ಸಂವಿಧಾನ ಅರಿವಿಗೆ ಇರುವ ಬಾಗಿಲು. ಅರಿವು ಬದಲಾವಣೆಗೆ ಇರುವ ದಾರಿದೀಪ. ಹಾಗಾಗಿ ಓದುವ ಸಂಸ್ಕೃತಿಯನ್ನು ಹರಡಬೇಕಾದ ತುರ್ತು ನಮ್ಮ ಮುಂದಿದೆ ಎಂದು ಹಿರಿಯ ಸಾಹಿತಿ, ಭಾಷಾಂತರಕಾರರಾದ ಎಂ ಅಬ್ದುಲ್ ರೆಹಮಾನ್ ಪಾಷ ಅವರು ಹೇಳಿದ್ದಾರೆ.
‘ ಪರಾಗ್ ‘ ಸಂಸ್ಥೆ ಹಾಗೂ ‘ ಬಹುರೂಪಿ ‘ ಪ್ರಕಾಶನ ಹಮ್ಮಿಕೊಂಡಿರುವ ‘ಬಿಂಬ ಪ್ರತಿಬಿಂಬ’ ಮೂರು ದಿನಗಳ ಮಕ್ಕಳ ಕೃತಿಗಳ ಭಾಷಾಂತರ ಕಲಿಕಾ ಕಾರ್ಯಾಗಾರವನ್ನು ಉದ್ದೇಶಿಸಿ ಅವರು ಮಾತನಾಡಿ, ಸಂವಿಧಾನ ಜನರಿಗೆ ನೀಡಿರುವ ಭರವಸೆ ದೊಡ್ಡದು. ಈ ಭರವಸೆಯನ್ನು ಉಳಿಸಿಕೊಳ್ಳಬೇಕಾದ ತುರ್ತು ಎಲ್ಲರ ಮುಂದಿದೆ ಎಂದು ಹೇಳಿದ್ದಾರೆ.
ಪರಾಗ್ ಸಂಸ್ಥೆಯ ಮುಖ್ಯಸ್ಥರಾದ ಲಕ್ಷ್ಮಿ ಕರುಣಾಕರನ್ ಅವರು ಮಾತನಾಡಿ, ಇಂದು ಸಂವಿಧಾನದ ಆಶಯವನ್ನು ಎಲ್ಲರೆಡೆಗೆ ಕೊಂಡೊಯ್ಯಬೇಕಾದ ತುರ್ತು ಇದೆ. ಪರಾಗ್ ಮಕ್ಕಳ ಕೃತಿಗಳಿಗೆ ಪ್ರೋತ್ಸಾಹ ನೀಡುವ ಮೂಲಕ ಅದನ್ನು ಯಶಸ್ವಿಯಾಗಿ ನಿರ್ವಹಿಸುತ್ತಿದೆ ಎಂದು ಹೇಳಿದರು.
ಅಂಬೇಡ್ಕರ್ ಅವರ ಕಾಲಾನುಕಾಲದ ಹೇಳಿಕೆಗಳ ಮೂಲಕ ಅವರ ಮಹತ್ವವನ್ನು ಮನಗಾಣಿಸುವ ಪ್ರಯತ್ನವನ್ನು ಎಲ್ಲರಿಗಾಗಿ ಅಂಬೇಡ್ಕರ್ ಕೃತಿಯ ಮೂಲಕ ಮಾಡಲಾಗಿದೆ ಎಂದು ಬಹುರೂಪಿ ಸಹ ಸಂಸ್ಥಾಪಕರಾದ ಶ್ರೀಜಾ ವಿ. ಎನ್. ತಿಳಿಸಿದರು.
ಸಂವಿಧಾನದ ದಿನದ ಅಂಗವಾಗಿ ಸಂವಿಧಾನದ ಪೀಠಿಕೆಯನ್ನು ಅನಾವರಣ ಮಾಡಿ ಪ್ರತಿಜ್ಞಾ ವಿಧಿಯನ್ನು ಕೈಗೊಳ್ಳಲಾಯಿತು. ಬಹುರೂಪಿ ಪ್ರಕಟಿಸಿರುವ ಗುಜ್ಜಾರ್ ಅವರ ‘ಎಲ್ಲರಿಗಾಗಿ ಅಂಬೇಡ್ಕರ್ ‘ ಸಚಿತ್ರ ಪುಸ್ತಕವನ್ನು ಬಿಡುಗಡೆ ಮಾಡಲಾಯಿತು. ಮಕ್ಕಳ ಸಾಹಿತ್ಯ ತಜ್ಞರಾದ ತೇಜಸ್ವಿ ಶಿವಾನಂದ್, ಪರಾಗ್ ನ ತುಹಿನಾ ಶರ್ಮ, ವಿವೇಕ್, ಬಹುರೂಪಿಯ ಜಿ ಎನ್ ಮೋಹನ್ ಉಪಸ್ಥಿತರಿದ್ದರು.