ಬೆಳಗಾವಿ: ಸಂವಿಧಾನವನ್ನು ಬಿಜೆಪಿ ಅನುಮಾನಿಸುತ್ತಲೇ ಬಂದಿದೆ. ಪ್ರಧಾನಿ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ ಸಂವಿಧಾನ ವಿರೋಧಿಯಾಗಿದ್ದಾರೆ. ನಾವೆಲ್ಲರೂ ಸೇರಿ ಸಂವಿಧಾನದ ಉಳಿವಿಗಾಗಿ ಹೋರಾಡಬೇಕು ಎಂದು ಕಾಂಗ್ರೆಸ್ ವರಿಷ್ಠೆ, ಸಂಸದೆ ಪ್ರಿಯಾಂಕಾ ಗಾಂಧಿ ಕರೆ ನೀಡಿದ್ದಾರೆ.
ಬೆಳಗಾವಿಯಲ್ಲಿ ಸುವರ್ಣಸೌಧದ ಆವರಣದಲ್ಲಿ ಮಹಾತ್ಮಾ ಗಾಂಧಿ ಅವರ ಪ್ರತಿಮೆ ಅನಾವರಣ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಅಂಬೇಡ್ಕರ್ ಅವರು ಮಹಿಳೆಯರ ಸಮಾನತೆ ಕುರಿತು ಮಾತಾಡಿದರು. ಆದರೆ RSS ಅಂಬೇಡ್ಕರ್ ವಿರುದ್ದವೇ ಹೋರಾಟ ನಡೆಸಿತು. ಸಂವಿಧಾನ ಬದಲಿಸಬೇಕು ಎಂದು ಬಿಜೆಪಿಯ ಒಬ್ಬ ಸಂಸದ ಹೇಳಿದ್ದರು. ಈ ಮೂಲಕ ಬಿಜೆಪಿ ಸ್ವಾತಂತ್ರ್ಯ ಹೋರಾಟಗಾರರನ್ನು ಅಪಮಾನ ಮಾಡಿದೆ. ಬಿಜೆಪಿಯವರ ಪ್ರತಿ ಆಲೋಚನೆಯೂ ಸಂವಿಧಾನ ವಿರೋಧಿಯಾಗಿರುತ್ತದೆ. ಬಿಜೆಪಿಯವರ ಪ್ರತಿ ಹೆಜ್ಜೆಯೂ ದಲಿತ ವಿರೋಧಿಯಾಗಿದೆ. RSS ಸಂಸ್ಥಾಪಕರೇ ಸಂವಿಧಾನ, ರಾಷ್ಟ್ರಧ್ವಜದ ವಿರೋಧಿಗಳು. ಇವರು ಸಾಮಾಜಿಕ ನ್ಯಾಯದ ವಿರುದ್ದ ಹೇಳಿಕೆ ನೀಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ದೇಶದಲ್ಲಿ ವ್ಯವಸ್ಥಿತ ಭ್ರಷ್ಟಾಚಾರವನ್ನು ಬಿಜೆಪಿ ಸರ್ಕಾರ ಆರಂಭಿಸಿದೆ. ಬಿಜೆಪಿ ಸರ್ಕಾರ ಇರುವ ರಾಜ್ಯಗಳಲ್ಲಿ ಮಹಿಳೆಯರ ಮೇಲೆ ಹಲ್ಲೆ ನಡೆಯುತ್ತಿದೆ. ಕಾರ್ಮಿಕ ಕಾಯ್ದೆ ಬದಲಿಸಿ ಕಾರ್ಮಿಕರನ್ನು ಶಕ್ತಿಹೀನಗೊಳಿಸಿದ್ದಾರೆ. ಇದೀಗ ರೈತ ವಿರೋಧಿ ಕಾನೂನು ತರಲು ಪ್ರಯತ್ನ ನಡೆಸಿದ್ದಾರೆ ಎಂದು ವಾಗ್ದಾಳಿ ನಡೆಸಿದರು. ಭಾರತ ಹೆಮ್ಮೆಯ ಭೂಮಿ ಬೆಳಗಾವಿ, ಪುಣ್ಯಭೂಮಿ ಬೆಳಗಾವಿ. ತಿಲಕ್ ಅವರು ತಮ್ಮ ಚಳವಳಿಯನ್ನು ಬೆಳಗಾವಿಯಿಂದ ಆರಂಭಿಸಿದ್ದರು. ಗಾಂಧೀಜಿ ಅವರು ಬೆಳಗಾವಿ ಕಾಂಗ್ರೆಸ್ ಸಮಾವೇಶದ ಅಧ್ಯಕ್ಷರಾಗಿದ್ದರು. ಎಂದು ಪ್ರಿಯಾಂಕಾ ಗಾಂಧಿ ಬೆಳಗಾವಿ ಕುರಿತು ಮೆಚ್ಚುಗೆಯ ಮಾತುಗಳನ್ನಾಡಿದರು.

                                    