ಬೆಂಗಳೂರು: ಕೇಂದ್ರ ಅಪರಾಧ ವಿಭಾಗ ಮತ್ತು ಬ್ಯಾಡರಹಳ್ಳಿ ಪೊಲೀಸ್ ಠಾಣೆ ಪೊಲೀಸರು ಜಂಟಿ ಕಾರ್ಯಾಚರಣೆ ನಡೆಸಿ ಮಾದಕ ವಸ್ತು ಮಾರಾಟ ಮಾಡುತ್ತಿದ್ದ ಆರೋಪದ ಮೇಲೆ ವಿದ್ಯಾರ್ಥಿಯೊಬ್ಬನನ್ನು ಬಂಧಿಸಿದ್ದಾರೆ.
ಆಂಧ್ರಪ್ರದೇಶದ ಆನಂತಪುರ ನಿವಾಸಿ ಅರುಣ್ ಎಂ. ಜಾಕೋಬ್ (27) ಎಂಬ ವಿದ್ಯಾರ್ಥಿಯನ್ನು ಬಂಧಿಸಿ, ರೂ.10 ಲಕ್ಷ ಮೌಲ್ಯದ ಎಂಡಿಎಂಎ ಕ್ರಿಸ್ಟಲ್ಸ್, ಎಂಡಿಎಂಎ ಮಾತ್ರೆಗಳು, ಹೈಡೋ ಗಾಂಜಾವನ್ನು ವಶಪಡಿಸಿಕೊಳ್ಳಲಾಗಿದೆ. ಪ್ರಮುಖ ಆರೋಪಿ ಅರುಣ್ ಸ್ನೇಹಿತ, ಡ್ರಗ್ಸ್
ಪೆಡ್ಲರ್ ಪ್ರತ್ಯೂಷ್ ಪರಾರಿಯಾಗಿದ್ದು ಪೊಲೀಸರು ಆತನಿಗಾಗಿ ಹುಡುಕಾಟ ನಡೆಸಿದ್ದಾರೆ.
ಲಿಂಗಧೀರನಹಳ್ಳಿಯ ಡಿ ಗ್ರೂಪ್ ಲೇಔಟ್ನಲ್ಲಿ ವಾಸವಾಗಿರುವ ಅರುಣ್ ಹಾಗೂ ಪ್ರತ್ಯೂಷ್ ನಗರದ ಕಾಲೇಜೊಂದರಲ್ಲಿ ಬಿಬಿಎ ಸಹಪಾಠಿಗಳಾಗಿದ್ದರು. 2023ರಲ್ಲಿ ಎಂಬಿಎ ಕೋರ್ಸ್ಗೆ ಸೇರಿದ ಅರುಣ್ಗೆ ಮಾದಕ ವಸ್ತುಗಳನ್ನು ಮಾರಾಟ ಮಾಡುವುದರಿಂದ ಹೆಚ್ಚು ಹಣ ಗಳಿಸಬಹುದು ಎಂದು ಪ್ರತ್ಯೂಷ್ ಗೆ ಆಮಿಷವೊಡ್ಡಿದ್ದ. ಕಾಲೇಜು ವಿದ್ಯಾರ್ಥಿಗಳು, ಐ.ಟಿ.ಉದ್ಯೋಗಿಗಳು, ಉದ್ಯಮಿಗಳಿಗೆ ಅರುಣ್ ಮೂಲಕ ಡ್ರಗ್ಸ್ ತಲುಪಿಸುತ್ತಿದ್ದ. ಗ್ರಾಹಕರು ಡಿಜಿಟಲ್ ಆ್ಯಪ್ ಮೂಲಕ ಹಣ ಪಾವತಿ ಮಾಡುತ್ತಿದ್ದರು. ಅರುಣ್ ಮನೆ ಮೇಲೆ
ದಾಳಿ ನಡೆಸಿದ ವೇಳೆ 52 ಗ್ರಾಂ ಎಂಡಿಎಂಎ, 98 ಗ್ರಾಂ ಹೈಡ್ರೋ ಗಾಂಜಾ ವಶಪಡಿಸಿಕೊಳ್ಳಲಾಗಿದೆ. ಪ್ರತ್ಯೂಷ್ ವಾಟ್ಶಾಪ್ ನಲ್ಲಿ ಮೊಬೈಲ್ ನಂಬರ್ ಕಳುಹಿಸುತ್ತಿದ್ದ. ನಾನು ಅವರಿಗೆ ಡ್ರಗ್ಸ್ ತಲುಪಿಸುತ್ತಿದ್ದೆ. ಇದಕ್ಕೆ ನನಗೆ ಕಮೀಷನ್ ಸಿಗುತ್ತಿತ್ತು ಎಂದು ಅರುಣ್ ತಿಳಿಸಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ.