ಚಿಂತಾಮಣಿಯ ಭಾಗದ ಜನರು ಹೃದಯ ಸಂಬಂಧಿ ರೋಗಗಳಿಗೆ ಚಿಕಿತ್ಸೆ ಪಡೆಯಲು 50 ಕಿಲೋ ಮೀಟರ್ ದೂರದ ಕೋಲಾರಕ್ಕಾದರೂ ಹೋಗಬೇಕು ಅಥವಾ 70 ಕಿಲೋ ಮೀಟರ್ ದೂರದ ಬೆಂಗಳೂರಿಗೇ ಹೋಗಬೇಕು. ಇದರಿಂದಾಗಿ ಆಸ್ಪತ್ರೆ ತಲುಪುವ ಮುನ್ನವೇ ಜೀವ ಕಳೆದುಕೊಳ್ಳುವ ಸಂಭವವೇ ಹೆಚ್ಚು. ಆದುದರಿಂದ ಆಸ್ಪತ್ರೆಗಳು ಮೇಲ್ದರ್ಜೆಗೇರಲಿ ಎನ್ನುವುದು ಈ ಭಾಗದ ಜನರ ಬಹು ದಿನಗಳ ಬೇಡಿಕೆಯಾಗಿದೆ – ಆನಂದ ಎಂ ಕೈವಾರ.
- ಚಿಂತಾಮಣಿ ತಾಲೂಕಿನ ಜಂಗಮಶೀಗೆಹಳ್ಳಿಯ 52 ವಯಸ್ಸಿನ ನಾಗಣ್ಣನದು ತಮಟೆ ಬಾರಿಸುವ ಕಾಯಕ. ಒಂದು ರಾತ್ರಿ 7.30 ಗಂಟೆಗೆ ಊಟ ಮಾಡುವಾಗಲೇ ಆತನ ಪ್ರಾಣ ಪಕ್ಷಿ ಹಾರಿ ಹೋಗುತ್ತದೆ. ಜಂಗಮಶೀಗೇ ಹಳ್ಳಿಯಿಂದ ತಾಲೂಕು ಕೇಂದ್ರವಾದ ಚಿಂತಾಮಣಿಯ ಖಾಸಗಿ ಆಸ್ಪತ್ರೆಗೆ ಕರೆದುಕೊಂಡು ಹೋದಾಗ ಹೃದಯಾಘಾತದಿಂದ ಪ್ರಾಣ ಹೋಗಿದೆ ಎಂದು ವೈದ್ಯರು ಸಾವನ್ನು ಘೋಷಿಸಿದಾಗ, ಹೆಂಡತಿ ರತ್ನಮ್ಮ ಕಂಗಾಲಾಗಿ ಸಾರ್ ಹಂಗನ್ನಬೇಡಿ ಹೇಗಾದರೂ ಮಾಡಿ ನನ್ನ ಗಂಡನನ್ನು ಉಳಿಸಿಕೊಡಿ ಸಾರ್ ಎಂದು ಅಂಗಲಾಚುವಳು. ನೋಡಿ ಅಮ್ಮ, ಸತ್ತು ಈಗಾಗಲೇ ಅರ್ಧ ಗಂಟೆ ಮೇಲೆ ಆಗಿದೆ. ಏನೂಮಾಡಲು ಆಗದು ಎಂದು ಗದರುವರು. ಬೇರೆ ವಿಧಿಯಿಲ್ಲದೆ ರತ್ನಮ್ಮ ಗಂಡನ ದೇಹದೊಂದಿಗೆ ಊರಿನತ್ತ ಹೊರಡುವಳು.
- ನಾಗಣ್ಣನಿಗೆ ಮೂರು ಹೆಣ್ಣು ಮಕ್ಕಳು ಹಾಗೂ ಒಂದು ಗಂಡು ಮಗು. ತಮಟೆ ಬಾರಿಸಿಕೊಂಡು ಮತ್ತು ಸಾರಾಯಿ ಮಾರಿಕೊಂಡು ಜೀವನ ಸಾಗಿಸುತ್ತಿದ್ದನು. ಕುಟುಂಬಕ್ಕೆ ನಾಗಣ್ಣನ ದುಡಿಮೆಯೇ ಆಧಾರವಾಗಿತ್ತು. ನಾಗಣ್ಣನ ಸಾವಿನಿಂದ ಕುಟುಂಬದ ಆದಾಯದ ಮೂಲ ನಿಂತು ಹೋಯಿತು. ಮನೆ ತುಂಬ ಮಕ್ಕಳು. ಅವರನ್ನು ಸಾಕುವ ಹೊಣೆಗಾರಿಕೆ ಅನಕ್ಷರಸ್ಥಳಾದ ನಾಗಣ್ಣನ ಹೆಂಡತಿ ರತ್ನಮ್ಮನ ಮೇಲೇರಿತು.
- 2018ರ ಮಾರ್ಚ್ 1 ರಂದು 55 ವರ್ಷದ ಪಿಳ್ಳಪ್ಪ ಉಸಿರು ಮೇಲೆನೆ ಇದೆ, ಉಸಿರಾಡಲು ಆಗುತ್ತಿಲ್ಲ ಎಂದು ಮಗನತ್ರ ಹೇಳುವನು. ಕೂಡಲೇ ಪಿಳ್ಳಪ್ಪನನ್ನು ರಾತ್ರಿ ಹನ್ನೆರಡರ ಸುಮಾರಿಗೆ 5 ಕಿಲೋ ಮೀಟರ್ ದೂರದ ಕೈವಾರದ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕರೆದುಕೊಂಡು ಹೋಗಲಾಯಿತು. ಅಷ್ಟೊತ್ತಲ್ಲಿ ಒಬ್ಬರೇ ನರ್ಸ್ ಇರ್ತಾರೆ. ಅವರು ಕಫ ಆಗಿದೆ ಎಂದು ನೇಬುಲೈಸೇಶನ್ ಹಾಕಿದರು. ನಂತರ ಇಂಜೆಕ್ಷನ್ ನೀಡಲು ಮುಂದಾದಾಗ ವಾಂತಿ ಮಾಡಿದ್ದನ್ನು ಗಮನಿಸಿ ತಕ್ಷಣ ಚಿಂತಾಮಣಿ ಆಸ್ಪತ್ರೆಗೆ ಕರೆದುಕೊಂಡು ಹೋಗುವಂತೆ ಸಲಹೆ ನೀಡುವರು. ಅಲ್ಲಿಂದ ಕಾರಿನಲ್ಲಿ ಹತ್ತಿಸಿಕೊಂಡು ಚಿಂತಾಮಣಿ ಕಡೆಗೆ ಕಾರು ಹೊರಟಿತ್ತು. ಕೈವಾರದಿಂದ ಸುಮಾರು 15 ಕಿ.ಮೀ. ದೂರದ ಚಿಂತಾಮಣಿ ಆಸ್ಪತ್ರೆಯನ್ನು ತಲುಪಲು ಇಪ್ಪತ್ತೈದು ನಿಮಿಷಗಳು ಬೇಕಾದವು. ಆಸ್ಪತ್ರೆಯ ವೈದ್ಯರು ಪರಿಶೀಲಿಸಿ ಸಾರಿ ಅದಾಗಲೇ ತೀರಿಕೊಂಡಿದ್ದಾರೆ ಎಂದು ನುಡಿಯುವರು. ಗಾಬರಿಯಿಂದ ಏನಾಯಿತು ಸಾರ್? ಉಸಿರಾಡ್ತಿಲ್ಲ ಅಂದಿದ್ದಕ್ಕೆ ಹತ್ತಿರ ಇದ್ದ ಕೈವಾರದ ಆಸ್ಪತ್ರೆಗೆ ಕರ್ಕೊಂಡು ಹೋದೆ. ಅಲ್ಲಿ ತಕ್ಷಣ ಚಿಂತಾಮಣಿ ಆಸ್ಪತ್ರೆಗೆ ಕರೆದುಕೊಂಡು ಹೋಗು ಅಂದರು. ಅದಕ್ಕೆ ಬೇಗ ಕರ್ಕೊಂಡು ಬಂದಿದ್ದಿನಿ ಎಂದು ಪಿಳ್ಳಪ್ಪನ ಮಗ ಅಲವತ್ತಕೊಳ್ಳುವನು. ಹೃದಯಾಘಾತ ಆಗಿದೆ ಎಂದು ಚುಟುಕಾಗಿ ವೈದ್ಯರು ಹೇಳುವರು.
ಪಿಳ್ಳಪ್ಪನಿಗೆ ಮದುವೆ ವಯಸ್ಸಿನ 2 ಹೆಣ್ಣು ಮಕ್ಕಳು, ಇಬ್ಬರು ಗಂಡು ಮಕ್ಕಳು. ಕುಟುಂಬದ ಯಜಮಾನನನ್ನು ಕಳೆದುಕೊಂಡು ಬೀದಿಗೆ ಬಿದ್ದ ಕುಟುಂಬದ ಪಾಡೇನು? ಈ ಮೊದಲೇ ಪಿಳ್ಳಪ್ಪನ ಹೆಂಡತಿಯೂ ತೀರಿ ಕೊಂಡಿದ್ದಳು. ಈಗ ಪಿಳ್ಳಪ್ಪನ ಸಾವನ್ನು ಹೇಗೆ ಆ ಕುಟುಂಬ ತಡೆದುಕೊಂಡೀತು?
- ಇದಾದ ಆರು ತಿಂಗಳಿಗೆ ಮುನಿಶ್ಯಾಮಪ್ಪನು ಬೆಳಿಗ್ಗೆ ಎಂಟು ಗಂಟೆ ಸಮಯದಲ್ಲಿ ಹಸುಗಳಿಗೆ ನೀರು ಕುಡಿಸುತ್ತಿರುವಾಗ ಇದ್ದಕಿದ್ದಂತೆ ಎದೆ ಮೇಲೆ ಕೈ ಹಿಡಿದುಕೊಂಡು ಕುಸಿದು ಬೀಳ್ತಾರೆ. ತಕ್ಷಣವೇ ಲಭ್ಯವಿದ್ದ ಕಾರಿನಲ್ಲಿ ಚಿಂತಾಮಣಿಯ ಆಸ್ಪತ್ರೆಗೆ ಹಾಕ್ಕೊಂಡು ಹೋಗುವರು. ಪರಿಶೀಲಿಸಿದ ವೈದ್ಯರು ಸಾರಿ ಪಾ ಸತ್ತು ಹೋಗಿದ್ದಾರೆ ಎಂದು ಹೇಳುವರು. ಮುನಿಶ್ಯಾಮಪ್ಪನ ವಯಸ್ಸು ಐವತ್ತಷ್ಟೇ ಆಗಿತ್ತು.
- ಸತೀಶಣ್ಣ ಹಿಂದಿನ ದಿನ ಹೊಸ ಕಾರು ಖರೀದಿಸಿದ ಖುಷಿಗೆ ಮನೆಯವರನ್ನೆಲ್ಲ ಕರೆದುಕೊಂಡು ಮಂತ್ರಾಲಯಕ್ಕೆ ಭೇಟಿ ನೀಡಿ ರಾಯರ ದರ್ಶನ ಪಡೆದು ಬಂದಿದ್ದರು. ಎಂದಿನಂತೆ ಬೆಳಗಿನ ಜಾವ 6.30ಕ್ಕೆ ಎದ್ದು ಬಸ್ ನಿಲ್ದಾಣದಲ್ಲಿರುವ ಅಂಗಡಿ ತೆರೆದು, ಅಂಗಡಿಯ ಮುಂಭಾಗದ ಅಂಗಳಕ್ಕೆ ನೀರು ಚುಮುಕಿಸುವಾಗ ಎದೆಯಲ್ಲಿ ಸಾಮಾನ್ಯವಾದ ನೋವು ಕಾಣಿಸಿಕೊಳ್ಳುತ್ತದೆ. ತಕ್ಷಣವೇ ತನ್ನ ಮನೆಯವರಿಗೆ ಕರೆ ಮಾಡಿ ತಿಳಿಸುವನು. ಅಳಿಯನು ಪರ ಊರಿನಲ್ಲಿ ಇದ್ದ ಕಾರಣ ಬರಲು ಕೊಂಚ ತಡವಾಗುತ್ತದೆ. ಸುಮಾರು 8.30ಕ್ಕೆಲ್ಲ ಚಿಂತಾಮಣಿಯಲ್ಲಿನ ಖಾಸಗಿ ಆಸ್ಪತ್ರೆಗೆ ಹೋಗುವರು. ಪ್ರಾಥಮಿಕ ಪರೀಕ್ಷೆ ಮಾಡಿದ ವೈದ್ಯರು ಲಘು ಹೃದಯಾಘಾತ ಆಗಿದೆ, ಯಾವುದಕ್ಕೂ ಬೆಂಗಳೂರಿನ ಜಯದೇವ ಆಸ್ಪತ್ರೆಗೆ ಹೋಗುವುದು ಒಳ್ಳೆಯದು ಎಂದು ಶಿಫಾರಸ್ಸು ಮಾಡುತ್ತಾರೆ. ಆಗಲಿ ಸಾರ್ ಎಂದು ಸತೀಶಣ್ಣ ಚೇರಿನಿಂದ ಮೇಲೇಳಲು ಪ್ರಯತ್ನಿಸಿ ಕುಸಿದು ಬೀಳ್ತಾರೆ. ಸತೀಷಣ್ಣನ ವಯಸ್ಸು 50 ದಾಟಿರದು.
ಇವು ಚಿಂತಾಮಣಿ ತಾಲೂಕಿನ ಇಪ್ಪತ್ತೈದು ಕಿಲೋ ಮೀಟರ್ ದೂರದಲ್ಲಿರುವ ಶೀಗೆಹಳ್ಳಿಯ ಕತೆ. ಶೀಗೆಹಳ್ಳಿಯಿಂದ 5 ಕಿಲೋ ಮೀಟರ್ ದೂರದ ಕೈವಾರದಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರವಿದೆ. ಆದರೆ ಸೂಕ್ತ ವೈದ್ಯಕೀಯ ಸೌಲಭ್ಯಗಳು ಇಲ್ಲ. ರಾತ್ರಿ ವೇಳೆಯಲ್ಲಿ ನರ್ಸ್ ಒಬ್ಬರನ್ನು ಬಿಟ್ಟರೆ ವೈದ್ಯರು ಇರುವುದಿಲ್ಲ. ಹೃದಯಘಾತ ಆದಾಗ ಪ್ರಾಥಮಿಕ ಚಿಕಿತ್ಸೆ ದೊರೆತರೆ ಬಹುಶಃ ಸಾವುಗಳನ್ನು ತಡೆಯಬಹುದೇನೋ. ಪಿಳ್ಳಪ್ಪ, ಸತೀಶ ಹಾಗೂ ನಾಗಣ್ಣ ಇವರಿಗೆ ಕೈವಾರದ ಆಸ್ಪತ್ರಗೆ ಬರುವವರೆಗೂ ಜೀವ ಇತ್ತು. ಆದರೆ ಚಿಂತಾಮಣಿಯ ಸರ್ಕಾರಿ ಆಸ್ಪತ್ರೆಗೆ ಬರುವಷ್ಟರಲ್ಲಿ ನಾಗಣ್ಣ ಹಾಗೂ ಪಿಳ್ಳಪ್ಪ ಜೀವ ಬಿಟ್ಟರೆ, ಸತೀಶಣ್ಣ ಆಸ್ಪತ್ರೆಯಲ್ಲೇ ಜೀವ ಬಿಡುವರು.
ಚಿಂತಾಮಣಿ ಸರ್ಕಾರಿ ಆಸ್ಪತ್ರೆಯಲ್ಲಿ ಹೃದಯಾಘಾತಕ್ಕೆ ಚಿಕಿತ್ಸೆ ನೀಡುವ ವೈದ್ಯರೇ ಇಲ್ಲ ಹಾಗೂ ಚಿಕಿತ್ಸೆ ನೀಡುವ ವ್ಯವಸ್ಥೆಯೇ ಇಲ್ಲದಿರುವುದು ಸರ್ಕಾರಕ್ಕೆ ತನ್ನ ಪ್ರಜೆಗಳ ಆರೋಗ್ಯದ ಬಗ್ಗೆ ಕಾಳಜಿ ಇಲ್ಲದಿರುವುದನ್ನು ತೋರಿಸುತ್ತದೆ. ಆಸ್ಪತ್ರೆಗಳನ್ನು ಮೇಲ್ದರ್ಜೆಗೇರಿಸಲು ಇನ್ನೆಷ್ಟು ಕಾಲ ಬೇಕು?. ಚಿಂತಾಮಣಿಯ ಭಾಗದ ಜನರು ಹೃದಯ ಸಂಬಂಧಿ ರೋಗಗಳಿಗೆ ಚಿಕಿತ್ಸೆ ಪಡೆಯಲು 50 ಕಿಲೋ ಮೀಟರ್ ದೂರದ ಕೋಲಾರಕ್ಕಾದರೂ ಹೋಗಬೇಕು ಅಥವಾ 70 ಕಿಲೋ ಮೀಟರ್ ದೂರದ ಬೆಂಗಳೂರಿಗೆ ಹೋಗಬೇಕು. ಆಸ್ಪತ್ರೆ ತಲುಪುವ ಮುನ್ನವೇ ಜೀವ ಕಳೆದುಕೊಳ್ಳುವ ಸಂಭವವೇ ಹೆಚ್ಚು. ಆದುದರಿಂದ ಆಸ್ಪತ್ರೆಗಳು ಮೇಲ್ದರ್ಜೆಗೇರಲಿ ಎನ್ನುವುದು ಈ ಭಾಗದ ಜನರ ಬಹು ದಿನಗಳ ಬೇಡಿಕೆಯಾಗಿದೆ.
ಕಾಲ ಕಾಲಕ್ಕೆ ಹೃದಯದ ಆರೋಗ್ಯ ತಪಾಸಣೆಯ ಬಗ್ಗೆ ಜನರಲ್ಲಿ ಅರಿವು ಮೂಡಿಸುವ ಕೆಲಸ ಸರ್ಕಾರದಿಂದ ಆಗಬೇಕು ಮತ್ತು ಆರು ತಿಂಗಳಿಗೊಮ್ಮೆ ಪ್ರತಿ ಹಳ್ಳಿಗಳಲ್ಲೂ ಕ್ಯಾಂಪ್ ಮಾಡಬೇಕು ಮತ್ತು ಹತ್ತಿರದ ಆಸ್ಪತ್ರೆಗಳಲ್ಲಿ ಸೂಕ್ತ ಚಿಕಿತ್ಸೆ ಸಿಗುವ ವ್ಯವಸ್ಥೆ ಮಾಡಬೇಕು. ಆರೋಗ್ಯ ಕ್ಷೇತ್ರವನ್ನು ಬಲಪಡಿಸಿ ಜನರಿಗೆ ಉತ್ತಮ ಆರೋಗ್ಯ ಸೇವೆ ಒದಗಿಸಲು ಸರ್ಕಾರ ಕ್ರಮ ಜರುಗಿಸಲಿ ಎಂಬುದು ನಾಡಿನ ಜನರ ಆಶಯವಾಗಿದೆ.
ಆನಂದ ಎಂ ಕೈವಾರ
ಇದನ್ನೂ ಓದಿ- ಸಾವರ್ಕರ್ ಬಲೂನಿಗೆ ಶೌರಿ ಚುಚ್ಚಿದ ಸೂಜಿಗಳು: