ಬಿಜೆಪಿ, ಆರ್‌ ಎಸ್‌ ಎಸ್‌ ನವರು ಗಾಂಧಿ ಅಂಬೇಡ್ಕರ್‌, ಸಂವಿಧಾನ ವಿರೋಧಿಗಳು;ಖರ್ಗೆ ವಾಗ್ದಾಳಿ

Most read

ಬೆಳಗಾವಿ: ಗಾಂಧೀಜಿ ನಮಗೆ ಸ್ವಾತಂತ್ರ್ಯ ತಂದುಕೊಟ್ಟರು. ಸ್ವಾತಂತ್ರ್ಯದ ನಂತರದಲ್ಲಿ ಜವಾಹರಲಾಲ್ ನೆಹರು ಮತ್ತು ಅಂಬೇಡ್ಕರ್ ಸಂವಿಧಾನ ನೀಡಿದರು. ಸಂವಿಧಾನ ರಕ್ಷಿಸುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ.  ಸಂವಿಧಾನ, ಪ್ರಜಾತಂತ್ರ ವ್ಯವಸ್ಥೆ ಇರದಿದ್ದರೆ ದೇಶದಲ್ಲಿ ಅರಾಜಕತೆ ಸೃಷ್ಟಿಯಾಗುತ್ತಿತ್ತು ಎಂದು ರಾಜ್ಯಸಭೆ ವಿರೋಧ ಪಕ್ಷದ ನಾಯಕ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ.

1924ರಲ್ಲಿ ಗಾಂಧೀಜಿ ಅಧ್ಯಕ್ಷತೆಯಲ್ಲಿ ನಡೆದ ಕಾಂಗ್ರೆಸ್ ಅಧಿವೇಶನದ ಶತಮಾನೋತ್ಸವ ನೆನಪಿಗಾಗಿ, ಇಲ್ಲಿನ ಸುವರ್ಣ ವಿಧಾನಸೌಧ ಆವರಣದಲ್ಲಿ ಪ್ರತಿಷ್ಠಾಪಿಸಲಾಗಿರುವ ಮಹಾತ್ಮಾ ಗಾಂಧಿ ಪ್ರತಿಮೆಯನ್ನು ಚರಕ ತಿರುಗಿಸುವ ಮೂಲಕ ಅನಾವರಣಗೊಳಿಸಿ ಅವರು ಮಾತನಾಡಿದರು.

ಗಾಂಧೀಜಿ ತಮ್ಮ ಬದುಕಿನಲ್ಲಿ ಕಾಂಗ್ರೆಸ್‌ ಅಧಿವೇಶನದ ಅಧ್ಯಕ್ಷತೆ ವಹಿಸಿದ್ದು ಬೆಳಗಾವಿಯಲ್ಲಿ ಮಾತ್ರ. ಈಗ ಸುವರ್ಣಸೌಧದ ಆವರಣದಲ್ಲಿ ಗಾಂಧೀಜಿ ಪ್ರತಿಮೆ ಪ್ರತಿಷ್ಠಾಪನೆ ಮೂಲಕ ಬೆಳಗಾವಿಗೆ ಮಾತ್ರವಲ್ಲ, ಇಡೀ ರಾಜ್ಯಕ್ಕೆ ಗೌರವ ತರುವ ಕೆಲಸ ಮಾಡಲಾಗಿದೆ. ದೇಶಕ್ಕೆ ಗಾಂಧಿ ಮಾಡಿರುವ ಸಾಧನೆಗಳು, ತ್ಯಾಗಗಳು ಮತ್ತು ಅವರ ಕೊಡುಗೆಗಳ ಬಗ್ಗೆ ಮಾತನಾಡಲು ನಾವು ಹೆಚ್ಚು ಸಮಯ ನೀಡಬೇಕಿದೆ. ಇಂದು ಜಗತ್ತಿನಾದ್ಯಂತ ನಾಯಕರು ಮಹಾತ್ಮ ಗಾಂಧಿ ಅವರ ಕೊಡುಗೆಗಳನ್ನು ಸ್ಮರಿಸುತ್ತಿದ್ದಾರೆ. ನಮ್ಮ ಸಂವಿಧಾನ ಮತ್ತು ಅದರ ಜವಾಬ್ದಾರಿಗಳನ್ನು ಪ್ರತಿಯೊಬ್ಬರೂ ರಕ್ಷಿಸುವ ಕೆಲಸವಾಗಬೇಕಿದೆ ಎಂದು ಹೇಳಿದರು.

ಬೆಳಗಾವಿಯ ಅಧಿವೇಶನದಲ್ಲಿ ಗಾಂಧಿ ಅವರು, ಮಹಿಳಾ ಸಬಲೀಕರಣ, ಅಸ್ಪೃಶ್ಯತೆ ನಿವಾರಣೆಯಂಥ ಸಂದೇಶಗಳನ್ನು ನೀಡಿದ್ದರು. ಸ್ವಾತಂತ್ರ್ಯ ಚಳುವಳಿಗೆ ಹೊಸ ದಿಕ್ಕು ತೋರಿದ್ದರು. ಅವರು ಅಧಿವೇಶನದ ಅಧ್ಯಕ್ಷತೆ ವಹಿಸಿದ್ದ ಸ್ಥಳದಲ್ಲೇ ಇತ್ತೀಚೆಗೆ ಕಾಂಗ್ರೆಸ್ ಪಕ್ಷದ ಕಾರ್ಯಕಾರಿ ಸಮಿತಿಯ ವಿಸ್ತೃತ ಸಭೆ ನಡೆಸಿದ್ದೆವು. ಈಗ ಬೆಳಗಾವಿಯಲ್ಲೇ ಪ್ರತಿಮೆ ಅನಾವರಣಗೊಳಿಸುತ್ತಿರುವುದು ಖುಷಿ ತಂದಿದೆ ಎಂದು ಹೇಳಿದರು.

ಉತ್ತರ ಪ್ರದೇಶದ ನೋಯ್ಡಾದಲ್ಲಿ ಪ್ರತಿಮೆ ಪ್ರತಿಷ್ಠಾಪನೆ ಬಯಸುತ್ತಿರುವ ಸಂಸದೆ ಪ್ರಿಯಾಂಕಾ ಗಾಂಧಿ ವಾದ್ರಾ ಅವರು,  ಇಬ್ಬರು ಮಕ್ಕಳೊಂದಿಗೆ ಮಹಾತ್ಮ ಗಾಂಧಿ ನಿಂತಿರುವ ಚಿತ್ರವನ್ನು ಇಷ್ಟಪಟ್ಟಿದ್ದಾರೆ. ಅಂತಹುದ್ದೇ ಪ್ರತಿಮೆಯನ್ನು ಕಲಬುರಗಿಯಲ್ಲಿ ಸಹ ಪ್ರತಿಷ್ಠಾಪಿಸಲಾಗುವುದು ಎಂದರು.

ಬಿಜೆಪಿ ಮತ್ತು ಆರ್‌ ಎಸ್‌ ಎಸ್‌ ನವರು ದಲಿತ ವಿರೋಧಿಗಳು. ಬಡವರು, ಕಾರ್ಮಿಕರ ಚಿಂತೆಯನ್ನು ಬಿಜೆಪಿ ಮಾಡುವುದಿಲ್ಲ. ರೈತರಿಗೆ ಸಹಾಯ ಮಾಡುವ ಬಗ್ಗೆ ಪ್ರಧಾನಿ ಮೋದಿ ಅವರಿಗೆ ಆಸಕ್ತಿ ಇಲ್ಲ. ರೈತರ ಬಗ್ಗೆ ಮೋದಿ ಎಂದೂ ಮಾತನಾಡುವುದಿಲ್ಲ ಎಂದು ಪ್ರಧಾನಿ ಮೋದಿ ಮತ್ತು ಅಮಿತ್‌ ಶಾ ವಿರುದ್ಧ ವಾಗ್ದಾಳಿ ನಡೆಸಿದರು. ಕಿತ್ತೂರು ರಾಣಿ ಚೆನ್ನಮ್ಮ ಅವರನ್ನು ನೆನೆದ ಮಲ್ಲಿಕಾರ್ಜುನ ಖರ್ಗೆ ದೇಶದ ಸ್ವಾತಂತ್ರ್ಯ, ಜನರ ರಕ್ಷಣೆಗಾಗಿ ಚೆನ್ನಮ್ಮ ಹೋರಾಡಿದ್ದಾರೆ. ಇದೇ ರೀತಿ ಬಿಜೆಪಿ, RSS ವಿರುದ್ದ ಪ್ರಿಯಾಂಕಾ ಹೋರಾಡುತ್ತಿದ್ದಾರೆ ಎಂದರು.

ಸಮಾವೇಶದ ವ್ಯವಸ್ಥೆ ಮಾಡಿರುವ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್‌ ಅವರನ್ನು ಖರ್ಗೆ ಹೊಗಳಿದರು.  ಮುಖ್ಯಮಂತ್ರಿ ಸಿದ್ದರಾಮಯ್ಯ ಸರ್ಕಾರಕ್ಕೆ ಮೆಚ್ಚುಗೆಯ ಮಾತುಗಳನ್ನಾಡಿದರು.

ಗೊಬ್ಬರದ ಬೆಲೆ ಕಡಿಮೆ ಮಾಡಲು ಕೇಂದ್ರ ಯೋಚಿಸುತ್ತಿಲ್ಲ. ಕಾಂಗ್ರೆಸ್‌ ಎಂದಿಗೂ ಬಡವರ ಪರ ಇರುತ್ತದೆ. ಸಂಸತ್‌ ಭವನದ ಎದುರು ಡಾ. ಅಂಬೇಡ್ಕರ್‌ ಪ್ರತಿಮೆ ಇತ್ತು.  ಮೋದಿ ಸರ್ಕಾರ ಬಂದ ಮೇಲೆ ಅಂಬೇಡ್ಕರ್‌ ಪ್ರತಿಮೆಯನ್ನು ಮೂಲೆಗೆ ಸರಿಸಲಾಗಿದೆ. ಸಂವಿಧಾನ ಸುಟ್ಟವರು ಇದೇ ಬಿಜೆಪಿಯವರು. ಅಂಬೇಡ್ಕರ್‌ ಕುರಿತಾಗಿ ನಮ್ಮಲ್ಲೇ ಜಗಳ ಹಚ್ಚುತ್ತಿದ್ದಾರೆ. ನಮಗೆ ಜಗಳ ಹಚ್ಚಿ ಉಳಿಯುತ್ತೇವೆ ಎಂದರೆ ಅದು ಸಾಧ್ಯವಿಲ್ಲ. ಬಾಬಾ ಸಾಹೇಬರನ್ನು ಗೌರವಿಸಿದ್ದು ಕಾಂಗ್ರೆಸ್‌ ಪಕ್ಷ. ಬಿಜೆಪಿಯವರು  ಬಾಬಾ ಸಾಹೇಬರ ಸಂವಿಧಾನ ಒಪ್ಪಲ್ಲ, ರಾಷ್ಟ್ರಧ್ವಜ ಒಪ್ಪಲ್ಲ ಮಲ್ಲಿಕಾರ್ಜುನ ಖರ್ಗೆ ವಾಗ್ದಾಳಿ ನಡೆಸಿದರು.

ಎಐಸಿಸಿ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ, ಪ್ರಧಾನ ಕಾರ್ಯದರ್ಶಿ(ಸಂಘಟನೆ) ಕೆ.ಸಿ.ವೇಣುಗೋಪಾಲ, ಕಾಂಗ್ರೆಸ್‌ ರಾಜ್ಯ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಗೃಹ ಸಚಿವ ಡಾ. ಜಿ.ಪರಮೇಶ್ವರ್, ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಉಪಸ್ಥಿತರಿದ್ದರು. ಅಧಿವೇಶನದ ಶತಮಾನೋತ್ಸವ ಸಮಿತಿ ಅಧ್ಯಕ್ಷ ಎಚ್.ಕೆ.ಪಾಟೀಲ ಸ್ವಾಗತಿಸಿದರು. ವಿಧಾನಸಭೆ ಅಧ್ಯಕ್ಷ ಯು.ಟಿ.ಖಾದರ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ವಂದಿಸಿದರು.

More articles

Latest article