ಬೆಂಗಳೂರು: ‘ಬೇಂದ್ರೆ’ ಕೃಷ್ಣಪ್ಪ ಎಂದೇ ಚಿರಪರಿಚಿತರಾಗಿದ್ದಸಾಹಿತಿ ಜಿ. ಕೃಷ್ಣಪ್ಪ ಅವರು ಅನಾರೋಗ್ಯದಿಂದಾಗಿ ಮಂಗಳವಾರ ನಿಧನರಾಗಿದ್ದಾರೆ. ಮೃತರಿಗೆ ಪತ್ನಿ, ಇಬ್ಬರು ಪುತ್ರಿಯರು, ಒಬ್ಬ ಪುತ್ರ ಇದ್ದಾರೆ. ಮೃತರ ಪಾರ್ಥಿವ ಶರೀರವನ್ನು ಅಬ್ಬಿಗೆರೆಯ ಶ್ರೀನಿಕೇತನ ಲೇಔಟ್ ನಲ್ಲಿರುವ ಅವರ ಸ್ವಗೃಹದಲ್ಲಿ ಇರಿಸಲಾಗಿದೆ. ಬೇಂದ್ರೆ ಕೃಷ್ಣಪ್ಪ’ ಎಂದೇ ಜನಪ್ರಿಯರಾಗಿರುವ ಡಾ. ಜಿ.ಕೃಷ್ಣಪ್ಪ ಅವರು ಬೇಂದ್ರ ಸಾಹಿತ್ಯ ಕುರಿತು ಅಪಾರ ಅಧ್ಯಯನ ನಡೆಸಿದ್ದಾರೆ. 1948ರಲ್ಲಿ ಬೆಂಗಳೂರಲ್ಲಿ ಜನಿಸಿದ ಕೃಷ್ಣಪ್ಪ ಅವರು ಬೆಂಗಳೂರಿನ ಎಸ್.ಟಿ. ಪಾಲಿಟೆಕ್ನಿಕ್ನಲ್ಲಿ ಡಿಪ್ಲೋಮಾ ಪದವಿ ಪಡೆದಿದ್ದಾರೆ. ವಾಹನ ನಿರೀಕ್ಷಕರಾಗಿ ವೃತ್ತಿ ಜೀವನ ಆರಂಭಿಸಿದ ಇವರು, ಸಹಾಯಕ ಪ್ರಾದೇಶಿಕ ಸಾರಿಗೆ ಅಧಿಕಾರಿಯಾಗಿ ನಿವೃತ್ತಿ ಹೊಂದಿದ್ದರು. ಉದ್ಯೋಗದ ನಡುವೆ ಬಿ.ಎ, ಎಲ್ಎಲ್ಬಿ, ಕನ್ನಡದಲ್ಲಿ ಸ್ನಾತಕೋತ್ತರ ಪದವೀಧರಾಗಿದ್ದಾರೆ.
ವೃತ್ತಿಯೊಂದಿಗೆ ಅಭಿರುಚಿಯಾಗಿ ಸಾಹಿತ್ಯ ಅಧ್ಯಯನದಲ್ಲಿ ತೊಡಗಿದವರು. ದ.ರಾ.ಬೇಂದ್ರೆ ಅವರ ಕಾವ್ಯದ ಓದಿಗೆ ಹೊಸ ಆಯಾಮ ಪರಿಚಯಿಸಿದವರು ಕೃಷ್ಣಪ್ಪನವರು. ಹಾಗಾಗಿಯೇ ಅವರ ಹೆಸರಿನೊಂದಿಗೆ ಬೇಂದ್ರೆ ಕೂಡ ಸೇರಿಕೊಂಡಿತ್ತು. ಇವರು ಸುಮಾರು 25 ಕೃತಿಗಳನ್ನು ರಚಿಸಿದ್ದಾರೆ. ಇವರ ಸಾಹಿತ್ಯವ ಸೇವೆಗಾಗಿ ‘ನಾಡೋಜ’, ‘ಸಾಹಿತ್ಯ ಶ್ರೀ’ ಸೇರಿದಂತೆ ಹಲವು ಪ್ರಶಸ್ತಿ, ಪುರಸ್ಕಾರಗಳು ಸಂದಿವೆ.