ಶಹರಗಳ ಮೇಲ್ವರ್ಗವು ತನ್ನ ಅರ್ಥಿಕತೆಯನ್ನು ಬೆಳೆಸಿಕೊಳ್ಳಲಿಕ್ಕಾಗಿ ಒಂದಿಡೀ ಸಮಾಜವನ್ನೇ ಇಷ್ಟು ಅಮಾನವೀಯವಾಗಿ ನಡೆಸಿಕೊಂಡಿದ್ದು ಹಿಂದೆಂದೂ ನಡೆದಿಲ್ಲವೇನೋ. ಗ್ರಾಮೀಣ ಬದುಕನ್ನೇ ನಾಶ ಮಾಡಿ ಜನರನ್ನು ಹಿಂಡಿ ಹಿಪ್ಪೆ ಮಾಡಿ ಜೀವಚ್ಛವವನ್ನಾಗಿಸುವ ಇಂಥ ಕೃತ್ಯಕ್ಕೆ ಸರಕಾರದ್ದೂ ಬೆಂಬಲವಿದೆ, ಶಿಕ್ಷಿತ ಉಚ್ಛ ವರ್ಗದ್ದೂ ಬೆಂಬಲವಿದೆ. ಜನರು ಮಾರುತ್ತಿರಬೇಕು ಅಥವಾ ಖರೀದಿಸುತ್ತಿರಬೇಕು. ನೇರ ದಾರಿಯಿರಲಿ, ಅಡ್ಡದಾರಿಯಲ್ಲಿರಲಿ, ಹಣ ಓಡಾಡುತ್ತಿರಬೇಕು. ಅದೇ ಬೆಳೆಯುತ್ತಿರುವ ಆರ್ಥಿಕತೆಯೆನಿಸಿದೆ – ಶಾರದಾ ಗೋಪಾಲ, ಲೇಖಕರು
ಕಿರುಸಾಲ ಯೋಜಕನಿಗೆ ನೋಬೆಲ್ ಪ್ರಶಸ್ತಿ
ಇದೆಲ್ಲ ಶುರುವಾಗಿದ್ದು ಎಪ್ಪತ್ತರ ದಶಕದಲ್ಲಿ ಮಹಿಳಾ ಸ್ವಸಹಾಯ ಸಂಘಗಳಲ್ಲಿ ಮಹಿಳೆಯರು ತಮ್ಮದೇ ಉಳಿತಾಯ ಹಣವನ್ನು ಒಬ್ಬರಿಗೊಬ್ಬರು ಸಾಲವಾಗಿ ಕೊಟ್ಟುಕೊಳ್ಳುತ್ತ ಪರಸ್ಪರರಿಗೆ ಆಸರೆಯಾಗಿ ಬೆಳೆಸಿದ್ದಕ್ಕೆ ಬಾಂಗ್ಲಾದೇಶದ ಮೊಹಮ್ಮದ್ ಯೂನಸ್ ಅವರಿಗೆ ನೋಬೆಲ್ ಪ್ರಶಸ್ತಿ ಸಿಕ್ಕ ದಿನದಿಂದ. ಅಲ್ಲಿಯವರೆಗೆ ತಮಗೆ ಬ್ಯಾಂಕುಗಳು ಸಾಲ ಕೊಡುವುದಿಲ್ಲ ಎಂಬ ವಿಚಾರವನ್ನು ಪ್ರಶ್ನಿಸದೆ ಒಪ್ಪಿಕೊಂಡು ಮಹಿಳೆಯರು ಬ್ಯಾಂಕಿನ ಸನಿಹಕ್ಕೆ ಹಾಯದೆ ತಮ್ಮಷ್ಟಕ್ಕೆ ತಾವು ಇದ್ದರು. ಮಹಿಳಾ ಸ್ವಸಹಾಯ ಸಂಘಗಳನ್ನು ಕಟ್ಟಿದ ಸಂಘಟನೆಗಳು ಬ್ಯಾಂಕುಗಳೊಂದಿಗೆ ಮಾತುಕತೆಯಾಡಿ, ಹೋರಾಟವನ್ನೇ ಮಾಡಿ ಗುಂಪುಗಳಿಗೆ ಸಾಲ ಸಿಗುವಂತೆ ಮಾಡಿದ್ದವು. ತಮ್ಮ ಉಳಿತಾಯ ಮತ್ತು ಬ್ಯಾಂಕಿನ ಕಿರುಸಾಲಗಳನ್ನು ಬಳಸಿಕೊಂಡು ಚಿಕ್ಕಚಿಕ್ಕ ಗೃಹೋದ್ಯೋಗಗಳನ್ನು ಬೆಳೆಸುತ್ತ ಘನತೆಯಿಂದ ದುಡಿದು ಬದುಕುವ ದಾರಿ ಕಂಡುಕೊಂಡಿದ್ದರು. ಬ್ಯಾಂಕಿಗೆ ಬಂದ ಮಹಿಳೆಯರನ್ನು ಹೇಗೆ ನಡೆಸಿಕೊಳ್ಳಬೇಕೆಂಬುದನ್ನು ಕಲಿಸಲು ಬ್ಯಾಂಕುಗಳ ಅಧಿಕಾರಿಗಳಿಗೆ ಲಿಂಗ ಸೂಕ್ಷ್ಮತೆಯ ತರಬೇತಿಗಳು ನಡೆಯುತ್ತಿದ್ದವು ಆಗ. ಬಂಡವಾಳದ ನಿರ್ವಹಣೆ, ಹಣಕಾಸು ನಿರ್ವಹಣೆ, ಆರ್ಥಿಕತೆಯ ಶಿಕ್ಷಣ ಇಂಥವು ಸಿಕ್ಕು ಈ ಮಹಿಳೆಯರು ಮತ್ತು ಅವರು ಆರಂಭಿಸಿದ್ದ ಗೃಹೋದ್ಯೋಗಗಳು ಬಲಗೊಳ್ಳುವ ಹಾದಿಯಲ್ಲಿದ್ದವು.
ಆದರೆ ಅನಾದಿಕಾಲದಿಂದ ನಡೆದು ಬಂದಿದ್ದ ಪುರೋಹಿತಶಾಹಿ, ಬಂಡವಾಳಶಾಹಿ ವ್ಯವಸ್ಥೆ ಅದನ್ನು ಸಹಿಸೀತೇ? ಎಂದಿಗೂ ಇಲ್ಲ. ಇಡೀ ಚಿತ್ರವನ್ನು ಉಪಾಯವಾಗಿ ಕತ್ತರಿಸುತ್ತ, ತಮಗೆ ಬೇಕಾದ ರೀತಿಯಲ್ಲಿ ಅದು ಹೊಂದಿಸಿಕೊಂಡಿತು. ಹಳ್ಳಿಗಳ ಬಡ ಮಹಿಳೆಯರಿಗೆ ಸಾಲ ಕೊಡುತ್ತೇವೆಂದು ಬಾಯಲ್ಲಿ ಹೇಳುತ್ತ, ಅವರಿಗೆ ಟೈಲ್ಸ್ ಮನೆಗಳ, ಮೊಬೈಲ್ ಹೋಂ ಟಿವಿಗಳ, ಬರ್ತ್‌ಡೇ ಪಾರ್ಟಿಗಳ ಆಸೆ ತೋರಿಸುತ್ತ, ಮನೆಬಾಗಿಲಿಗೇ ಸಾಲ ಕೊಡಲು ಬಂದರು. ಒಂದು ಸಾಲ ಮುಗಿಯುವುದರೊಳಗೆ ಇನ್ನೊಂದು ಸಾಲ ಸ್ಯಾಂಕ್ಷನ್ ಆಗುತ್ತಿತ್ತು. ಮರುಪಾವತಿಗೆ ಎಲ್ಲಿಂದ ಹಣ ಹೊಂದಿಸಲಿ ಎಂದು ಚಿಂತಿಸುತ್ತಿರುವಷ್ಟರಲ್ಲಿ ಬಾಗಿಲಲ್ಲಿ ಇನ್ನೊಂದು ಸಾಲದ ಕಂಪನಿ ಪ್ರತ್ಯಕ್ಷವಾಗಿತ್ತು. ತಾವೂ ಶಹರದ ನೌಕರಸ್ಥ ಮಂದಿಯಂಥದ್ದೇ ಜೀವನ ಮಾಡುತ್ತಿದ್ದೇವೆಂಬ ಭ್ರಮೆಯಲ್ಲಿ ಅವರನ್ನು ತೇಲಾಡುವಂತೆ ಮಾಡಲಾಯಿತು. ಆದರೆ ಸಾಲದ ಶೂಲ ಅವರನ್ನು ಇರಿಯುತ್ತಲೇ ಇತ್ತು.
ಶುಕ್ರಗೌರಿ, ಗುರು ಲಕ್ಷ್ಮಿ, ಸೋಮಗೌರಿ ..ನಿಮಗೆ ಗೊತ್ತೇ? ಹಿಂದೆಲ್ಲ ಶ್ರಾವಣದಲ್ಲಿ ಶುಕ್ರಗೌರಿ ಪೂಜೆ ಮಾತ್ರ ಇರುತ್ತಿತ್ತು. ಈಗ ಹಾಗಿಲ್ಲ, ಗುರುವಾರದ ಲಕ್ಷ್ಮಿ, ಮಂಗಳವಾರದ ಲಕ್ಷ್ಮಿ ಎಂದೆಲ್ಲ ವಾರದ ಮೂರ್ನಾಲ್ಕು ದಿನಗಳು ಲಕ್ಷ್ಮಿ ಪೂಜೆ, ಅರಿಶಿಣ ಕುಂಕುಮ, ಬಾಗಿನ ಎಂದೆಲ್ಲ ಕಾರ್ಯಕ್ರಮಗಳು ಹಳ್ಳಿಗಳಲ್ಲೀಗ ಹಲವು ವರ್ಷಗಳಿಂದ ಶುರುವಾಗಿವೆ. ಹಾಗೆಯೇ ಬರ್ತ್ ಡೇ ಪಾರ್ಟಿಗಳು. ಅದಕ್ಕೆ ತಕ್ಕಂತೆ ಓಣಿ ಓಣಿಗಳಲ್ಲಿ ನಾಯಿಕೊಡೆಗಳಂತೆ ಏಳುತ್ತಿರುವ ಬೇಕರಿಗಳು. ಖರ್ಚು ಮಾಡಲು ಹತ್ತು ಹಲವು ದಾರಿಗಳು.
ಸ್ವಸಹಾಯ ಸಂಘಗಳ ಮುಖಾಂತರ ಘನತೆಯ ಬದುಕಿನತ್ತ ಸಾಗಿದ್ದ ಮಹಿಳೆಯರು ಇಂದು ತಮ್ಮ ಘನತೆಯನ್ನೇ ಕಳೆದುಕೊಂಡಿದ್ದಾರೆ. ಸಾಲವೆಂದರೆ ಮಾರು ದೂರ ಓಡುತ್ತಿದ್ದವರು ಇಂದು ಕಂಡಕಂಡವರಲ್ಲಿ ಕೈಯೊಡ್ಡುತ್ತಿದ್ದಾರೆ. ಇದ್ದಕ್ಕಿದ್ದಂತೆ ಮಾಯವಾಗುತ್ತಿದ್ದಾರೆ. ಮದುವೆಯಾಗಿ ಹೋದ ಮಗಳ ಹೆಸರಲ್ಲಿಯೂ ಸಾಲ ತೆಗೆದು ಅವಳ ಗಂಡನ ಮನೆಗೂ ಸಾಲಗಾರರು ಹೋಗುವಂತೆ ಮಾಡುವಷ್ಟು ನಾಚಿಕೆ ತ್ಯಜಿಸಿದ್ದಾರೆ. ಈಗಿನ್ನೂ ಮದುವೆಯಾಗಿ ಹೊಸಿಲು ದಾಟಿ ಒಳಬಂದ ಹೊಸ ಸೊಸೆಯ ಮೇಲೂ ಸಾಲ ತೆಗೆಯುತ್ತಿದ್ದಾರೆ. ಕಷ್ಟಪಟ್ಟು ಕಟ್ಟಿದ ಮನೆಯನ್ನೇ ಮಾರುತ್ತಿದ್ದಾರೆ. ಮಾರದವರನ್ನು ಸಾಲದ ಸಂಘಗಳು ಹೊರ ಹಾಕುತ್ತಿವೆ. ಸ್ವಸಹಾಯ ಸಂಘಗಳಲ್ಲಿ ಒಬ್ಬರ ಕೈಯನ್ನೊಬ್ಬರು ಹಿಡಿದು ಮೇಲೆತ್ತುತ್ತಿದ್ದ ಮಹಿಳೆಯರೇ ಇಂದು ಮನೆಬಾಗಿಲಲ್ಲಿ ಕುಳಿತು ಬೇಗ ಕೊಡು ಎಂದು ಪೀಡಿಸುವವರಾಗಿದ್ದಾರೆ. ಪೀಡಕರಾಗಿ ಕುಳಿತುಕೊಳ್ಳುವಂತೆ ಮಾಡಲಾಗುತ್ತಿದೆ. ಅಷ್ಟು ಬದಲಾಗಿದೆ ಗ್ರಾಮೀಣ ಪ್ರಪಂಚ.
ಸಮಾಜದಲ್ಲಿ ಯಾವತ್ತೂ ಶೋಷಕ, ಶೋಷಿತರು ಇದ್ದೇ ಇದ್ದರು ನಿಜ. ಮನುಷ್ಯರನ್ನೇ ಗುಲಾಮರನ್ನಾಗಿಸಿ ಪ್ರಾಣಿಗಳಂತೆ ದುಡಿಸಿದ್ದೂ ಇದೆ ನಿಜ. ಆದರೆ ಶಹರಗಳ ಮೇಲ್ವರ್ಗವು ತನ್ನ ಅರ್ಥಿಕತೆಯನ್ನು ಬೆಳೆಸಿಕೊಳ್ಳಲಿಕ್ಕಾಗಿ ಒಂದಿಡೀ ಸಮಾಜವನ್ನೇ ಇಷ್ಟು ಅಮಾನವೀಯವಾಗಿ ನಡೆಸಿಕೊಂಡಿದ್ದು ಹಿಂದೆಂದೂ ನಡೆದಿಲ್ಲವೇನೋ. ಗ್ರಾಮೀಣ ಬದುಕನ್ನೇ ನಾಶ ಮಾಡಿ ಜನರನ್ನು ಹಿಂಡಿ ಹಿಪ್ಪೆ ಮಾಡಿ ಜೀವಚ್ಛವವನ್ನಾಗಿಸುವ ಇಂಥ ಕೃತ್ಯಕ್ಕೆ ಸರಕಾರದ್ದೂ ಬೆಂಬಲವಿದೆ, ಶಿಕ್ಷಿತ ಉಚ್ಛ ವರ್ಗದ್ದೂ ಬೆಂಬಲವಿದೆ. ನವ ಉದಾರೀಕರಣ ನೀತಿಯಲ್ಲಿ ಮಾರುಕಟ್ಟೆಯೇ ಪ್ರಧಾನ ನಿಜ. ಅದಕ್ಕೇ ಸರಕಾರದ ಒಲವೂ. ಜನರು ಮಾರುತ್ತಿರಬೇಕು ಅಥವಾ ಖರೀದಿಸುತ್ತಿರಬೇಕು. ನೇರ ದಾರಿಯಿರಲಿ, ಅಡ್ಡದಾರಿಯಲ್ಲಿರಲಿ, ಹಣ ಓಡಾಡುತ್ತಿರಬೇಕು. ಅದೇ ಬೆಳೆಯುತ್ತಿರುವ ಆರ್ಥಿಕತೆಯೆನಿಸಿದೆ. ಆದರೆ ಉತ್ಪಾದನೆಯ ಆಧಾರವಿಲ್ಲದ ಈ ಆರ್ಥಿಕತೆ ನೀರ ಮೇಲಿನ ಗುಳ್ಳೆಯಂತೆ. ಎಷ್ಟೇ ಸುಂದರವಾಗಿದ್ದರೂ ಕೂಡ ಅದು ಕ್ಷಣಿಕ.
ಸಾಲ ಕೊಡುವ ಮತ್ತು ವಸೂಲಾತಿಯಲ್ಲಿ ಎಲ್ಲರಿಗಿಂತ ಮುಂದೆ ಇರುವುದೇ ಧರ್ಮಸ್ಥಳದ ಸಂಘ. ಅವು ಹೊಕ್ಕದ ಊರಿಲ್ಲ. ಸುಮಾರು ಹತ್ತು ವರ್ಷಗಳ ಹಿಂದೆ ಧರ್ಮದ ಹೆಸರಲ್ಲಿ, ಮಂಜುನಾಥನ ಹೆಸರಲ್ಲಿ ಆಣೆ ಇರಿಸುತ್ತ ಬಂದ ಈ ಕಂಪನಿ ಸರಕಾರಿ ಕೃಪಾಪೋಷಿತ ನಾಟಕ ಕಂಪನಿಯಾಗೇ ಹಳ್ಳಿಗಳಿಗೆ ಕಾಲಿಟ್ಟಿದೆ. ದೊಡ್ಡ ಶಾಮಿಯಾನಗಳನ್ನು ಹಾಕಿ ಸ್ವತಃ ಪಂಚಾಯತಿ /ತಾಲೂಕಾ ಪಂಚಾಯತಿ ಅಧಿಕಾರಿಗಳು ಸ್ವಾಗತ ಭಾಷಣ ಮಾಡಿ ಉದ್ಘಾಟನೆ ಮಾಡಿಸಿದ್ದು ನಮಗೆ ನೆನಪಿದೆ. ಒಂದು ಸಾಲ ಮುಗಿಯುವ ಮುನ್ನವೇ ಇದರ ಪ್ರತಿನಿಧಿಗಳು ಆ ಗುಂಪಿಗೆ ಹಾಜರಾಗುತ್ತಾರೆ ನಿಮಗೆಲ್ಲ ಒಂದು ಲಕ್ಷ ರೂ. ಸ್ಯಾಂಕ್ಷನ್ ಆಗಿದೆ ಎನ್ನುತ್ತ. ಜನರು ಕೇಳದೇ, ಅರ್ಜಿ ಹಾಕದೇ, ಸ್ಯಾಂಕ್ಷನ್ ಆಗುವ ಸಾಲವಿದು. ಒಬ್ಬಿಬ್ಬರು ಬೇಡವೆಂದರೂ ಉಳಿದವರೆಲ್ಲ ಗೋಣು ಹಾಕಿ ʻಪೀರ್ ಪ್ರೆಶರ್ʼ ಸೃಷ್ಟಿಸಿ ಎಲ್ಲರೂ ಸಾಲ ತೆಗೆದುಕೊಳ್ಳುವಂತೆ ಮಾಡುತ್ತಾರೆ. ಅಷ್ಟೇ ಅಲ್ಲ, ಪ್ರತಿಯೊಬ್ಬರಿಂದಲೂ ಉಳಿತಾಯದ ಹಣವನ್ನೂ ತುಂಬಿಕೊಳ್ಳುವ ಸಂಸ್ಥೆ, ಮುಂದೆ ಆ ಹಣವನ್ನು ಉಳಿತಾಯ ಮಾಡಿದವರಿಗೆ ವಾಪಸ್ ಮಾಡುವುದೇ ಇಲ್ಲ. ಯಾರಾದರೂ ಮರುಪಾವತಿ ತುಂಬದಿದ್ದರೆ ಅದಕ್ಕೆ ಅಡ್ಜಸ್ಟ್ ಮಾಡುತ್ತಾರೆ. ಇವೆಲ್ಲದರ ಜೊತೆಗೆ ಇವರೆಲ್ಲ ಇನ್ಶೂರೆನ್ಸ್ ಹಣವನ್ನೂ ಕಟ್ಟಬೇಕು. ಮುಂದಾಳುವಿನ ಹೆಜ್ಜೆಯ ಮೇಲೆಯೇ ಹೆಜ್ಜೆ ಇಡುತ್ತಿರುವ ಇತರ ಕಂಪನಿಗಳು ಸಹ ಇನ್ಶೂರೆನ್ಸ್ ಹಣ ತುಂಬಿಸಿಕೊಳ್ಳುತ್ತಿವೆ. ಎಷ್ಟು ಕಡೆ ಸಾಲ ಮಾಡುತ್ತೀರೋ, ಅಷ್ಟು ಸಲ ಇನ್ಶೂರೆನ್ಸ್! ಇಷ್ಟೆಲ್ಲ ಮಾಡಿಸುವ ಧರ್ಮಸ್ಥಳ ಕಂಪನಿ ತಾನು ʻಕಿರುಸಾಲ ಕಂಪನಿಯೇ ಅಲ್ಲʼ ಎಂದು ಹೇಳಿಕೊಳ್ಳುತ್ತದೆ, ಅದನ್ನು ಸರಕಾರವೂ ನಂಬುತ್ತದೆ. ಈಗ ಬಹುಶಃ ಉಳಿದೆಲ್ಲ ಕಂಪನಿಗಳಿಗೆ ನಿಯಂತ್ರಣ ಬಿದ್ದರೂ ಧರ್ಮಸ್ಥಳದ ಸಂಘಕ್ಕೆ ಕಡಿವಾಣ ಬೀಳುವ ಬಗ್ಗೆ ಬಹು ಜನರಿಗೆ ಸಂಶಯವಿದೆ. ಯಾಕೆಂದರೆ ಅದರ ಮೂಲಪುರುಷನ ಕೃಪಾಪೋಷಣೆ ಸರಕಾರಕ್ಕೆ ಬೇಕು. ಯಾವ ಪಕ್ಷವಾದರೂ ಸರಿಯೇ ಅವರ ಕೈ ಇವರ ಜೇಬಿನೊಳಗೇ ಎಂಬುದು ಎಲ್ಲರಿಗೂ ಗೊತ್ತಿರುವ ವಿಷಯ. |
ರಾಜ್ಯದೆಲ್ಲೆಡೆ ಸಾಲದ ಸಂಘಗಳಿಂದ ಮಹಿಳೆಯರಿಗೆ ವಸೂಲಾತಿಯ ಹಿಂಸೆ ಅತಿಯಾಗಿ ಮಹಿಳೆಯರು ನೊಂದು ಆತ್ಮಹತ್ಯೆಗೆ ಶರಣಾಗುತ್ತಿರುವ ಸುದ್ದಿ ಎಲ್ಲಾ ಮಾಧ್ಯಮಗಳಲ್ಲೂ ಪ್ರಕಟವಾಗುತ್ತಿರುವಾಗ ಸರಕಾರವು ಅವನ್ನು ನಿಯಂತ್ರಿಸುವ ಮಾತನಾಡುತ್ತಿದೆ. ದೂರು ಕೊಟ್ಟರೆ ಕ್ರಮ ಕೈಗೊಳ್ಳುತ್ತೇವೆ ಎನ್ನುತ್ತಿದ್ದಾರೆ ಸಚಿವರು. ವಿರೋಧ ಪಕ್ಷಗಳಿಗಂತೂ ಸರಕಾರವನ್ನ ತರಾಟೆಗೆ ತೆಗೆದುಕೊಳ್ಳಲು ಸುಸಂಧಿ. ಆದರೂ ಒಳಗಿನ ಸಂಚನ್ನು ಬಲ್ಲ ನಮಗೆ ಸರಕಾರದ ಮಾತುಗಳಲ್ಲಿ ವಿಶ್ವಾಸ ಬರಲು ಸರಕಾರ ಏನಾದರೂ ಮಾಡಿಯೇ ತೋರಿಸಬೇಕು.
ಶಾರದಾ ಗೋಪಾಲ
ಲೇಖಕರು, ಅಂಕಣಕಾರರು.
ಮೊದಲ ಕಂತು ಓದಿದ್ದೀರಾ? – ಒಳಗೊಳ್ಳುವ ಆರ್ಥಿಕತೆ?