ಶೋ ನಡೆಸೋದು ಹೇಗೆ ಅಂತ ಹೇಳಿಕೊಟ್ಟವನು ಹೆಚ್ಚೇನೂ ಓದದ ಒಬ್ಬ ಹಳ್ಳಿ ಹುಡುಗ ಹನುಮಂತ ಲಮಾಣಿ

Most read

ಹಾವೇರಿ ಜಿಲ್ಲೆ ಪುಟ್ಟ ಲಂಬಾಣಿ ತಾಂಡಾದ ಕುರಿಗಾಹಿ ಹುಡುಗ ಹನುಮಂತು ಬಿಗ್ ಬಾಸ್ ಶೋ ಗೆದ್ದಿದ್ದಾನೆ. ಅದು ನಿರೀಕ್ಷಿತವೂ ಆಗಿತ್ತು.

ಆದರೆ ಕೇಳಿಕೊಳ್ಳಬೇಕಾದ ಪ್ರಶ್ನೆಗಳು ಹಲವು ಇವೆ. ಹನುಮಂತು ಗೆದ್ದ ಅನ್ನೋದೊಂದನ್ನು ಬಿಟ್ಟರೆ ಈ ಬಿಗ್ ಬಾಸ್ ಅತ್ಯಂತ ಕಳಪೆಯಾಗಿತ್ತು, ವಿಕೃತಿ ಪ್ರದರ್ಶನದ ನಿರ್ಲಜ್ಜತೆ ಎಲ್ಲೆ ಮೀರಿತ್ತು. ಹಾಗಂತ ಸ್ಪರ್ಧಿಗಳೇ ಹಾಗೆ ವರ್ತಿಸಿದರು ಅಂತ ಅಂದುಕೊಳ್ಳಬೇಕಾಗಿಲ್ಲ. ಈ ಬಾರಿಯ ಫಾರ್ಮ್ಯಾಟ್ ಹಾಗೇ ಇತ್ತು.

ಒಬ್ಬರನ್ನು ತುಳಿದು ಇನ್ನೊಬ್ಬರು ಬೆಳೀಬೇಕು ಅನ್ನೋದು ಬಿಗ್ ಬಾಸ್ ನ ಒನ್ ಲೈನ್ ಫಾರ್ಮ್ಯಾಟ್. ಇದು ಈ ಬಾರಿ ಅಸಹ್ಯ ಹುಟ್ಟಿಸಿತು, ಅನೇಕ ಅತಿರೇಕಗಳನ್ನು ನೋಡಿದೆವು.

ಬಿಗ್ ಬಾಸ್ ಆರಂಭದ ವರ್ಷಗಳಲ್ಲಿ ಒಂದು ಬಗೆಯ ಮೈಂಡ್ ಗೇಮ್ ಆಗೇ ಇತ್ತು. ಎಲ್ಲ ಮಗುಮ್ಮಾಗಿ ನಡೆಯುತ್ತಿತ್ತು. ಮನೆಯಿಂದ ಹೊರಹಾಕುವ ನಾಮಿನೇಷನ್ ಕೂಡ ಗುಟ್ಟಾಗಿ ಕನ್ಫೆಷನ್ ರೂಮಿನಲ್ಲಿ ನಡೆಯುತ್ತಿತ್ತು. ಯಾರು ಯಾರನ್ನು ಹೊರಗೆ ಕಳಿಸಲು ಬಯಸುತ್ತಿದ್ದಾರೆ ಎಂಬುದು ನೋಡುಗರಿಗೆ ಗೊತ್ತಾಗ್ತಾ ಇದ್ದರೂ ಸ್ಪರ್ಧಿಗಳಿಗೆ ತಮ್ಮ ಬೆನ್ನ ಹಿಂದೆ ಏನಾಗ್ತಾ ಇದೆ ಅನ್ನೋದು ಗೊತ್ತಾಗ್ತಾ ಇರಲಿಲ್ಲ. ಈ ಬಾರಿ ಎಲ್ಲ ಖುಲ್ಲಂ ಖುಲ್ಲಾ. ಪ್ರತಿಬಾರಿಯೂ ಓಪನ್ ನಾಮಿ‌ನೇಷನ್. ಅಷ್ಟು ಸಾಲದು ಅಂತ ಮುಖಕ್ಕೆ ಮಸಿ ಬಳಿಸೋದು, ಫೊಟೋ ಸುಟ್ಟು ಹಾಕಿಸೋದು, ಫೊಟೋ ಮೇಲೆ ಸುತ್ತಿಗೆಯಿಂದ ಹೊಡೆಸೋದು, ಮುಖದ ಮೇಲೆ ಕಾಫಿ ಎರಚಿಸೋದು, ತಲೆ ಮೇಲೆ ಬಾಟಲಿ ಒಡೆಸೋದು… ಹೀಗೆ ಕ್ರೌರ್ಯವನ್ನು ವಿಜೃಂಭಿಸುವ ಟಾಸ್ಕ್ ಹೆಸರಿನ ಹಿಂಸೆಗಳು‌.

ಮೊದಲಿನ ಸೀಜನ್ ಗಳಲ್ಲಿ ಸ್ಪರ್ಧಿಗಳ ನಡುವೆ ಒಳ್ಳೆಯ ಗೆಳೆತನವಿದ್ದರೆ, ಹುಡುಗ-ಹುಡುಗಿ ಸಣ್ಣದಾಗಿ ಪ್ರೇಮದಲ್ಲಿ ಬಿದ್ದಿದ್ದರೆ ಅದೇ ಕಂಟೆಂಟ್ ಆಗಿರುತ್ತಿತ್ತು. ಅದನ್ನು ಒಂದು ಲೆಕ್ಕದಲ್ಲಿ ಪ್ರೋತ್ಸಾಹಿಸಲಾಗುತ್ತಿತ್ತು. ಈಗ ಹಾಗಿಲ್ಲ. ಒಟ್ಟಿಗಿದ್ದರೆ ಜಗಳ ತಂದುಹಾಕಲೆಂದೇ ಟಾಸ್ಕ್ ಗಳು ಶುರು ಆಗುತ್ತಿದ್ದವು. ಶೋ ನಿರೂಪಕ ಕಿಚ್ಚ ಸುದೀಪ್ ಹಿಂದೆಲ್ಲ ಸ್ಪರ್ಧಿಗಳ ಜಗಳ ಬಿಡಿಸಲು ವೀಕೆಂಡ್ ನಲ್ಲಿ ಪ್ರಯತ್ನ ಪಡುತ್ತಿದ್ದರು. ಆದರೆ ಬಾರಿ ಹಾಗಲ್ಲ, ಅವರೇ ಜಗಳಕ್ಕೆ ದಾರಿ ಮಾಡಿಕೊಡುತ್ತಿದ್ದಂತೆ ಕಾಣುತ್ತಿತ್ತು.

ಹಾಗೆ ನೋಡಿದರೆ ಹನುಮಂತುವನ್ನು ತಂದು ಆಡಿಸಿದ್ದೇ ಆಶ್ಚರ್ಯಕರ. ಆತ ಈ ಶೋ ಫಾರ್ಮ್ಯಾಟ್ ಗೆ ಹೇಳಿ ಮಾಡಿಸಿದ ಕ್ಯಾಂಡಿಡೇಟ್ ಏನಲ್ಲ‌. ಜಗಳ, ದ್ವೇಷ, ಗುದ್ದಾಟ ಎಲ್ಲದಕ್ಕೂ ಅವನು ಒಲ್ಲೆ ಅಂದುಕೊಂಡೇ ಬಂದ. ಸೋ ಕಾಲ್ಡ್ ಸುಶಿಕ್ಷಿತ, ಸೆಲಬ್ರಿಟಿ ಸ್ಪರ್ಧಿಗಳ ಸ್ಟ್ರ್ಯಾಟಜಿಗಳಿಂದ ದೂರವೇ ಇದ್ದ. ಟಾಸ್ಕ್ ಗಳನ್ನು ಆಡಿದ, ಕೆಲವನ್ನು ಸೋತ, ಕೆಲವನ್ನು ಗೆದ್ದ. ತುಂಬಾ ನಿರ್ಣಾಯಕವಾಗಿ ಟಿಕೆಟ್ ಟು ಫಿನಾಲೆಯನ್ನೇ ಗೆದ್ದುಬಿಟ್ಟ. ಕೊನೆಗೆ ಫೈನಲ್ ಗೆದ್ದು ಟ್ರೋಫಿ ಪಡೆದಿದ್ದಾ‌ನೆ. ಹನುಮಂತು ಆಡಿದ ರೀತಿ ಮೊಟ್ಟ ಮೊದಲನೆಯದಾಗಿ ಬಿಗ್ ಬಾಸ್ ಶೋ ನಿರ್ಮಾಪಕರಿಗೇ ದೊಡ್ಡ ಪಾಠ. ಜಗಳ ಹಚ್ಚಿಸಿ, ಬಡಿದಾಡಿಸೋ ಶೋ ನಲ್ಲಿ ಜನ ಹೆಚ್ಚು ಇಷ್ಟಪಟ್ಟಿದ್ದು ಇದರ ರಗಳೆಯೇ ಬೇಡವೆಂದು ದೂರವಿದ್ದ ಹನುಮಂತುವನ್ನು.

ಹನುಮಂತುಗೆ 5 ಕೋಟಿ 25 ಲಕ್ಷ ಓಟು ಬಿದ್ದಿವೆ ಅಂತಾರೆ ಶೋ ನಿರ್ಮಾಪಕರು. ರನ್ನರ್ ಅಪ್ ಗೆ ಬಂದಿರೋದು ಹೆಚ್ಚು ಕಡಿಮೆ ಅದರ ಅರ್ಧದಷ್ಟು ಓಟುಗಳು. ಹನುಮಂತು ಸನಿಹದಲ್ಲೂ ಯಾರೂ ಇರಲಿಲ್ಲ. ಯಾಕೆ ಜನ ಹನುಮಂತುವನ್ನು ಇಷ್ಟು ಇಷ್ಟಪಟ್ಟರು?

“ನಿನ್ನ ಮಾರಿ ನೋಡೋ ಹಂಗಾಗಿದೆ, ಎಲ್ಲಿದ್ದೀ ಏ ಹುಡುಗಿ” ಎಂದು ತನ್ನ ಪಾಡಿಗೆ ತಾನು ಹಾಡ್ಕೊಂಡಿದ್ದ ಹನುಮಂತ, ಮನೆಯಲ್ಲೊಬ್ಬ ಗೆಳೆಯನನ್ನು ಮಾಡಿಕೊಂಡು ‘ದೋಸ್ತಾ ದೋಸ್ತಾ’ ಎಂದು ತನ್ನ ಕಂಫರ್ಟ್ ಜೋನ್ ಹುಡುಕಿಕೊಂಡ ಹನುಮಂತು, “ನಾನು ಆಟ ಚಾಲೂ ಮಾಡಿ ಬಾರಿ ದಿನ ಆಗಿವೆ, ಇವರಿಗೆ ಈಗ ಗೊತ್ತಾಗಿದೆ” ಎಂದು ಎದುರಾಳಿಗಳನ್ನು ಅಚ್ಚರಿಗೆ ಕೆಡವಿದ ಹನುಮಂತು, ಆಗಾಗ ತತ್ತ್ವಪದ, ಜಾನಪದ, ಉತ್ತರ ಕರ್ನಾಟಕ ಭಾಗದ ಲಘು ಹಾಸ್ಯದ ಹಾಡುಗಳನ್ನು ಹಾಡಿ ರಂಜಿಸಿದ ಹನುಮಂತು ಜನರಿಗೆ ಇಷ್ಟ ಆಗಿರೋದಂತೂ ಸತ್ಯ. ಬಹುಶಃ ಅವನ ಸರಳತೆ, ಸಾದಾ ಸೀದಾ ವ್ಯಕ್ತಿತ್ವ, ಯಾರನ್ನೂ ದ್ವೇಷಿಸದ ಮನೋಭಾವಗಳೇ ಜನರನ್ನು ಸೆಳೆದಿರಬಹುದು.

ಬಿಗ್ ಬಾಸ್ ಶೋ ಹನುಮಂತು ಗೆಲ್ಲುವ ಮೂಲಕ, ಈ ಶೋ ನಡೆಸೋದು ಹಿಂಗಲ್ಲ ಅನ್ನೋ ಸಂದೇಶವನ್ನು ಸ್ವತಃ‌ ಬಿಗ್ ಬಾಸ್ ಗೇ ನೀಡಿದ್ದಾನೆ ಹನುಮಂತು. ಹನುಮಂತುಗೆ ಒಳ್ಳೆಯದಾಗಲಿ. ಕಲರ್ಸ್ ನವರು ಮನುಷ್ಯನ ವಿಕೃತಿಗಳ ಪ್ರದರ್ಶನಕ್ಕಿಂತ ಅವನ ಒಳ್ಳೆಯತನದ ಪ್ರದರ್ಶಿಸುವ ಮಾದರಿಯನ್ನು ಬಳಸಿ ಮುಂದೆ ಶೋ ನಡೆಸಲಿ. ಇದು ಅವರು ಕಲಿಯಲೇಬೇಕಾದ ಪಾಠ. ವಿಶೇಷವೆಂದರೆ ಅದನ್ನು ಹೇಳಿಕೊಟ್ಟವನು ಹೆಚ್ಚೇನೂ ಓದದ ಒಬ್ಬ ಹಳ್ಳಿ ಹುಡುಗ, ಕುರಿಗಾಹಿ!

– ದಿನೇಶ್ ಕುಮಾರ್ ಎಸ್.ಸಿ.

More articles

Latest article