ಕ್ಯಾಲಿಫೋರ್ನಿಯ ರಾಜ್ಯ ಹಳೆಯ ಕಾಡ್ಗಿಚ್ಚುಗಳಿಂದ ಪಾಠ ಕಲಿತದ್ದು ಏನು? ಹಿಂದೆಲ್ಲ ನಾಲ್ಕಾರು ತಿಂಗಳುಗಳವರೆಗೆ ಕಾಡ್ಗಿಚ್ಚುಗಳು ಕ್ಯಾಲಿಫೋರ್ನಿಯಾದಲ್ಲಿ ನಿರಂತರ ಉರಿದ ಉದಾಹರಣೆಗಳಿವೆ. ಹೀಗಿದ್ದೂ ಅಮೆರಿಕ ಏಕೆ ಮೈಮರೆಯಿತು? ಹವಾಮಾನ ಬದಲಾವಣೆಯ ಕಾವು ತಟ್ಟಿದ್ದು ಇನ್ನೂ ಸಾಲದೆ ಅದಕ್ಕೆ? ವಿಜ್ಞಾನ ಲೇಖಕ ಹಾಸನದ ಕೆ.ಎಸ್.ರವಿಕುಮಾರ್ ಅವರು ಕ್ಯಾಲಿಫೋರ್ನಿಯಾದ ಕಾಡ್ಗಿಚ್ಚಿನ ಕುರಿತು ಬರೆಯುವ ಸರಣಿ ಲೇಖನದ ಮೊದಲ ಭಾಗ ಇಲ್ಲಿದೆ.
ದಕ್ಷಿಣ ಕ್ಯಾಲಿಫೋರ್ನಿಯಾದ ಲಾಸ್‍ಎಂಜೆಲಿಸ್ ಕೌಂಟಿಯನ್ನು ಸುಟ್ಟ ಕಾಡ್ಗಿಚ್ಚಿನ ವಿಡಿಯೋಗಳನ್ನು ಸತತ ನೋಡಿದ ಮೇಲೆ ಒಂದು ದೊಡ್ಡ ದೇಶದಲ್ಲಿ ಮಿಲಿಟರಿ ಸೈನಿಕರಿಗಿಂತ ಬೆಂಕಿ ನಂದಿಸುವ ಬೆಂಕಿಯಾಳುಗಳ (Fire fighting crew) ಸಂಖ್ಯೆ ಜಾಸ್ತಿ ಇದ್ದರೆ ಒಳ್ಳೆಯದು ಎಂದು ನನಗನ್ನಿಸಿತು. ಲಾಸ್‍ಎಂಜೆಲಿಸ್ ನಗರದ ಭವ್ಯ ಬೀದಿಯಲ್ಲಿ ಸಾಲುಗಟ್ಟಿ ಸಾಗಿದ ಫೈರ್ ಇಂಜಿನ್ ಟ್ರಕ್ಕುಗಳನ್ನು ನೋಡಿದಾಗ ಯುದ್ಧ ಜರುಗುತ್ತಿರುವ ಗಡಿಯ ಭಾಗವನ್ನು ತುರ್ತಾಗಿ ತಲುಪಲು ಸಾಗುವ ಮಿಲಿಟರಿ ಟ್ರಕ್ಕುಗಳು ನೆನಪಿಗೆ ಬಂದವು. ಲಾಸ್‍ಎಂಜೆಲಿಸ್ ಬೆಂಕಿ ಇಲಾಖೆ (LAFD) ಯ ಸಾವಿರಕ್ಕೂ ಹೆಚ್ಚು ಮಂದಿ ಬೆಂಕಿಯಾಳುಗಳು ಮೊದಲ ಮೂರು ದಿನಗಳಲ್ಲಿ ಹಗಲು ರಾತ್ರಿ ಕಾಡ್ಗಿಚ್ಚನ್ನು ನಂದಿಸಲು ಬಿಡುವಿಲ್ಲದೆ ಪ್ರಯತ್ನಿಸಿದರೂ ಬೆಂಕಿಯ ಹರಡಿಕೆಯನ್ನು ತಡೆಯಲಾಗಲಿಲ್ಲ. ಹಲವು ಬಾರಿ ಅವರೇ ಕಂಗೆಟ್ಟಂತಿತ್ತು, ಸರಸರನೆ ಓಡಲಾಗದಂತೆ ಗಾಬರಿ ಅವರ ಕಾಲುಗಳನ್ನು ಹಿಡಿಯುತ್ತಿತ್ತು. ಗಲಿಬಿಲಿಯಲ್ಲಿ ಉರಿವ ಬೆಂಕಿಯ ಮೇಲೆ ಹೇಗೆ ಹೇಗೊ ಅವರು ನೀರು ಎರಚುತ್ತಿದ್ದರು. ಅವರೆಲ್ಲ ತಮ್ಮ ಕಸುಬಿನಲ್ಲಿ ನುರಿತವರೆ ಆಗಿದ್ದರೂ ಬೆಂಕಿಯ ಭಯಾನಕ ಯರ್ರಾಬಿರ್ರಿ ಚಲನೆ ಹಾಗಿತ್ತು. ಕಾಡ್ಗಿಚ್ಚು ವಿಸ್ತಾರದ ಪ್ರದೇಶಗಳಿಗೆ ಎಷ್ಟು ಬೇಗ ಹಬ್ಬುತ್ತಿತ್ತೆಂದರೆ ಒಂದು ಸಾವಿರವಲ್ಲ, ಹತ್ತು ಸಾವಿರಕ್ಕೂ ಹೆಚ್ಚು ಸಾಹಸಿ ಬೆಂಕಿಯಾಳುಗಳ ಸೇವೆ ಲಾಸ್‍ಎಂಜೆಲಿಸ್ ಕೌಂಟಿಗೆ ಒಮ್ಮೆಲೆ ಬೇಕಿತ್ತು ಅಂತ ಅನಿಸಿತು.
ನ್ಯಾಟೋದ ಒಂದೊಂದು ಡಿವಿಷನ್ನಿನಲ್ಲಿ 10ರಿಂದ 15 ಸಾವಿರ ಸೈನಿಕರಿರುತ್ತಾರೆ. ಅವರಿಗೇ ಬೆಂಕಿ ಆರಿಸುವ ತರಬೇತು ಕೊಟ್ಟು ಕಾರ್ಯಾಚರಣೆಗೆ ಇಳಿಸಬಹುದಿತ್ತೇನೊ. ಆಗಲೂ ಕಾಡ್ಗಿಚ್ಚು ತಹಬಂದಿಗೆ ಬರುತ್ತಿತ್ತೆ, ಗೊತ್ತಿಲ್ಲ. ಇದೆಲ್ಲ ಆ ಚಣದಲ್ಲಿ ಆಗುವ ಕೆಲಸವಲ್ಲ. ಹೀಗಾಗಿ ಅಮೆರಿಕ ಹೆಚ್ಚುವರಿ ಬೆಂಕಿಯಾಳುಗಳನ್ನು ಮಿಲಿಟರಿ ಮಾದರಿಯಲ್ಲಿ ನೇಮಿಸಿಕೊಳ್ಳಬೇಕು. ಕಾಡ್ಗಿಚ್ಚನ್ನು ಒಂದೆಡೆಯಿದ ಇನ್ನೊಂದೆಡೆಗೆ ಒಯ್ಯುವ ಗಾಳಿಯ ನಡವಳಿಕೆ ಹೇಗಿತ್ತೆಂದರೆ ಅದರ ಒತ್ತರಕ್ಕೆ ಸಮನಾಗಿ ಬೆಂಕಿಯಾಳುಗಳನ್ನು ಹೊರಗಿನಿಂದ ಕರೆಸಿಕೊಳ್ಳುವುದಕ್ಕೆ ಸಮಯವೇ ಇರಲಿಲ್ಲ. ಹೀಗಾಗಿ ಆಡಳಿತಗಳು ಜೈಲುಸಜೆಗೆ ಒಳಪಟ್ಟ 395 ಸೆರೆಯಾಳುಗಳನ್ನೂ ಬೆಂಕಿ ಆರಿಸಲು ಬಳಸಿಕೊಂಡವು. ಈ ನಡೆಗೆ ಅಮೆರಿಕ ಜಗತ್ತಿನೆಲ್ಲೆಡೆಯಿಂದ ಟೀಕೆಯ ದಾಳಿಗೆ ಎದುರಾಯಿತು. ಹೌದು, ಬೆಂಕಿ ನಂದಿಸಲು ಬೇರುಮಟ್ಟದ ತರಬೇತಿ ಮತ್ತು ತಿಳುವಳಿಕೆಗಳು ಇರಬೇಕು, ಇಲ್ಲವಾದರೆ ನಂದಿಸುವವರ ಜೀವಕ್ಕೆ ಸಂಚಕಾರವಿರುತ್ತದೆ ಅಲ್ಲವೆ? ಕೈದಿಗಳೆಂದ ಮಾತ್ರಕ್ಕೆ ಅವರ ಜೀವ ತೆಗೆಯಬಹುದು ಎಂದು ಕೋರ್ಟು ಹೇಳಿದೆಯೆ?
ಹವಾಮಾನದ ಆಗುಹೋಗುಗಳನ್ನು ಸರಿಯಾಗಿ ಗ್ರಹಿಸದ ಆಡಳಿತಗಳು ವಿಪತ್ತಿನ ವೇಳೆ ಕಂಗಾಲಾಗಿ ತಪ್ಪುತಪ್ಪು ತೀರ್ಮಾನಗಳನ್ನು ತೆಗೆದುಕೊಳ್ಳುತ್ತವೆ. ಮೊದಲ ಮೂರ್ನಾಲ್ಕು ದಿನಗಳನ್ನು ಇಂತಹ ಎಡವಟ್ಟುಗಳಲ್ಲಿ ಕಳೆದುಕೊಂಡ ಮೇಲೆ ಸುತ್ತಮುತ್ತಲ ಏಳು ರಾಜ್ಯಗಳಿಂದ ಹೆಚ್ಚುವರಿ ಬೆಂಕಿಯಾಳುಗಳನ್ನು ಕರೆಸಿಕೊಳ್ಳಲಾಯಿತು. ಇವರಲ್ಲದೆ ವಿಮಾನ ಮತ್ತು ಅತ್ಯಾಧುನಿಕ ಹೆಲಿಕಾಪ್ಟರ್‌ಗಳಿಂದ ಕಾರ್ಯಾಚರಣೆ ನಡೆಸಲು ಉತ್ತರದ ಕೆನಡಾ, ದಕ್ಷಿಣದ ಮೆಕ್ಸಿಕೊದಿಂದಲೂ ಅನುಭವಿ ಪೈಲಟ್ ಮತ್ತು ಬೆಂಕಿಯಾಳುಗಳು ನೆರವಿಗೆ ಬಂದರು. ಇಷ್ಟಾಗಿಯೂ ಕಾಡ್ಗಿಚ್ಚು ನಂದಿತೆ, ಇಲ್ಲ. ಜನವರಿ 7ರ ಮಂಗಳವಾರದಂದು ಹೊತ್ತಿಕೊಂಡ ಕಾಡ್ಗಿಚ್ಚು ವಾರ ಕಳೆದರೂ ಹತೋಟಿಗೆ ಬರಲಿಲ್ಲ. ಹೊಸ ಹೊಸ ಪ್ರದೇಶಗಳಿಗೆ ಹುಚ್ಚು ಹುಮ್ಮಸ್ಸಿನಿಂದ ಹಬ್ಬುತ್ತಲೆ ಇತ್ತು. ಪೆಸಿಫಿಕ್ ಪಾಲಿಸೇಡ್ಸ್ ಪ್ರದೇಶದಲ್ಲಂತೂ ಬಹಳ ಅಪರೂಪದ ಬೆಂಕಿಯ ಸುಂಟರಗಾಳಿ(ಫೈರ್ ಟಾರ್ನೆಡೊ)ಯೆ ರೂಪುಗೊಂಡಿತು. ಅದು ಗರಗರ ಸುತ್ತುವುದನ್ನು ಕಂಡು ಸಾಮಾನ್ಯ ಜನರಿರಲಿ, ಬೆಂಕಿ ನಂದಿಸುವವರೆ ದಿಗಿಲು ಬಿದ್ದು ಹೋದರು. ವಿಪರೀತ ಕಾದು ಹಗುರಗೊಂಡ ಗಾಳಿಯ ಜೊತೆ ಬೆಂಕಿಯ ಉರಿಗಳು ನೇರ ಕೂಡಿಕೊಂಡು ಸುಂಟರಗಾಳಿ ರೂಪುಗೊಳ್ಳುತ್ತದೆ. ಈ ಬಗೆಯ ಸುಂಟರಗಾಳಿಗೆ ‘‘Fire-nado’ ಎಂಬ ಹೊಸ ಹೆಸರನ್ನೆ ಟಂಕಿಸಲಾಗಿದೆ. ಹವಾಮಾನ ಬದಲಾವಣೆ ತನ್ನ ಪದನೆರಕೆ(ಡಿಕ್ಶನರಿ)ಗೆ ಹೊಸ ಹೊಸ ಪದಗಳನ್ನು ಸೇರಿಸಿಕೊಳ್ಳುತ್ತಿದೆ.
ಅಮೆರಿಕ ಮಾತ್ರವಲ್ಲ, ಇನ್ನು ಮುಂದೆ ಕಾಡುಗಳಿರುವ ಯಾವುದೇ ದೇಶದಲ್ಲಿ ಸದಾ ಅಣಿಗೊಂಡ ಸ್ಥಿತಿಯಲ್ಲಿ ಬೆಂಕಿಯಾಳುಗಳ ದೊಡ್ಡ ದೊಡ್ಡ ತಂಡಗಳು ಇರಬೇಕು. ಕಾಡುಗಳು ಹಳ್ಳಿ ಹೊಳಲುಗಳಲ್ಲೆ ಇರಲಿ, ಮನುಷ್ಯರು ನೆಟ್ಟು ಬೆಳೆಸಿದ್ದೇ ಇರಲಿ, ಕುರುಚಲೇ ಆಗಿರಲಿ, ಸದಾ ಹಸಿರಿನದೇ ಆಗಿರಲಿ, ದಟ್ಟವಾಗಿಯಾದರೂ ಇರಲಿ, ವಿರಳವಾಗಿಯಾದರೂ ಇರಲಿ, ಹುಲ್ಲನ್ನೆ ತುಂಬಿಕೊಂಡಿರಲಿ… ಯಾವುವೂ ಕಾಡ್ಗಿಚ್ಚಿನ ಅಪಾಯದಿಂದ ಮುಕ್ತವಾಗಿರುತ್ತವೆ ಎಂದು ಹೇಳ ಬರವುದಿಲ್ಲ. ನಾವೀಗ ವಾತಾವರಣ ಹೆಚ್ಚೆಚ್ಚು ಕಾದು ಕಾಡ್ಗಿಚ್ಚಿನ ಸಾಧ್ಯತೆ ಹಲವು ಪಟ್ಟು ಹೆಚ್ಚುತ್ತಿರುವುದನ್ನು ಕಾಣುತ್ತಿದ್ದೇವೆ. ಹವಾಮಾನ ಬದಲಾವಣೆಯ ಈ ಕಾಲಘಟ್ಟದಲ್ಲಿ ಹೆಚ್ಚೆಚ್ಚು ಬಿಸಿಗೊಳ್ಳುತ್ತ ಸಾಗುವ ವರುಷಗಳೇ ನಮ್ಮ ಮುಂದಿರುವುದು. 2022ಕ್ಕಿಂತ 2023 ಹೆಚ್ಚು ಬಿಸಿಯಾಗಿತ್ತು, 2023ಕ್ಕಿಂತ 2024 ಹೆಚ್ಚು ಬಿಸಿಯಾಗಿತ್ತು. ಇಷ್ಟೇ ಅಲ್ಲದೆ ಕಾಡ್ಗಿಚ್ಚಿಗೆ ಬಿರುಬೇಸಗೆಯೆ ಇರಬೇಕು ಎಂಬ ನಿಯಮವೂ ಈಗಿಲ್ಲ. ಈ ವರುಷ ಚಳಿಗಾಲದ ನಡುಭಾಗದಲ್ಲಿ ಕ್ಯಾಲಿಫೋರ್ನಿಯ ಕಾಡ್ಗಿಚ್ಚನ್ನು ಕಂಡಿತು.
ಕ್ಯಾಲಿಫೋರ್ನಿಯ ಮತ್ತು ಕಾಡ್ಗಿಚ್ಚುಗಳಿಗಿರುವ ಗಾಢ ಗೆಳೆತನ ಬಹಳ ಹಳೆಯದು. 1932ರಿಂದ ಅಲ್ಲಿ ಕಾಡ್ಗಿಚ್ಚಿನ ದಾಖಲೆಗಳನ್ನು ಇರಿಸುವ ಪರಿಪಾಟ ಶುರುವಾಯಿತು. ಆದರೆ ಹೊಸ ವರುಷ 2025ರ ಹೊಸಿಲಲ್ಲೆ ಕಾಣಿಸಿಕೊಂಡ ಕಾಡ್ಗಿಚ್ಚು ಕ್ಯಾಲಿಫೋರ್ನಿಯಾದ ಚರಿತ್ರೆಯಲ್ಲೆ ಈ ಪಾಟಿ ಭಯಾನಕ ಎನಿಸಿರಲಿಲ್ಲವಂತೆ. ಇಂಗ್ಲಿಷಿನಲ್ಲಿ ಬರೆಯುವಾಗ California ಎನ್ನುವ ಬದಲು ʼCali‘fire’niaʼ ಎಂದು ಯುಟ್ಯೂಬಿನ ವಿಡಿಯೊ ಒಂದಕ್ಕೆ ನೋಡುಗರೊಬ್ಬರು ಕಮೆಂಟ್ ಹಾಕಿದ್ದರು. ಪ್ರತೀ ವರುಷ ಕ್ಯಾಲಿಫೋರ್ನಿಯಾದ ಒಂದಲ್ಲ ಒಂದು ಪ್ರದೇಶ ಕಾಡ್ಗಿಚ್ಚಿಗೆ ಸುಟ್ಟು ಹೋಗುತ್ತದೆ. ಈ ಬಾರಿ ಅದು ಆಯ್ದುಕೊಂಡದ್ದು ಲಾಸ್‍ಎಂಜೆಲಿಸ್ ನಗರವನ್ನು ಸುತ್ತುವರೆದಿರುವ ತಾಣಗಳನ್ನು. ಕಡಲ ತಡಿಯಿಂದ ಬೆಟ್ಟಗಳ ನೆತ್ತಿಯವರೆಗು, ಹುಲ್ಲುಗಾವಲಿನಿಂದ ಜನವಸತಿಯಿರುವೆಡೆಗು ಬೆಂಕಿಯ ಕುಣಿತವೆ ಕುಣಿತ. ಹಲವು ಕಡೆ ಬೆಂಕಿ ನಂದಿಸಲು ಸಾಕಷ್ಟು ನೀರು ಕೂಡ ಸಿಗುತ್ತಿಲ್ಲವಂತೆ. ಹೊರಗಿನಿಂದ ತುರ್ತಾಗಿ ತರಿಸಿಕೊಳ್ಳಬೇಕೆಂದರೆ ಉಸಿರುಗಟ್ಟಿಸುವ ಹೊಗೆ ಮತ್ತು ಬಿರ್ರನೆ ನೀರಿನಂಶವನ್ನು ಆವಿಯಾಗಿಸಿ ಕಣ್ಣು ತೆರೆಯಲಾಗದಂತಹ ಕಾವಿನ ನಡುವೆ ತಮ್ಮ ಜೀವವನ್ನು ಒತ್ತೆಯಿಟ್ಟು ಚಾಲಕರು ಟ್ಯಾಂಕರುಗಳನ್ನು ಚಲಾಯಿಸಬೇಕು. ಕೆಲವು ತಾಸುಗಳಲ್ಲಿ ಮುಗಿಯಬಹುದಾಗಿದ್ದ ನೀರು ತರುವ ಕೆಲಸಕ್ಕೆ ಒಂದು ದಿನಕ್ಕಿಂತಲೂ ಹೆಚ್ಚಿನ ಗಡುವು ಹಿಡಿಯುತ್ತಿದೆ. ಫೈರ್ ಇಂಜಿನ್ಗಳೂ ಸಾಕಷ್ಟು ಸಂಖ್ಯೆಯಲ್ಲಿ ಕಾರ್ಯಾಚರಣೆಗೆ ದೊರಕಿಲ್ಲ. ಮುನ್ಸಿಪಲ್ ಕೊಳಾಯಿಗಳಿಂದ ನೀರು ಪಡೆಯಲು ತಡೆಬಡೆಯಿಲ್ಲದೆ ಬೆಂಕಿ ನಂದಿಸುವುದಕ್ಕೆ ಅಗತ್ಯವಿರುವ ‘ಫೈರ್ ಹೈಡ್ರಾಂಟ್’ ಜೋಡಣೆಗಳ ಕೊರತೆಯೂ ಬೆಂಕಿಯಾಳುಗಳನ್ನು ಬಹಳ ಕಾಡಿತಂತೆ. ಈ ಎಲ್ಲ ಬೆಳವಣಿಗೆಗಳನ್ನು ಗಮನಿಸಿದಾಗ ಅಮೆರಿಕ ತನ್ನ ರಾಜ್ಯಗಳಲ್ಲಿ ಕಾಡ್ಗಿಚ್ಚನ್ನು ಎದುರಿಸಲು ಬೇಕಾದ ತಕ್ಕ ಏರ್ಪಾಟುಗಳನ್ನೆ ಮಾಡಿಕೊಂಡಿಲ್ಲ ಎಂದು ತಿಳಿದು ಬರುತ್ತದೆ. ಬಹುಶಃ ಅದು ಅಲ್ಲಲ್ಲಿ ಕಟ್ಟಡಗಳಲ್ಲಿ ಕಾಣಿಸಿಕೊಳ್ಳುವ ಆಕಸ್ಮಿಕ ಬೆಂಕಿ ಪ್ರಕರಣಗಳನ್ನು ಮಾತ್ರ ಗಂಭೀರವಾಗಿ ಪರಿಗಣಿಸಿರಬೇಕು. ಹಾಗಾದರೆ ಕ್ಯಾಲಿಫೋರ್ನಿಯ ರಾಜ್ಯ ಹಳೆಯ ಕಾಡ್ಗಿಚ್ಚುಗಳಿಂದ ಪಾಠ ಕಲಿತದ್ದು ಏನು? ಹಿಂದೆಲ್ಲ ನಾಲ್ಕಾರು ತಿಂಗಳುಗಳವರೆಗೆ ಕಾಡ್ಗಿಚ್ಚುಗಳು ಕ್ಯಾಲಿಫೋರ್ನಿಯಾದಲ್ಲಿ ನಿರಂತರ ಉರಿದ ಉದಾಹರಣೆಗಳಿವೆ. ಹೀಗಿದ್ದೂ ಅಮೆರಿಕ ಏಕೆ ಮೈಮರೆಯಿತು? ಹವಾಮಾನ ಬದಲಾವಣೆಯ ಕಾವು ತಟ್ಟಿದ್ದು ಇನ್ನೂ ಸಾಲದೆ ಅದಕ್ಕೆ?
(ಮುಂದಿನ ಭಾಗ ನಾಳೆ (18 ಜನವರಿ) ಪ್ರಕಟವಾಗಲಿದೆ)
ಕೆ.ಎಸ್.ರವಿಕುಮಾರ್, ಹಾಸನ
ವಿಜ್ಞಾನ ಲೇಖಕರು
ಇದನ್ನೂ ಓದಿ- ಧಗಧಗಿಸಿದ ದಕ್ಷಿಣ ಕ್ಯಾಲಿಫೋರ್ನಿಯಾ: ಕಾರಣ ಏನು?