ಮೈಸೂರು: ಸಾಮಾಜಿಕ ಜಾಲತಾಣದಲ್ಲಿ ವಿವಾದಿತ ಪೋಸ್ಟ್ ಮತ್ತು ಫೋಟೊ ಹಂಚಿಕೊಂಡಿದ್ದ ಆರೋಪಿ ವಿರುದ್ಧ ಕೆಪಿಸಿಸಿ ವಕ್ತಾರ ಎಂ. ಲಕ್ಷ್ಮಣ್ ಉದಯಗಿರಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.
ಪೋಸ್ಟರ್‌ನಲ್ಲಿ ನಮ್ಮ ರಾಷ್ಟ್ರೀಯ ನಾಯಕ ರಾಹುಲ್ ಗಾಂಧಿಗೆ ಅವಮಾನ ಮಾಡಲಾಗಿದೆ. ವ್ಯಂಗ್ಯವಾಗಿ ಅಶ್ಲೀಲವಾಗಿ ರಾಹುಲ್ ಗಾಂಧಿಯನ್ನು ಬಿಂಬಿಸಲಾಗಿದೆ. ಪೋಸ್ಟ್ ಮಾಡಿರುವ ವ್ಯಕ್ತಿ ವಿರುದ್ಧ ಕಾನೂನಾತ್ಮಕವಾಗಿ ಕ್ರಮ ಕೈಗೊಳ್ಳಿ ಎಂದು ಅವರು ಲಿಖಿತ ದೂರು ನೀಡಿದ್ದಾರೆ. ಈ ಸಂದರ್ಭದಲ್ಲಿ ಪಕ್ಷದ ಅನೇಕ ಕಾರ್ಯಕರ್ತರು ಠಾಣೆಯ ಮುಂದೆ ಜಮಾಯಿಸಿದ್ದರು.
ಉದಯಗಿರಿ ಪೊಲೀಸ್ ಠಾಣೆ ಮೇಲೆ ಕಲ್ಲು ತೂರಾಟ ಪ್ರಕರಣದ ಹಿಂದೆ ಮಾಜಿ ಸಂಸದ ಪ್ರತಾಪ್ ಸಿಂಹ ಕೈವಾಡ ಇದೆ ಎಂದು ಲಕ್ಷ್ಮಣ್ ಆರೋಪ ಮಾಡಿದ್ದು, ಅವರನ್ನು ಕೂಡಲೇ ಬಂಧಿಸುವಂತೆ ಒತ್ತಾಯಿಸಿದ್ದಾರೆ. ನಿನ್ನೆ ರಾತ್ರಿ ನಡೆದ ಗಲಾಟೆ ಹಿಂದೆ ಬಿಜೆಪಿ ಆರ್ ಎಸ್ ಎಸ್ ಕೈವಾಡ ಇದೆ. ವೇಷ ಬದಲಾಯಿಸಿಕೊಂಡು ಬಂದು ಗುಂಪಿನ ಜೊತೆ ಸೇರಿಕೊಂಡು ಕಲ್ಲು ತೂರಾಟ ಮಾಡಿದ್ದಾರೆ. ಇದಕ್ಕಾಗಿ 300 ಜನ ಆರ್ ಎಸ್ ಎಸ್ ನವರು ಮೈಸೂರಿಗೆ ಬಂದಿದ್ದಾರೆ. ಯಾರೇ ಕಲ್ಲು ತೂರಾಟ ಮಾಡಿದರೂ ಕಂಡಲ್ಲಿ ಗುಂಡು ಹಾರಿಸಬೇಕು. ಪ್ರತಾಪ್ ಸಿಂಹ ಓಡಿ ಹೋಗುವ ಮುನ್ನಾ ಈ ಕೂಡಲೇ ಬಂಧಿಸಬೇಕು ಎಂದೂ ಆಗ್ರಹಪಡಿಸಿದ್ದಾರೆ.
ರಾಜ್ಯದಲ್ಲಿ ಆಶಾಂತಿ ಸೃಷ್ಟಿಸುವುದು ಬಿಜೆಪಿಯವರ ಉದ್ದೇಶ. ಬಿಜೆಪಿಯ ಯಾವ ನಾಯಕರನ್ನೂ ಮೈಸೂರಿಗೆ ಬರಲು ಬಿಡಬಾರದು. ಯಾವ ಕಾರಣಕ್ಕೆ ಅಶೋಕ್, ಛಲವಾದಿ ನಾರಾಯಣಸ್ವಾಮಿ ಇಲ್ಲಿಗೆ ಬರಬೇಕು. ನಮ್ಮ ನಾಯಕರು ಹಾಗೂ ಮುಸ್ಲಿಂ ಧರ್ಮದ ವಿರುದ್ಧ ಪೋಸ್ಟರ್ ಹಾಕಿ, ಅವರೇ ಕಾಂಗ್ರೆಸ್ ಪಕ್ಷವನ್ನು ಮುಸ್ಲಿಂರನ್ನು ಬೈಯುವುದು ಎಷ್ಟು ಸರಿ ಎಂದು ಪ್ರಶ್ನಿಸಿದರು.
ಪೋಸ್ಟ್ ಹಾಕಿರುವ ಸುರೇಶ್ ಆಲಿಯಾಸ್ ಸತೀಶ್ ಕಟ್ಟಾ ಪ್ರತಾಪ್ ಸಿಂಹ ಬೆಂಬಲಿಗ ಮತ್ತು ಆರ್ ಎಸ್ ಎಸ್ ಕಾರ್ಯಕರ್ತ. ಪ್ರತಾಪ್ ಸಿಂಹಗೆ ಏಕೆ ಮುಸ್ಲಿಮರ ಮೇಲೆ ಅಷ್ಟು ಕೋಪ. ಮುಸ್ಲಿಮರು ಈ ದೇಶದ ಮಣ್ಣಿನ ಮಕ್ಕಳು, ಅವರೇನು ಹೊರದೇಶದಿಂದ ಬಂದಿದ್ದಾರಾ ಎಂದು ಲಕ್ಷ್ಮಣ್ ವಾಗ್ದಾಳಿ ನಡೆಸಿದರು.
ಮತ್ತೊಂದು ಕಡೆ ಉದಯಗಿರಿ ಪೊಲೀಸ್ ಠಾಣೆಯ ಸುತ್ತಮುತ್ತಲಿನ ಅಂಗಡಿಗಳನ್ನು ಮಧ್ಯಾಹ್ನ ಕಳೆದರೂ ತೆರೆದಿರಲಿಲ್ಲ. ಪೊಲೀಸ್ ಠಾಣೆಯ ಮುಂದೆ ರಾತ್ರಿ ನಡೆದ ಕಲ್ಲು ತೂರಾಟ ಮತ್ತು ಪೊಲೀಸರ ಮೇಲಿನ ಹಲ್ಲೆ ನಡೆದಿದ್ದು ಸಾರ್ವಜನಿಕರು ಹೆದರಿಕೊಂಡಿದ್ದಾರೆ. ಈ ಆತಂಕದಿಂದಲೇ ಅಂಗಡಿಗಳನ್ನು ಸ್ವಯಂ ಬಂದ್ ಮಾಡಲಾಗಿದೆ.