ನವದೆಹಲಿ: ದೆಹಲಿ ವಿಧಾನಸಭೆ ಚುನಾವಣೆಗೆ ಎಎಪಿ ಹಾಗೂ ಬಿಜೆಪಿ ಒಳ ಒಪ್ಪಂದ ಮಾಡಿಕೊಂಡಿದ್ದು, ಪರಸ್ಪರ ಹೋರಾಟದ ನಾಟಕವಾಡುತ್ತಿವೆ. ಹೀಗಾಗಿ, ದೆಹಲಿಯ ಸ್ಥಿತಿ ಫುಟ್ಬಾಲ್ನಂತಾಗಿದೆ ಎಂದು ಕಾಂಗ್ರೆಸ್ ಆರೋಪ ಮಾಡಿದೆ. ಈ ಚುನಾವಣೆ ಹಿನ್ನೆಲೆಯಲ್ಲಿ ಎಎಪಿ ಹಾಗೂ ಬಿಜೆಪಿ ವಿರುದ್ಧ ಕಾಂಗ್ರೆಸ್ ನಾಯಕ ಪವನ್ ಖೇರಾ ವಾಗ್ದಾಳಿ ನಡೆಸಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 2013–14ರಲ್ಲಿ ಸರ್ಕಾರಗಳು ಬದಲಾದ ನಂತರ ದೆಹಲಿಯು ಸಾಕಷ್ಟು ಹಗರಣಗಳಿಗೆ ಸಾಕ್ಷಿಯಾಗಿದೆ ಎಂದು ಆಪಾದಿಸಿದ್ದಾರೆ.
2013-14ರಿಂದ ದೆಹಲಿಯಲ್ಲಿ ನಡೆಯುತ್ತಿರುವ ಬೆಳವಣಿಗೆಗಳೆಲ್ಲವನ್ನೂ ಡಬಲ್ ವಂಚನೆ ಎಂದು ಕರೆಯುತ್ತೇನೆ. ಮೊದಲನ ವಂಚನೆಯನ್ನು ದೆಹಲಿ ಸರ್ಕಾರ ಆರಂಭಿಸಿದರೆ, ಎರಡನೇ ವಂಚನೆಯನ್ನು ಕೇಂದ್ರ ಸರ್ಕಾರ ಆರಂಭಿಸಿದೆ. ಎಎಪಿ ಮತ್ತು ಬಿಜೆಪಿ ಒಳ ಒಪ್ಪಂದ ಮಾಡಿಕೊಂಡು, ನಾಟಕದ ಹೋರಾಟ ನಡೆಸುತ್ತಿರುವುದರಿಂದ ದೆಹಲಿಯ ಸ್ಥಿತಿ ಫುಟ್ಬಾಲ್ನಂತಾಗಿದೆ. ಆದರೆ, ದೆಹಲಿಯ ಜನ ಅದನ್ನು ಸಹಿಸುವುದಿಲ್ಲ. ಈ ಚುನಾವಣೆಯು ಇಡೀ ರಾಷ್ಟ್ರದ ಭವಿಷ್ಯವನ್ನು ಬರೆಯಲಿದೆ. ಇಡೀ ದೇಶಕ್ಕೆ ದಿಕ್ಕು ತೋರಲಿದೆ. ಜನರು ಮತ್ತೆ ಕಾಂಗ್ರೆಸ್ನತ್ತ ಮುಖ ಮಾಡಲಿದ್ದಾರೆ ಎಂದು ಅವರು ಭವಿಷ್ಯ ನುಡಿದಿದ್ದಾರೆ.
ಈ ಬಾರಿಯ ಚುನಾವಣೆಯಲ್ಲಿ ಕಾಂಗ್ರೆಸ್ ಗೆದ್ದು ಅಧಿಕಾರಕ್ಕೆ ಬಂದರೆ, ಸಚಿವ ಸಂಪುಟದ ಮೊದಲ ಸಭೆಯಲ್ಲೇ ಎಲ್ಲ ಭರವಸೆಗಳನ್ನು ಈಡೇರಿಸಲಿದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಕಾಂಗ್ರೆಸ್ ಅಧಿಕಾರದಲ್ಲಿರುವ ಕರ್ನಾಟಕ, ತೆಲಂಗಾಣ, ಹಿಮಾಚಲ ಪ್ರದೇಶ ಹಾಗೂ ಜಾರ್ಖಂಡ್ನಲ್ಲಿ ಪಕ್ಷವು ಚುನಾವಣಾ ಪೂರ್ವದಲ್ಲಿ ನೀಡಿದ್ದ ಎಲ್ಲ ಭರವಸೆಗಳನ್ನು ಈಡೇರಿಸಿದೆ ಎಂದು ಪ್ರತಿಪಾದಿಸಿರುವ ಅವರು, ತಮ್ಮ ಪಕ್ಷವು ನೀಡಿದ ಆಶ್ವಾಸನೆಗಳನ್ನು ಈಡೇರಿಸುತ್ತದೆ ಎಂಬುದನ್ನು ಜನರು ನಂಬುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಕಾಂಗ್ರೆಸ್ ಪಕ್ಷವು ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ, ದೆಹಲಿ ಜನರಿಗೆ ಉಚಿತ ಪಡಿತರ, 300 ಯೂನಿಟ್ಗಳವರೆಗೆ ಉಚಿತ ವಿದ್ಯುತ್, ರೂ. 500ಕ್ಕೆ ಎಲ್ಪಿಜಿ ಸಿಲಿಂಡರ್, ಮಹಿಳೆಯರಿಗೆ ಮಾಸಿಕ ರೂ. 2,500, ರೂ. 25 ಲಕ್ಷದವರೆಗೆ ಉಚಿತ ಆರೋಗ್ಯ ವಿಮೆ, ನಿರುದ್ಯೋಗಿ ಯುವಕರಿಗೆ ತಿಂಗಳಿಗೆ ರೂ. 8,500 ನೆರವು ಸೇರಿದಂತೆ ಹಲವು ಭರವಸೆಗಳನ್ನು ನೀಡಿದೆ. 70 ಸದಸ್ಯರ ದೆಹಲಿ ವಿಧಾನಸಭೆಗೆ ಫೆಬ್ರುವರಿ 5ರಂದು ಮತದಾನ ನಡೆಯಲಿದ್ದು, ಫೆ. 8ರಂದು ಫಲಿತಾಂಶ ಪ್ರಕಟವಾಗಲಿದೆ.