ಬೆಂಗಳೂರು: ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ವಿರುದ್ದ ಬಿಜೆಪಿ ಶಾಸಕ ಸಿ.ಟಿ. ರವಿ ಅಶ್ಲೀಲ ಪದ ಬಳಕೆ ಮಾಡಿರುವುದು ಸತ್ಯ ಎಂದು ಕಾಂಗ್ರೆಸ್ ವಿಧಾನಪರಿಷತ್ ಸದಸ್ಯ ನಾಗರಾಜ್ ಯಾದವ್ ಸಿಐಡಿ ವಿಚಾರಣೆ ವೇಳೆ ತಿಳಿಸಿದ್ದಾರೆ. ಈ ಪ್ರಕರಣದ ವಿಚಾರಣೆಯನ್ನು ಸಿಐಡಿಗೆ ವಹಿಸಲಾಗಿದ್ದು, ಡಿವೈಎಸ್‌ಪಿ ಕೇಶವಮೂರ್ತಿ ವಿಚಾರಣೆ ನಡೆಸುತ್ತಿದ್ದಾರೆ. ವಿಚಾರಣೆಗೆ ಹಾಜರಾಗುವಂತೆ ನಾಗರಾಜ್ ಯಾದವ್ ಅವರಿಗೆ ನೋಟಿಸ್ ನೀಡಲಾಗಿತ್ತು.
ನಂತರ ಮಾತನಾಡಿದ ಅವರು ಆ ಘಟನೆಗೆ ನಾನೇ, ಪ್ರತ್ಯಕ್ಷ ಸಾಕ್ಷಿ. ಸಿಟಿ ರವಿ ಆ ಪದ ಬಳಸಿರುವುದು ಸತ್ಯ. ನಾನು ಪ್ರತ್ಯಕ್ಷ ಸಾಕ್ಷಿಯಾಗಿ ಸಿಐಡಿ ವಿಚಾರಣೆಯಲ್ಲಿ ಎಲ್ಲವನ್ನೂ ಹೇಳಿದ್ದೇನೆ. ಇನ್ನೂ ಅನೇಕ ವಿಚಾರಗಳನ್ನು ಸಿಐಡಿ ಅಧಿಕಾರಿಗಳ ಮುಂದೆ ಹೇಳಿದ್ದೇನೆ. ಆ ಎಲ್ಲ ವಿಷಯಗಳನ್ನು ಮಾಧ್ಯಮಗಳ ಮುಂದೆ ಹಂಚಿಕೊಳ್ಳಲಾಗುವುದಿಲ್ಲ ಎಂದು ಹೇಳಿದ್ದಾರೆ.
ಕಳೆದ ತಿಂಗಳು ಬೆಳಗಾವಿ ಅಧಿವೇಶನದ ಸಂದರ್ಭದಲ್ಲಿ ಕೊನೆಯ ದಿನದಂದು ಭಾರೀ ಹೈಡ್ರಾಮ ಉಂಟಾಗಿತ್ತು. ಅಂಬೇಡ್ಕರ್ ಕುರಿತು ಕೇಂದ್ರ ಗೃಹ ಸಚಿವ ಅಮಿತ್ ಶಾ ನೀಡಿದ್ದ ಹೇಳಿಕೆ ಕುರಿತು ಆರೋಪ ಪ್ರತ್ಯಾರೋಪ ನಡೆಯುತ್ತಿದ್ದ ಸಂದರ್ಭದಲ್ಲಿ ಗದ್ದಲ ಉಂಟಾಗಿದೆ. ಆಗ ಬಿಜೆಪಿ ಪರಿಷತ್ ಸದಸ್ಯ ಸಿ ಟಿ ರವಿ ಅವರು ತಮ್ಮ ವಿರುದ್ಧ ಅಸಂವಿಧಾನಿಕ ಪದ ಬಳಕೆ ಮಾಡಿದ್ದಾರೆ ಎಂದು ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರು ಆರೋಪ ಮಾಡಿದ್ದರು. ಈ ಆರೋಪದ ಹಿನ್ನೆಲೆಯಲ್ಲಿ ಸಿಟಿ ರವಿ ಅವರನ್ನು ಬಂಧಿಸಲಾಗಿತ್ತು. ರವಿ ಅವರು ಜಾಮೀನು ಪಡೆದು ಹೊರ ಬಂದಿದ್ದಾರೆ.