ರಾಜಕೀಯ ಪರಿಸರದಲ್ಲಿ ಕತ್ತರಿಸಲ್ಪಟ್ಟ ಅಮಾಯಕ ಹಸುವಿನ ಕೆಚ್ಚಲು ಅಥವಾ ಎಳೆ ಕರುವಿನ ಬಾಲ ರಾಜಕೀಯ ಸರಕಾಗುತ್ತದೆ. ಬಿಜೆಪಿಯವರಿಗೆ ಅಪರಾಧ ಎಸಗಿದ ವ್ಯಕ್ತಿ ಮುಸ್ಲಿಂ ಆಗಿದ್ದರೆ ʼ ಜಿಹಾದ್–ಭಯೋತ್ಪಾದನೆ ʼ ಕಾಣುತ್ತದೆ. ವಿರೋಧ ಪಕ್ಷಗಳಿಗೆ ಸರ್ಕಾರವೇ ಅಪರಾಧಿಯಾಗಿ ಕಾಣುತ್ತದೆ. ಇದರಿಂದಾಚೆಗೆ ಒಂದು ಸ್ವಸ್ಥ ಸಮಾಜಕ್ಕೆ ಕಾಣಬೇಕಿರುವುದು ಈ ಕೃತ್ಯದ ಹಿಂದಿರುವ, ಮತ್ತೊಂದು ಜೀವದ ಹಿಂಸೆಯನ್ನು ಆನಂದಿಸುವ ಅಮಾನುಷ ಮನಸ್ಥಿತಿ -ನಾ ದಿವಾಕರ, ಚಿಂತಕರು.
ಭಾರತೀಯ ಸಮಾಜದಲ್ಲಿ ಅಪರಾಧಗಳು ಹೆಚ್ಚಾಗುತ್ತಿವೆ. ವಿಶೇಷವಾಗಿ ಯುವ ಸಮೂಹದ ನಡುವೆ ಅಪರಾಧ ಎಸಗುವ ಮನೋಭಾವ ವಿಭಿನ್ನ ಆಯಾಮಗಳನ್ನು ಪಡೆದುಕೊಳ್ಳುತ್ತಿವೆ. ಇತ್ತೀಚೆಗೆ ರಾಜ್ಯದಲ್ಲಿ ನಡೆದ ಕೆಲವು ಹಗಲು ದರೋಡೆಗಳನ್ನು ಮತ್ತು ದಿನೇ ದಿನೇ ಹೆಚ್ಚಾಗುತ್ತಿರುವ ಸೈಬರ್ ಅಪರಾಧಗಳನ್ನು ಸೂಕ್ಷ್ಮವಾಗಿ ಗಮನಿಸಿದರೆ, ಸಮಾಜದಲ್ಲಿ ಉದ್ಭವಿಸಿರುವ ನಿರುದ್ಯೋಗ ಮತ್ತು ಅನಿಶ್ಚಿತ ಭವಿಷ್ಯವೂ ಸಹ ಅಪರಾಧ ಹೆಚ್ಚಳಕ್ಕೆ ಕಾರಣ ಎನ್ನುವುದು ಸ್ಪಷ್ಟವಾಗುತ್ತದೆ. ಇಂತಹ ಸಾರ್ವಜನಿಕ ಅಪರಾಧಗಳ ನೆಲೆಯಲ್ಲೇ ಸಮಾಜದಲ್ಲಿ ಕ್ರೌರ್ಯ ಮತ್ತು ಹಿಂಸೆಯನ್ನೂ ಗಂಭೀರವಾಗಿ ಪರಿಗಣಿಸಬೇಕಿದೆ. ಈ ವಿದ್ಯಮಾನವೇನೂ ನವ ಶತಮಾನದಲ್ಲಿ ಉಗಮಿಸಿದ ವರ್ತನೆಯಲ್ಲ. ನಮ್ಮ ಸಮಾಜದ ಗರ್ಭದಲ್ಲೇ ಅಹಿಂಸೆ ಮತ್ತು ತಾಳ್ಮೆಯ ನೆಲೆಗಳು ಇರುವಷ್ಟೇ ಪ್ರಮಾಣದಲ್ಲಿ ಹಿಂಸೆ, ಕಿರುಕುಳ ಮತ್ತು ಹಿಂಸೆಯನ್ನು ಆನಂದಿಸುವ ಮನಸ್ಥಿತಿಯೂ ಶತಮಾನಗಳಿಂದ ಬೇರೂರಿದೆ.
ಹಬಜಾತಿ-ಮತ-ಧರ್ಮ ಇತ್ಯಾದಿಗಳ ಮಸೂರಗಳನ್ನು ಬದಿಗಿಟ್ಟು ನೋಡಿದರೆ ಇದು ಸಾರ್ವತ್ರಿಕ ಲಕ್ಷಣವಾಗಿಯೂ, ವಿಶಾಲ ಸಮಾಜವೇ ಸೃಷ್ಟಿಸಿರುವ ಒಂದು ವರ್ತನೆಯಾಗಿಯೂ ಕಾಣುತ್ತದೆ. ಸಮಸ್ಯೆ ಎಂದರೆ ಸಮಾಜವನ್ನು ದಿಟ್ಟಿಸಿ ನೋಡುವ ಕಣ್ಣುಗಳಿಗೆ ಅಸ್ಮಿತೆಗಳ ಪೊರೆ ಕವಿದಿದೆ. ಹಾಗಾಗಿ ಅಪರಾಧಗಳು ವ್ಯಕ್ತಿ ನೆಲೆಯಲ್ಲಿ ನಿಷ್ಕರ್ಷೆಗೊಳಗಾಗುತ್ತಿವೆ. ಸಾಮಾಜಿಕ ತಾರತಮ್ಯಗಳು ಮತ್ತು ಆರ್ಥಿಕ ಅಸಮಾನತೆಗಳು ಯಾವುದೇ ರೀತಿಯ ಅಪರಾಧಗಳಿಗೆ ಎಡೆಮಾಡಿಕೊಡುವುದನ್ನು ಸಮಾಜಶಾಸ್ತ್ರಜ್ಞರು ಸಂಶೋಧನಾತ್ಮಕವಾಗಿ ನಿರೂಪಿಸಿದ್ದಾರೆ. ಬೀದರ್‌ನಲ್ಲಿ ನಡೆದ ಬ್ಯಾಂಕ್ ದರೋಡೆಯ ಸಂದರ್ಭದಲ್ಲಿ ನಡೆದಿರುವ ಕೊಲೆಯನ್ನು ಈ ನೆಲೆಯಲ್ಲಿ ಪರಾಮರ್ಶಿಸಬೇಕಿದೆ. ಈ ಅಪರಾಧ ಹೆಚ್ಚಳದ ನಡುವೆಯೇ ಉಲ್ಬಣಿಸುತ್ತಿರುವ ಹಿಂಸಾತ್ಮಕ ಕೃತ್ಯಗಳು ಸರ್ಕಾರವನ್ನು ಮಾತ್ರವೇ ಅಲ್ಲ, ಸಾರ್ವಜನಿಕರನ್ನೂ ಜಾಗೃತಗೊಳಿಸಬೇಕಿದೆ.
ಸಾಮಾಜಿಕ ಹಿಂಸೆ ಮತ್ತು ಕ್ರೌರ್ಯದ ಒಂದು ಆಯಾಮವನ್ನು ಬೆಂಗಳೂರಿನಲ್ಲಿ ನಡೆದಿರುವ ಹಸುವಿನ ಕೆಚ್ಚಲು ಕೊಯ್ದ ಪ್ರಕರಣದಲ್ಲಿ ಕಾಣಬಹುದು. ಕೆಲವು ದಿನಗಳ ಹಿಂದೆ ನಂಜನಗೂಡಿನಲ್ಲಿ ಕರುವಿನ ಬಾಲ ಕತ್ತರಿಸುವ ಘಟನೆಯೂ ನಡೆದಿದೆ. ವಿಕೃತ ಮನಸ್ಸುಗಳ ಈ ಕೃತ್ಯಗಳ ಹಿಂದಿರುವ ಸಾಮಾಜಿಕ ವ್ಯಾಧಿಯನ್ನು ಗುರುತಿಸುವುದು ವರ್ತಮಾನದ ತುರ್ತು. ಒಂದು ಅಮಾಯಕ ಮೂಕ ಪ್ರಾಣಿಯ ಯಾವುದೇ ಅವಯವವನ್ನು ಕತ್ತರಿಸಿ ಹಿಂಸಿಸುವ ಒಂದು ಕೃತ್ಯವನ್ನು ʼ ದುಷ್ಕೃತ್ಯ ʼ ಎನ್ನುವುದು ಕ್ಲೀಷೆಯಾಗುತ್ತದೆ. ಬಂಧಿತ ಆರೋಪಿಯು ಈ ಕೃತ್ಯವನ್ನು ಕುಡಿದ ಅಮಲಿನಲ್ಲಿ ಎಸಗಿದ್ದಾನೋ ಅಥವಾ ಉದ್ದೇಶಪೂರ್ವಕವಾಗಿಯೋ ಎನ್ನುವುದು ತನಿಖೆಯಿಂದಲೇ ತಿಳಿಯಬೇಕಿದೆ. ಆದರೆ ಇಲ್ಲಿ ಮೂಲತಃ ನಾವು ಗುರುತಿಸಬೇಕಿರುವುದು ಈ ವ್ಯಕ್ತಿಯಲ್ಲಿ ಅಂತಹ ಕ್ರೌರ್ಯ ಏಕಿದೆ ಎನ್ನುವ ಪ್ರಶ್ನೆಯನ್ನು. ಅಮಾನುಷ ಕೃತ್ಯಗಳಲ್ಲಿ, ಕೃತ್ಯ ಅಥವಾ ಅಪರಾಧವನ್ನು ಗಮನಿಸಬೇಕೇ ಹೊರತು, ಅಪರಾಧಿಯ ಅಸ್ಮಿತೆಗಳನ್ನಲ್ಲ.
ಬೆಂಗಳೂರು ಚಾಮರಾಜಪೇಟೆಯಲ್ಲಿ ನಡೆದಿರುವ ಈ ಕೃತ್ಯದ ಹಿನ್ನೆಲೆಯಲ್ಲಿ ಈ ಅಂಶ ಮುಖ್ಯವಾಗುತ್ತದೆ. ಅತ್ಯಾಚಾರ, ದೌರ್ಜನ್ಯ, ಹತ್ಯೆ ಈ ಮೂರೂ ಕೃತ್ಯಗಳು ಮೂಲತಃ ಮನುಜ ಸಂವೇದನೆಯನ್ನು ಆಳವಾಗಿ ಕದಡುವಂತಹ ವಿದ್ಯಮಾನಗಳು. ಭಾರತೀಯ ಸಮಾಜದಲ್ಲಿ ಈ ಕೃತ್ಯಗಳಿಗೆ ಹೆಚ್ಚು ಬಲಿಯಾಗುವುದು ಮಹಿಳೆಯರು, ಜಾತಿ ಶ್ರೇಣಿಯಲ್ಲಿ ತಳಪಾಯದಲ್ಲಿರುವ ದಲಿತ-ಅಸ್ಪೃಶ್ಯರು, ಬಡವರು ಮತ್ತು ಇತರ ಅಲಕ್ಷಿತ-ಅಂಚಿನಲ್ಲಿರುವ ಸಮಾಜ. ಮನುಷ್ಯ ಸಮಾಜದ ಅಂತರ್ ಕಲಹದಲ್ಲಿ ಬಲಿಯಾಗುವುದು ಮೂಕ ಪ್ರಾಣಿಗಳು ಎನ್ನುವುದನ್ನು ಇತಿಹಾಸವೇ ನಿರೂಪಿಸಿದೆ. ಸಮಾಜವನ್ನು ನಿರ್ದೇಶಿಸುವ ಚಿಂತನೆಗಳು ಮತ್ತು ಆಲೋಚನಾ ವಿಧಾನಗಳು ಸೃಷ್ಟಿಸುವಂತಹ ಹಿಂಸಾತ್ಮಕ ಮನಸ್ಥಿತಿಯೇ ಮನುಷ್ಯನನ್ನು ಮಾನವೇತರ ಜೀವಗಳನ್ನು ಹಿಂಸಿಸುವುದಕ್ಕೂ ಪ್ರೇರೇಪಿಸುತ್ತವೆ. ಕೋಮು ಗಲಭೆಗಳಲ್ಲಿ ಗರ್ಭಿಣಿಯರ ಗರ್ಭ ಸೀಳುವ, ಎಳೆ ಮಕ್ಕಳನ್ನು ಗೋಡೆಗೆ ಅಪ್ಪಳಿಸಿ ಕೊಲ್ಲುವ (ಬಿಲ್ಕಿಸ್ ಬಾನೋ) ಜೀವಂತವಾಗಿ ಬೆಂಕಿ ಹಚ್ಚುವ, ಇಡೀ ಕುಟುಂಬಗಳನ್ನು, ಮನೆಗಳನ್ನು ಮತ್ತು ವ್ಯಕ್ತಿಗಳನ್ನು ದಹಿಸುವ ಪ್ರಕರಣಗಳು ಇದರ ಒಂದು ಆಯಾಮವಾದರೆ, ಕತ್ತರಿಸಿದ ಹಂದಿಯ ತಲೆಯನ್ನು ಪ್ರಚೋದಕವಾಗಿ ಬಳಸುವುದು ಮತ್ತೊಂದು ಆಯಾಮ. ಎರಡಕ್ಕೂ ಸಮಕಾಲೀನ ಭಾರತ ಸಾಕ್ಷಿಯಾಗಿದೆ.
ಈ ಹಿಂಸೆಯ ಆವರಣದಲ್ಲಿ ಗಮನಿಸಬೇಕಿರುವುದು ವ್ಯಕ್ತಿಯ ಗುಣಲಕ್ಷಣಗಳೇ ಹೌದಾದರೂ, ಈ ಗುಣಗಳನ್ನು ರೂಢಿಸಿಕೊಳ್ಳಲು ಅನುವು ಮಾಡಿಕೊಡುವ ಒಂದು ಜಾತಿ ವ್ಯವಸ್ಥೆ, ಸಾಂಸ್ಕೃತಿಕ ಪರಿಸರ ಮತ್ತು ಧಾರ್ಮಿಕ ಪ್ರಚೋದನೆಗಳನ್ನು ಅಲ್ಲಗಳೆಯಲಾಗುವುದಿಲ್ಲ. ಸಾಮಾನ್ಯವಾಗಿ ಎಲ್ಲ ಕೋಮು ಗಲಭೆಗಳಲ್ಲೂ ಗುರುತಿಸಲ್ಪಟ್ಟ ʼ ಅನ್ಯ ʼರ ಆಸ್ತಿಪಾಸ್ತಿಯನ್ನು ಧ್ವಂಸ ಮಾಡುವ, ಸುಟ್ಟುಹಾಕುವ, ವ್ಯಕ್ತಿಗಳನ್ನು ಅಮಾನುಷವಾಗಿ ಕೊಲ್ಲುವ ಪ್ರಸಂಗಗಳನ್ನು ಇತಿಹಾಸದುದ್ದಕ್ಕೂ ಕಾಣಬಹುದು. ಅನ್ಯ ಜಾತಿಯ ವ್ಯಕ್ತಿಯನ್ನು ವರಿಸುವ ಮಗಳನ್ನೇ ಹತ್ಯೆ ಮಾಡುವ ತಂದೆ-ತಾಯಿಯರಿಗೂ, ಅನ್ಯ-ಜಾತಿ ಧರ್ಮೀಯರೆಂಬ ಕಾರಣಕ್ಕೇ ಮಹಿಳೆಯರ ಮೇಲೆ ಅತ್ಯಾಚಾರ ಎಸಗಿ ಕೊಲ್ಲುವ ಅತ್ಯಾಚಾರಿಗಳಿಗೂ ತಾತ್ವಿಕವಾಗಿ ಅಷ್ಟೇನೂ ವ್ಯತ್ಯಾಸ ಕಾಣಲಾಗುವುದಿಲ್ಲ. ಎರಡೂ ಸಂದರ್ಭಗಳಲ್ಲಿ ಕ್ರಿಯೆಯನ್ನು ಪ್ರಚೋದಿಸುವುದು ಹಿಂಸೆಯನ್ನು ಅಂತರೀಕೀಕರಿಸಿಕೊಳ್ಳುವ (Internalisation) ಒಂದು ಮನಸ್ಥಿತಿ ಮತ್ತು ಅದನ್ನು ಆಂತರಿಕವಾಗಿ ನಿರ್ದೇಶಿಸುವಂತಹ ಜಾತಿ-ಮತಗಳ ಸಂಹಿತೆಗಳು ಹಾಗೂ ಈ ಭಾವನೆಗಳನ್ನು ಗಟ್ಟಿಗೊಳಿಸುವ ಯಜಮಾನಿಕೆಯ ಧೋರಣೆ.
ಈ ಯಜಮಾನಿಕೆಗೆ ಜಾತಿ ಮತ್ತು ಧಾರ್ಮಿಕ ಸಂಹಿತೆಗಳು ರೂಪಿಸುವ ಸಾಮಾಜಿಕ-ಆರ್ಥಿಕ ಅಂತಸ್ತು ಮತ್ತು ಸಾಮುದಾಯಿಕ ಪಾರಮ್ಯಗಳು ಮತ್ತಷ್ಟು ಪುಷ್ಟಿ ನೀಡುತ್ತವೆ. ಧರ್ಮ ರಕ್ಷಣೆಗಾಗಿ ಅಥವಾ ಜಾತಿ ಶ್ರೇಷ್ಠತೆಯನ್ನು ಸಂರಕ್ಷಿಸುವ ಸಲುವಾಗಿ ಹಿಂಸೆ ಅನಿವಾರ್ಯ ಅಥವಾ ಸ್ವೀಕೃತ ಎನ್ನುವ ಒಂದು ಭಾವನೆಯನ್ನು ಮತಾಂಧ ಸಂಘಟನೆಗಳು, ಜಾತಿ ಗುಂಪುಗಳು ಮತ್ತು ಅವುಗಳನ್ನು ನಿರ್ದೇಶಿಸುವ ಆಧ್ಯಾತ್ಮಿಕ-ಧಾರ್ಮಿಕ ಚಿಂತನಾ ವಾಹಿನಿಗಳು ಸೃಷ್ಟಿಸುತ್ತವೆ. ಉದಾರವಾದ ಮತ್ತು ಡಿಜಿಟಲ್ ಬಂಡವಾಳಶಾಹಿಯು ಸೃಷ್ಟಿಸುತ್ತಿರುವ ಅಸಮಾನತೆಗಳ ನಡುವೆ ಸಾಮಾಜಿಕವಾಗಿ ಆರ್ಥಿಕವಾಗಿ ಹಿತವಲಯದಲ್ಲಿರುವ ಮತ್ತು ಸಿರಿವಂತಿಕೆಯನ್ನು ಅನುಭೋಗಿಸುತ್ತಿರುವ ಒಂದು ವಿಶಾಲ ಸಮಾಜ ಇದರ ಸಾಕ್ಷಿಯಾಗಿ ಕಾಣುತ್ತದೆ. ಇದರ ಮತ್ತೊಂದು ಆಯಾಮವನ್ನು ಭಾರತದ ಸಮಕಾಲೀನ ರಾಜಕೀಯದಲ್ಲಿ ಗುರುತಿಸಬಹುದು. ಹಾಗಾಗಿಯೇ ಈ ಎರಡೂ ವಲಯಗಳಿಂದಲೇ ನಿರ್ವಚಿಸಲ್ಪಡುವ ಮತ್ತು ನಿರ್ದೇಶಿಸಲ್ಪಡುವ ಸಮೂಹ ಸಂವಹನ ಮಾಧ್ಯಗಳಲ್ಲಿ ಮತ್ತು ಸಾರ್ವಜನಿಕ ಸಂಕಥನಗಳಲ್ಲಿ, ಹಿಂಸೆ ಮತ್ತು ದೌರ್ಜನ್ಯಗಳನ್ನು ಸಾಮಾಜಿಕ-ಸಾಂಸ್ಕೃತಿಕ ವ್ಯಸನ ಎಂದು ಪರಿಗಣಿಸದೆ, ಸಾವನ್ನೂ ಸಾಪೇಕ್ಷವಾಗಿ ನೋಡುವ ಮನಸ್ಥಿತಿಯನ್ನು ಗುರುತಿಸಬಹುದು.
ಈ ಪ್ರಾಚೀನ ನಡವಳಿಕೆಗಳನ್ನು, ಅಮಾನುಷ ಪ್ರವೃತ್ತಿಯನ್ನು ಹದ್ದುಬಸ್ತಿನಲ್ಲಿಡುವುದು ಆಳುವ ಸರ್ಕಾರಗಳ ಕರ್ತವ್ಯವಾದರೆ, ಈ ನಡವಳಿಕೆಗಳಿಗೆ ಕಾರಣವಾಗುವ ಸಾಮಾಜಿಕ-ಸಾಂಸ್ಕೃತಿಕ ನೆಲೆಗಳನ್ನು ಶೋಧಿಸಿ, ಅವುಗಳಿಗೆ ಸೂಕ್ತ ಪರಿಹಾರೋಪಾಯಗಳನ್ನು ಸೂಚಿಸುವುದು ನಾಗರಿಕ ಸಮಾಜದ ಕರ್ತವ್ಯವಾಗುತ್ತದೆ. ರಾಜಕಾರಣಿಗಳಿಗೆ/ರಾಜಕೀಯ ಪಕ್ಷಗಳಿಗೆ ಇಂತಹ ಪ್ರತಿಯೊಂದು ಘಟನೆಯೂ ಆಡಳಿತಾರೂಢರನ್ನು ಕೆಳಗಿಸುವ ಅಸ್ತ್ರವಾಗಿ ಕಾಣುವುದರಿಂದ, ಸರ್ಕಾರವನ್ನೇ ಹೊಣೆ ಮಾಡಲಾಗುತ್ತದೆ. ಕಾನೂನು ಸುವ್ಯವಸ್ಥೆ ಮತ್ತು ಸ್ವಸ್ಥ ಸಮಾಜವನ್ನು ಕಾಪಾಡುವಲ್ಲಿ ಸರ್ಕಾರಗಳ ಬೇಜವಾಬ್ದಾರಿಯನ್ನು ಗುರುತಿಸುವುದು ಅವಶ್ಯವೇ ಆದರೂ, ಸರ್ಕಾರದ ಕಣ್ಣೋಟವನ್ನೂ ಮೀರಿದ ಘಟನೆಗಳು ನಮ್ಮ ನಡುವೆ ನಡೆಯುತ್ತಲೇ ಇರುತ್ತದೆ. ರಾಜಕೀಯ ನಾಯಕರಿಂದ ಇದನ್ನು ನಿರೀಕ್ಷಿಸಲೂ ಆಗದಂತೆ ಭಾರತದ ರಾಜಕೀಯ ವ್ಯವಸ್ಥೆ ಅಧಿಕಾರ ಕೇಂದ್ರಿತವೂ, ಭ್ರಷ್ಟವೂ, ಸ್ವಾರ್ಥಪರವೂ ಆಗಿರುವುದರಿಂದ, ಇಂತಹ ಹಿಂಸಾತ್ಮಕ-ಅಮಾನುಷ ಘಟನೆಗಳಿಗೆ ಕಾರಣಗಳನ್ನು ಸಮಾಜದ ಆಂತರ್ಯದಲ್ಲಿ, ಸಾಂಸ್ಕೃತಿಕ ಬದುಕಿನಲ್ಲಿ ಮತ್ತು ಸಾರ್ವಜನಿಕ ಪರಿಸರದಲ್ಲಿ ಗುರುತಿಸುವುದು ಪ್ರಜ್ಞಾವಂತರ ಆದ್ಯತೆಯಾಗಬೇಕಿದೆ.
ರಾಜಕೀಯ ಪರಿಸರದಲ್ಲಿ ಕತ್ತರಿಸಲ್ಪಟ್ಟ ಅಮಾಯಕ ಹಸುವಿನ ಕೆಚ್ಚಲು ಅಥವಾ ಎಳೆ ಕರುವಿನ ಬಾಲ ರಾಜಕೀಯ ಸರಕಾಗುತ್ತದೆ. ಬಿಜೆಪಿಯವರಿಗೆ ಅಪರಾಧ ಎಸಗಿದ ವ್ಯಕ್ತಿ ಮುಸ್ಲಿಂ ಆಗಿದ್ದರೆ ʼ ಜಿಹಾದ್–ಭಯೋತ್ಪಾದನೆ ʼ ಕಾಣುತ್ತದೆ. ವಿರೋಧ ಪಕ್ಷಗಳಿಗೆ ಸರ್ಕಾರವೇ ಅಪರಾಧಿಯಾಗಿ ಕಾಣುತ್ತದೆ. ಇದರಿಂದಾಚೆಗೆ ಒಂದು ಸ್ವಸ್ಥ ಸಮಾಜಕ್ಕೆ ಕಾಣಬೇಕಿರುವುದು ಈ ಕೃತ್ಯದ ಹಿಂದಿರುವ, ಮತ್ತೊಂದು ಜೀವದ ಹಿಂಸೆಯನ್ನು ಆನಂದಿಸುವ ಅಮಾನುಷ ಮನಸ್ಥಿತಿ. ಸಮಾಜದಲ್ಲಿ ನಡೆಯುವ ಇಂತಹ ಹೀನ ಕೃತ್ಯಗಳನ್ನು ವ್ಯಕ್ತಿಗತವಾಗಿ ನೋಡದೆ, ತೆರೆದ ಕಣ್ಣಿಂದ ನೋಡಿದಾಗ ಅಲ್ಲಿ ನಮಗೆ ಸಮಾಜವನ್ನು ಕಾಡುತ್ತಿರುವ ಹಿಂಸೆಯ ವ್ಯಸನ ಕಾಣುತ್ತದೆ. ಪ್ರಬುದ್ಧ ಸಮಾಜವೊಂದು ಇಂತಹ ವರ್ತನೆಗಳನ್ನು ʼ ಸಾಮಾಜಿಕ ವ್ಯಾಧಿ ಅಥವಾ ವ್ಯಸನ ʼದ ನೆಲೆಯಲ್ಲೇ ನಿಷ್ಕರ್ಷೆ ಮಾಡಬೇಕಾಗುತ್ತದೆ.
ಹೀಗೆ ಕಾಣಲು ವಿಫಲವಾಗುವ ಸಮಾಜವೊಂದು, ಪ್ರತಿಯೊಂದು ಹೀನಾಪರಾಧವನ್ನೂ ರಾಜಕೀಯ ಸರಕುಗಳನ್ನಾಗಿ ಪರಿವರ್ತಿಸುತ್ತದೆ. ವ್ಯಕ್ತಿಗತ ಅಸ್ಮಿತೆಯೇ ಅಪರಾಧಗಳ ಕೇಂದ್ರ ಬಿಂದು ಆಗಿಬಿಟ್ಟರೆ ಅಲ್ಲಿ ಸಾಮಾಜಿಕ ವ್ಯಸನವೂ ಸಹ ಅನುಕೂಲಕ್ಕೆ ತಕ್ಕಂತೆ ಬಳಸಿಕೊಳ್ಳಬಹುದಾದ ವಿದ್ಯಮಾನ ಆಗಿಬಿಡುತ್ತದೆ. ಕರ್ನಾಟಕದ ಸಮಾಜ ಇಂತಹ ಒಂದು ಸಂದಿಗ್ಧ ಪರಿಸ್ಥಿತಿಯನ್ನು ಎದುರಿಸುತ್ತಿದೆ. ಹಿಂಸೆ ಮತ್ತು ಮತ್ತು ಕ್ರೌರ್ಯ ಸಾಪೇಕ್ಷವಾಗುತ್ತಿರುವಂತೆಯೇ, ಇದರಿಂದ ಬಾಧಿತವಾಗುವ ಜೀವಗಳು ಕೇವಲ ಬಳಕೆಯ ವಸ್ತುಗಳಾಗಿಬಿಡುತ್ತವೆ. ಅಧಿಕಾರ ರಾಜಕಾರಣದ ಸ್ವಾರ್ಥಕ್ಕೆ ಬಳಸಿಕೊಳ್ಳುವ ಈ ಜೀವಗಳಿಗೆ ನಿಜವಾದ ಮಾನವೀಯ ಸ್ಪಂದನೆ ಅತ್ಯವಶ್ಯವಾಗಿರುತ್ತದೆ. ಈ ಸಾಂತ್ವನವನ್ನು ನೀಡುತ್ತಲೇ, ಸಮಾಜದಲ್ಲಿ ಹಿಂಸೆ ಮತ್ತು ಕ್ರೌರ್ಯವನ್ನು ನಿಗ್ರಹಿಸಿ, ನಿಯಂತ್ರಿಸಿ, ನಿರ್ಬಂಧಿಸುವ ನಿಟ್ಟಿನಲ್ಲಿ ನಾಗರಿಕ ಸಮಾಜ (Civil Society) ಹೊಸ ಹಾದಿಗಳನ್ನು ಹುಡುಕಿಕೊಳ್ಳಬೇಕಿದೆ. ಆಗ ಸಮಾಜದಲ್ಲಿ ಮನುಜ ಸೂಕ್ಷ್ಮತೆ, ಲಿಂಗ ಸೂಕ್ಷ್ಮತೆ-ಸಂವೇದನೆ ಮತ್ತು ಜೀವ ಸೂಕ್ಷ್ಮತೆಯನ್ನು ಬೇರಿನಿಂದಲೇ ಬೆಳೆಸುವ ಪ್ರಯತ್ನಗಳು ಸಫಲವಾಗಬಹುದು.
ಕೆಚ್ಚಲು ಕೊಯ್ದ ಪ್ರಕರಣದ ಸುತ್ತಲಿನ ಸಂಕಥನದಲ್ಲಿ ಈ ಸೂಕ್ಷ್ಮಗಳು ನಮ್ಮನ್ನು ಕಾಡಲೇಬೇಕಲ್ಲವೇ ?
ನಾ. ದಿವಾಕರ, ಮೈಸೂರು
ಚಿಂತಕರು
ಇದನ್ನೂ ಓದಿ- ಸತ್ಯವೆನ್ನುವ ಜವಾರಿ ಮತ್ತು ಸುಳ್ಳಿನ ಸವಾರಿ