ಜಾರ್ಜಿಯಾದಲ್ಲೊಂದು ರಾಣಿ-ಮಹಾರಾಣಿ ಸಿನಿಮಾ ಕಥೆ: ಹುಟ್ಟುತ್ತಲೇ ಬೇರೆಯಾಗಿ 19 ವರ್ಷಗಳ ನಂತರ ಒಂದಾದ ಹುಡುಗಿಯರು

Most read

ಅವಳಿ ಜವಳಿಗಳು ಬೇರೆಯಾಗಿ ಕೊನೆಗೆ ಒಂದಾಗುವ ಹಲವಾರು ಸಿನಿಮಾಗಳನ್ನು ನೀವು ನೋಡಿರಬಹುದು. ಮಾಲಾಶ್ರೀ ಅಭಿನಯಿಸಿದ್ದ ರಾಣಿ-ಮಹಾರಾಣಿ ಚಿತ್ರದಲ್ಲಿ ಅವಳಿಜವಳಿ ಅಕ್ಕ-ತಂಗಿಯರು ಹುಟ್ಟುತ್ತಲೇ ಬೇರೆಯಾಗಿ, ಕೊನೆಗೆ ಒಂದಾಗುತ್ತಾರೆ.  ಸಿನಿಮಾ ಕಥೆಯಂಥದ್ದೇ ಒಂದು ನಿಜ ಘಟನೆ ಜಾರ್ಜಿಯಾದಲ್ಲಿ ನಡೆದಿದೆ. ಹುಟ್ಟುತ್ತಲೇ ಬೇರೆಯಾಗಿ ಆಮಿ ಕ್ವಿಟಿಯಾ ಮತ್ತು ಆನೋ ಸರ್ತಾನಿಯಾ ಟಿಕ್‌ ಟಾಕ್‌ ವಿಡಿಯೋ ಮತ್ತು ರಿಯಾಲಿಟಿ ಶೋಗಳಿಂದಾಗಿ ಮತ್ತೆ ಒಂದಾಗಿದ್ದಾರೆ.

ವಿಶೇಷವೆಂದರೆ ಈ ಸೋದರಿಯರು ಕೆಲವೇ ಮೈಲುಗಳ ಅಂತರದಲ್ಲಿ ಬೇರೆ ಬೇರೆಯಾಗಿ ಬದುಕುತ್ತಿದ್ದರು. ಆಶ್ಚರ್ಯಕರ ರೀತಿಯಲ್ಲಿ ಅವರಿಬ್ಬರು ಒಬ್ಬರನ್ನೊಬ್ಬರು ಭೇಟಿಯಾಗಿ ತಾವಿಬ್ಬರೂ ಅಕ್ಕತಂಗಿಯರು ಎಂಬುದನ್ನು ಅರಿತುಕೊಂಡರು.

ಈ ಸೋದರಿಯರ ರೋಚಕ ಕಥೆಯ ಕುರಿತು BBC ವರದಿ ಮಾಡಿದ್ದು, ಬೇರೆಯಾಗಿದ್ದ ಅವಳಿ ಜವಳಿಗಳು ಒಂದಾದ ಕಥೆಯ ಜೊತೆಗೆ ಜಾರ್ಜಿಯಾದಲ್ಲಿ ನಡೆಯುತ್ತ ಬಂದಿರುವ ಮಕ್ಕಳ ಮಾರಾಟ ಮಾಫಿಯಾದ ಭಯಾನಕತೆಯನ್ನೂ ಅನಾವರಣಗೊಳಿಸಿದೆ.

ಹನ್ನೆರಡು ವರ್ಷದ ಹುಡುಗಿ ಆನೋ ʻಜಾರ್ಜಿಯಾಸ್‌ ಗಾಟ್‌ ಟ್ಯಾಲೆಂಟ್‌ʼ ಎಂಬ ರಿಯಾಲಿಟಿ ಶೋನಲ್ಲಿ ಭಾಗವಹಿಸಿದ್ದಳು. ಇದನ್ನು ನೋಡಿದ ಆಮಿ ಈಕೆ ತನ್ನ ಹಾಗೆಯೇ ಇದ್ದಾಳಲ್ಲ ಎಂದು ಆಶ್ಚರ್ಯಪಟ್ಟಿದ್ದಳು. ಇನ್ನೊಂದೆಡೆ ಆಮಿ ಮಾಡಿದ್ದ ಟಿಕ್‌ ಟಾಕ್‌ ವಿಡಿಯೋ ಒಂದನ್ನು ಆನೋ ನೋಡಿ ಆಕೆಯೂ ನೂರಕ್ಕೆ ನೂರು ತನ್ನನ್ನೇ ಹೋಲುವ ಹುಡುಗಿಯನ್ನು ನೋಡಿ ಸ್ಥಂಭೀಭೂತಳಾಗಿದ್ದಳು. 

2002ರಲ್ಲಿ ಆಮಿ ಮತ್ತು ಆನೋ ಹುಟ್ಟಿದ ಸಂದರ್ಭದಲ್ಲಿ ಅನಾರೋಗ್ಯಕ್ಕೆ ತುತ್ತಾಗಿದ್ದ ಆಕೆಯ ತಾಯಿ ಆಜಾ ಶೋನಿ ಕೋಮಾಗೆ ಹೋಗಿದ್ದಳು. ಈ ಸಂದರ್ಭದಲ್ಲಿ ಆಕೆಯ ಗಂಡ ಗೋಚಾ ಗಖಾರಿಯಾ ಆಮಿ ಮತ್ತು ಆನೋರನ್ನು ಬೇರೆ ಬೇರೆ ಕುಟುಂಬಗಳಿಗೆ ಮಾರಾಟ ಮಾಡುವ ನಿರ್ಧಾರ ಕೈಗೊಂಡಿದ್ದ.

ಅಪ್ಪ-ಅಮ್ಮ ಇಬ್ಬರನ್ನೂ ಕಳೆದುಕೊಂಡ ಮಕ್ಕಳಿಬ್ಬರೂ ಬೇರೆ ಬೇರೆ ಕಡೆ ಬೆಳೆದರು. ಆನೋ ಟಿಬಿಲ್ಸಿ ಎಂಬಲ್ಲಿ, ಆಮಿ ಜುಗ್ಡಿಡಿ ಎಂಬಲ್ಲಿ ಬೆಳೆದರು. ಡ್ಯಾನ್ಸ್‌ ಕಾಂಪಿಟಿಷನ್‌ ಒಂದರಲ್ಲಿ ಇಬ್ಬರೂ ಒಟ್ಟಿಗೆ ಭಾಗವಹಿಸಿದ್ದರಾದರೂ, ಇಬ್ಬರೂ ಭೇಟಿಯಾಗುವ ಸಂದರ್ಭ ಒದಗಿರಲಿಲ್ಲ. ಆದರೆ ಆ ಸ್ಪರ್ಧೆಯನ್ನು ನೋಡಿದ ಹಲವರು ಇಬ್ಬರಲ್ಲಿನ ಸಾಮ್ಯತೆ ಬಗ್ಗೆ ಮಾತಾಡಿಕೊಂಡಿದ್ದರು.

ಆದರೆ ರಿಯಾಲಿಟಿ ಶೋ ಮತ್ತು ಟಿಕ್‌ ಟಾಕ್‌ ವಿಡಿಯೋಗಳ ನಂತರ ಇಬ್ಬರೂ ಕೊನೆಗೂ ಒಂದಾಗಿ ತಮ್ಮ ನಿಜ ಕಥೆಯನ್ನು ಅರಿತುಕೊಂಡಿದ್ದಾರೆ.  ಕೊನೆಗೂ ಹತ್ತೊಂಭತ್ತು ವರ್ಷಗಳ ನಂತರ ಅವರಿಬ್ಬರೂ ಒಂದಾಗಿದ್ದಾರೆ.

ಈ ಘಟನೆಯ ನಂತರ ಜಾರ್ಜಿಯಾದಲ್ಲಿ ನಡೆಯುತ್ತಿರುವ ಮಕ್ಕಳ ಮಾರಾಟ ಮಾಫಿಯಾ ಕುರಿತು ಚರ್ಚೆ ಮುನ್ನೆಲೆಗೆ ಬಂದಿದೆ. 2005ರಿಂದ ಜಾರ್ಜಿಯಾದ ಆಸ್ಪತ್ರೆಗಳಲ್ಲಿ ಸಾವಿರಾರು ಮಕ್ಕಳನ್ನು ಮಾರಾಟ ಮಾಡಲಾಗುತ್ತಿದೆ.

More articles

Latest article