ಪೋಕ್ಸೋ ಪ್ರಕರಣ ರದ್ದು ಕೋರಿ ಬಿಜೆಪಿ ಮುಖಂಡ ಯಡಿಯೂರಪ್ಪ ಅರ್ಜಿ ವಿಚಾರಣೆ, ಪ್ರಾಸಿಕ್ಯೂಷನ್‌ ವಿರೋಧ, ವಿಚಾರಣೆ ಜ. 17ಕ್ಕೆ ಮುಂದೂಡಿಕೆ

Most read






ಬೆಂಗಳೂರು: ತಮ್ಮ ವಿರುದ್ಧ ದಾಖಲಾಗಿರುವ ಪೋಕ್ಸೊ ಪ್ರಕರಣವನ್ನು ರದ್ದು ಮಾಡುವಂತೆ ಹಿರಿಯ ಬಿಜೆಪಿ ಮುಖಂಡ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ಇಂದು ಹೈಕೋರ್ಟ್‌ ನಡೆಸಿತು. ಪ್ರಾಸಿಕ್ಯೂಷನ್‌ ಪರವಾಗಿ ವಾದ
ಮಂಡಿಸಿದ ಹಿರಿಯ ವಕೀಲ ಪ್ರೊ. ರವಿವರ್ಮ ಕುಮಾರ್ ಅವರು, ಯಡಿಯೂರಪ್ಪ ವಿರುದ್ಧದ ಪ್ರಕರಣವನ್ನು ರದ್ದುಗೊಳಿಸಬಾರದು ಎಂದು ವಾದಿಸಿ ಪೋಕ್ಸೊ‌ ಕಾಯ್ದೆಯ ಸೆಕ್ಷನ್ ಗಳ  ವಿವರಣೆ ನೀಡಿದರು. ಪ್ರಕರಣ ರದ್ದುಗೊಳಿಸಲು  ಕೆಲವು ಪ್ರಾಥಮಿಕ ಆಕ್ಷೇಪಗಳಿವೆ ಎಂದೂ ಹೇಳಿದರು.

ರವಿವರ್ಮ ಕುಮಾರ್‌ ಅವರು ಸಂತ್ರಸ್ತೆಯು ಯಡಿಯೂರಪ್ಪ ಅವರ ನಿವಾಸದಿಂದ ಹೊರಬಂದ ನಂತರ ಘಟನೆಯನ್ನು ತನ್ನ ತಾಯಿಗೆ ತಿಳಿಸುತ್ತಾಳೆ. ಏನು ನಡೆಯಿತು ಎಂದು ತಿಳಿದುಕೊಂಡ ನಂತರ ಸಂತ್ರಸ್ತೆಯ ತಾಯಿ ಮರಳಿ ಯಡಿಯೂರಪ್ಪ ಅವರ ಬಳಿ ಆಗಮಿಸುತ್ತಾರೆ ಎಂದು  ಸಂತ್ರಸ್ತೆಯ ಹೇಳಿಕೆಯನ್ನು ಓದಲು ಆರಂಭಿಸಿದರು. ಈ ವೇಳೆ ನಿರ್ದಿಷ್ಟ ಅಂಶಗಳನ್ನು ಓದುವುದು ಬೇಡ. ಅದು ಓದುವ ರೀತಿಯಲ್ಲಿಲ್ಲ ಎಂದು ನ್ಯಾಯಾಧೀಶರು ಸೂಚನೆ ನೀಡಿದರು.

ಯಡಿಯೂರಪ್ಪ ಅವರು ಪ್ರತ್ಯೇಕ ಕೊಠಡಿಯಲ್ಲಿ ಸಂತ್ರಸ್ತೆ ಬಾಲಕಿಯ ಜತೆ ಅನುಚಿತವಾಗಿ ವರ್ತಿಸಿದ್ದಾರೆ. ಬಾಲಕಿಗೆ ಹಣ ನೀಡಿ ಸೆಲ್ಫಿ ತೆಗೆದುಕೊಂಡಿದ್ದಾರೆ. ಮತ್ತೊಮ್ಮೆ ಯಡಿಯೂರಪ್ಪ ಅವರನ್ನು ಭೇಟಿ ಮಾಡಿದ ಸಂತ್ರಸ್ತೆಯ ತಾಯಿ ಮಾಡಿ ಸಂಭಾಷಣೆಯನ್ನು ವಿಡಿಯೊ ರೆಕಾರ್ಡಿಂಗ್‌ ಕೂಡಾ ಮಾಡಿಕೊಂಡಿದ್ದಾರೆ. ಬಾಲಕಿಯು ನನ್ನ ಮೊಮ್ಮಗಳಿದ್ದ ಹಾಗೆ, ಪರೀಕ್ಷೆ ನಡೆಸಿದೆ ಎಂದು ಯಡಿಯೂರಪ್ಪ ಅವರೇ ಹೇಳಿದ್ದಾರೆ. ಇದು ಘಟನೆಯನ್ನು ಒಪ್ಪಿಕೊಂಡ ಹಾಗೆ ಎಂದು ರವಿವರ್ಮ ಕುಮಾರ್ ವಾದ ಮಂಡಿಸಿದರು.

ನಂತರ ಯಡಿಯೂರಪ್ಪ ಅವರು ಸಂತ್ರಸ್ತೆ ತಾಯಿಯ ಮೊಬೈಲ್‌ ನಂಬರ್‌ ಸಂಗ್ರಹಿಸುತ್ತಾರೆ. ಯಡಿಯೂರಪ್ಪ ಅವರ ಧ್ವನಿ ಮಾದರಿಯು ಆಡಿಯೋ ಧ್ವನಿಗೆ ಹೊಂದಾಣಿಕೆಯಾಗಿದೆ. ಎಫ್‌ ಎಸ್‌ ಎಲ್‌ ಪ್ರಯೋಗಾಲಯದ ವರದಿ ಪಡೆದ ನ್ಯಾಯಾಲಯ ಯಡಿಯೂರಪ್ಪ ಮತ್ತು ದೂರುದಾರೆಯ ಧ್ವನಿ ಮಾದರಿ ಹೊಂದಾಣಿಕೆಯಾಗಿದೆ ಎಂದು ಪ್ರಯೋಗಾಲಯದ ವರದಿ ಹೇಳಿದೆ ಎಂದರು.

ಯಡಿಯೂರಪ್ಪ ಅವರ ಅರ್ಜಿಯನ್ನು ಏಕೆ ಮಾನ್ಯ ಮಾಡಬಾರದು ಎಂಬುದಕ್ಕೆ ಸಂಬಂಧಿಸಿದಂತೆ ಈ ಹಿಂದೆ ನೀಡಲಾಗಿರುವ  ತೀರ್ಪುಗಳನ್ನು ರವಿವರ್ಮ ಕುಮಾರ್‌ ಅವರು ನ್ಯಾಯಾಲಯದ ಗಮನಕ್ಕೆ ತಂದು ಕೆಲವು ತೀರ್ಪುಗಳನ್ನು ಓದಿದರು. ಯಡಿಯೂರಪ್ಪ ಅವರು ಪ್ರಕರಣವನ್ನು ಮುಚ್ಚಿ ಹಾಕಲು ವ್ಯವಸ್ಥಿತ ಪ್ರಯತ್ನವನ್ನು ಮಾಡಿದ್ದಾರೆ. ದೂರುದಾರೆ ಸಾವನ್ನಪ್ಪಿದ ಮೇಲೆ ನ್ಯಾಯಾಲಯದ ಮುಂದೆ ಬಂದಿದ್ದಾರೆ ಎಂದು ಹೇಳಿದರು. ಇವರ ವಾದವನ್ನು ಆಲಿಸಿದ ಹೈಕೋರ್ಟ್ ಜನವರಿ 17ಕ್ಕೆ ವಿಚಾರಣೆಯನ್ನು ಮುಂದೂಡಿದೆ.


ತಮ್ಮ 17 ವರ್ಷದ ಪುತ್ರಿಗೆ ಲೈಂಗಿಕ ಕಿರುಕುಳ ನೀಡಿದ್ದಾರೆ ಎಂದು ಮಹಿಳೆಯೊಬ್ಬರು ಯಡಿಯೂರಪ್ಪ ವಿರುದ್ಧ ಮಾರ್ಚ್ 14ರಂದು ಸದಾಶಿವನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ತಮ್ಮ ಪುತ್ರಿಯ ಮೇಲೆ ಲೈಂಗಿಕ ದೌರ್ಜನ್ಯ ನಡೆದಿದ್ದು ನ್ಯಾಯಕ್ಕಾಗಿ
ಸಹಾಯ ಮಾಡುವಂತೆ ಕೋರಿ ಯಡಿಯೂರಪ್ಪ ಅವರ ಬಳಿ ಹೋಗಿದ್ದೆ. ಆಗ ಅವರು ನನ್ನ ಪುತ್ರಿಯನ್ನು ಪ್ರತ್ಯೇಕ ಕೊಠಡಿಯೊಳಕ್ಕೆ ಕರೆದೊಯ್ದು ನನ್ನ ಪುತ್ರಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ. ಈ ವಿಷಯವನ್ನು ಯಾರಿಗೂ ಹೇಳದಂತೆ ಒಂದಿಷ್ಟು ಹಣ ನೀಡಿದ್ದರು ಎಂದು ಸಂತ್ರಸ್ತ ಬಾಲಕಿಯ ತಾಯಿ ಆರೋಪಿಸಿದ್ದರು.

ನಂತರ ಸದಾಶಿವ ನಗರ ಪೊಲೀಸರು ಯಡಿಯೂರಪ್ಪ ವಿರುದ್ಧ ಪೋಕ್ಸೋ ಪ್ರಕರಣ (ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ) ಅಡಿಯಲ್ಲಿ ಎಫ್ ಐ ಆರ್ ದಾಖಲಿಸಿದ್ದರು. ಸರ್ಕಾರ ಪ್ರಕರಣದ ತನಿಖೆಯನ್ನು ಸಿಐಡಿಗೆ ವಹಿಸಿತ್ತು ಯಡಿಯೂರಪ್ಪ ತಮ್ಮ ವಿರುದ್ಧ ದಾಖಲಾಗಿರುವ
ದೂರು ಮತ್ತು ಪೋಕ್ಸೋ ವಿಶೇಷ ನ್ಯಾಯಾಲಯದ ವಿಚಾರಣಾ ಪ್ರಕ್ರಿಯೆ ರದ್ದುಪಡಿಸಬೇಕು ಎಂದು ಕೋರಿ ಹೈಕೋರ್ಟ್‌ ನಲ್ಲಿ ಅರ್ಜಿ ಸಲ್ಲಿಸಿದ್ದರು. ಈ ಪ್ರಕರಣದಲ್ಲಿ ಜಾಮೀನು ಪಡೆದುಕೊಂಡಿದ್ದಾರೆ. ಪೋಕ್ಸೋ ಪ್ರಕರಣವನ್ನು
ರದ್ದುಗೊಳಿಸುವ ಅರ್ಜಿಯ ವಿಚಾರಣೆ ನಡೆಯುತ್ತಿದೆ.

More articles

Latest article