ಬೆಂಗಳೂರು: ದೇವನಹಳ್ಳಿ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಕಸ್ಟಮ್ಸ್ ವಿಚಕ್ಷಣ ದಳದ ಸಿಬ್ಬಂದಿ ಜ.9, ಕಳೆದ ಗುರುವಾರ ತಡರಾತ್ರಿ 23 ಕೆ.ಜಿ ಗಾಂಜಾ ವಶಕ್ಕೆ ಪಡೆದಿದ್ದಾರೆ. ವಶಪಡಿಸಿಕೊಳ್ಳಲಾದ ಗಾಂಜಾ ಒಟ್ಟು ಮೌಲ್ಯ 23 ಕೋಟಿ ರೂ. ಎಂದು ಅಂದಾಜು ಮಾಡಲಾಗಿದೆ. ಬ್ಯಾಂಕಾಕ್ ನಿಂದ ಕಳೆದ ಗುರುವಾರ ರಾತ್ರಿ ಬೆಂಗಳೂರು ವಿಮಾನ ನಿಲ್ದಾಣಕ್ಕೆ ಬಂದಿಳಿದ ಮೂವರು ಪ್ರಯಾಣಿಕರನ್ನು ತಪಾಸಣೆ ನಡೆಸಿದಾಗ ಗಾಂಜಾವನ್ನು ಕಳ್ಳ ಸಾಗಣೆ ಮಾಡುತ್ತಿರುವುದು ಪತ್ತೆಯಾಗಿದೆ. ಕೂಡಲೇ ಕಸ್ಟಮ್ಸ್ ಸಿಬ್ಬಂದಿ ಈ ಮೂವರನ್ನು ಬಂಧಿಸಿ ಇವರಿಂದ ವಿವಿಧ ಮಾದರಿಯ ಗಾಂಜಾ ವಶಪಡಿಸಿಕೊಂಡಿದ್ದಾರೆ. ಆರೋಪಿಗಳ ವಿರುದ್ಧ ಮಾದಕ ವಸ್ತುಗಳ ನಿಯಂತ್ರಣ ಕಾಯಿದೆ (ಎನ್ಡಿಪಿಎಸ್) ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಮಾಡಲಾಗುತ್ತಿದೆ.
ಹೈಡ್ರೋಫೋನಿಕ್ಸ್ ಮಾದರಿಯಲ್ಲಿ ನೀರಿನ ಮೇಲೆ ಬೆಳೆಯುವ ಗಾಂಜಾ ಬೀಜ ಮತ್ತು ಮೈರವಾನ್ ಗಾಂಜಾ ಹೂವುಗಳು ಇದರಲ್ಲಿ ಸೇರಿವೆ. ಪ್ರತಿಯೊಂದು ಮಾದರಿಯ ಗಾಂಜಾವನ್ನೂ ಪ್ರತ್ಯೇಕ ಕವರ್ ನಲ್ಲಿ ಪ್ಯಾಕ್ ಮಾಡಿಕೊಂಡು ಸಾಗಿಸುತ್ತಿದ್ದರು. ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಮಾರುಕಟ್ಟೆಯಲ್ಲಿ ಒಂದೊಂದು ಕೆಜಿ ಗಾಂಜಾ ಬೆಲೆ ಒಂದು ಕೋಟಿ ರೂ ಬೆಲೆ ಇದೆ. ಅದರಲ್ಲೂ ಹೈಡ್ರೋಫೋನಿಕ್ಸ್ ಗಾಂಜಾಗೆ ಹೆಚ್ಚನ ಬೇಡಿಕೆ ಇದೆ ಎನ್ನಲಾಗಿದೆ.