ಮುಡಾ: ಲೋಕಾಯುಕ್ತ ವರದಿ ಟೀಕಿಸುವ ಬಿಜೆಪಿಯವರಿಗೆ ಮಾನ ಮರ್ಯಾದೆ ಇಲ್ಲ: ಸಚಿವ ಭೈರತಿ ಸುರೇಶ್ ವಾಗ್ದಾಳಿ

Most read

ಮೈಸೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿರುದ್ಧದ ಮುಡಾ ಪ್ರಕರಣದಲ್ಲಿ ಲೋಕಾಯುಕ್ತ ಪೊಲೀಸರು ಕ್ಲೀನ್‌ಚಿಟ್ ನೀಡಿ ಸಲ್ಲಿಸಿರುವ ವರದಿಯನ್ನು ಟೀಕಿಸುವ ಮತ್ತು ಆಕ್ಷೇಪ ವ್ಯಕ್ತಪಡಿಸುತ್ತಿರುವ ಬಿಜೆಪಿಯವರಿಗೆ ಮಾನ ಮರ್ಯಾದೆ ಇಲ್ಲ ಎಂದು ನಗರಾಭಿವೃದ್ಧಿ ಸಚಿವ ಭೈರತಿ ಸುರೇಶ್ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಚಾಮುಂಡೇಶ್ವರಿ ದೇವಸ್ಥಾನದಲ್ಲಿ ಶುಕ್ರವಾರ ವಿಶೇಷ ಪೂಜೆ ಸಲ್ಲಿಸಿದ ನಂತರ ಅವರು ಮಾತನಾಡಿದರು.

ನಾವು ಯಾವುದೇ ತಪ್ಪನ್ನು ಮಾಡಿಲ್ಲ. ಮಾನ ಮರ್ಯಾದೆ ಇಲ್ಲದವರು ಮಾತ್ರ ಲೋಕಾಯುಕ್ತ ವರದಿಯನ್ನು ಟೀಕಿಸುತ್ತಾರೆ. ಚಾಮುಂಡೇಶ್ವರಿ ಬಳಿ ಪ್ರಮಾಣ ಮಾಡೋಣ ಬನ್ನಿ ಎಂದು ಆಹ್ವಾನಿಸಿದ್ದೆ. ಆದರೆ, ಯಾವೊಬ್ಬ ಬಿಜೆಪಿ ನಾಯಕನೂ  ಆಣೆ ಪ್ರಮಾಣಕ್ಕೆ ಬಂದಿಲ್ಲ. ಈಗ ಲೋಕಾಯುಕ್ತ ವರದಿ ಬಂದಿದ್ದು, ರಾಜ್ಯದ ಜನತೆಗೆ ಸತ್ಯದ ಅರಿವಾಗಿದೆ. ಸಿದ್ದರಾಮಯ್ಯ ಯಾವತ್ತೂ ಅಕ್ರಮ ಅಥವಾ ತಪ್ಪು ಮಾಡಿಲ್ಲ, ಮಾಡುವುದೂ ಇಲ್ಲ. ಬಿಜೆಪಿಯವರು ಸುಳ್ಳು ಹೇಳಿಕೊಂಡು ಮೈಸೂರು ಚಲೋ ಪಾದಯಾತ್ರೆ‌ ಮಾಡಿದರು ಎಂದು ವಾಗ್ದಾಳಿ ನಡೆಸಿದರು.

 50:50 ಅನುಪಾತದಲ್ಲಿ ನಿವೇಶನ ಹಂಚಿಕೆಯಲ್ಲಿ ಆಗಿರುವ ಅಕ್ರಮದ ಬಗ್ಗೆ ಪಿ.ಎನ್. ದೇಸಾಯಿ ಆಯೋಗ ತನಿಖೆ ನಡೆಸುತ್ತಿದೆ. ತನಿಖೆ ಮುಗಿದ ಮೇಲೆ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತದೆ. 50: 50 ಅನುಪಾತದಲ್ಲಿ ಪರಿಹಾರ ನೀಡುವ ಕಾನೂನು ಮುಡಾದಲ್ಲಿದೆ. ಅದರ ಅನ್ವಯ ಪರಿಹಾರ ನೀಡಲಾಗಿದೆ. ಆ ಕಾನೂನು ಇಲ್ಲದೇ ಪರಿಹಾರವನ್ನು ಹೇಗೆ ಕೊಡಲು ಅಸಾಧ್ಯ.  ಬಿಜೆಪಿಯವರ ಕಾಲದಲ್ಲೇ ಪರಿಹಾರವನ್ನು ಹೆಚ್ಚು ನೀಡಲಾಗಿದೆ. ಸಿಎಂ ಪತ್ನಿ ಪಾರ್ವತಮ್ಮ ಅವರಿಗೂ ಅಂದಿನ ಬಿಜೆಪಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರೇ ಪರಿಹಾರ ನೀಡಿದ್ದರು ಎಂದರು.

ಮುಖ್ಯಮಂತ್ರಿ, ಮಂತ್ರಿಗಳು ತಪ್ಪು ಮಾಡಿದಾಗ ಲೋಕಾಯುಕ್ತದವರು ಜೈಲಿಗೆ ಕಳುಹಿಸಿದ ಉದಾಹರಣೆ ಇದೆ. ಈಗ ಪೂರ್ವಾಗ್ರಹಪೀಡಿತರಾಗಿ ತನಿಖೆ ನಡೆಸಿಲ್ಲ. ವಾಸ್ತವ ಸ್ಥಿತಿಯನ್ನು ತನಿಖೆ ಮಾಡಿ ವರದಿ ನೀಡಿದ್ದಾರೆ. ಮುಡಾ ದಾಖಲೆಗಳನ್ನು ತೆಗೆದುಕೊಂಡು ಹೋಗಲು ಅದೇನು ಕಡ್ಲೆಪುರಿಯಲ್ಲ. ದಾಖಲೆಗಳು ಕಾಣೆಯಾಗಿವೆ ಎಂದು ಯಾವ ವರದಿಯಲ್ಲಿ ಹೇಳಲಾಗಿದೆ ? ದಾಖಲೆಗಳನ್ನು ಎತ್ತಿಕೊಂಡು ಹೋಗುವುದು ಅಷ್ಟೊಂದು ಸುಲಭವೇ?  ಕ್ಯಾಮೆರಾ ಇರುತ್ತದೆ. ಅಧಿಕಾರಿ ವರ್ಗ ಇರುತ್ತದೆ. ಇವರೆಲ್ಲರ ಮುಂದೆ ಹೇಗೆ ತೆಗೆದುಕೊಂಡು ಹೋಗಲು ಸಾಧ್ಯ ? ಅದರಲ್ಲೂ 141 ದಾಖಲೆ ಒಯ್ದಿದ್ದಾರೆ ಎಂದು ಕೆಲವರು ಹೇಳಿದ್ದಾರೆ. ಅವರಿಗೆ ಆ ನಂಬರ್ ನೀಡಿದವರು ಯಾರು? ಬಹುಶಃ ಈ ಆರೋಪ ಮಾಡಿದವರೇ ತೆಗೆದುಕೊಂಡು ಹೋಗಿರಬೇಕು ಎಂದು ಟೀಕಿಸಿದರು.

More articles

Latest article