ನವದೆಹಲಿ: ಅಮೆರಿಕಾ ದೇಶದಿಂದ ಗಡಿಪಾರಾದ ಭಾರತೀಯರನ್ನು ಹೊತ್ತ ಮೂರನೇ ವಿಮಾನ ಭಾನುವಾರ ತಡರಾತ್ರಿ ಪಂಜಾಬ್ ನ ಅಮೃತಸರಕ್ಕೆ ಬಂದಿಳಿದಿದೆ. ಈ ಬಾರಿ ಅಕ್ರಮವಾಗಿ ವಾಸಿಸುತ್ತಿದ್ದ 112 ಭಾರತೀಯರನ್ನು ಅಮೆರಿಕಾ ವಾಪಸ್ ಕಳುಹಿಸಿದೆ.
ಅಮೆರಿಕಾದ ನೂತನ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸರ್ಕಾರ ಅಕ್ರಮ ವಲಸಿಗರ ವಿರುದ್ಧ ಕಠಿಣ ಕ್ರಮ ಕೈಗೊಂಡಿದ್ದು, ಎಲ್ಲರನ್ನು ಅವರವರ ದೇಶಗಳಿಗೆ ಕಳುಹಿಸುತ್ತಿದೆ. ಇದುವರೆಗೂ ಹತ್ತು ದಿನಗಳ ಅಂತರದಲ್ಲಿ ಮೂರು ಬಬಾರಿ ಭಾರತೀಯರನ್ನು ಟ್ರಂಪ್ ಸರ್ಕಾರ ಭಾರತಕ್ಕೆ ತಂದು ಬಿಟ್ಟಿದೆ. ಭಾನುವಾರ ತಡರಾತ್ರಿ ಅಮೆರಿಕ ವಾಯುಪಡೆಯ ಸಿ-17 ಗ್ಲೋಬ್‌ಮಾಸ್ಟರ್ ವಿಮಾನವು ರಾತ್ರಿ 10.03ರ ಸುಮಾರಿಗೆ ಅಮೃತಸರ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಂದಿಳಿದಿದೆ. ಅಮೆರಿಕದಿಂದ ಹಿಂತಿರುಗಿದವರಲ್ಲಿ 31 ಮಂದಿ ಪಂಜಾಬ್, 44 ಮಂದಿ ಹರಿಯಾಣ ಮತ್ತು 33 ಮಂದಿ ಗುಜರಾತ್ ರಾಜ್ಯದವರು ಸೇರಿದ್ದಾರೆ.
ವಲಸೆ, ಪರಿಶೀಲನೆ ಮತ್ತು ಹಿನ್ನೆಲೆ ಪರಿಶೀಲನೆ ಸೇರಿದಂತೆ ಎಲ್ಲಾ ಔಪಚಾರಿಕ ಪ್ರಕ್ರಿಯೆಗಳು ಪೂರ್ಣಗೊಂಡ ಬಳಿಕ ಗಡೀಪಾರಾದವರನ್ನು ತಮ್ಮ ಮನೆಗಳಿಗೆ ತೆರಳಲು ಅನುಮತಿ ನೀಡಲಾಗುತ್ತದೆ. ಅಮೆರಿಕ ವಾಪಸ್ ಕಳುಹಿಸಿದವರನ್ನು ಅವರು ತಲುಪಬೇಕಾದ ಸ್ಥಳಗಳಿಗೆ ತೆರಳಲು ವ್ಯವಸ್ಥೆ ಮಾಡಲಾಗಿದೆ. ಫೆಬ್ರವರಿ 5 ರಂದು ಮೊದಲ ಬಾರಿಗೆ 104 ಭಾರತೀಯರು, ಎರಡನೇ ಬಾರಿಗೆ 116 ಭಾರತೀಯರನ್ನು ಅಮೆರಿಕಾ ಭಾರತಕ್ಕೆ ಕಳುಹಿಸಿತ್ತು. ಪ್ರತಿ ಭಾರಿಯೂ ಅಮೆರಿಕಾ ಭಾರತೀಯರನ್ನು ಗಡೀಪಾರು ಮಾಡುವಾಗ ವಿಮಾನದಲ್ಲಿ ಕೈಕಾಲುಗಳಿಗೆ ಬೇಡಿ ಹಾಕಿ ಕರೆ ತಂದಿದೆ. ಭಾರತದಲ್ಲಿ ವಿಮಾನ ಇಳಿದ ನಂತರವೇ ಅವರನ್ನು ಬಿಡುಗಡೆ ಮಾಡಲಾಗಿತ್ತು. ಬಜೆಟ್ ಅಧಿವೇಶನದ ಸಂದರ್ಭದಲ್ಲಿ ಸಂಸತ್ತಿನ ಎರಡೂ ಸದನಗಳಲ್ಲಿ ಇದು ಗದ್ದಲಕ್ಕೆ ಕಾರಣವಾಗಿತ್ತು.
ಈ ಬಗ್ಗೆ ಪ್ರತಿಕ್ರಿಯಿಸಿದ್ದ ವಿದೇಶಾಂಗ ಸಚಿವ ಎಸ್ ಜೈಶಂಕರ್, ಅಮೆರಿಕಾದಿಂದ ವಾಪಸ್ ಕಳುಹಿಸುವವರೊಂದಿಗೆ ಕೆಟ್ಟದಾಗಿ ವರ್ತಿಸದಂತೆ ಟ್ರಂಪ್ ಸರ್ಕಾರದ ಜತೆ ಮಾತುಕತೆ ನಡೆಸುತ್ತಿರುವುದಾಗಿ ಹೇಳಿದ್ದರು. ಆದರೆ, ಮೂರನೇ ಬಾರಿಯೂ ವಾಪಸ್ ಬಂದವರು ಕೂಡ, ತಮ್ಮ ಕೈಕಾಲುಗಳಿಗೆ ಬೇಡಿ ಹಾಕಿ ಕರೆ ತರಲಾಗಿದೆ ಎಂದು ಆಪಾದಿಸಿದ್ದಾರೆ.