ಮುಡಾ ಪ್ರಕರಣ; ಸಿಬಿಐ ತನಿಖೆಗೆ ಕೋರಿ ಸಲ್ಲಿಸಿದ್ದ ಅರ್ಜಿ ವಜಾ; ಸಿಎಂ ಸಿದ್ದರಾಮಯ್ಯಗೆ ಬಿಗ್‌ ರಿಲೀಫ್‌

Most read

ಬೆಂಗಳೂರು: ತೀವ್ರ ಕುತೂಹಲ ಕೆರಳಿಸಿದ್ದ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ (ಮುಡಾ) ನಿವೇಶನಗಳ ಅಕ್ರಮ ಹಂಚಿಕೆ ಆರೋಪಕ್ಕೆ ಸಂಬಂಧಿಸಿದ ತನಿಖೆಯನ್ನು ಸಿಬಿಐಗೆ ವಹಿಸಬೇಕು ಎಂದು ಕೋರಲಾದ ಅರ್ಜಿಯನ್ನು ಹೈಕೋರ್ಟ್ ತಿರಸ್ಕರಿಸಿದೆ. ಇದರಿಂದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಮೊಗದಲ್ಲಿ ಗೆಲುವಿನ ನಗೆ ಮೂಡಿದೆ. ತೀರ್ಪು ಪ್ರಕಟಗೊಳ್ಳುವ ಸಮಯದಲ್ಲಿ ಮುಖ್ಯಮಂತ್ರಿಗಳು ಬಜೆಟ್‌ ಸಿದ್ದತಾ ಸಭೆಗಳನ್ನು ನಡೆಸುತ್ತಿದ್ದರು.

ರಾಜ್ಯ ಸರ್ಕಾರ ಅಥವಾ ಲೋಕಾಯುಕ್ತ ಪೊಲೀಸರು ನಡೆಸುವ ತನಿಖೆಯಲ್ಲಿ ನಂಬಿಕೆ ಇಲ್ಲ. ನ್ಯಾಯ ಸಿಗುವ ಸಾಧ್ಯತೆಗಳು ಕಡಿಮೆ ಇದ್ದು ಸಿಬಿಐ ತನಿಖೆಗೆ ವಹಿಸಬೇಕು ಎಂದು ಮೈಸೂರಿನ ಸಾಮಾಜಿಕ ಕಾರ್ಯಕರ್ತ ಸ್ನೇಹಮಯಿ ಕೃಷ್ಣ ರಿಟ್ ಅರ್ಜಿ ಸಲ್ಲಿಸಿದ್ದರು.  ಈ ಅರ್ಜಿಯ ವಿಚಾರಣೆ ನಡೆಸಿ ತೀರ್ಪನ್ನು ಕಾಯ್ದಿರಿಸಲಾಗಿತ್ತು. ಶಾಸಕರು ಸಂಸದರ ವಿರುದ್ಧದ ಕ್ರಿಮಿನಲ್ ಪ್ರಕರಣಗಳ ವಿಚಾರಣೆಯ ವಿಶೇಷ ನ್ಯಾಯಪೀಠದ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರು ಶುಕ್ರವಾರ ಪ್ರಕಟಿಸಿದರು.

ಸಿದ್ದರಾಮಯ್ಯ ಅವರ ಪತ್ನಿ ಪಾರ್ವತಿ ಹೆಸರಿನಲ್ಲಿದ್ದ ಕೆಸರೆ ಗ್ರಾಮದ ಸರ್ವೆ ನಂ.464 ರಲ್ಲಿ 3.16 ಎಕರೆ ಜಮೀನನ್ನು ದೇವನೂರು ಬಡಾವಣೆ ನಿರ್ಮಾಣಕ್ಕೆ ಮುಡಾ ಭೂ ಸ್ವಾಧೀನ ಮಾಡಿಕೊಂಡಿತ್ತು. ಈ ಭೂಮಿಯನ್ನು ಪಾರ್ವತಿ ಅವರಿಗೆ ಅವರ ಸಹೋದರ ದಾನವಾಗಿ ನೀಡಿದ್ದರು. ಇದರ ಬದಲಿಗೆ ಮೈಸೂರು ನಗರಾಭಿವೃದ್ದಿ ಪ್ರಾಧಿಕಾರ 2021ರಲ್ಲಿ ಪಾರ್ವತಿ ಅವರಿಗೆ ಮೈಸೂರಿನ ಪ್ರತಿಷ್ಠಿತ ಬಡಾವಣೆ ವಿಜಯನಗರ ಬಡಾವಣೆಯಲ್ಲಿ 38,284 ಚದುರ ಅಡಿ ವಿಸ್ತೀರ್ಣದ 14 ನಿವೇಶನಗಳನ್ನು ಹಂಚಿಕೆ ಮಾಡಲಾಗಿತ್ತು. ಮೂರು ಎಕರೆಗಿಂತ ಈ ನಿವೇಶನಗಳ ಬೆಲೆ ನೂರಾರು ಕೋಟಿ ರೂ.ಗಳಷ್ಟಿದೆ ಎನ್ನುವುದೇ ವಿವಾದಕ್ಕೆ ಕಾರಣವಾಗಿತ್ತು. ಈ ಹಗರಣಕ್ಕೆ ಸಬಂಧಿಸಿದಂತೆ ಸೆ. 27ರಂದು ಲೋಕಾಯುಕ್ತ ಎಫ್‌ ಐ ಆರ್‌ ದಾಖಲಿಸಿತ್ತು.

 ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಮ್ಮ ಪ್ರಭಾವ ಬಳಸಿ ತಮ್ಮ ಪತ್ನಿ ಪಾರ್ವತಿ ಅವರಿಗೆ ಬೆಳೆ ಬಾಳುವ 14 ನಿವೇಶನಗಳನ್ನು ಹಂಚಿಕೆ ಮಾಡುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮುಡಾ ಪ್ರಭಾವ ಬೀರಿದ್ದಾರೆ. ಆದ್ದರಿಂದ ಅವರ ವಿರುದ್ಧ ಪ್ರಾಸಿಕ್ಯೂಷನ್‌ ಗೆ ಅನುಮತಿ ನೀಡಬೇಕು ಎಂದು ಸ್ನೇಹಮಯಿ ಕೃಷ್ಣ ಅವರು ರಾಜ್ಯಪಾಲರಿಗೆ ಮನವಿ ಸಲ್ಲಿಸಿದ್ದರು. ರಾಜ್ಯಪಾಲರು ಆಗಸ್ಟ್‌ 16 ರಂದು ಪ್ರಾಸಿಕ್ಯೂಷನ್‌ ಗೆ ಅನುಮತಿ ನೀಡಿದ್ದರು.ಈ ವಿವಾದ ಬಿರುಸುಗೊಳ್ಳುತ್ತಿದ್ದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪತ್ನಿ ಪಾರ್ವತಿ ಅವರು 14 ನಿವೇಶನಗಳನ್ನು ಹಿಂತಿರುಗಿಸಿದ್ದರು.

ಇತ್ತೀಚೆಗೆ ಇದೇ ಪ್ರಕರಣಕ್ಕೆ ಸಂಬಂಧಪಟ್ಟಂತೆ ಜಾರಿ ನಿರ್ದೇಶನಾಲಯ (ಇಡಿ)  ಸುಮಾರು 300 ಕೋಟಿ ರೂ ಮೌಲ್ಯದ 140 ಸ್ಥಿರಾಸ್ಥಿಗಳನ್ನು ಮುಟ್ಟುಗೋಲು ಹಾಕಿಕೊಂಡಿದೆ. ಜಾರಿ ನಿರ್ದೇಶನಾಲಯವೇ ಈ ಮಾಹಿತಿಯನ್ನು ಅಧಿಕೃತವಾಗಿ ಹಂಚಿಕೊಂಡಿತ್ತು.

More articles

Latest article