ಕರ್ನಾಟಕ ಹೈಕೋರ್ಟ್ ನ ನ್ಯಾಯಾಧೀಶರುಗಳು ಯಾವ ಅಳುಕೂ ಇಲ್ಲದೆ ತಮ್ಮ ಜಾತಿ ಸಮ್ಮೇಳನದಲ್ಲಿ ಭಾಗವಹಿಸಿದ್ದು ಕರ್ನಾಟಕದ ಪರಂಪರೆ, ದೇಶದ ನ್ಯಾಯಾಂಗ ಪರಂಪರೆ ಮತ್ತು ನ್ಯಾಯಾಂಗದ ವಿಶ್ವಾಸಾರ್ಹತೆಯ ಮಟ್ಟಿಗೆ ಒಂದು ಕಪ್ಪು ಚುಕ್ಕೆ. ಇದೇ ಒಂದು ಮೇಲ್ಪಂಕ್ತಿಯಾಗಿ ಪ್ರತಿಯೊಬ್ಬ ನ್ಯಾಯಾಧೀಶನೂ ತನ್ನ ಜಾತಿ ಸಮ್ಮೇಳನಗಳಲ್ಲಿ ಭಾಗವಹಿಸುತ್ತಾ ತಮ್ಮ ಜಾತಿಯನ್ನು ಪ್ರಶಂಸಿಸುತ್ತಾ ಹೋದರೆ ಪರಿಸ್ಥಿತಿ ಏನಾದೀತು? – ಶ್ರೀನಿವಾಸ ಕಾರ್ಕಳ.
ಕರ್ನಾಟಕ ಹೈಕೋರ್ಟ್ ನ ನ್ಯಾಯಾಧೀಶರುಗಳಾದ ಜಸ್ಟಿಸ್ ಕೃಷ್ಣ ದೀಕ್ಷಿತ್ ಮತ್ತು ಜಸ್ಟಿಸ್ ಶ್ರೀಶಾನಂದ ಅವರು ಇತ್ತೀಚೆಗೆ ಬೆಂಗಳೂರಿನಲ್ಲಿ ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಸಂಘಟಿಸಿದ ಬ್ರಾಹ್ಮಣ ಸಮಾವೇಶದಲ್ಲಿ ಭಾಗವಹಿಸಿದ್ದಾರೆ ಎಂದು ʼದಿ ನ್ಯೂಸ್ ಮಿನಿಟ್ʼ ವರದಿ ಮಾಡಿದೆ.
ವರದಿಯ ಪ್ರಕಾರ ಜನವರಿ19 ರ ಭಾನುವಾರದಂದು ನಡೆದ ಈ ಕಾರ್ಯಕ್ರಮದ ಧರ್ಮಸಭೆಯ ಅಧ್ಯಕ್ಷ ಸ್ಥಾನದಿಂದ ಮಾತನಾಡಿದ ಜಸ್ಟಿಸ್ ಕೃಷ್ಣ ದೀಕ್ಷಿತ್ ಅವರು ಇತಿಹಾಸದ ಉದ್ದಕ್ಕೂ ಸಮಾಜದ ಒಳಿತಿಗಾಗಿ ಅನೇಕ ಬ್ರಾಹ್ಮಣರು ಕೊಡುಗೆ ನೀಡಿದ್ದಾರೆ, ದೇಶದ ಸಂವಿಧಾನ ರಚಿಸುವಲ್ಲಿಯೂ ಮಹತ್ವದ ಪಾತ್ರ ವಹಿಸಿದ್ದಾರೆ ಎಂದು ಹೇಳುತ್ತಾ ಬ್ರಾಹ್ಮಣರ ಗುಣವಿಶೇಷಗಳನ್ನು, ಸಮಾಜಕ್ಕೆ ಅವರ ಕೊಡುಗೆಯನ್ನು ಕೊಂಡಾಡಿದ್ದಾರೆ.
ಇದೇ ಸಭೆಯಲ್ಲಿ ಮಾತನಾಡಿದ ಜಸ್ಟಿಸ್ ವಿ ಶ್ರೀಶಾನಂದ ಅವರು ಇಂತಹ ಭವ್ಯ ಸಮಾರಂಭವನ್ನು ಆಯೋಜಿಸುವುದನ್ನು ಸಮರ್ಥಿಸುತ್ತಾ, ಎಲ್ಲರೂ ಒಂದೆಡೆ ಸೇರಿ ತಮ್ಮ ಸಮಸ್ಯೆಗಳನ್ನು ಚರ್ಚಿಸಲು ಇದನ್ನು ಮಾಡಲಾಗಿದೆ ಎಂದು ಹೇಳುತ್ತಾ, ಇಂತಹ ಕಾರ್ಯಕ್ರಮಗಳನ್ನು ಆಯೋಜಿಸುವುದರಿಂದ ತಪ್ಪೇನಿದೆ ಎಂದು ಪ್ರಶ್ನಿಸಿದರು. ಭಕ್ತಿ ಚಳುವಳಿಯನ್ನು ಉಲ್ಲೇಖಿಸುತ್ತಾ ಎಲ್ಲರೂ ತಮ್ಮ ಚಟುವಟಿಕೆಗಳನ್ನು ಭಕ್ತಿಯಿಂದ ಮಾಡಬೇಕು, ಮನೆಯಲ್ಲಿ ಭಕ್ತಿ ಇದ್ದರೆ ಮನೆಯು ಮಂತ್ರಾಲಯವಾಗುತ್ತದೆ ದೇವಾಲಯವಾಗುತ್ತದೆ ಎಂದೂ ಅವರು ಹೇಳಿದ್ದಾರೆ.
ಸಾರ್ವಜನಿಕ ಆಕ್ರೋಶ
ಹೈಕೋರ್ಟ್ ಜಡ್ಜ್ ಗಳು ಜಾತಿ ಸಮ್ಮೇಳನದಲ್ಲಿ ಭಾಗವಹಿಸಿರುವುದು ಸಹಜವಾಗಿಯೇ ಸಾರ್ವಜನಿಕ ವಲಯದಲ್ಲಿ ಅನೇಕರ ಹುಬ್ಬೇರಿಸಿತು ಮತ್ತು ಬಿಸಿ ಬಿಸಿ ಚರ್ಚೆಗೆ ದಾರಿಮಾಡಿಕೊಟ್ಟಿತು.
ಇದಕ್ಕೆ ಒಂದು ಕಾರಣವೂ ಇದೆ. ನಿಮ್ಮಲ್ಲಿ ದೇವರು, ಧರ್ಮದಲ್ಲಿ ನಂಬಿಕೆ ಇರುವುದು, ನೀವು ಬಹಿರಂಗವಾಗಿಯೇ ಪೂಜೆ ಪುನಸ್ಕಾರಗಳನ್ನು ಮಾಡುವುದರಲ್ಲಿ ತಪ್ಪೇನೂ ಇರುವುದಿಲ್ಲ. ಅದು ನಿಮ್ಮ ಸಾಂವಿಧಾನಿಕ ಹಕ್ಕು ಕೂಡಾ. ಆದರೆ ನೀವು ಯಾವ ಸ್ಥಾನದಲ್ಲಿದ್ದೀರಿ ಎನ್ನುವುದು ಇಲ್ಲಿ ಮುಖ್ಯವಾಗುತ್ತದೆ. ನೀವು ಅಧಿಕಾರ ಸ್ಥಾನದಲ್ಲಿದ್ದು ನಿಮ್ಮ ಪೂರ್ವಗ್ರಹಗಳು ನಿಮ್ಮ ಕೆಲಸದ ಮೇಲೆ ಪ್ರಭಾವ ಬೀರದೆಯೂ ಇರಬಹುದು, ಆದರೆ ಹಾಗೆ ಪ್ರಭಾವ ಬೀರುತ್ತಿಲ್ಲ ಎಂದು ಜನರಲ್ಲಿ ವಿಶ್ವಾಸ ಮೂಡುವುದೂ ಸಹ ಮುಖ್ಯವಾಗುತ್ತದೆ. ನ್ಯಾಯಾಧೀಶರುಗಳೂ ಕೂಡಾ ನಮ್ಮ ಸಮಾಜದಿಂದಲೇ ಹೋದವರು. ಹಾಗಾಗಿ ಅವರಲ್ಲೂ ಜನಸಾಮಾನ್ಯರಲ್ಲಿ ಇರುವಂಥದ್ದೇ ನಂಬಿಕೆಗಳು, ಭಾವನೆಗಳು ಇರಲೂಬಹುದು. ಆದರೆ ಅವು ಯಾವತ್ತೂ ಖಾಸಗಿಯಾಗಿರಬೇಕು ಎಂಬ ಆಶಯದ ಹಿನ್ನೆಲೆ ಇದುವೇ.
ಹಿಂದೆಯೂ ಹೆಚ್ಚಿನ ನ್ಯಾಯಾಧೀಶರುಗಳು ಧಾರ್ಮಿಕರಾಗಿಯೇ ಇದ್ದರು. ಆದರೆ ನ್ಯಾಯದಾನದ ಅಧಿಕಾರ ಸ್ಥಾನದಲ್ಲಿರುವಾಗ ಅವರು ತಮ್ಮ ಧರ್ಮ ಮತ್ತು ನಂಬಿಕೆಗಳನ್ನು ಬಹಿರಂಗವಾಗಿ ಪ್ರದರ್ಶಿಸುತ್ತಿರಲಿಲ್ಲ. ಅದಕ್ಕೆ ಆಗ ಸರಕಾರಿ ಮಟ್ಟದಲ್ಲಿ ಪೂರಕ ವಾತಾವರಣ ಇಲ್ಲದಿದ್ದಿರುವುದೂ ಕಾರಣವಾಗಿರಬಹುದು.
ಆದರೆ ಇತ್ತೀಚಿನ ವರ್ಷಗಳಲ್ಲಿ ಪ್ರಭುತ್ವವೇ ಬಹಿರಂಗ ಧಾರ್ಮಿಕ ಆಚರಣೆಗಳನ್ನು ಪ್ರೋತ್ಸಾಹಿಸುತ್ತ ಇರುವುದರಿಂದಲೋ ಏನೋ, ದೇಶದ ಸಾಂವಿಧಾನಿಕ ಹುದ್ದೆಗಳಲ್ಲಿ ಇರುವವರೂ ಬಹಿರಂಗವಾಗಿ ತಮ್ಮ ಧಾರ್ಮಿಕ ಗುರುತುಗಳನ್ನು ಮತ್ತು ನಿಷ್ಠೆಗಳನ್ನು ಪ್ರದರ್ಶಿಸ ತೊಡಗಿದ್ದಾರೆ. ಕೆಲವು ನ್ಯಾಯಾಧೀಶರು ಸೇವೆಯಿಂದ ನಿವೃತ್ತರಾದ ಬಳಿಕ ರಾಜಕೀಯ ಪಕ್ಷವನ್ನು ಸೇರಿದರೆ ಇನ್ನು ಕೆಲವರು ಸೇವೆಯಿಂದ ನಿವೃತ್ತಿ ಪಡೆದು ಬಲಪಂಥೀಯ ರಾಜಕೀಯ ಪಕ್ಷವನ್ನು ಸೇರಿ ಚುನಾವಣೆ ಸ್ಪರ್ಧಿಸಿ ಸಂಸದರೂ ಆದುದಿದೆ. ಒಬ್ಬ ನಿವೃತ್ತ ನ್ಯಾಯಮೂರ್ತಿ ಇತ್ತೀಚೆಗೆ ಬಲಪಂಥೀಯ ರಾಜಕೀಯ ಪಕ್ಷದ ಸಂಯೋಜಕರಾಗಿ ನೇಮಕಗೊಂಡಿದ್ದಾರೆ. ಈ ಹಿಂದಿನ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಚಂದ್ರಚೂಡ ಅವರು ಸೇವೆಯಲ್ಲಿದ್ದಾಗಲೇ ಕಾವಿ ಬಟ್ಟೆ ಉಟ್ಟು, ಗುಡಿ ಸುತ್ತಿದರು, ಗುಡಿಯ ಬಾವುಟವನ್ನು ಹೊಗಳಿದರು, ಕೊನೆಗೆ ಪ್ರಧಾನಿಗಳನ್ನು ಮನೆಗೆ ಆಹ್ವಾನಿಸಿ ಗಣೇಶ ಪೂಜೆಯನ್ನು ನಡೆಸಿದ್ದು ಮಾತ್ರವಲ್ಲ ಕೊನೆಗೆ ಸಿಜೆಐ ಗೆ ಸಲ್ಲದ ತಮ್ಮ ನಡೆವಳಿಕೆಯನ್ನು ಸಮರ್ಥಿಸಿಕೊಂಡರು ಕೂಡಾ!
ʼಇದೇಕೋ ಅತಿಯಾಯಿತುʼ ಅನಿಸಿದ್ದು
ಇಲ್ಲಿಯವರೆಗೆ ಆಕ್ಷೇಪಾರ್ಹವೇ ಆದರೂ ಎಲ್ಲವೂ ಒಂದು ಮಿತಿಯಲ್ಲಿಯೇ ಇದ್ದವು. ಆದರೆ ಇದೇಕೋ ಅತಿಯಾಯಿತು ಎಂದು ಅನಿಸಿದ್ದು ಅಲಹಾಬಾದ್ ಹೈಕೋರ್ಟ್ ನ ಜಸ್ಟಿಸ್ ಶೇಖರ್ ಕುಮಾರ್ ಯಾದವ್ ಸೇವೆಯಲ್ಲಿದ್ದಾಗಲೇ ಬಲಪಂಥೀಯ ಧಾರ್ಮಿಕ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದು ಮಾತ್ರವಲ್ಲ, ಅಲ್ಲಿ ಮುಸ್ಲಿಮರನ್ನು ಅವಾಚ್ಯ ಪದಗಳಿಂದ ಅವಹೇಳನ ಮಾಡಿದಾಗ. ಶೇಖರ್ ಯಾದವ್ ವಿರುದ್ಧ ಸಾರ್ವಜನಿಕ ಆಕ್ರೋಶ ಉಂಟಾಗಿ, ಸಂಸತ್ ನಲ್ಲಿ ಮಹಾಭಿಯೋಗ ನಿರ್ಣಯ ಮಂಡನೆಯಾಗಿ, ಕೊನೆಗೆ ಶೇಖರ್ ಯಾದವ್ ಅವರನ್ನು ಸುಪ್ರೀಂ ಕೋರ್ಟ್ ಕೊಲೀಜಿಯಂ ಕರೆಸಿ ಪ್ರಶ್ನಿಸಿದ ಘಟನೆಯೂ ನಡೆಯಿತು. ಇನ್ನಾದರೂ ಅವರು ತಮ್ಮ ಹಾದಿ ಸರಿಪಡಿಸಿಕೊಳ್ಳುತ್ತಾರೆ ಎಂದು ಕೊಳ್ಳುವಾಗಲೇ ʼನನ್ನ ನಿಲುವಿಗೆ ನಾನು ಬದ್ಧ, ನಾನೇನೂ ಮಾಡಬಾರದ ತಪ್ಪು ಮಾಡಿಲ್ಲʼ ಎಂದು ಮತ್ತೆ ಹೇಳಿಕೆ ನೀಡಿ ಶೇಖರ್ ಯಾದವ್ ಸುಪ್ರೀಂ ಕೋರ್ಟ್ ಗೇ ಸವಾಲು ಹಾಕಿದ್ದಾರೆ!
ಇತ್ತೀಚೆಗೆ ದೇಶದ ಶಾಸಕಾಂಗ ಮತ್ತು ಕಾರ್ಯಾಂಗದ ಮೇಲೆ ಜನರು ಬಹುತೇಕ ವಿಶ್ವಾಸ ಕಳೆದುಕೊಂಡಿದ್ದಾರೆ. ನಾಲ್ಕನೆಯ ಅಂಗ ಎನಿಸಿಕೊಂಡಿರುವ ಮಾಧ್ಯಮಗಳು ಆಳುವವರ ಭಜನೆ ಮಾಡುತ್ತಾ ಅವೂ ತಮ್ಮ ವಿಶ್ವಾಸಾರ್ಹತೆಯನ್ನು ಕಳೆದುಕೊಂಡಿವೆ. ಇಂತಹ ಹೊತ್ತಿನಲ್ಲಿ ಜನರಲ್ಲಿ ಇರುವ ಕೊನೆಯ ಭರವಸೆ ಎಂದರೆ ದೇಶದ ನ್ಯಾಯಾಂಗ. ಅವೂ ತಮ್ಮ ಹೊಣೆಗಾರಿಕೆ ಮರೆತರೆ, ಧರೆಯೇ ಹೊತ್ತಿ ಉರಿದರೆ ದೇಶದ ಪ್ರಜೆಗಳು ಏನು ಮಾಡಬೇಕು?
ನ್ಯಾಯಾಂಗದ ವಿಶ್ವಾಸಾರ್ಹತೆಗೆ ಧಕ್ಕೆಯಾಗುವುದಿಲ್ಲವೇ?
ಮತ್ತೆ ಮೊದಲಿನ ವಿಷಯಕ್ಕೆ ಬಂದರೆ, ಬ್ರಾಹ್ಮಣ ಸಮ್ಮೇಳನದಲ್ಲಿ ಭಾಗವಹಿಸಿದ ಕರ್ನಾಟಕ ಹೈಕೋರ್ಟ್ ನ ಇಬ್ಬರು ನ್ಯಾಯಾಧೀಶರುಗಳು ಅಂಥ ಆಕ್ಷೇಪಾರ್ಹವಾದುದೇನನ್ನೂ ಮಾತನಾಡಿಲ್ಲ. ಜಾತಿ ಸಮ್ಮೇಳನದಲ್ಲಿ ಭಾಗವಹಿಸಿಯೂ ಅವರು ಜಾತಿವಾದಿ ಆಗಿಲ್ಲದಿರಬಹುದು, ನ್ಯಾಯದಾನ ಮಾಡುವಾಗ ಅವರ ಜಾತಿ ನಿಷ್ಠೆ ಪ್ರಭಾವ ಬೀರದಿರಲೂ ಬಹುದು. ಆದರೂ ಅವರು ನಿಷ್ಪಕ್ಷಪಾತಿಗಳಂತೆ ಜನರಿಗೆ ಕಾಣುವುದೂ ಮುಖ್ಯವಲ್ಲವೇ? ಪ್ರಕರಣವೊಂದರಲ್ಲಿ ಬ್ರಾಹ್ಮಣನೊಬ್ಬ ಆರೋಪಿಯಾಗಿದ್ದು, ಆತನ ಪರ ತೀರ್ಪು ನೀಡುವುದೂ ಸರಿಯೇ ಆಗಿದ್ದರೂ, ಆತನ ಪರ ತೀರ್ಪು ನೀಡಿದಾಗ ನ್ಯಾಯಾಧೀಶರು ಜಾತಿ ನೆಲೆಯಲ್ಲಿ ಪ್ರಭಾವಕ್ಕೆ ಒಳಗಾಗಿ ತೀರ್ಪು ನೀಡಿದ್ದಾರೆ ಎಂಬ ಭಾವನೆ ಮೂಡಬಾರದಲ್ಲವೇ? ನ್ಯಾಯಾಧೀಶನೊಬ್ಬ ಬ್ರಾಹ್ಮಣನಾಗಿದ್ದಾನೆ, ಆತ ಬ್ರಾಹ್ಮಣ ಪರ ಇರುವವನು ಎಂಬ ಭಾವನೆ ಜನರಲ್ಲಿ ಬಂದರೆ ಬ್ರಾಹ್ಮಣೇತರ ದೂರುದಾರರ ಮನಸಿನಲ್ಲಿ ಯಾವ ರೀತಿಯ ಭಾವನೆ ಮೂಡಬಹುದು?
ಆದ್ದರಿಂದಲೇ ಕರ್ನಾಟಕ ಹೈಕೋರ್ಟ್ ನ ನ್ಯಾಯಾಧೀಶರುಗಳು ಯಾವ ಅಳುಕೂ ಇಲ್ಲದೆ ತಮ್ಮ ಜಾತಿ ಸಮ್ಮೇಳನದಲ್ಲಿ ಭಾಗವಹಿಸಿದ್ದು ಕರ್ನಾಟಕದ ಪರಂಪರೆ, ದೇಶದ ನ್ಯಾಯಾಂಗ ಪರಂಪರೆ ಮತ್ತು ನ್ಯಾಯಾಂಗದ ವಿಶ್ವಾಸಾರ್ಹತೆಯ ಮಟ್ಟಿಗೆ ಒಂದು ಕಪ್ಪು ಚುಕ್ಕೆ. ಇದೇ ಒಂದು ಮೇಲ್ಪಂಕ್ತಿಯಾಗಿ ಪ್ರತಿಯೊಬ್ಬ ನ್ಯಾಯಾಧೀಶನೂ ತನ್ನ ಜಾತಿ ಸಮ್ಮೇಳನಗಳಲ್ಲಿ ಭಾಗವಹಿಸುತ್ತಾ ತಮ್ಮ ಜಾತಿಯನ್ನು ಪ್ರಶಂಸಿಸುತ್ತಾ ಹೋದರೆ ಪರಿಸ್ಥಿತಿ ಏನಾದೀತು? ನಮ್ಮ ಸಂವಿಧಾನ ತನ್ನ ಪ್ರತಿಯೊಂದು ಹಂತದಲ್ಲೂ ಸೆಕ್ಯುಲರ್ ತತ್ತ್ವವನ್ನು ಪ್ರತಿಪಾದಿಸುತ್ತಾ ಹೋಗುತ್ತದೆ. ಸೆಕ್ಯುಲರ್ ಆಶಯವನ್ನು ಅಳವಡಿಸಿಕೊಂಡು ಮಾದರಿಯಾಗಿ ನಡೆದುಕೊಳ್ಳುತ್ತಾ ಹೋಗಬೇಕಾದ ದೇಶದ ಕೋರ್ಟ್‌ಗಳ ನ್ಯಾಯಾಧೀಶರೇ ಜಾತಿವಾದಿಗಳಾಗುತ್ತಾ ಸಂವಿಧಾನದ ಆಶಯಕ್ಕೆ ವಿರುದ್ಧವಾಗಿ ನಡೆದುಕೊಳ್ಳುತ್ತಾ ಹೋದರೆ ಸಂವಿಧಾನದ ಆಶಯಗಳ ಕತೆ ಏನು? ಹಾಗಾಗಿ ದೇಶದ ಸುಪ್ರೀಂ ಕೋರ್ಟ್ ಇದನ್ನು ಗಂಭೀರವಾಗಿ ತೆಗೆದುಕೊಂಡು ಪರಿಸ್ಥಿತಿ ಕೈಮೀರುವ ಮುನ್ನ ಈ ಕೆಟ್ಟ ಪರಂಪರೆಗೆ ಕಡಿವಾಣ ಹಾಕಬೇಕಿದೆ.
ಶ್ರೀನಿವಾಸ ಕಾರ್ಕಳ
ಚಿಂತಕರು
ಇದನ್ನೂ ಓದಿ- http://ವಾರಾಂತ್ಯ ಬಂತೆಂದರೆ…https://kannadaplanet.com/when-the-weekend-comes/