ಯುದ್ಧ ಮನುಷ್ಯ ಹುಟ್ಟು ಹಾಕಿದ ಪಿತೂರಿ, ಕಾಡ್ಗಿಚ್ಚು ದಿಕ್ಕೆಟ್ಟ ಗಾಳಿಯ ಕುಮ್ಮಕ್ಕು. ಎರಡರಲ್ಲೂ ನೊಂದವರು ಒಬ್ಬರ ಬಗ್ಗೆ ಒಬ್ಬರು ಕನಿಕರ ಇಟ್ಟುಕೊಳ್ಳುವುದು ಹವಾಮಾನ ಬದಲಾವಣೆಯ ಈ ದಿನಗಳಲ್ಲಿ ಬಹಳ ಅಗತ್ಯವಿದೆ. ಕಡೆಯದಾಗಿ ಎಲ್ಲರೂ ಒಟ್ಟುಗೂಡಿ ಹವಾಮಾನ ಬದಲಾವಣೆಯನ್ನು ಎದುರಿಸಬೇಕಿದೆ. ಅಂದ ಹಾಗೆ ಮರೆಯದೆ ಹೇಳಬೇಕಾದ್ದು, ಲಾಸ್‍ಎಂಜೆಲಿಸ್‍ನ ಸುಟ್ಟ ತಾಣಗಳನ್ನು ವಿಡಿಯೊಗಳನ್ನು ನೋಡಿದಾಗ ನಮಗೆ ಗಾಜಾಪಟ್ಟಿ ನೆನಪಾಗುತ್ತದೆ – ಕೆ.ಎಸ್.ರವಿಕುಮಾರ್, ವಿಜ್ಞಾನ ಲೇಖಕರು.
(ಭಾಗ ಒಂದು ಮತ್ತು ಎರಡು ಈ ಲಿಂಕ್ ನಲ್ಲಿದೆ)
ಕ್ಯಾಲಿಫೋರ್ನಿಯ ಮತ್ತು ಕಾಡ್ಗಿಚ್ಚಿನ ಉರಿ
ಕ್ಯಾಲಿಫೋರ್ನಿಯ ಮತ್ತು ಕಾಡ್ಗಿಚ್ಚಿನ ಉರಿ | ಭಾಗ 2
‘ಓಡಿರಿ ಇಲ್ಲವೆ ಸಾಯಿರಿ’ (Flee or Die)
ಸಾಮಾನ್ಯವಾಗಿ ದಕ್ಷಿಣ ಕ್ಯಾಲಿಫೋರ್ನಿಯಾದಲ್ಲಿ ಕಾಡ್ಗಿಚ್ಚನ್ನು ಕೆರಳಿಸುವ ಒಣ ಬಿಸಿಗಾಳಿಗೆ ‘ಸಾಂತ ಆನ’ ಎಂದು ಕರೆಯಲಾಗುತ್ತೆ. ಸಾಂತ ಆನ ಹೊಳೆ ಕಣಿವೆಯ ಮೇಲೆ ಹಾದು ಬರುವ ಗಾಳಿಯಾದ್ದರಿಂದ ಅದೇ ಹೆಸರಿನಿಂದ ಕರೆಯಲಾಗುತ್ತದೆ. ‘ದೆವ್ವ ಗಾಳಿ’ ಎಂಬ ಅಡ್ಡ ಹೆಸರೂ ಇದೆ. ಇದೇನು ಈಗ ಹುಟ್ಟಿಕೊಂಡ ಗಾಳಿಯಲ್ಲ. ಲಾಗಾಯ್ತಿನಿಂದಲೂ ಇದೆ. ವರುಷದಲ್ಲಿ 10ರಿಂದ 25 ಬಾರಿ ಸಾಂತ ಆನ ಗಾಳಿಗಳು ಎದ್ದು ಬರುತ್ತವೆ. ಒಮ್ಮೆ ಬೀಸಲು ಶುರು ಮಾಡಿದರೆ ಸತತ ಒಂದರಿಂದ ಏಳು ದಿನಗಳವರೆಗೆ ಅವು ಬೀಸಬಹುದು. ಲಾಸ್‍ಎಂಜೆಲಿಸ್‍ಗೆ ಪೂರ್ವದಲ್ಲಿ ಬೆಟ್ಟಗಳ ಆಚೆಗೆ ಮರಳುಗಾಡುಗಳು ಮತ್ತು ಬೆಂಗಾಡಿನ ಪ್ರದೇಶಗಳಿವೆ. ಅಲ್ಲಿಂದ ಎದ್ದು ಕಡಲಿನ ಕಡೆಗೆ ಲಾಸ್‍ಎಂಜೆಲಿಸ್ ಕೌಂಟಿಯ ಮೇಲೆ ಸಾಂತ ಆನ ಗಾಳಿಗಳು ಬೀಸಿ ಬರುತ್ತವೆ. ಭೂಮಿಯ ವಾತಾವರಣ ಹೆಚ್ಚೆಚ್ಚು ಬಿಸಿಯಾದಂತೆ ಅವೂ ಹೆಚ್ಚೆಚ್ಚು ಕಾಯುತ್ತವೆ. ಹೆಚ್ಚೆಚ್ಚು ಕಾದಂತೆ ಕಾಡ್ಗಿಚ್ಚನ್ನು ಪುಸಲಾಯಿಸುತ್ತವೆ. ಅವುಗಳ ಬೀಸುವಿಕೆಯ ಒತ್ತರದಲ್ಲೂ ಈಗೀಗ ಹೆಚ್ಚಳ ದಾಖಲೆಯಾಗುತ್ತಿದೆ. ಹಿಂದೆಲ್ಲ ತಾಸಿಗೆ 48ರಿಂದ 64 ಕಿ.ಮೀ. ಒತ್ತರವಿರುತ್ತಿದ್ದರೆ ಈಗ 96ರಿಂದ 112 ಕಿ.ಮೀ.ಗೆ ಏರಿದೆ. ಮೊನ್ನೆಯ ಕಾಡ್ಗಿಚ್ಚಿನ ವೇಳೆಯಲ್ಲಂತೂ ಬೆಂಕಿಯಿಂದ ಮತ್ತಷ್ಟು ಬಿಸಿಗೊಂಡು ಹಗುರವಾಗಿ 160 ಕಿ.ಮೀ. ಒತ್ತರವನ್ನು ಅವು ಸಾಧಿಸಿದ್ದವು. ಒಂದು ವೇಳೆ ಕಡಲ ಕಡೆಯಿಂದ ಗಾಳಿ ಬೀಸುವಂತಿದ್ದರೆ ಅದು ತನ್ನೊಂದಿಗೆ ಕಡಲಿನ ನೀರಿನಂಶ ಅಂದರೆ ತೇವಾಂಶವನ್ನು ನೆಲದ ಕಡೆಗೆ ಒಯ್ದು ಕಾಡ್ಗಿಚ್ಚಿನ ಸಾಧ್ಯತೆಯನ್ನು ಇಲ್ಲವಾಗಿಸುತ್ತಿತ್ತು. ಅಂತಹ ನೈಸರ್ಗಿಕ ನಸೀಬು ಲಾಸ್‍ಎಂಜೆಲಿಸ್ ಕೌಂಟಿಗಿಲ್ಲ.
ಜನವರಿ 7ರ ಮುಸ್ಸಂಜೆ ಮೊದಲು ಕಾಡ್ಗಿಚ್ಚು ಮುತ್ತಿಗೆ ಹಾಕಿದ್ದು ಲಾಸ್‍ಎಂಜೆಲಿಸ್‍ನ ಹೊರ ವಲಯದಲ್ಲಿರುವ ಕಡಲ ತಡಿಯ ಪೆಸಿಫಿಕ್ ಪಾಲಿಸೇಡ್ಸ್ ಎಂಬ ತಾಣವನ್ನು. ನಂತರ ಈಟನ್, ಹಸ್ರ್ಟ್, ಆರ್ಚರ್, ಲಿಡಿಯ, ಸನ್‍ಸೆಟ್, ಕೆನೆತ್, ವೆಂಚುರಾ ಮುಂತಾಗಿ ಹಲವು ತಾಣಗಳಿಗೆ ಹಬ್ಬಿತು. ತಾರೀಕು 14ರ ಹೊತ್ತಿಗೆ 40,000 ಎಕರೆಯಷ್ಟು ಕಾಡು ಸುಟ್ಟುಹೋಗಿತ್ತು. ಮಾಜಿ ಉಪರಾಷ್ಟ್ರಪತಿ ಕಮಲ ಹ್ಯಾರಿಸ್ ಅವರೂ ಸೇರಿದಂತೆ 2 ಲಕ್ಷದಷ್ಟು ಜನರಿಗೆ ಮನೆ ತೆರವು ಮಾಡಲು ಸೂಚನೆ ನೀಡಲಾಗಿತ್ತು. ‘ಓಡಿರಿ ಇಲ್ಲವೆ ಸಾಯಿರಿ’ ಎಂಬ ಆಯ್ಕೆಯನ್ನು ಅಧಿಕೃತವಾಗಿ ಸಾರದೆ ಅವರ ಮುಂದಿಡಲಾಗಿತ್ತು. ಮನೆಗಳೂ ಸೇರಿದಂತೆ 12,000ದಷ್ಟು ಕಟ್ಟಡಗಳು ಉರಿದು ಹೋದವು. 25 ಮಂದಿ ಉಸಿರುಗಟ್ಟಿ ತೀರಿಕೊಂಡರು. ಜೀವ ಉಳಿಸಿಕೊಳ್ಳಲು ಮನೆ ಖಾಲಿ ಮಾಡಿದವರು ಮತ್ತು ಬೆಂಕಿಗೆ ಮನೆಯನ್ನು ಒಪ್ಪಿಸಿದ ಹಾಲಿವುಡ್ ಚಿತ್ರೋದ್ಯಮದ ನಟನಟಿಯರು, ತಂತ್ರಜ್ಞರು ಮತ್ತಿತರ ಸೆಲೆಬ್ರಿಟಿಗಳ ಸಂಖ್ಯೆಯೆ 80 ಸಾವಿರವಿರಬಹುದು ಎನ್ನಲಾಗಿದೆ!
ಇವರಲ್ಲಿ ಒಬ್ಬ ನಟನ ಅನುಭವವನ್ನು ಹೇಳಲೆ ಬೇಕು. ಹಾಲಿವುಡ್ಡಿನ ಹಿರಿಯ ನಟ ಜೇಮ್ಸ್ ಹೊವಾರ್ಡ್ ವುಡ್ಸ್. ಆತನ ಮನೆಯೂ ಕಾಡ್ಗಿಚ್ಚಿನಲ್ಲಿ ಬೂದಿಯಾಯಿತು. ಆಸ್ಕರ್ ಒಂದನ್ನು ಬಿಟ್ಟು ನಟನೆಗೆ ಹಲವು ಹೆಸರಾಂತ ಪ್ರಶಸ್ತಿಗಳನ್ನು ಪಡೆದಿರುವ ಜೇಮ್ಸ್ ಸಿಎನ್‍ಎನ್ ಚಾನೆಲ್ಲಿನಲ್ಲಿ ತನ್ನ ಮನೆ ಸುಟ್ಟುಹೋದದ್ದನ್ನು ನೆನೆದು ಕಣ್ಣೀರಿಟ್ಟ. ಆತನ ಸಂಕಟಕ್ಕೆ ಮರುಕವೂ ವ್ಯಕ್ತವಾಯಿತು, ಟೀಕೆಯೂ ವ್ಯಕ್ತವಾಯಿತು. ಟೀಕೆ ಯಾಕೆಂದರೆ ಆತ ‘killThemall‘ (ಕಿಲ್-ದೆಮ್-ಆಲ್) ಎಂಬ ಹ್ಯಾಶ್‍ಟ್ಯಾಗಿನಡಿ ‘ಪ್ಯಾಲೆಸ್ತೇನಿಯರ ಜೊತೆ ಯಾವ ಕಾರಣಕ್ಕೂ ಕದನ ವಿರಾಮ ಮತ್ತು ರಾಜೀ ಕೂಡದು. ಅವರನ್ನು ಮನ್ನಿಸುವ ಪ್ರಶ್ನೆಯೆ ಇಲ್ಲ’ ಎಂದು ಅಮೆರಿಕ ಸರಕಾರಕ್ಕೆ ಸಾಮಾಜಿಕ ಜಾಲತಾಣದಲ್ಲಿ ಒತ್ತಾಯಿಸಿದ್ದ. ಆ ನಿಲುವು ಆತನ ರಾಜಕೀಯ ನಿಲುವಾಗಿದ್ದಿರಬಹುದು. ಆತನಿಗೆ ಇಸ್ರೇಲ್ ಮಾಡಿದ್ದು ಸರಿ ಇದೆ ಅನ್ನಿಸಿರಬಹುದು.
ಆದರೆ ಜಗತ್ತಿನ ಮೂಲೆ ಮೂಲೆಯ ನೆಟ್ಟಿಗರು ‘ಮನೆ ಕಳೆದುಕೊಳ್ಳುವುದರ ಸಂಕಟ ನಿನಗೀಗ ಅರಿವಾಯಿತೆ, ಸಾವಿರಾರು ಮಂದಿ ಗಾಜಾದಲ್ಲಿ ಬಾಂಬ್ ದಾಳಿಗೆ ಮನೆ ಕಳೆದುಕೊಂಡವರು ನಿನ್ನ ಹಾಗೆಯೆ ಕಣ್ಣೀರಿಟ್ಟಿರಬೇಕು’ ಎಂದು ಶಾಲು ಸುತ್ತಿ ಜಾಡಿಸಿದರು. ಪ್ಯಾಲೆಸ್ತೀನಿನ ಕವಿ ಮೊಸಾಬ್ ಅಬುತೊಹ ಜೇಮ್ಸ್ ವುಡ್ಸ್‍ಗೆ ‘ನಿಮ್ಮ ಮನೆ ಸುಟ್ಟು ಹೋದುದರ ಬಗ್ಗೆ ಹೇಳಿಕೊಳ್ಳಲು ನಿಮಗೊಂದು ಟಿವಿ ಚಾನೆಲ್ ನೆರವಾದರೂ ಇತ್ತು. ನನ್ನ ಮನೆ ಇಸ್ರೇಲ್ ಸೈನ್ಯದ ಬಾಂಬಿಗೆ ಸಿಕ್ಕು ನುಚ್ಚುನೂರಾದುದನ್ನು ಕಂಡು ಅಳಲು ನನಗೆ ಟಿವಿಯೇ ಇರಲಿಲ್ಲ, ಅದು ಸುಟ್ಟುಹೋಗಿತ್ತು’ ಎಂದು ಕುಟುಕಿದರು. ಯುದ್ಧ ಮನುಷ್ಯ ಹುಟ್ಟು ಹಾಕಿದ ಪಿತೂರಿ, ಕಾಡ್ಗಿಚ್ಚು ದಿಕ್ಕೆಟ್ಟ ಗಾಳಿಯ ಕುಮ್ಮಕ್ಕು. ಎರಡರಲ್ಲೂ ನೊಂದವರು ಒಬ್ಬರ ಬಗ್ಗೆ ಒಬ್ಬರು ಕನಿಕರ ಇಟ್ಟುಕೊಳ್ಳುವುದು ಹವಾಮಾನ ಬದಲಾವಣೆಯ ಈ ದಿನಗಳಲ್ಲಿ ಬಹಳ ಅಗತ್ಯವಿದೆ. ಕಡೆಯದಾಗಿ ಎಲ್ಲರೂ ಒಟ್ಟುಗೂಡಿ ಹವಾಮಾನ ಬದಲಾವಣೆಯನ್ನು ಎದುರಿಸಬೇಕಿದೆ. ಅಂದ ಹಾಗೆ ಮರೆಯದೆ ಹೇಳಬೇಕಾದ್ದು, ಲಾಸ್‍ಎಂಜೆಲಿಸ್‍ನ ಸುಟ್ಟ ತಾಣಗಳನ್ನು ವಿಡಿಯೊಗಳನ್ನು ನೋಡಿದಾಗ ನಮಗೆ ಗಾಜಾಪಟ್ಟಿ ನೆನಪಾಗುತ್ತದೆ.
ಸಂಕಟದಲ್ಲೂ ಕಾಸು ಹಿರಿಯುವವರು
ಒಂದು ಸಾಮಾನ್ಯ ಗಾತ್ರದ ಮನೆಗೆ ಬೆಂಕಿ ಹೊತ್ತಿಕೊಂಡರೆ ಅದನ್ನು ನಂದಿಸಲು ಎರಡರಿಂದ ಮೂರು ಟ್ಯಾಂಕರ್ ನೀರು ಬೇಕಾಗುವುದಂತೆ. ಆದರೆ ಕಾಡ್ಗಿಚ್ಚಿನ ವೇಳೆ ಸಾವಿರಾರು ಮನೆಗಳಿಗೆ ಬೆಂಕಿ ತಗುಲಿದರೆ ಮೂರು ಪಟ್ಟು ಟ್ಯಾಂಕರುಗಳು ಬೇಕಾಗಬಹುದು. ಅಷ್ಟು ನೀರನ್ನು ಒಮ್ಮೆಲೆ ಹೊಂದಿಸುವುದು ಹೇಗೆ?
ಕ್ಯಾಲಿಫೋರ್ನಿಯ ನಿಡುಗಾಲದ ಬರದಿಂದ ನಲುಗಿ ಹೋಗಿದೆ. ಆಲ್ಬರ್ಟ್ ಹೆಮ್ಮೋಂಡ್ 1972ರಲ್ಲೆ ‘It never rains in Southern California’ ಎಂದು ಸುಮ್ಮನೆ ಹಾಡಿಲ್ಲ. ಹಾಡಿನಲ್ಲೇನೊ ಅವರು ಮಳೆ ಬೀಳುತ್ತದೆ ಎಂಬ ನಿರೀಕ್ಷೆಯನ್ನು ಹೊರಹಾಕುತ್ತಾರೆ. ಈಗವರ ಹಾಡಿನ ಯೂಟ್ಯೂಬ್ ವಿಡಿಯೊಗಳಲ್ಲಿ ನೋಡುಗರು ‘ದೇವರೆ ದಕ್ಷಿಣ ಕ್ಯಾಲಿಫೋರ್ನಿಯಾದಲ್ಲಿ ಮಳೆ ಸುರಿಸು’ ಎಂದು ಮೊರೆಯಿಡುವ ಕಮೆಂಟುಗಳನ್ನು ಕಾಣಬಹುದು. ಸನ್ನಿವೇಶ ಹೀಗಿರುವಾಗ ತಮ್ಮ ಮನೆಗಳನ್ನು ಬೆಂಕಿಯಿಂದ ಕಾಪಾಡಿಕೊಳ್ಳಲು ಕೌಂಟಿಯ ಫೈರ್ ಇಂಜಿನ್ನುಗಳಿಗೆ ಕಾಯದೆ ಜನ ಹಲವೆಡೆ ಖಾಸಗಿಯಾಗಿ ನೀರು ಪೊರೈಸುವವರಿಗೆ ಮೊರೆ ಹೋದರು. ಅವರು ಪರಿಸ್ಥಿತಿಯ ಲಾಭ ಪಡೆಯಲು ದುಪ್ಪಟ್ಟು ಮುಪ್ಪಟ್ಟು ರೊಕ್ಕಕ್ಕೆ ಬೇಡಿಕೆ ಇಟ್ಟರಂತೆ. ಸುಡದೆ ಉಳಿದ ಮನೆ, ಹೋಟೆಲುಗಳಲ್ಲಿ ಹಂಗಾಮಿಯಾಗಿ ಉಳಿದುಕೊಳ್ಳಲು ಪ್ರಯತ್ನಿಸಿದವರಿಂದ ಮಾಲೀಕರು ಬೇಕಾಬಿಟ್ಟಿ ಬಾಡಿಗೆ ವಸೂಲಿ ಮಾಡಿದರು. ಜೀವ ಉಳಿಸಿಕೊಳ್ಳಲು ಮನೆ ಬಿಟ್ಟು ಹೋದವರನ್ನು ದಾರಿಯಲ್ಲೆ ತಡೆದು ಜೀವ ಬೆದರಿಕೆ ಹಾಕಿ ಅವರ ಬಳಿ ಇದ್ದ ಕಾಸನ್ನು ದೋಚುವ ಪ್ರಕರಣಗಳೂ ಜರುಗಿವೆ. ಇತ್ತ ಅವರ ಮನೆಗಳಿಗೆ ನುಗ್ಗಿ ಲೂಟಿ ಮಾಡುವ ಪ್ರಯತ್ನಗಳೂ ಸಾಗಿವೆ. ಲೂಟಿಕೋರರ ಹಲವು ತಂಡಗಳು ಸಕ್ರಿಯವಾಗಿರುವುದನ್ನು ನ್ಯಾಷನಲ್ ಗಾರ್ಡ್‍ಗಳು ಪತ್ತೆಹಚ್ಚಿ ದಸ್ತಗಿರಿ ಮಾಡಿದ್ದಾರೆ. ಲಾಸ್‍ಎಂಜೆಲಿಸ್ ಕೌಂಟಿ ಹಾಲಿವುಡ್ ಕಲಾವಿದರಲ್ಲದೆ ಐಷಾರಾಮಿ ಸಿರಿವಂತರು ಮತ್ತು ಕಾರ್ಪೊರೇಟ್ ಧಣಿಗಳ ನೆಚ್ಚಿನ ತಾಣವೂ ಹೌದು (ಏಲಾನ್ ಮಸ್ಕ್ ಒಬ್ಬನೆ ಆ ಪ್ರದೇಶಗಳಲ್ಲಿ ಏಳು ಭಾರೀ ಮನೆಗಳನ್ನು ಹೊಂದಿದ್ದನಂತೆ. ಕಳೆದ ವರುಷ ಅವೆಲ್ಲವನ್ನು ಮಾರಿದ್ದನಂತೆ. ಆತನಿಗೆ ಕಾಡ್ಗಿಚ್ಚಿನ ಸುಳಿವಿತ್ತೆ ಎಂಬ ಪ್ರಶ್ನೆಗಳನ್ನು ಚಾನೆಲ್‍ಗಳು ಕೇಳಿವೆ). ಅವರು ಬಿಟ್ಟೋಡಿದ ಮನೆಗಳಲ್ಲಿ ಬೆಲೆಬಾಳುವಂತಹುದು ದಕ್ಕಲೇಬೇಕಲ್ಲ. ದಾರಿದ್ರ್ಯ ತುಂಬಿದ ದೇಶಗಳಲ್ಲಿ ನಾವು ಈ ಬಗೆಯ ಬೆಳವಣಿಗೆಗಳನ್ನು ಸಾಮಾನ್ಯವಾಗಿ ಕಾಣುತ್ತೇವೆ ಮತ್ತು ಕೇಳುತ್ತೇವೆ. ಅಮೆರಿಕಾದಂತಹ ಸುಸಜ್ಜಿತ ಮತ್ತು ಆಧುನಿಕ ಸಮಾಜದಲ್ಲೂ ವಿಪತ್ತಿನ ವೇಳೆ ಲೂಟಿಕೋರತನ ಮೆರೆಯುತ್ತದೆ ಎಂದರೆ ಬಹುಶಃ ಅಲ್ಲೂ ಆರ್ಥಿಕ ಅಸಮಾನತೆ ಭಾರೀ ಪ್ರಮಾಣದಲ್ಲಿ ಏರಿಕೆ ಕಂಡಿರಬೇಕು.
ವ್ಯಕ್ತಿಗಳ ಮಟ್ಟದಲ್ಲಿ ಮೇಲಿನಂತಹ ನಿರ್ದಯಿ ಘಟನೆಗಳು ಜರುಗಿದರೆ ಕಂಪೆನಿಗಳ ಮಟ್ಟದಲ್ಲಿ ಏನು ನಡೆಯುತ್ತಿದೆ ನೋಡೋಣ. ಬಹಳ ಮುಖ್ಯವಾಗಿ ಜನರಲ್ ಇನ್ಶುರೆನ್ಸ್ ಕಂಪೆನಿಗಳು. ಜನರ ಆಸ್ತಿಪಾಸ್ತಿಗಳಿಗೆ ವಿಮೆ ಇಳಿಸಿಕೊಂಡು ಲಾಭ ಹಿರಿಯುವ ಈ ಕಂಪೆನಿಗಳು ಕಾಡ್ಗಿಚ್ಚಿನಲ್ಲಿ ಸಾವಿರ ಸಾವಿರ ಸಂಖ್ಯೆಯಲ್ಲಿ ಕಟ್ಟಡಗಳು ಸುಟ್ಟು ಹೋಗಿರುವುದನ್ನು ಕಂಡು ಕುಸಿದು ಹೋಗಿವೆ. ನಿಧಾನಕ್ಕೆ ತಾವು ಇನ್ಶುರೆನ್ಸ್ ಕ್ಲೈಮುಗಳನ್ನು ಪಾವತಿಸುವುದಿಲ್ಲ ಎಂದು ರಾಗ ಎಳೆಯುತ್ತಿವೆ. ಸಧ್ಯ ಪಾವತಿಸಬೇಕಿರುವ ಬಾಕಿ ಪ್ರೀಮಿಯಮ್‍ಗಳನ್ನು ಕಟ್ಟಿಸಿಕೊಳ್ಳಲು ಹಿಂದೆಮುಂದೆ ನೋಡುತ್ತಿವೆ. ಮನೆ ಕಳೆದುಕೊಂಡವರ ಗೋಳಿಗಿಂತ ಅವಕ್ಕೆ ತಾವು ದಿವಾಳಿ ಏಳುವ ಬಗ್ಗೆಯೇ ಹೆಚ್ಚು ಅಂಜಿಕೆ. ಅಮೆರಿಕಾದಂತಹ ವಿಪರೀತ ‘ಕಾರ್ಪೋರೇಟಿಕರಣ’ಕ್ಕೆ ಒಳಪಟ್ಟ ಸಮಾಜದಲ್ಲಿ ರಾಜ್ಯ ಹಾಗೂ ರಾಷ್ಟ್ರೀಯ ಸರಕಾರಗಳು (ಖಾಸಗಿ) ಇನ್ಶುರೆನ್ಸ್ ಕಂಪೆನಿಗಳ ವ್ಯವಹಾರದಲ್ಲಿ ತಲೆಹಾಕುವುದಿಲ್ಲವಾದ್ದರಿಂದ ಪಾಲಿಸಿದಾರರು ಕಡೆಗೆ ಮೋಸಹೋಗುತ್ತಾರೆ. ಇತ್ತ ಮನೆಯೂ ಇಲ್ಲ, ಅತ್ತ ಇನ್ಶುರೆನ್ಸ್ ಹಣವೂ ಇಲ್ಲ. ಇನ್ಶುರೆನ್ಸ್ ಖಾಸಗೀಕರಣದ ಕ್ರೂರ ಮುಖಕ್ಕೆ ಇದೊಂದು ಉದಾಹರಣೆ. 2024ರ ಅಕ್ಟೋಬರ್‌ನಲ್ಲಿ ಫ್ಲೋರಿಡಾಕ್ಕೆ ಹೆನ್ನೆರೆ ತಂದ ಹೆಲಿನೆ ಮತ್ತು ಮಿಲ್ಟನ್ ಹರಿಕೇನುಗಳಿಂದ ಮನೆ ಕಳೆದುಕೊಂಡವರಿಗೂ ಇನ್ಶುರೆನ್ಸ್ ಕಂಪೆನಿಗಳು ಪಂಗನಾಮ ಹಾಕಿದ್ದವು. ಬಹುಶಃ ಲಾಸ್‍ಎಂಜೆಲಿಸ್ ಕೌಂಟಿಯ ನಿವಾಸಿಗಳಿಗೂ ಇದೇ ಬಗೆಯ ಅನುಭವ ಕಾದಿದೆ.
ಹವಾಮಾನ ಬದಲಾವಣೆ ಬರಿಯ ವಿಪತ್ತುಗಳನ್ನು ಉಲ್ಬಣಗೊಳಿಸುವುದಿಲ್ಲ, ಮನುಷ್ಯ ಸೃಷ್ಟಿಸಿಕೊಂಡ ಕೆಡುಕುಗಳನ್ನೂ ಬಯಲಿ ಗೆಳೆಯುತ್ತದೆ .
(ನಾನೀ ಬರಹವನ್ನು ಕೊನೆಗೊಳಿಸಿದ 15.01.2025ನೇ ತಾರೀಕಿನಂದು ಲಾಸ್‍ಎಂಜೆಲಿಸ್ ಕಾಡ್ಗಿಚ್ಚು ಇನ್ನೂ ನಿಲುಗಡೆಗೆ ಬಂದಿರಲಿಲ್ಲ. ಇನ್ನೂ ಹೊಸ ಹೊಸ ಪ್ರದೇಶಗಳಿಗೆ ಅದು ಹಬ್ಬುತ್ತಲೇ ಇತ್ತು.)
(ಇಲ್ಲಿಗೆ ಕ್ಯಾಲಿಫೋರ್ನಿಯ ಮತ್ತು ಕಾಡ್ಗಿಚ್ಚಿನ ಉರಿ ಸರಣಿ ಮುಗಿಯಿತು)
ವಿಜ್ಞಾನ ಲೇಖಕರು
ಮೊ. 89510 55154
ಇದನ್ನೂ ಓದಿ- ಲಾಸ್ ಏಂಜಲೀಸ್ ಅರಣ್ಯದಲ್ಲಿ ಕಾಡ್ಗಿಚ್ಚು; ಸಾವಿರಾರು ಮನೆ ವಾಹನ ಭಸ್ಮ