ಭದ್ರಾ ಮೇಲ್ದಂಡೆ ಯೋಜನೆಯನ್ನು ರಾಷ್ಟ್ರೀಯ ಯೋಜನೆ ಮಾಡುವುದಾಗಿ ಹೇಳಿ ವಂಚಿಸಿದ ಬಿಜೆಪಿ:  ಸಿ.ಎಂ ಸಿದ್ದರಾಮಯ್ಯ

Most read

ಹಿರಿಯೂರು: ನೀರಾವರಿಗೆ ನಮ್ಮ ಸರ್ಕಾರ ಹೆಚ್ಚಿನ ಪ್ರಾಮುಖ್ಯತೆ ನೀಡುತ್ತಿದ್ದು, 1274 ಕೋಟಿ ರೂಪಾಯಿ ವೆಚ್ಚದಲ್ಲಿ ಮತ್ತೊಂದು ಯೋಜನೆಯನ್ನು ಸರ್ಕಾರ ಸಿದ್ದಪಡಿಸಿದೆ. ಇದು ಜಾರಿಯಾದರೆ ಈ ಭಾಗದ ಕಟ್ಟ ಕಡೆಯ ಜಮೀನಿಗೂ ನೀರು ಒದಗುತ್ತದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಿಳಿಸಿದರು. ವಾಣಿವಿಲಾಸ ಜಲಾಶಯಕ್ಕೆ ಬಾಗಿನ ಅರ್ಪಿಸಿದ ಬಳಿಕ ವೇದಿಕೆ ಕಾರ್ಯಕ್ರಮದಲ್ಲಿ ಮಾತನಾಡಿದರು.

ಭದ್ರಾ ಮೇಲ್ದಂಡೆ ಯೋಜನೆಯನ್ನು ರಾಷ್ಟ್ರೀಯ ಯೋಜನೆ ಮಾಡುವುದಾಗಿ ಬಿಜೆಪಿ ಸರ್ಕಾರದಲ್ಲಿ ಸಚಿವರಾಗಿದ್ದ ಗೋವಿಂದ ಕಾರಜೋಳ ಅವರು ಬರೀ ಬಾಯಿ ಮಾತಲ್ಲಿ ಹೇಳಿ ವಂಚಿಸಿದರು. ಈ ಯೋಜನೆಗೆ 5,300 ಕೋಟಿ ರೂಪಾಯಿ ಕೊಡುವುದಾಗಿ ಕೇಂದ್ರ ಬಜೆಟ್ ನಲ್ಲಿ ನಿರ್ಮಲಾ ಸೀತಾರಾಮನ್ ಅವರು ಘೋಷಿಸಿದ್ದರು. ಆದರೆ ನಯಾಪೈಸೆ ಬಿಡುಗಡೆಗೊಳಿಸದೆ ಈ ಭಾಗದ ಜನ ಸಮುದಾಯಕ್ಕೆ ಗೋಂವಿಂದ ಕಾರಜೋಳ ಮತ್ತು ಕೇಂದ್ರ ಸರ್ಕಾರ ವಂಚಿಸಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಇನ್ನಾದರೂ ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ಅವರ ಜೊತೆ ಚರ್ಚಿಸಿ ಕೊಟ್ಟ ಮಾತಿನಂತೆ 5300 ಕೋಟಿ ರೂಪಾಯಿಯನ್ನು ಬಿಡುಗಡೆ ಮಾಡಿಸಿ ಎಂದು ಸವಾಲು ಹಾಕಿದರು.

ಬಿಜೆಪಿ ಕೊಟ್ಟ ಮಾತಿಗೆ ವಂಚಿಸುತ್ತದೆ. ನಾವು ಕೊಟ್ಟ ಮಾತು ಈಡೇರಿಸಿ ನುಡಿದಂತೆ ನಡೆಯುತ್ತಿದ್ದೇವೆ. ಚುನಾವಣೆ ವೇಳೆ ಕೊಟ್ಟ ಐದು ಗ್ಯಾರಂಟಿಗಳನ್ನು ಯಶಸ್ವಿಯಾಗಿ ಜಾರಿ ಮಾಡಿ ರಾಜ್ಯದ ಬಡವರು, ಮಧ್ಯಮ ವರ್ಗದವರು ಸೇರಿ ಎಲ್ಲಾ ಜನ ಸಮುದಾಯಗಳ ನಂಬಿಕೆ ಉಳಿಸಿಕೊಂಡಿದ್ದೇವೆ. ಇದೇ ನಮಗೂ ಬಿಜೆಪಿಗೂ ಇರುವ ವ್ಯತ್ಯಾಸ.‌ ವಾಣಿ ವಿಲಾಸ ಜಲಾಶಯ ಕೋಡಿ ಬಿದ್ದಿದ್ದು ಸರ್ಕಾರದಿಂದ ಬಾಗಿನ ಅರ್ಪಿಸಿ, ಗಂಗಾಪೂಜೆ ನೆರವೇರಿಸಿದ್ದೇವೆ. 115 ವರ್ಷಗಳ ಇತಿಹಾಸ ಇರುವ, ರಾಜ್ಯದಲ್ಲಿ ನಿರ್ಮಾಣ ಆದ ಮೊದಲ ಜಲಾಶಯ ಇದಾಗಿದ್ದು ಮೂರನೇ ಬಾರಿ ಕೋಡಿ ಬಿದ್ದಿದೆ.

ಅಂದಿನ‌ ಮಹಾರಾಣಿ ಅಮ್ಮಣ್ಣಿ ತಾಯಿ ತಮ್ಮ ಒಡವೆಗಳನ್ನು ಮಾರಿ 45 ಲಕ್ಷ ರೂಪಾಯಿ ಖರ್ಚು ಮಾಡಿ ಈ ಜಲಾಶಯ ನಿರ್ಮಿಸಿದ್ದಾರೆ. ಇದು 30 ಸಾವಿರ ಎಕರೆ ಕೃಷಿ ಭೂಮಿಗೆ ನೀರು ಒದಗಿಸುತ್ತಿದೆ.  ಹೀಗಾಗಿ ರಾಣಿ ಅಮ್ಮಣ್ಣಿಯವರನ್ನು ನಾವು ಸ್ಮರಿಸುತ್ತೇವೆ, ಧನ್ಯವಾದ ಅರ್ಪಿಸುತ್ತೇವೆ ಎಂದರು. ಜಲ ಸಂಪನ್ಮೂಲ ಸಚಿವ, ಡಿಸಿಎಂ ಡಿ.ಕೆ.ಶಿವಕುಮಾರ್, ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರ್ ಸೇರಿ ಜಿಲ್ಲೆಯ ಶಾಸಕರುಗಳು ಉಪಸ್ಥಿತರಿದ್ದರು.

More articles

Latest article