“ನಮ್ಮ ಯಾತ್ರೆಯಲ್ಲಿ ನ್ಯಾಯ ಎಂಬ ಪದವಿದೆ. ಯಾಕೆಂದರೆ ದೇಶದಲ್ಲಿ ಬಿಜೆಪಿ ಆರೆಸೆಸ್ ಹಿಂಸೆ, ದ್ವೇಷ, ಅನ್ಯಾಯ ಹರಡುತ್ತಿದೆ. ನಾವು ಇಂಡಿಯಾ ಕೂಟದವರು ಅದರ ವಿರುದ್ಧ ಹೋರಾಡಲಿದ್ದೇವೆ” – ರಾಹುಲ್ ಗಾಂಧಿ
ಜನವರಿ 25, 2023. ಇಂದು ಭಾರತ ಜೋಡೋ ನ್ಯಾಯ ಯಾತ್ರೆಯ 12 ನೇ ದಿನ. ಹಾಗೆಯೇ ಭಾರೀ ವಿವಾದ, ಧರಣಿ, ಸರಕಾರದ ವಿರುದ್ಧ ಸಂಘರ್ಷ, ಜನಬೆಂಬಲ ಇತ್ಯಾದಿಗಳಿಂದ ಸುದ್ದಿ ಮಾಡಿದ ಅಸ್ಸಾಂ ಯಾತ್ರೆಯ ಕೊನೆಯ ದಿನ.
ಇಂದು ಯಾತ್ರೆ ಅಸ್ಸಾಂ ನ ಧುಬ್ರಿಯ ಗೋಲಕಗಂಜ್ ಚಿರಿಯಾಲಿಯಿಂದ ಆರಂಭವಾಯಿತು. 9.00 ಗಂಟೆಗೆ ಅಸ್ಸಾಂ ಪಶ್ಚಿಮ ಬಂಗಾಳ ಗಡಿಯಲ್ಲಿ ಧ್ವಜ ಹಸ್ತಾಂತರ ಕಾರ್ಯಕ್ರಮ ನಡೆದು ಪಶ್ಚಿಮ ಬಂಗಾಳ ಪ್ರವೇಶಿಸಲಾಯಿತು. ರಸ್ತೆಯ ಇಕ್ಕೆಲಗಳಲ್ಲಿ ಸೇರಿದ್ದ ಭಾರೀ ಜನಸ್ತೋಮದಿಂದ ಅಭೂತಪೂರ್ವ ಸ್ವಾಗತ ದೊರೆಯಿತು.
ಪಶ್ಚಿಮ ಬಂಗಾಳದ ಕೂಚ್ ಬೆಹಾರ್, ಖಾಗ್ರಾಬರಿ ಚೌಕದಲ್ಲಿ ಜನರನ್ನುದ್ದೇಶಿಸಿ ಮಾತಾಡಿದ ರಾಹುಲ್ ಗಾಂಧಿ, “ನೀವು ನನಗೆ ಅಭೂತಪೂರ್ವ ಸ್ವಾಗತ ಕೋರಿದಿರಿ. ನಿಮಗೆ ನನ್ನ ಧನ್ಯವಾದಗಳು. ನಮ್ಮ ಯಾತ್ರೆಯಲ್ಲಿ ನ್ಯಾಯ ಎಂಬ ಪದವಿದೆ. ಯಾಕೆಂದರೆ ದೇಶದಲ್ಲಿ ಬಿಜೆಪಿ ಆರೆಸೆಸ್ ಹಿಂಸೆ, ದ್ವೇಷ, ಅನ್ಯಾಯ ಹರಡುತ್ತಿದೆ. ನಾವು ಇಂಡಿಯಾ ಕೂಟದವರು ಅದರ ವಿರುದ್ಧ ಹೋರಾಡಲಿದ್ದೇವೆ. ನಿಮಗೆಲ್ಲರಿಗೂ ಮತ್ತೊಮ್ಮೆ ಹೃದಯತುಂಬಿದ ಧನ್ಯವಾದಗಳು” ಎಂದರು.
ಪಶ್ಚಿಮ ಬಂಗಾಳದಲ್ಲಿ ಯಾತ್ರೆಯು ಕೂಚ್ ಬೆಹಾರ್, ಅಲಿಪುರದ್ವಾರ್, ಜಲಪಾಯಿಗುರಿ, ಡಾರ್ಜಿಲಿಂಗ್, ಉತ್ತರ ದಿನಾಜಪುರ, ಮಾಲ್ಡಾ, ಮುರ್ಶಿದಾಬಾದ್, ಬೀರಬೂಮ್ ಜಿಲ್ಲೆಗಳಲ್ಲಿ ಸಾಗಲಿದೆ.
ಇಂದು ಮಧ್ಯಾಹ್ನದಿಂದ ಎರಡು ದಿನ ಯಾತ್ರೆ ಇರುವುದಿಲ್ಲ. ಗಣರಾಜ್ಯೋತ್ಸವ ವಿರಾಮ ಕಳೆದು ಜನವರಿ 28 ರಿಂದ ಮತ್ತೆ ಮುಂದುವರಿಯಲಿದೆ.
ಯಾತ್ರಿಗಳು ಅಲಿಪುರದುವಾರ್ ದ, ಫಲಕಾಟಾ ಟೌನ್ ಕ್ಲಬ್ ಗ್ರೌಂಡ್ ನಲ್ಲಿ ರಾತ್ರಿ ತಂಗಲಿದ್ದಾರೆ.
ಶ್ರೀನಿವಾಸ ಕಾರ್ಕಳ, ಮಂಗಳೂರು