ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರ ಪದವಿ ಪ್ರಮಾಣಪತ್ರದ ಮಾಹಿತಿಯನ್ನು ಬಹಿರಂಗಪಡಿಸಬೇಕು ಎಂದು ನಿರ್ದೇಶನ ನೀಡಿದ್ದ ಕೇಂದ್ರ ಮಾಹಿತಿ ಆಯೋಗದ ಮಾಹಿತಿ ಪ್ರಶ್ನಿಸಿ ದೆಹಲಿ ವಿಶ್ವವಿದ್ಯಾಲಯ ಸಲ್ಲಿಸಿದ್ದ ಅರ್ಜಿಯ ತೀರ್ಪನ್ನು ದೆಹಲಿ ಹೈಕೋರ್ಟ್ ಕಾಯ್ದಿರಿಸಿದೆ. ವಾದ ವಿವಾದಗಳನ್ನು ಆಲಿಸಿದ್ದು, ತೀರ್ಪು ಕಾಯ್ದಿರಿಸಲಾಗಿದೆ ಎಂದು ನ್ಯಾಯಮೂರ್ತಿ ಸಚಿನ್ ದತ್ತಾ ಹೇಳಿದ್ದಾರೆ.
ದೆಹಲಿ ವಿಶ್ವವಿದ್ಯಾಲಯದ ಪರ ಹಾಜರಿದ್ದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ರಾ, ಸಿಐಸಿ ಆದೇಶವನ್ನು ರದ್ದು ಮಾಡಬೇಕು ಎಂದು ಮನವಿ ಮಾಡಿದರು. ಆದರೆ ದಾಖಲೆಯನ್ನು ಕೋರ್ಟ್‌ಗೆ ಸಲ್ಲಿಸುವುದರಲ್ಲಿ ಯಾವುದೇ ಆಕ್ಷೇಪಣೆ ಇಲ್ಲ ಎಂದು ಇದೇ ವೇಳೆ ಸ್ಪಷ್ಟಪಡಿಸಿದರು.
ನೀರಜ್ ಎಂಬವರು ಆರ್‌ಟಿಐ ಅರ್ಜಿ ಸಲ್ಲಿಸಿದ ನಂತರ, ಕೇಂದ್ರ ಮಾಹಿತಿ ಆಯೋಗವು (ಸಿಐಸಿ) 1978 ರಲ್ಲಿ ಬಿಎ ಪರೀಕ್ಷೆಯಲ್ಲಿ ಉತ್ತೀರ್ಣರಾದ ಎಲ್ಲಾ ವಿದ್ಯಾರ್ಥಿಗಳ ದಾಖಲೆಗಳನ್ನು ಪರಿಶೀಲಿಸಲು 2016ರ ಡಿಸೆಂಬರ್ 21, ರಂದು ಅನುಮತಿ ನೀಡಿತ್ತು. ಅದೇ ವರ್ಷ ಪ್ರಧಾನಿ ಮೋದಿ ಕೂಡ ಅದರಲ್ಲಿ ಉತ್ತೀರ್ಣರಾಗಿದ್ದರು. 2017ರ ಜನವರಿ 23 ರಂದು ಸಿಐಸಿ ಆದೇಶಕ್ಕೆ ಹೈಕೋರ್ಟ್ ತಡೆ ನೀಡಿತ್ತು.