ಕೋಮುವಾದಿಗಳನ್ನು ನಿಯಂತ್ರಿಸುವಲ್ಲಿ ಕನ್ನಡ ಪ್ಲಾನೆಟ್ ಪಾತ್ರವೂ ಇದೆ: ನೂರ್ ಶ್ರೀಧರ್

Most read

ಬೆಂಗಳೂರು: ಕರ್ನಾಟಕದಲ್ಲಿ ಕನ್ನಡ ಪ್ಲಾನೆಟ್ ನಂತಹ ಪರ್ಯಾಯ ಮಾಧ್ಯಮಗಳ ಪ್ರಚಾರದಿಂದಲೇ ಕೋಮುವಾದಿ ಬಿಜೆಪಿಯನ್ನು ಸೋಲಿಸಲು ಸಾಧ್ಯವಾಗಿದೆ ಎಂದು ಕರ್ನಾಟಕ ಜನಶಕ್ತಿ ಸಂಘಟನೆಯ ಮುಖಂಡ ನೂರ್ ಶ್ರೀಧರ್ ಹೇಳಿದ್ದಾರೆ.

ಪ್ಲಾನೆಟ್ ನಂತಹ ಪರ್ಯಾಯ ಮಾಧ್ಯಮಗಳು ಮುಖ್ಯವಾಹಿನಿಗೆ ಬರಬೇಕು. ಇಂತಹ ಮಾಧ್ಯಮಗಳಿಂದ ಮಾತ್ರ ಕೋಮುವಾದಿ ಪಕ್ಷ, ಸಂಘಗಳು ಮತ್ತು ವ್ಯಕ್ತಿಗಳನ್ನು ನಿಯಂತ್ರಿಸಲು ಸಾಧ್ಯ ಎಂದು ಅಭಿಪ್ರಾಯಪಟ್ಟರು.

ಕನ್ನಡ ಪ್ಲಾನೆಟ್ ಗೆ ಒಂದು ವರ್ಷ ತುಂಬಿದ ಹಿನ್ನೆಲೆಯಲ್ಲಿ ಆಯೋಜಿಸಲಾಗಿದ್ದ ಭಾರತ ಸಂವಿದಾನ ಸಂಭ್ರಮ-75, ಕನ್ನಡ ಪ್ಲಾನೆಟ್ ಕಾನ್ ಕ್ಲೇವ್- 2025 ಎಂಬ ವಿನೂತನ ಕಾರ್ಯಕ್ರಮದಲ್ಲಿ ಭಾರತ ವಿರೋಧಿ, ಸಂವಿಧಾನ ವಿರೋಧಿಗಳಿಗೆ ನಮ್ಮ ಉತ್ತರ ಕುರಿತ
ಸಂವಾದದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ಸಂವಿಧಾನದ ಆಶಯಗಳಿಗೆ ವಿರುದ್ಧವಾಗಿ ಇರುವವರೇ ದೇಶ ವಿರೋಧಿಗಳು. ಅವರನ್ನು ಒಂದು ಪಕ್ಷ ಒಂದು ಸಂಘಟನೆ ಅಥವಾ ಒಬ್ಬ ವ್ಯಕ್ತಿಯಲ್ಲಿ ಹುಡುಕಾಟ ನಡೆಸಬೇಕಿಲ್ಲ. ದುರಂತ ಎಂದರೆ ಇಂತಹ ದೇಶ ವಿರೋಧಿಗಳೇ ಇಂದು ದೇಶ ಆಳುತ್ತಿದ್ದಾರೆ ಎಂದು ಕರ್ನಾಟಕ ಜನಶಕ್ತಿ ಸಂಘಟನೆಯ ಮುಖಂಡ ನೂರ್ ಶ್ರೀಧರ್ ವಿಷಾದ ವ್ಯಕ್ತಪಡಿಸಿದ್ದಾರೆ.

ಕೋಮುವಾದಿಗಳು ಒಂದು ದೇಶಕ್ಕೆ ಮಾತ್ರ ಸೀಮಿತವಾಗಿಲ್ಲ. ಒಂದೊಂದು ದೇಶದಲ್ಲಿ ಒಂದೊಂದು ಧರ್ಮದ ಹೆಸರಿನಲ್ಲಿ ಉದ್ಭವಿಸಿದ್ದಾರೆ. ಭಾರತದಲ್ಲಿ ಹಿಂದೂ ಹೆಸರಿನಲ್ಲಿ ಇದ್ದಾರೆ. ಧರ್ಮದ ಹೆಸರಿನಲ್ಲಿ ಅಧಿಕಾರ ಹಿಡಿಯುವುದು ಮತ್ತು ಲೂಟಿ ಹೊಡೆಯುವುದೇ ಈ ಕೋಮುವಾದಿಗಳ ಉದ್ದೇಶ ಎಂದು ಪ್ರತಿಪಾದಿಸಿದರು. ಕೋಮುವಾದಿಗಳನ್ನು ಎದುರಿಸಲು ಸಜ್ಜಾಗಬೇಕು. ರೈತ ಚಳವಳಿ ನಡೆಯಿತು. ಈ ಕೋಮುವಾದಿಗಳ ಮುಖವಾಡ ಕಳಚಿ ಬಿದ್ದಿತು. ದೇಶದ ಜನತೆ ತಮ್ಮ ಬದುಕಿಗೆ ಕಂಟಕ ಯಾರು ಎನ್ನುವುದನ್ನು ಅರ್ಥ ಮಾಡಿಕೊಳ್ಳಬೇಕು. ನಕ್ಸಲರು ದೇಶದ್ರೋಹಿಗಳಲ್ಲ. ಮೋದಿ, ಅಮಿತ್ ಶಾ ವಿರೋಧಿಗಳೆಲ್ಲಾ ನಗರ ನಕ್ಸಲರು ಎಂದು ಬಿಂಬಿಸಲಾಗುತ್ತಿದೆ. ಪ್ರತಿಭಟನೆ ಮಾಡಲೂ ಆಗದಂತಹ ಕಾನೂನುಗಳನ್ನು ರೂಪಿಸಲಾಗಿದೆ ಎಂದು ಕಿಡಿ ಕಾರಿದರು.

ವಾಸ್ತವದಲ್ಲಿ ಈ ಕೋಮುವಾದಿಗಳು ಬಲಾಡ್ಯರಲ್ಲ. ಅಲ್ಪಸಂಖ್ಯಾತರು. ನಾವೇ ಬಲಾಢ್ಯರು ಮತ್ತು ಬಹುಸಂಖ್ಯಾತರು. ಆದರೆ ಅವರಲ್ಲಿ ಒಗ್ಗಟ್ಟು ಇರುವುದರಿಂದ ಬಲಾಢ್ಯರಂತೆ ತೋರುತ್ತಿದ್ದಾರೆ. ನಾವು ಬಹುಸಂಖ್ಯಾತರಾಗಿದ್ದರೂ ಒಗ್ಗಟ್ಟು ಇಲ್ಲದ ಕಾರಣಕ್ಕೆ ದುರ್ಬಲರಾಗಿದ್ದೇವೆ. ನಮ್ಮ ಸಂಘಟನೆಯ ಮೂಲಕ ಮತ್ತೆ ಒಗ್ಗಟ್ಟು ಪ್ರದರ್ಶಿಸುತ್ತೇವೆ. ರಾಜ್ಯಾದ್ಯಂತ ಮುಂದಿನ ಮೂಲಕ ಒಂದು ಲಕ್ಷ ಸ್ವಯಂಸೇವಕರ ಪಡೆಯನ್ನು ನಿರ್ಮಿಸುತ್ತೇವೆ ಎಂದರು.

ಮಾಧ್ಯಮಗಳು ಷಡ್ಯಂತ್ರ ರೂಪಿಸುವ ಕೇಂದ್ರಗಳಾಗಿವೆ: ವಿಜಯಲಕ್ಷ್ಮಿ ಶಿಬರೂರು

ದಾರಿ ತಪ್ಪಿದ ಮಾಧ್ಯಮಗಳು; ಪರಿಹಾರವೇನು? ಕುರಿತ ಗೋಷ್ಠಿಯಲ್ಲಿ ಮಾತನಾಡಿದ ಹಿರಿಯ ಪತ್ರಕರ್ತೆ, ವಿಜಯಾ ಟೈಮ್ಸ್ ಮುಖ್ಯಸ್ಥೆ ವಿಜಯಲಕ್ಷ್ಮಿ ಶಿಬರೂರು, ಮಾಧ್ಯಮಗಳು ಷಡ್ಯಂತ್ರ ರೂಪಿಸುವ ಕೇಂದ್ರ ಮತ್ತು ತುತ್ತೂರಿಗಳಾಗಿವೆ ಎಂದರು.

ಮಾಧ್ಯಮಗಳ ಆಯ್ಕೆಗಳು ಬದಲಾಗಿವೆ. ಅರ್ಹತೆಯುಳ್ಳ ಪತ್ರಕರ್ತರಿಗಿಂತ ಜಾಹಿರಾತು ಮತ್ತು ಮಾಧ್ಯಮಕ್ಕೆ ಅನುದಾನ ತರುವವರೇ ಮುಖ್ಯವಾಗಿದ್ದಾರೆ. ಹಾಗೆಯೇ ಪ್ರೇಕ್ಷಕ ಮತ್ತು ಓದುಗನೂ ಬದಲಾಗಿದ್ದಾನೆ. ಮಾಧ್ಯಮಗಳ ಇಂದಿನ ಸ್ಥಿತಿಗೆ ಇವರೂ ಕಾರಣರಾಗಿದ್ದಾರೆ.
ಮೌಢ್ಯ ರೂಪಿಸುವ ಕಾರ್ಯಕ್ರಮಗಳಿಗೆ ಟಿಆರ್ ಪಿ ಕೊಟ್ಟವರು ಯಾರು? ಕೃಷಿ ಕಾರ್ಯಕ್ರಮವನ್ನು ನೋಡುವವರು ಎಲ್ಲಿದ್ದಾರೆ ಎಂದು ಪ್ರಶ್ನಿಸಿದರು.

ಹಾಗೆಂದು ನಿರಾಶೆ ಹೊಂದಬೇಕಿಲ್ಲ. ಪ್ರೇಕ್ಷಕರ ಅಭಿರುಚಿಗಳು ಬದಲಾದರೆ ಮಾಧ್ಯಮಗಳೂ ಬದಲಾಗುತ್ತವೆ ಎಂದು ಭರವಸೆ ವ್ಯಕ್ತಪಡಿಸಿದರು. ತನಿಖಾ ಪತ್ರಿಕೋದ್ಯಮ ಕುರಿತು ಮಾತನಾಡಿದ ಶಿಬರೂರು, ಇಂದು ತನಿಖೆ ಮಾಧ್ಯಮ ಹೇಗಿರುತ್ತದೆ ಎಂದು ಎಲ್ಲ ರಾಜಕಾರಣಿ,
ಅಧಿಕಾರಿಗಳಿಗೆ ಅರಿವಿದೆ. ಹಾಗಾಗಿ ಇದು ಸುಲಭದ ಕೆಲಸ ಅಲ್ಲ. ಸವಾಲುಗಳು ಹೆಚ್ಚುತ್ತಿವೆ. ಸುದ್ದಿಯನ್ನು ಮಾರಾಟ ಮಾಡಿದರೆ ಹೆದರಿಕೊಳ್ಳಬೇಕು. ಸತ್ಯ ಪ್ರಾಮಾಣಿಕತೆ ಇದ್ದರೆ ಯಾರಿಗೂ ಹೆದರಿಕೊಳ್ಳಬೇಕಿಲ್ಲ ಎಂದು ಹೇಳಿದರು.

ಹಣ ಮಾಡಲು ಅಥವಾ ಸಂಬಳಕ್ಕಾಗಿ ಪತ್ರಕರ್ತ ವೃತ್ತಿಗೆ ಬರಬೇಡಿ. ಬೇರೆ ಉದ್ಯೋಗಳನ್ನು ಆಶ್ರಯಿಸಬಹುದು. ಸನ್ಯಾಸಿ ರೀತಿ ಕೆಲಸ ಮಾಡುವವರು ಮಾತ್ರ ಮಾಧ್ಯಮ ವೃತ್ತಿಯನ್ನು ಆಯ್ದುಕೊಳ್ಳಬಹುದು ಎಂದು ಕಿವಿ ಮಾತು ಹೇಳಿದರು.

ಈ ಸಂವಿಧಾನ ಸಂಭ್ರಮ ಮತ್ತು ಕನ್ನಡ ಪ್ಲಾನೆಟ್ ಕಾನ್ ಕ್ಲೇವ್ ಕಾರ್ಯಕ್ರಮಕ್ಕೆ ಅಂಬೇಡ್ಕರ್ ಯೂತ್ ಫೆಡರೇಷನ್ ಸಹಯೋಗ ನೀಡಿತ್ತು. ಉದ್ಘಾಟನಾ ಸಮಾರಂಭದಲ್ಲಿ ಕನ್ನಡ ಪ್ಲಾನೆಟ್ ಪ್ರಧಾನ ಸಂಪಾದಕರಾದ ದಿನೇಶ್ ಕುಮಾರ್ ಎಸ್.ಸಿ, ಹರ್ಷಕುಮಾರ್ ಕುಗ್ವೆ ಮತ್ತು ಅಂಬೇಡ್ಕರ್ ಯೂತ್ ಫೆಡರೇಷನ್ ಸಂಚಾಲಕ ರುದ್ರು ಪುನೀತ್ ಉಪಸ್ಥಿತರಿದ್ದರು.

More articles

Latest article