ಬಿಜೆಪಿಯ ದೆಹಲಿ ನಾಯಕರೇ ಬೆಂಗಳೂರಿಗೆ ಬಂದು ವಿಜಯೇಂದ್ರ ಅವರನ್ನು ಬದಲಿಸಲು ಕಸರತ್ತು ನಡೆಸುತ್ತಿದ್ದಾರೆ. ಈಗಾಗಲೇ ಬಿಜೆಪಿಯ ಆಂತರಿಕ ಚುನಾವಣೆ ಪ್ರಕ್ರಿಯೆ ಶುರುವಾಗಿದೆ. ಇದರ ಜೊತೆಗೆ ಬಿಜೆಪಿಯಲ್ಲಿನ ರಾಜ್ಯ ನಾಯಕರಲ್ಲಿ ನಾಯಕತ್ವದ ಕೊರತೆ ಇದೆ ಎಂಬುದನ್ನು ಸ್ವತಃ ಬಿಜೆಪಿ ರಾಜ್ಯ ಉಸ್ತುವಾರಿ ರಾಧಾ ಮೋಹನ್ ದಾಸ್ ಅಗರ್ ವಾಲ್ ಅವರು ಕೋರ್ ಕಮಿಟಿಯಲ್ಲಿ ಹೇಳಿದ್ದಾರೆ. ವಿಜಯೇಂದ್ರಗೆ ಢವ ಢವ ಶುರುವಾಗಿದೆ – ರಮೇಶ್ ಹಿರೇಜಂಬೂರು, ಹಿರಿಯ ಪತ್ರಕರ್ತರು.
ಬಿಜೆಪಿ ಪಾಳಯದಲ್ಲಿ ಕದನ ಜೋರಾಗಿಯೇ ನಡೆಯುತ್ತಿದೆ. ಬಿಜೆಪಿ ರಾಜ್ಯಾಧ್ಯಕ್ಷ ಹುದ್ದೆಯ ಗದ್ದುಗೆಗಾಗಿ ಒಂದು ಕಡೆ ಯಡಿಯೂರಪ್ಪ ಪುತ್ರ ಬಿ.ವೈ. ವಿಜಯೇಂದ್ರ ಹರಸಾಹಸ ನಡೆಸುತ್ತಿದ್ದರೆ, ಮತ್ತೊಂದು ಕಡೆ ವಿಜಯೇಂದ್ರನನ್ನು ಹೇಗಾದರೂ ಬಗ್ಗು ಬಡಿಯಲೇಬೇಕು ಎಂದು ಬಸನಗೌಡ ಪಾಟೀಲ ಯತ್ನಾಳ್ ಹಾಗೂ ರಮೇಶ್ ಜಾರಕಿಹೊಳಿ ಟೊಂಕ ಕಟ್ಟಿ ನಿಂತಿದ್ದಾರೆ! ಇದರಿಂದಾಗಿ ವಿಜಯೇಂದ್ರ ಪರದಾಡುವ ಸ್ಥಿತಿ ನಿರ್ಮಾಣವಾಗಿದೆ.
ನಿಜ, ಬಿಜೆಪಿಯ ದೆಹಲಿ ನಾಯಕರೇ ಬೆಂಗಳೂರಿಗೆ ಬಂದು ವಿಜಯೇಂದ್ರ ಅವರನ್ನು ಬದಲಿಸಲು ಕಸರತ್ತು ನಡೆಸುತ್ತಿದ್ದಾರೆ. ಈಗಾಗಲೇ ಬಿಜೆಪಿ ಆಂತರಿಕ ಚುನಾವಣೆ ಪ್ರಕ್ರಿಯೆ ಶುರುವಾಗಿದೆ. ಜಿಲ್ಲಾ ಮಟ್ಟದ ಪದಾಧಿಕಾರಿಗಳ ಆಯ್ಕೆ ಬಗ್ಗೆ ಆಂತರಿಕ ಚುನಾವಣೆ ಚರ್ಚೆ ನಡೆದಿದೆ. ಇದರ ಜೊತೆಗೆ ಬಿಜೆಪಿಯಲ್ಲಿನ ರಾಜ್ಯ ನಾಯಕರಲ್ಲಿ ನಾಯಕತ್ವದ ಕೊರತೆ ಇದೆ ಎಂಬುದನ್ನು ಸ್ವತಃ ಬಿಜೆಪಿ ರಾಜ್ಯ ಉಸ್ತುವಾರಿ ರಾಧಾ ಮೋಹನ್ ದಾಸ್ ಅಗರ್ ವಾಲ್ ಅವರು ಕೋರ್ ಕಮಿಟಿಯಲ್ಲಿ ಹೇಳಿದ್ದಾರೆ.
ವಿಜಯೇಂದ್ರ ರಾಜ್ಯಾಧ್ಯಕ್ಷ ಹುದ್ದೆ ಅಲಂಕರಿಸಿದಾಗಿಂದ ಪಕ್ಷ ಒಂದಿಲ್ಲೊಂದು ಸೋಲು ಕಾಣುತ್ತಲೇ ಇದೆ. ಹೀಗಾಗಿ ರಾಧಾ ಮೋಹನ್ ದಾಸ್ ಅಗರ್ ವಾಲ್ ಅವರ ಮಾತುಗಳಿಂದ ವಿಜಯೇಂದ್ರನಿಗೆ ಇರುಸುಮುರುಸಾಗಿದೆ. ಜೊತೆಗೆ ಬಸನಗೌಡ ಪಾಟೀಲ್ ಯತ್ನಾಳ್ ಹಾಗೂ ರಮೇಶ್ ಜಾರಕಿಹೊಳಿ ಇಬ್ಬರೂ ಸೇರಿ ವಿಜಯೇಂದ್ರ ಮೇಲೆ ಮುಗಿ ಬೀಳುತ್ತಿರುವ ಬಗ್ಗೆ ಸ್ವಲ್ಪ ಕೂಡ ಚರ್ಚೆ ಮಾಡುವ ಗೋಜಿಗೆ ರಾಧಾ ಮೋಹನ್ ಹೋಗಿಲ್ಲ! ಇದರಿಂದಾಗಿ ವಿಜಯೇಂದ್ರಗೆ ಢವ ಢವ ಶುರುವಾಗಿದೆ.
ಶ್ರೀರಾಮುಲುಗೆ ಪೇಚಾಟ!
ಬಿಜೆಪಿಯ ಕೋರ್ ಕಮಿಟಿಯಲ್ಲಿ ದಿ ಗ್ರೇಟ್ ಶ್ರೀರಾಮುಲು ಅವರಿಗೆ ಸ್ಥಾನ ನೀಡಲಾಗಿದೆ. ಆದರೆ ಆಟಕ್ಕುಂಟು ಲೆಕ್ಕಕ್ಕಿಲ್ಲ ಎನ್ನುವಂತಾಗಿದೆ. ಜೊತೆಗೆ “ಸೋಲುವ ಕುದುರೆ” ಎಂಬ ಹಣೆಪಟ್ಟಿ ಬೇರೆ. ಆದರೂ ಸಂಡೂರಿನಲ್ಲಿ ನಡೆದ ವಿಧಾನಸಭೆ ಉಪ ಚುನಾವಣೆ ಬಗ್ಗೆ ಕೋರ್ ಕಮಿಟಿ ಸಭೆಯಲ್ಲಿ ಚರ್ಚೆಯಾದಾಗ ಉಪ ಚುನಾವಣೆಯಲ್ಲಿ ಶ್ರೀರಾಮುಲು ಸರಿಯಾಗಿ ಕೆಲಸ ಮಾಡಲಿಲ್ಲ ಎಂದು ಸ್ವತಃ ರಾಧಾ ಮೋಹನ್ ದಾಸ್ ಅವರೇ ಆರೋಪಿಸಿದ್ದಾರೆ. ಪಾಪ ಶ್ರೀರಾಮುಲುಗೆ ಇದರಿಂದ ಮುಖಭಂಗವಾಗಿದೆ. ಇದರಿಂದ ಶ್ರೀರಾಮುಲುಗೆ ರಾಮ ರಾಮಾ ಬಿಜೆಪಿ ಸಹವಾಸ ಸಾಕಪ್ಪ ಎನ್ನುವಂತಾಗಿದೆ.
ಬಿಜೆಪಿಗೆ ಜನಾರ್ಧನ ರೆಡ್ಡಿ ಕಾಲಿಟ್ಟಾಗಿನಿಂದ ಶ್ರೀರಾಮುಲುಗೆ ಬಿಡಿಗಾಸಿನ ಕಿಮ್ಮತ್ತಿಲ್ಲವಾಗಿದೆ ಎಂಬುದನ್ನು ಸ್ವತಃ ಶ್ರೀರಾಮುಲು ಅವರೇ ತಮ್ಮ ಆಪ್ತರ ಬಳಿ ಹೇಳಿಕೊಂಡಿದ್ದಾರೆ. ಒಂದು ಕಾಲದ ಕುಚುಕು ಈಗ ದುಷ್ಮನ್ ಆಗಿದ್ದಾರೆ. ಅದ್ಯಾವ ಕಾರಣಕ್ಕೋ ಏನೋ ದೋಸ್ತಿಗಳಿಬ್ಬರೂ ಹಾವು ಮುಂಗುಸಿಯಂತಾಗಿದ್ದಾರೆ. ಗಾಲಿ ಜನಾರ್ಧನರೆಡ್ಡಿ ಕೈ ಆಡಿಸಿದ್ದಾರೆ ಎಂಬ ಕಾರಣಕ್ಕೆ ಅದ್ಯಾರೋ ಬಿಜೆಪಿ ಹೈಕಮಾಂಡ್ ನಾಯಕರಿಗೆ ಶ್ರೀರಾಮುಲು ವಿರುದ್ಧವೇ ದೂರು ನೀಡಿದ್ದಾರಂತೆ. ಹೀಗಂತ ಶ್ರೀರಾಮುಲು ಅವರೇ ಅಸಮಾಧಾನ ಹೊರ ಹಾಕಿದ್ದು, ಬಿಜೆಪಿ ತೊರೆಯುವ ಮಾತನಾಡಿದ್ದಾರೆ. ಜೊತೆಗೆ ಪಕ್ಷ ತೊರೆಯುವಾಗ ನಾನು ಹೇಳಿಯೇ ಹೊರಗೆ ಹೋಗ್ತೀನಿ ಎಂದಿದ್ದಾರೆ.
ಒಂದು ಕಾಲದಲ್ಲಿ ಎಸ್ಟಿ ಸಮುದಾಯದ ಟಾಪ್ ಲೀಡರ್ ಎಂದೇ ಗುರುತಿಸಿಕೊಂಡಿದ್ದ ಶ್ರೀರಾಮುಲು ಅವರನ್ನ ಈಗ ಪಕ್ಷದಲ್ಲೇ ಕೇಳೋರಿಲ್ಲದಂತಾಗಿದೆ. “ಶ್ರೀರಾಮುಲು ಮುಂದಿನ ಮುಖ್ಯಮಂತ್ರಿ” “ಶ್ರೀರಾಮುಲು ಅವರಿಗೆ ಡಿಸಿಎಂ ಸ್ಥಾನ ಕೊಡ್ತೀವಿ” ಎಂದೆಲ್ಲ ಬಣ್ಣ ಬಣ್ಣ ಕಾಗೆ ಹಾರಿಸಿದ್ದ “ವ್ಯಸನಿ” ಅಮಿತ್ ಶಾ, ಇದ್ದಕ್ಕಿದ್ದಂತೆ ಶ್ರೀರಾಮುಲು ಅವರನ್ನು ಸೋಲಿಸಲಿಕ್ಕೆ ಮಸಲತ್ತು ನಡೆಸಿದ್ದೂ ಹೊಸ ವಿಚಾರವೇನಲ್ಲ. ಆದರೆ ಈಗ ಶ್ರೀರಾಮುಲು ಕೇವಲ ಕೋರ್ ಕಮಿಟಿ ಸದಸ್ಯ ಎನ್ನುವುದು ಬಿಟ್ಟರೆ ಬಿಜೆಪಿಯಲ್ಲಿ ಸಾಮಾನ್ಯ ಕಾರ್ಯಕರ್ತನಿಗಿಂತಲೂ ಕೀಳಾಗಿ ಹೋಗಿದ್ದಾರೆ.
ಕೊನೆ ಮಾತು:
ಒಟ್ಟಿನಲ್ಲಿ ಈ ಇಬ್ಬರೂ ನಾಯಕರ ರಾಜಕೀಯ ಬದುಕಿಗೆ ಈಗ ಬಿಜೆಪಿ ಮುಳುವಾಗಲಿದೆ. ಪಕ್ಷದಿಂದಲೇ ಬೆಳೆದು ನಿಂತ ಈ ಇಬ್ಬರೂ ಈಗ ಪಕ್ಷದ ಕಾರಣಕ್ಕೇ ದಮನವಾಗುವ ಎಲ್ಲ ಲಕ್ಷಣಗಳು ಗೋಚರಿಸುತ್ತಿವೆ.
ರಮೇಶ್ ಹಿರೇಜಂಬೂರು
ಹಿರಿಯ ಪತ್ರಕರ್ತರು
ಇದನ್ನೂ ಓದಿ- ಜಾತಿ ಸಮ್ಮೇಳನದಲ್ಲಿ ನ್ಯಾಯಾಧೀಶರು?!!