ಬೆಂಗಳೂರು: ರಾಜ್ಯ ಹಿಂದುಳಿದ ವರ್ಗಗಳ ಆಯೋಗ ಸಲ್ಲಿಸಿರುವ ‘ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ- 2015’ರ ದತ್ತಾಂಶಗಳ ಅಧ್ಯಯನ ವರದಿಯನ್ನುತೆರೆಯುವ ಸಂಬಂಧ ನಾಳೆ ಗುರುವಾರ ನಡೆಯಲಿರುವ ಸಚಿವ ಸಂಪುಟದಲ್ಲಿ ನಿರ್ಣಯಿಸಲಾಗುತ್ತದೆ. ಮುಚ್ಚಿದ ಲಕೋಟೆಯನ್ನು ತೆರೆಯುವ ಕುರಿತು ರಾಜ್ಯ ಸರ್ಕಾರ ಗುರುವಾರ ನಿರ್ಧರಿಸಲಿದೆ.
ಆಯೋಗವು ವರದಿಯನ್ನು ಮುಚ್ಚಿದ ಲಕೋಟೆಯಲ್ಲಿ ಸಲ್ಲಿಸಿದೆ. ನಾಳೆ ನಡೆಯಲಿರುವ ಸಚಿವ ಸಂಪುಟ ಸಭೆಯಲ್ಲಿ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಸಚಿವರು ವರದಿಯನ್ನು ಮಂಡಿಸಲಿದ್ದಾರೆ. ಸಭೆಯ16ನೇ ಕಾರ್ಯಸೂಚಿಯಲ್ಲಿ ಈ ವಿವರವನ್ನು ನೀಡಲಾಗಿದೆ. ಆದರೆ, ವರದಿಗೆ ಸಂಬಂಧಿಸಿದ ಇತರ ಯಾವುದೇ ಮಾಹಿತಿಯನ್ನು ಕಾರ್ಯಸೂಚಿಯಲ್ಲಿ ನಮೂದಿಸಿಲ್ಲ. ಸಚಿವ ಸಂಪುಟ ಸಭೆಯಲ್ಲಿ ಮುಚ್ಚಿದ ಲಕೋಟೆಯನ್ನು ತೆರೆಯಬೇಕೇ? ಬೇಡವೇ? ತೆರೆದ ನಂತರ ಮುಂದೇನು ಮಾಡಬೇಕು? ಸಚಿವ ಸಂಪುಟ ಉಪ ಸಮಿತಿ ರಚಿಸಬೇಕೇ ಅಥವಾ ವಿಧಾನ ಮಂಡದಲ್ಲಿ ವರದಿಯನ್ನು ಮಂಡಿಸಬೇಕೇ ಎಂಬ ಬಗ್ಗೆ ಚರ್ಚೆ ನಡೆಯಲಿದೆ ಎಂದು ಸರ್ಕಾರದ ಮೂಲಗಳು ತಿಳಿಸಿವೆ.
ಎಚ್. ಕಾಂತರಾಜ ಅವರು ಆಯೋಗದ ಅಧ್ಯಕ್ಷರಾಗಿದ್ದಾಗ ಈ ಸಮೀಕ್ಷೆ ನಡೆದಿತ್ತು. ನಂತರ ಅಧ್ಯಕ್ಷರಾಗಿದ್ದ ಜಯಪ್ರಕಾಶ ಹೆಗ್ಡೆ ಅವರ ನೇತೃತ್ವದ ಆಯೋಗವು 2024ರ ಫೆಬ್ರವರಿಯಲ್ಲಿ ಸರ್ಕಾರಕ್ಕೆ ಸಲ್ಲಿಸಿತ್ತು. ಕಾಂತರಾಜ ನೇತೃತ್ವದ ಆಯೋಗ ಸಮೀಕ್ಷೆಯ ದತ್ತಾಂಶಗಳನ್ನು ಸಂಗ್ರಹಿಸಿದ್ದು, ಜಯಪ್ರಕಾಶ ಹೆಗ್ಡೆ ಅವರ ಅವಧಿಯಲ್ಲಿ ಶಿಫಾರಸುಗಳ ಸಹಿತ ಸರ್ಕಾರಕ್ಕೆ ಸಲ್ಲಿಸಲಾಗಿದೆ ಎಂದು ತಿಳಿದು ಬಂದಿದೆ.