ಛತ್ರಪತಿ ಸಾಂಭಾಜಿನಗರ(ಮಹಾರಾಷ್ಟ್ರ): ವಂದೇ ಮಾತರಂ ದೇಶದ ರಾಷ್ಟ್ರಗೀತೆ ಆಗಬೇಕು ಎಂದು ಧಾರ್ಮಿಕ ಮುಖಂಡ ರಾಮಗಿರಿ ಮಹಾರಾಜ್ ವಿವಾದಾತ್ಮಕ ಹೇಳಿಕೆ ಹೇಳಿದ್ದಾರೆ. ಜನ ಗಣ ಮನವನ್ನು ರವೀಂದ್ರನಾಥ್ ಟ್ಯಾಗೋರ್ ಬೆಂಗಾಲಿಯಲ್ಲಿ ರಚಿಸಿದ್ದರು. ಅದರ ಹಿಂದಿ ಅವತರಣಿಕೆಯನ್ನು ರಾಷ್ಟ್ರಗೀತೆಯಾಗಿ ಅಳವಡಿಸಿಕೊಳ್ಳುವ ನಿರ್ಧಾರವನ್ನು 1950ರ ಜನವರಿ 24ರಂದು ನಡೆದ ಸಂವಿಧಾನ ರಚನಾ ಸಮಿತಿ ಸಭೆಯು ನಿರ್ಧಾರ ಕೈಗೊಂಡಿತ್ತು. ಈ ಗೀತೆಯನ್ನು 1911ರಲ್ಲಿ ಕೋಲ್ಕತ್ತದಲ್ಲಿ ರವೀಂದ್ರನಾಥ್ ಟ್ಯಾಗೋರ್ ಹಾಡಿದ್ದರು. ಆ ಸಮಯದಲ್ಲಿ ದೇಶಕ್ಕೆ ಇನ್ನೂ ಸ್ವಾತಂತ್ರ್ಯ ಸಿಕ್ಕಿರಲಿಲ್ಲ. ದೇಶದಲ್ಲಿ ಅನ್ಯಾಯ ಎಸಗುತ್ತಿದ್ದ ಬ್ರಿಟಿಷ್ ದೊರೆ ಜಾರ್ಜ್. ವಿ ಎದುರು ಟ್ಯಾಗೋರ್ ಈ ಗೀತೆಯನ್ನು ಹಾಡಿದ್ದರು. ದೇಶವನ್ನು ಪ್ರತಿನಿಧಿಸಲು ಈ ಗೀತೆಯನ್ನು ಹಾಡಿರಲಿಲ್ಲ ಎಂದು ರಾಮಗಿರಿ ಮಹಾರಾಜ್ ವಿವಾದಾತ್ಮಕ ಹೇಳಿಕೆ ಹೇಳಿದ್ದಾರೆ. ವಂದೇ ಮಾತರಂ ಅನ್ನು ರಾಷ್ಟ್ರಗೀತೆಯಾಗಿ ಘೋಷಿಸಲು ನಾವು ಹೋರಾಟ ಸಂಘಟಿಸಬೇಕಿದೆ. ವಂದೇ ಮಾತರಂ ನಮ್ಮ ರಾಷ್ಟ್ರಗೀತೆ ಆಗಬೇಕು ಎಂದು ಪ್ರತಿಪಾದಿಸಿದ್ದಾರೆ.
ನಂತರ ವಿವಾದಾತ್ಮಕ ಹೇಳಿಕೆ ಕುರಿತ ಪ್ರಶ್ನೆಗೆ ಉತ್ತರಿಸಿದ ಮಹಾರಾಜ್ ಅವರು, ಇದು ಗೌರವ ಅಥವಾ ಅಗೌರವದ ವಿಚಾರವಲ್ಲ. ಸತ್ಯ ಹೇಳುತ್ತದ್ದೇನೆ ಎಂದು ಸ್ಪಷ್ಟನೆ ನೀಡಿದ್ದಾರೆ. ಸತ್ಯ ಹೇಳುವುದೇ ಅಗೌರವ ಎನ್ನುವುದಾದರೆ, ಅತ್ಯಂತ ದುರದೃಷ್ಟಕರ’ಎಂದಿದ್ದಾರೆ. ‘ಮಿಷನ್ ಅಯೋಧ್ಯ’ಚಿತ್ರದ ಟ್ರೇಲರ್ ಬಿಡುಗಡೆಗಾಗಿ ರಾಮಗಿರಿ ಮಹಾರಾಜ್ ಛತ್ರಪತಿ ಸಾಂಭಾಜಿನಗರಕ್ಕೆ ಆಗಮಿಸಿದ್ದಾರೆ.