ಪಣಜಿ: ಭಾರತ ಮತ್ತು ಬಾಂಗ್ಲಾದೇಶ ನಡುವಿನ ಚಾಂಪಿಯನ್ಸ್ ಟ್ರೋಫಿ ಕ್ರಿಕೆಟ್ ಪಂದ್ಯದ ವೇಳೆ ಬೆಟ್ಟಿಂಗ್ ನಡೆಸುತ್ತಿದ್ದ ಗುಜರಾತ್ ಮೂಲದ ಮೂವರನ್ನು ಶುಕ್ರವಾರ ಬಂಧಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಗುರುವಾರ ಚಾಂಪಿಯನ್ಸ್ ಟ್ರೋಫಿ ಕ್ರಿಕೆಟ್ ಟೂರ್ನಿಯಲ್ಲಿ ಭಾರತ-ಬಾಂಗ್ಲಾದೇಶ ಪಂದ್ಯ ನಡೆಯುತ್ತಿದ್ದಾಗ, ಪಣಜಿ ಬಳಿಯ ಪಿಲಾರ್ನೆ ಗ್ರಾಮದಲ್ಲಿರುವ ಬಾಡಿಗೆ ಮನೆಯೊಂದರಲ್ಲಿ ಕೆಲವು ಯುವಕರು ಬೆಟ್ಟಿಂಗ್ ನಡೆಸುತ್ತಿದ್ದರು. ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಪೊಲೀಸರು ಮೂವರನ್ನು ಬಂಧಿಸಿದ್ದಾರೆ ಎಂದು ಅವರು ಹೇಳಿದ್ದಾರೆ.
ಗುಜರಾತ್ ಮೂಲದ ಮಕ್ಸುದ್ ಮೋದನ್ (28), ಆಸಿಫ್ಭಾಯ್ ಜಿಯಾವುದ್ದೀನ್ಭಾಯ್ (25) ಮತ್ತು ರಿಜ್ವಾನ್ ಭಾಷ್ (20) ಬಂಧಿತ ಆರೋಪಿಗಳು. ಬಂಧಿತರಿಂದ ಬೆಟ್ಟಿಂಗ್ಗೆ ಬಳಸಲಾದ ನಾಲ್ಕು ಮೊಬೈಲ್ ಫೋನ್ ಗಳು, ಲ್ಯಾಪ್ ಟಾಪ್, ರೂಟರ್ ಸೇರಿದಂತೆ ಒಟ್ಟು ರೂ. 1.1 ಲಕ್ಷ ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಅವರು ಹೇಳಿದ್ದಾರೆ.