ರಾಜ್ಯಕ್ಕೆ ಅನ್ಯಾಯ ಮಾಡಿದ ಸಚಿವೆ ನಿರ್ಮಲಾ ಸೀತಾರಾಮನ್‌; ರಾಮಲಿಂಗಾರೆಡ್ಡಿ, ಹೆಬ್ಬಾಳಕರ್

Most read

ಬೆಂಗಳೂರು: ಮೋದಿ  ಸರ್ಕಾರದಲ್ಲಿ ಗಾಳಿ, ಬೆಳಕು ಎರಡು ಬಿಟ್ಟು ಇನ್ನೆಲ್ಲಾ ಬೆಲೆ ಏರಿಕೆ ಆಗಿದೆ ಎಂದು ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ವ್ಯಂಗ್ಯವಾಡಿದ್ದಾರೆ. ಕೇಂದ್ರ ಬಜೆಟ್ ವಿಚಾರದ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕೇಂದ್ರ ಬಜೆಟ್‌ನಿಂದ ನಮಗೆ ಯಾವುದೇ ಲಾಭ ಇಲ್ಲ. 1947ರಿಂದ ಇಲ್ಲಿತನಕ 53 ಲಕ್ಷ ಕೋಟಿ ರೂ. ಸಾಲ ಇತ್ತು. ಈಗ 11 ವರ್ಷದಲ್ಲಿ 150 ಲಕ್ಷ ಕೋಟಿ ರೂ. ಹೆಚ್ಚುವರಿ ಸಾಲ ಆಗಿದೆ. ದೇಶದ ಸಾಲ ಈಗ 200 ಲಕ್ಷ ಕೋಟಿ ಆಗಿದೆ ಎಂದು ಕಿಡಿಕಾರಿದರು.

ಬಿಜೆಪಿ ಸರ್ಕಾರ ನಮ್ಮನ್ನು ಸಾಲಗಾರರನ್ನಾಗಿ ಮಾಡಿದೆ. ಇವರಿಂದ ನಾವು ಏನೂ ನಿರೀಕ್ಷೆ ಮಾಡಲಾಗುವುದಿಲ್ಲ. ಸುಮ್ಮನೆ ಮಾಧ್ಯಮಗಳ ಮುಂದೆ ಹೇಳುತ್ತಾರೆ ಅಷ್ಟೇ. ಪ್ರಾಕ್ಟಿಕಲ್ ಆಗಿ ದೇಶದಲ್ಲಿ ಬಡತನ ಹೆಚ್ಚಾಗುತ್ತಿದೆ. ಮೋದಿ ಅವರ ಆಡಳಿತದಲ್ಲಿ ಯಾವುದಾದರೂ ಬೆಲೆ ಕಡಿಮೆ ಇದೆಯಾ? ಜನರ ಆದಾಯ ಜಾಸ್ತಿ ಆಗಿದ್ಯಾ? ಖರ್ಚು ಮಾತ್ರ ಜಾಸ್ತಿ ಆಗಿದೆ ಎಂದು ಹರಿಹಾಯ್ದರು.

ಬಿಹಾರ ಚುನಾವಣೆಯ ಪ್ರಣಾಳಿಕೆಯೇ: ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಪ್ರಶ್ನೆ:

ಮುಂಬರುವ ಬಿಹಾರ ವಿಧಾನಸಭೆ ಚುನಾವಣೆ ದೃಷ್ಟಿಯಿಂದ ನಿರ್ಮಲಾ ಸೀತಾರಾಮನ್ ಅವರು ಕೇಂದ್ರ ಬಜೆಟ್ ಮಂಡಿಸಿದ್ದಾರೆ ಎನಿಸುತ್ತಿದೆ. ಬಜೆಟ್‌ನಿಂದ ರಾಜ್ಯಕ್ಕೆ ಸಂಪೂರ್ಣ ಅನ್ಯಾಯವಾಗಿದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವರಾದ ಲಕ್ಷ್ಮೀ ಹೆಬ್ಬಾಳಕರ್ ಕಿಡಿಕಾರಿದ್ದಾರೆ.

ಬೆಳಗಾವಿಯಲ್ಲಿ ಮಾತನಾಡಿರುವ ಅವರು ಬಿಹಾರ ಜನರ ಒಲೈಕೆಗಾಗಿ ಪ್ರಮುಖ ಐದಾರು ಯೋಜನೆಗಳನ್ನು ಘೋಷಿಸಿದರೆ, ಕರ್ನಾಟಕಕ್ಕೆ ಒಂದು ನಯಾ ಪೈಸೆ ನೀಡಿಲ್ಲ. ಬೆಂಗಳೂರಿಗೆ ವಿಶೇಷ ಅನುದಾನ ನಿರೀಕ್ಷಿಸಲಾಗಿತ್ತು. ಈ ಬಜೆಟ್‌ನಿಂದ ಸಂಪೂರ್ಣ ನಿರಾಸೆ ಉಂಟಾಗಿದೆ ಎಂದು ಹೇಳಿದ್ದಾರೆ.  ಕರ್ನಾಟಕದಿಂದ ನಿರ್ಮಲಾ ಸೀತಾರಾಮನ್ ರಾಜ್ಯಸಭೆಗೆ ಆಯ್ಕೆಯಾಗಿದ್ದರೂ ನಮ್ಮ ರಾಜ್ಯವನ್ನು ಸಂಪೂರ್ಣ ನಿರ್ಲಕ್ಷಿಸಿದ್ದಾರೆ. ಕೇಂದ್ರ ಬಜೆಟ್‌ನಿಂದ ರಾಜ್ಯಕ್ಕೆ ಯಾವುದೇ ಲಾಭವಿಲ್ಲ. ಇದೊಂದು ಸಂಪೂರ್ಣ ರೈತ ವಿರೋಧಿ, ಕರ್ನಾಟಕ ವಿರೋಧಿ ಬಜೆಟ್ ಎಂದು ಸಚಿವರು ತಿಳಿಸಿದರು.

More articles

Latest article