ಬಳ್ಳಾರಿ: ನಂದಿನಿ ಹಾಲಿನ ದರ ಏರಿಕೆ ಕುರಿತು ಸರ್ಕಾರ ಯಾವುದೇ ನಿರ್ಧಾರ ಕೈಗೊಂಡಿಲ್ಲ ಎಂದು ಕೆಎಂಎಫ್ ಅಧ್ಯಕ್ಷ ಭೀಮಾನಾಯ್ಕ್ ಸ್ಪಷ್ಟಪಡಿಸಿದ್ದಾರೆ. ಬಜೆಟ್ ನಂತರ ರಾಜ್ಯ ಸರ್ಕಾರ ಕೆಎಂಎಫ್ (KMF) ನಂದಿನಿ ಹಾಲಿನ ದರ 5 ರೂ. ಏರಿಕೆ ಮಾಡುವ ಸಾಧ್ಯತೆ ಇದೆ ಎನ್ನುವುದು ಕೇವಲ ಊಹಾಪೋಹ ಎಂದು ಅವರು ತಿಳಿಸಿದ್ದಾರೆ.
ಬಳ್ಳಾರಿಯಲ್ಲಿ ಮಾತನಾಡಿದ ಅವರು, ನಂದಿನಿ ಹಾಲಿನ (Nandini Milk) ದರ ಹೆಚ್ಚಳ ಮಾಡಲು ಒತ್ತಡ ಇದೆ. ಹಾಲು ಒಕ್ಕೂಟಗಳ ಜತೆ ಚರ್ಚೆ ಮಾಡಲಾಗಿದೆ. ಪ್ರತಿ ಲೀಟರ್ ಗೆ 5 ರೂ. ಹೆಚ್ಚಳ ಮಾಡಬೇಕೆಂಬ ಅಭಿಪ್ರಾಯ ವ್ಯಕ್ತವಾಗಿದೆ. ಹೆಚ್ಚಳ ಮಾಡಿದ ದರವನ್ನು ರೈತರಿಗೆ ನೀಡಬೇಕೆಂದು ಚರ್ಚಿಸಲಾಗಿದೆ. ಸಭೆಯಲ್ಲಿ ಕೈಗೊಂಡ ವಿಷಯಗಳನ್ನು ಸರ್ಕಾರಕ್ಕೆ ತಿಳಿಸಿದ್ದೇವೆ. ಪಶುಸಂಗೋಪನೆ ಇಲಾಖೆಯೂ ಹಾಲಿನ ದರ ಹೆಚ್ಚಿಸಲು ಒತ್ತಡ ಹೇರುತ್ತಿದೆ. ಆದರೆ, ಸರ್ಕಾರ ಇದುವರೆಗೂ ಯಾವುದೇ ಅಂತಿಮ ನಿರ್ಧಾರ ಕೈಗೊಂಡಿಲ್ಲ ಎಂದು ಹೇಳಿದರು.
ಕಳೆದ ತಿಂಗಳು ಪಶು ಸಂಗೋಪನಾ ಸಚಿವರು ಕೆಎಂಎಫ್ ಅಧಿಕಾರಿಗಳೊಂದಿಗೆ ಸಭೆ ನಡೆಸಿದ್ದು, ಸಭೆಯಲ್ಲಿ ಹಾಲಿನ ದರ ಏರಿಕೆ ಮಾಡಬೇಕಾದ ಅನಿವಾರ್ಯತೆ ಕುರಿತು ಚರ್ಚೆ ನಡೆದಿತ್ತು. ಈ ವೇಳೆ ಪ್ರತಿ ಲೀಟರಿಗೆ 5 ರೂ. ಏರಿಸಬೇಕು ಎಂದು ಒಕ್ಕೂಟಗಳು ಪ್ರಸ್ತಾವನೆ ಸಲ್ಲಿಸಿದ್ದವು.
ಕಳೆದ ವರ್ಷ ಡಿಸೆಂಬರ್ ತಿಂಗಳಲ್ಲೇ ರೈತರು ಹಾಗೂ ಹಾಲು ಒಕ್ಕೂಟಗಳು ಪ್ರತಿ ಲೀಟರ್ ನಂದಿನಿ ಹಾಲಿನ ದರ 5 ರೂಪಾಯಿ ಏರಿಕೆ ಮಾಡುವಂತೆ ಕೆಎಂಎಫ್ಗೆ ಮನವಿ ಮಾಡಿದ್ದವು. ಆದರೆ ಸರ್ಕಾರ ಯಾವುದೇ ಕ್ರಮ ಕೈಗೊಂಡಿರಲಿಲ್ಲ.