಾಗಿ ಅಂಬಾನಿ ಕುಟುಂಬದ ಮದುವೆಯಲ್ಲಿ ಭಾಗಿಯಾಗಿದ್ದು; ಹೈಕಮಾಂಡ್‌ಗೆ ಮಾಹಿತಿ ನೀಡದೆ ಮೋದಿಯವರನ್ನು ಭೇಟಿಯಾದದ್ದು; ಪಕ್ಷದ ನಿಲುವನ್ನು ಉಲ್ಲಂಘಿಸಿ ಕುಂಭಮೇಳದಲ್ಲಿ ಭಾಗಿಯಾದದ್ದು; `ರಾಹುಲ್‌ ಗಾಂಧಿ ಯಾರೆಂಬುದೇ ನನಗೆ ಗೊತ್ತಿಲ್ಲ ಎಂದು ಅವಮಾನಿಸಿದ್ದ, ಆರ್‍‌ ಎಸ್‌ ಎಸ್‌ ಸಖ್ಯ ಹೊಂದಿರುವ ಜಗ್ಗಿ ವಾಸುದೇವ್ ಕಾರ್ಯಕ್ರಮದಲ್ಲಿ ಅಮಿತ್‌ ಶಾ ಜೊತೆ ವೇದಿಕೆ ಹಂಚಿಕೊಂಡದ್ದು…. ಇವೆಲ್ಲವೂ ಡಿ.ಕೆ. ಶಿವಕುಮಾರ್‍‌ ಅವರನ್ನು ಹೈಕಮಾಂಡ್‌ನಿಂದ ಹಂತಹಂತವಾಗಿ ದೂರ ಮಾಡುತ್ತಿವೆ. ಇಲ್ಲದೇ ಹೋಗಿದ್ದರೆ, ಸೋನಿಯಾ ಮತ್ತು ರಾಹುಲ್‌ ಗಾಂಧಿಯವರನ್ನು ಸಲೀಸಾಗಿ ಭೇಟಿಯಾಗಿ ಬರುತ್ತಿದ್ದ ಡೀಕೆ, ಮೊನ್ನೆ ದಿಲ್ಲಿಗೆ ಹೋದಾಗ ಕೇವಲ ಕೆ ಸಿ ವೇಣುಗೋಪಾಲ್‌ ಅವರನ್ನು ಭೇಟಿಯಾಗುವುದಕ್ಕಷ್ಟೇ ಸೀಮಿತಗೊಳ್ಳುತ್ತಿರಲಿಲ್ಲ. ಸೋನಿಯಾ ಅವರಿಗೆ ಆರೋಗ್ಯ ಸರಿಯಿಲ್ಲ, ಆದರೆ ರಾಹುಲ್‌ ಗಾಂಧಿಯವರು ಉದ್ದೇಶಪೂರ್ವಕವಾಗಿಯೇ ಡೀಕೆ ಭೇಟಿಯನ್ನು ನಿರಾಕರಿಸಿದ್ದರಿಂದ ವೇಣುಗೋಪಾಲ್‌ ಅವರೊಟ್ಟಿಗೆ ಮಾತ್ರ ಅವರ ಭೇಟಿ ಮೊಟಕುಗೊಂಡಿತು ಎಂದು ದಿಲ್ಲಿ ಮೂಲಗಳು ಹೇಳುತ್ತವೆ. ಈ ರೀತಿಯ ಹಿನ್ನಡೆ ಉಂಟಾಗದೆ ಹೋಗಿದ್ದರೆ, ದಿಲ್ಲಿಗೆ ಹೋಗುವ ಮುನ್ನ ಮುಂದಿನ ಚುನಾವಣೆ ನನ್ನ ನಾಯಕತ್ವದಲ್ಲೆ ನಡೆಯಲಿದೆ ಎಂದು ಹೇಳಿ ಹೋಗಿದ್ದ ಡೀಕೆ, ದಿಲ್ಲಿಯಿಂದ ಮರಳುತ್ತಿದ್ದಂತೆಯೇ ಸಾಮೂಹಿಕ ನಾಯಕತ್ವದಲ್ಲಿ ಚುನಾವಣೆ ನಡೆಸುತ್ತೇವೆ ಎಂದು ಸ್ಟೆಪ್‌ ಬ್ಯಾಕ್‌ ಹೇಳಿಕೆ ನೀಡುತ್ತಿರಲಿಲ್ಲ.

ಡಿಕೆ ಶಿವಕುಮಾರ್ ತರಹದ ವೈಬ್ರೆಂಟ್‌ ನಾಯಕ ಇಂತಹ ಉದ್ವಿಗ್ನ ಪರಿಸ್ಥಿತಿಯಲ್ಲಿ, ಸಿಎಂ ಕುರ್ಚಿ ಕೈಜಾರಿ ಹೋಗುತ್ತಿರುವುದನ್ನು ನೋಡಿಕೊಂಡು ಸುಮ್ಮನೆ ಕೂರಲು ಸಾಧ್ಯವೇ? ಆಗ ಮೈದಳೆದದ್ದೇ ಈ ಬಿಜೆಪಿ ನಂಟಿನ ಪ್ಲಾಂಟೆಡ್‌ ಸುದ್ದಿಯ ಕಥೆ! ಇಂತಹದ್ದೇ ಸನ್ನಿವೇಶದಲ್ಲಿ ತೊಳಲಾಡುತ್ತಿರುವ ಕೇರಳದ ಹೈಪ್ರೊಫೈಲ್ ಇಂಟೆಲೆಕ್ಚುಯೆಲ್‌ ನಾಯಕ ಶಶಿ ತರೂರ್‍‌, “ಪಕ್ಷಕ್ಕೆ ನಾನು ಬೇಡವಾದರೆ ಹೇಳಿಬಿಡಲಿ, ನನಗೂ ಬೇರೆ ಆಯ್ಕೆಗಳಿವೆ” ಎಂದು ಹೇಳಿದ್ದ ಮಾತು ಡೀಕೆ ಬಳಗದ ಈ ಪ್ಲಾಂಟೆಡ್‌ ಸುದ್ದಿಗೆ ಸ್ಪೂರ್ತಿಯಾಗಿರಲೂ ಬಹುದು. ರಾಜ್ಯ ರಾಜಕಾರಣ ಮತ್ತು ಹೈಕಮಾಂಡ್‌ ಮಟ್ಟದಲ್ಲಿ ದಿನದಿಂದ ದಿನಕ್ಕೆ ತನ್ನ ಹಿಡಿತ ಕಡಿಮೆಯಾಗುತ್ತಿರುವ ಬೆಳವಣಿಗೆಯನ್ನು ರಾಜಕೀಯವಾಗಿ ಕೌಂಟರ್‍‌ ಮಾಡಲು ಡೀಕೆ ಬಿಜೆಪಿ ಕಡೆ ವಾಲುತ್ತಿದ್ದಾರೆ ಎಂಬ ಸುದ್ದಿಯನ್ನು ಸೃಷ್ಟಿಸಲಾಗಿದೆ; ಈ ಹಿಂದೆ ಪ್ಲಾಂಟೆಡ್‌ ಸಂದರ್ಶನವನ್ನು ಸೃಷ್ಟಿಸಿದ್ದಂತೆ. ವಿಪರ್ಯಾಸವೆಂದರೆ, ಆ ಪ್ಲಾಂಟೆಡ್‌ ಸಂದರ್ಶನದಲ್ಲಿ ‘ಹೈಕಮಾಂಡನ್ನು ಬ್ಲ್ಯಾಕ್ ಮೇಲ್‌ ಮಾಡುವವನಲ್ಲ’ ಎಂದು ತಾವೇ ಹೇಳಿದ್ದ ಹೇಳಿಕೆಗೆ ವಿರುದ್ಧವಾಗಿದೆ ಡೀಕೆ ಬಳಗದ ಈ ಪ್ಲ್ಯಾಂಟೆಡ್‌ ನಡೆ! ಸಹಜವಾಗಿಯೇ, ಈ ಸುದ್ದಿಯನ್ನು ಡೀಕೆ ಅಲ್ಲಗಳೆಯುತ್ತಾರೆ. ಹಾಗೆ ಅಲ್ಲಗಳೆಯುವ ಮೂಲಕ ಸುದ್ದಿಯನ್ನು ಚರ್ಚೆಯ ಕೇಂದ್ರವಾಗಿಸುತ್ತಾರೆ. ಹೈಕಮಾಂಡ್‌ಗೆ ಸಣ್ಣ ಬೆದರಿಕೆಯನ್ನು ರವಾನಿಸುತ್ತಾರೆ. ಅನ್ಯ ಪಕ್ಷಗಳ ಕಂಡಕಂಡ ನಾಯಕರನ್ನೆಲ್ಲ ತನಿಖೆಯ ಬ್ಲ್ಯಾಕ್‌ಮೇಲ್‌ ಮೂಲಕ ತನ್ನ ಬುಟ್ಟಿಗೆ ಹಾಕಿಕೊಳ್ಳುತ್ತಿರುವ ಬಿಜೆಪಿಯ ನಡೆಯೇ ಈ ಪ್ಲ್ಯಾಂಟೆಡ್‌ ಸುದ್ದಿಯ ಬಂಡವಾಳ. 

ಜಗ್ಗಿ ವಾಸುದೇವ್ ಕಾರ್ಯಕ್ರಮದಲ್ಲಿ ಡಿಕೆಶಿವಕುಮಾರ್

ಈ ಸುದ್ದಿ ಸುಳ್ಳೋ, ಸತ್ಯವೋ ನಂತರದ ಸಂಗತಿ. ಆದರೆ, ಒಂದುವೇಳೆ ಡೀಕೆ ಬಿಜೆಪಿ ಸೇರುವುದೇ ನಿಜವಾದಲ್ಲಿ, ಅದರ ರಾಜಕೀಯ ಪರಿಣಾಮಗಳು ಏನಾಗಬಹುದು? ಡೀಕೆ ಪಾಲಿಗೆ ಆ ನಿರ್ಧಾರ ಲಾಭವೆಷ್ಟು ಅಥವಾ ನಷ್ಟವೆಷ್ಟು? ರಾಜ್ಯ ಬಿಜೆಪಿ ಮತ್ತು ಜೆಡಿಎಸ್‌ ನಾಯಕರು ಈ ಸೇರ್ಪಡೆಯನ್ನು ಹೇಗೆ ಸ್ವೀಕರಿಸಬಲ್ಲರು? ಈ ಪ್ರಶ್ನೆಗಳೂ ಇಲ್ಲಿ ಮುಖ್ಯವೆನಿಸುತ್ತವೆ. ಒಂದೊಮ್ಮೆ ಡೀಕೆ ಬಿಜೆಪಿಗೆ ಹೋಗುವುದಿದ್ದರೆ, ತನ್ನ ರಾಜಕೀಯ ಗುರು ಎಸ್‌ ಎಂ ಕೃಷ್ಣ ಬಿಜೆಪಿ ಸೇರಿದಾಗಲೇ ಸೇರಿಬಿಡುತ್ತಿದ್ದರು. ಆದರೆ ಅಂತಹ ನಡೆ, ಮುಖ್ಯಮಂತ್ರಿಯಾಗಬೇಕೆನ್ನುವ ತನ್ನ ರಾಜಕೀಯ ಮಹಾತ್ವಾಕಾಂಕ್ಷೆಗೆ ಎಷ್ಟು ದೊಡ್ಡ ಅಡ್ಡಿಯಾಗಬಹುದೆನ್ನುವುದು ಡೀಕೆಗೆ ಮನದಟ್ಟಾಗಿತ್ತು. ಹಾಗಾಗಿಯೇ ಇಡಿ, ಸಿಬಿಐ ತನಿಖೆಗಳ ಒತ್ತಡದ ಹೊರತಾಗಿಯೂ ಕಾಂಗ್ರೆಸ್‌ನಲ್ಲೇ ಉಳಿದರು. ಈಗ ಅವರು ಕರ್ನಾಟಕದ ಕಾಂಗ್ರೆಸ್‌ ಮಟ್ಟಿಗೆ ಸಿದ್ದರಾಮಯ್ಯ ನಂತರದ ನಂಬರ್‍‌ 2 ನಾಯಕ. ಅವರ ನಂತರ ಮುಖ್ಯಮಂತ್ರಿಯಾಗುವ ಎಲ್ಲಾ ಸಾಧ್ಯತೆ ಮತ್ತು ಅರ್ಹತೆಗಳಿವೆ. ಆದರೆ ಅದನ್ನು ಸಾಧ್ಯವಾಗಿಸಿಕೊಳ್ಳಲು ಬೇಕಾದ ವ್ಯವಧಾನವನ್ನು ಅವರ ಧಾವಂತ ನುಂಗಿಹಾಕುತ್ತಿದೆಯಷ್ಟೆ. ಸಿದ್ದರಾಮಯ್ಯನವರನ್ನು ಮತ್ತು ಅವರ ಬೆಂಬಲಿಗ ಹಿರಿಯ ಸಚಿವರ ಜೊತೆ ಪರ್ಸನಾಲಿಟಿ ಇಶ್ಯೂಗಳನ್ನು ಸರಿಪಡಿಸಿಕೊಳ್ಳುವ ನಾಜೂಕಿನ ಕೆಲಸಕ್ಕೆ ಡಿ.ಕೆ. ಮುಂದಾದದ್ದೇ ಆದಲ್ಲಿ, ಈ ಅವಧಿಯಲ್ಲೆ ಅವರು ಸಿಎಂ ಆಗಬಹುದಾದ ಸಾಧ್ಯತೆಗಳು ತೆರೆದುಕೊಳ್ಳುತ್ತವೆ. ಫ್ಯೂಡಲ್‌ ಶೈಲಿಯ ಹಕ್ಕು ಚಲಾಯಿಸುವ ದಾಢಸಿತನ ಮತ್ತು ಪ್ಲ್ಯಾಂಟೆಡ್‌ ಸುದ್ದಿ-ಸಂದರ್ಶನಗಳಂತಹ ಎಳಸು ಯತ್ನಗಳನ್ನು ದೂರವಿರಿಸಬೇಕಷ್ಟೆ. 

ಆದರೆ ಬಿಜೆಪಿಯಲ್ಲಿ ಇಂತಹ ಅನುಕೂಲಕರ ವಾತಾವರಣವಿಲ್ಲ. ಅಲ್ಲಿ ಈಗಾಗಲೇ ಅಧಿಕಾರಕ್ಕಾಗಿ ದೊಡ್ಡ ಪೈಪೋಟಿಯೇ ನಡೆಯುತ್ತಿದೆ. ಸಾಲದ್ದಕ್ಕೆ, ಒಕ್ಕಲಿಗ ವೋಟ್‌ಬ್ಯಾಂಕ್‌ನ ಜಿದ್ದಾಜಿದ್ದಿ ನಡೆಸುತ್ತಿರುವ ಕುಮಾರಸ್ವಾಮಿಯವರ ಪ್ರತಿಸ್ಪರ್ಧೆಯನ್ನೂ ಎದುರಿಸಬೇಕಾಗುತ್ತೆ. ಯಡಿಯೂರಪ್ಪನವರಂತಹ ಅನಿವಾರ್ಯ ನಾಯಕನನ್ನೇ ಮೂಲೆಗುಂಪು ಮಾಡಿದ ಬಿಜೆಪಿಗೆ ಡೀಕೆ ತರಹದ ವ್ಯಕ್ತಿಯನ್ನು ಸೈಡ್‌ಲೈನ್‌ ಮಾಡುವುದು ಕಷ್ಟವೇನೂ ಅಲ್ಲ. ಕುಮಾರಸ್ವಾಮಿಯವರಾದರೂ ನೇರವಾಗಿ ಬಿಜೆಪಿಯನ್ನು ಸೇರಿಕೊಳ್ಳದೆ ತಮ್ಮದೇ ಪಾರ್ಟಿಯ ಸ್ವಂತ ಅಸ್ತಿತ್ವವನ್ನು ಉಳಿಸಿಕೊಂಡು ಮೈತ್ರಿ ಮಾಡಿಕೊಂಡಿರುವುದರಿಂದ ಅವರಿಗೆ ಬಿಜೆಪಿಯಲ್ಲಿ ಒಂದಷ್ಟು ತೋರಿಕೆಯ ಗೌರವಗಳು ಲಭಿಸುತ್ತಿವೆ. ಕಾಂಗ್ರೆಸ್‌ನಿಂದ ಹೊರಬಂದ ನಂತರ ಡೀಕೆಗೆ ಅಂತಹ ಯಾವ ಸ್ವಂತಹ ಪ್ಲ್ಯಾಟ್‌ಫಾರ್ಮ್‌ನ ಅಸ್ತಿತ್ವವಿಲ್ಲ. ಹಾಗಾಗಿ ಸಂಪೂರ್ಣ ಬಿಜೆಪಿ ಕಾರ್ಯಕರ್ತನಾಗಿ ರೂಪಾಂತರವಾಗಬೇಕು. ಹೀಗೆ ಬಿಜೆಪಿಗೆ ರೂಪಾಂತರವಾದ ಎಸ್‌ ಎಂ ಕೃಷ್ಣ ಅವರನ್ನು ಹೇಗೆ ನಡೆಸಿಕೊಳ್ಳಲಾಯ್ತು ಎಂಬ ಸತ್ಯ ಕಣ್ಣಮುಂದಿದೆ. ಇನ್ನುಳಿದಂತೆ ಡೀಕೆಯ ಮುಂದಿರುವ ಮತ್ತೊಂದು ಸಾಧ್ಯತೆಯೆಂದರೆ ಮಹಾರಾಷ್ಟ್ರ ಮಾದರಿ. ಏಕನಾಥ್ ಶಿಂಧೆ ಅಥವಾ ಅಜಿತ್‌ ಪವಾರ್‍‌ ತರಹ ಮೂರನೇ ಎರಡಕ್ಕಿಂತ ದೊಡ್ಡ ಸಂಖ್ಯೆಯ ಶಾಸಕರನ್ನು ತನ್ನ ಮಾತೃಪಕ್ಷದಿಂದ ಕಿತ್ತುತಂದು ಬಿಜೆಪಿ ಜೊತೆ ಮೈತ್ರಿ ಸರ್ಕಾರ ರಚನೆ ಮಾಡಬೇಕು. ಆ ಸಾಧ್ಯತೆ ಡೀಕೆ ಪಾಲಿಗೆ ತುಂಬಾ ಕ್ಷೀಣ. ಯಾಕೆಂದರೆ, ಪಕ್ಷಾಂತರ ನಿಷೇಧ ಕಾಯ್ದೆಯಿಂದ ಬಚಾವಾಗಬೇಕೆಂದರೆ ಕನಿಷ್ಠ 90 ಹಾಲಿ ಕಾಂಗ್ರೆಸ್‌ ಶಾಸಕರನ್ನು ಅವರು ತಮ್ಮೊಟ್ಟಿಗೆ ಕರೆದೊಯ್ಯಬೇಕಾಗುತ್ತದೆ. ಕೆಪಿಸಿಸಿ ಅಧ್ಯಕ್ಷಗಿರಿ, ಭಾವಿ ಸಿಎಂ ಎಂಬ ಪ್ರಚಾರದ ನಡುವೆಯೂ ಅವರ ಬೆನ್ನ ಹಿಂದೆ 25-30 ಕಾಂಗ್ರೆಸ್‌ ಶಾಸಕರ ಗಟ್ಟಿ ಪಡೆಯಿಲ್ಲ. ಅಂತದ್ದರಲ್ಲಿ ಅವರನ್ನು ನಂಬಿ ಪಕ್ಷಾಂತರ ಮಾಡಲು 90 ಶಾಸಕರು ಮುಂದೆ ಬರುವರೇ?

ಡೀಕೆ ತರಹದ ನಿಪುಣ ರಾಜಕಾರಣಿಗೆ ಇದೆಲ್ಲ ಅರ್ಥವಾಗದ ಸಂಗತಿಯಲ್ಲ. ಹಾಗಾಗಿ ಅವರು ಬಿಜೆಪಿ ಜೊತೆ ಹೋಗುವ ಸಾಧ್ಯತೆ ತೀರಾ ಕ್ಷೀಣ. ಸದ್ಯದ ಸನ್ನಿವೇಶದಲ್ಲಿ ಇದೇನಿದ್ದರೂ ಗಾಳಿಯಲ್ಲಿ ಗುಂಡು ಹಾರಿಸಿದಂತಹ ಮುನ್ನೆಚ್ಚರಿಕೆ-ಕಂ-ಬೆದರಿಕೆ ಯತ್ನವಷ್ಟೆ.  ಈ ಸುದ್ದಿಯನ್ನು ನಿರಾಕರಿಸುವ ಡೀಕೆ ಸಾಹೇಬರ ವೊಕ್ಯಾಬುಲರಿ ಸ್ಟೈಲ್‌ ಮತ್ತು ಬಾಡಿ ಲಾಂಗ್ವೇಜ್‌ ಗಮನಿಸಿದರೆ, ಸ್ವತಃ ಅವರೇ ಈ ಸುದ್ದಿಯ ಫಲಾನುಭವಿಯಾಗಿ ಗೋಚರಿಸುತ್ತಾರೆ. ಆ ಫಲಾನುಭವವೇ ಅವರನ್ನು ಗುಮಾನಿಸುವಂತೆ ಮಾಡುತ್ತಿದೆ. ಅದೇನೆ ಇರಲಿ, ಸಿಎಂ ಕುರ್ಚಿ ಮತ್ತು ಹೈಕಮಾಂಡ್‌ ಒಲವುಗಳಿಂದ ಡಿ.ಕೆ. ಶಿವಕುಮಾರ್‍‌ ಸ್ವಲ್ಪಸ್ವಲ್ಪವೇ ದೂರಾಗುತ್ತಿರುವುದನ್ನು ಈ ವಿದ್ಯಮಾನ ಸಾಬೀತು ಮಾಡುತ್ತಿದೆ. ಜಗ್ಗಿ ವಾಸುದೇವ್‌ ಕಾರ್ಯಕ್ರಮದಲ್ಲಿ ಭಾಗಿಯಾದ ಡೀಕೆ ನಡೆಯನ್ನು ಎಐಸಿಸಿ ಕಾರ್ಯದರ್ಶಿ ಪಿ.ವಿ. ಮೋಹನ್‌ ತೀವ್ರವಾಗಿ ಖಂಡಿಸಿರುವುದು ಅದಕ್ಕೊಂದು ನಿದರ್ಶನವಷ್ಟೆ…

ಕಲಿವೀರಯ್ಯ ಸಣ್ಣಗೌಡರ್

ರಾಜಕೀಯ ವಿಶ್ಲೇಷಕರು


ಇದನ್ನೂ ಓದಿ- ಯುವ ಪೀಳಿಗೆಯ ಮಾನಸಿಕ ಸಂಕಟ ಯಾರಿಗೂ ಕಾಣುತ್ತಿಲ್ಲವೇಕೆ?

More articles

Latest article