ಪೊಲೀಸರು ರಿಯಲ್ ಎಸ್ಟೇಟ್ ಮಾಫಿಯಾ ಜೊತೆ ಕೈ ಜೋಡಿಸಿದರೆ ಸಹಿಸಲ್ಲ:ಸಿಎಂ ಸಿದ್ದರಾಮಯ್ಯ

Most read

ಬೆಂಗಳೂರು: ಅಪರಾಧಿಗಳಿಗೆ  ಭಯದ ವಾತಾವರಣ, ಜನ ಸಾಮಾನ್ಯರಿಗೆ ಭಯ ಮುಕ್ತ ವಾತಾವರಣ ನಿರ್ಮಿಸಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿಗೆ ಕರೆ ನೀಡಿದರು. ನಗರದಲ್ಲಿ ನೂತನವಾಗಿ ನಿರ್ಮಿಸಿರುವ ಚಾಮರಾಜಪೇಟೆ, ಕಬ್ಬನ್ ಪಾರ್ಕ್ ಮತ್ತು ಹೈಗ್ರೌಂಡ್ಸ್ ಪೊಲೀಸ್ ಠಾಣೆ, ಕಚೇರಿಗಳನ್ನು ಉದ್ಘಾಟಿಸಿದ ಬಳಿಕ ಪುಲಕೇಶಿ ನಗರದಲ್ಲಿ ನೂತನವಾಗಿ ನಿರ್ಮಿಸಿರುವ ಪೊಲೀಸ್ ವಸತಿ ಸಮುಚ್ಛಯಗಳನ್ನು ಉದ್ಘಾಟಿಸಿ ಮಾತನಾಡಿದರು.

ರಾಜ್ಯದ ಜನಸಂಖ್ಯೆ 7 ಕೋಟಿ ದಾಟಿ ಹೋಗುತ್ತಿದೆ. ಇವರೆಲ್ಲರ ರಕ್ಷಣೆ, ಆಸ್ತಿ ಪಾಸ್ತಿ ಮಾನ ಪ್ರಾಣ ರಕ್ಷಿಸಿ ನೆಮ್ಮದಿಯ ಬದುಕಿಗೆ ಸುರಕ್ಷಿತ ವಾತಾವರಣ ಸೃಷ್ಟಿಸುವ ಜವಾಬ್ದಾರಿ ಪೊಲೀಸ್ ಇಲಾಖೆ ಮೇಲಿದೆ. ಇದಕ್ಕಾಗಿ ಇಲಾಖೆಗೆ ಅಗತ್ಯವಾದ ಸವಲತ್ತು ಮತ್ತು ನೂತನ ಠಾಣೆಗಳನ್ನು ಒದಗಿಸಲು ಸರ್ಕಾರ ಸದಾ ಸಿದ್ದವಿದೆ ಎಂದರು. ರಾಜ್ಯದಲ್ಲಿ ಶಾಂತಿ ಸುವ್ಯವಸ್ಥೆ ಇದ್ದಾಗ ಅಭಿವೃದ್ಧಿಯ ವೇಗ ಹೆಚ್ಚುತ್ತದೆ. ಹೀಗಾಗಿ ಜನಸ್ನೇಹಿ ಪೊಲೀಸ್ ವ್ಯವಸ್ಥೆಯನ್ನು ರೂಪಿಸಿ ಠಾಣೆಗೆ ಬರುವವರನ್ನು ಆರೋಗ್ಯಕರವಾಗಿ ನಡೆಸಿಕೊಳ್ಳಿ ಎಂದು ಸೂಚಿಸಿದರು.

ರಾಜ್ಯದಲ್ಲಿ ಅಪರಾಧಗಳ ಪ್ರಮಾಣ ಕಡಿಮೆ ಆಗುತ್ತಿರುವುದು ನೆಮ್ಮದಿಯ ಸಂಗತಿ. ಆದರೆ ಪೊಲೀಸರು ಚಾಪೆ ಕೆಳಗೆ ತೂರಿದರೆ ಅಪರಾಧಿಗಳು ರಂಗೋಲಿ ಕೆಳಗೆ ತೂರಿ ಕಾನೂನಿನಿಂದ ತಪ್ಪಿಸಿಕೊಳ್ಳಲು ಯತ್ನಿಸುತ್ತಾರೆ. ಇದಕ್ಕೆ ಅವಕಾಶ ಆಗಬಾರದು ಎಂದರು.  ಜನರಿಗೆ ಉದ್ಯೋಗ ಇಲ್ಲದಿರುವುದು, ಬದುಕಿಗೆ ಅವಕಾಶ ಇಲ್ಲದಿರುವಾಗ ಅಪರಾಧ ಜಗತ್ತಿನ ಕಡೆಗೆ ಆಕರ್ಷಿತರಾಗುತ್ತಾರೆ. ನಗರದಲ್ಲಿ ರಿಯಲ್ ಎಸ್ಟೇಟ್ ದಂಧೆ ಕಾರಣದಿಂದ ಅಪರಾಧಗಳು ಹೆಚ್ಚಾಗುತ್ತಿವೆ. ಪೊಲೀಸರು ರಿಯಲ್ ಎಸ್ಟೇಟ್ ಮಾಫಿಯಾ ಜೊತೆ ಕೈ ಜೋಡಿಸಿದರೆ ಸಹಿಸಲ್ಲ. ಯಾವುದೇ ಕಾರಣಕ್ಕೂ ರಿಯಲ್ ಎಸ್ಟೇಟ್ ಗೆ ಬೆಂಬಲ ನೀಡುಬಾರದು. ಬೆಂಬಲ ಕೊಡುವ ಕೆಲಸ ಮಾಡಿದರೆ ಸರ್ಕಾರ ಸಹಿಸಲ್ಲ. ಅಪರಾಧಿಗಳಿಗೆ  ಭಯದ ವಾತಾವರಣ, ಜನ ಸಾಮಾನ್ಯರಿಗೆ ಭಯ ಮುಕ್ತ ವಾತಾವರಣ ನಿರ್ಮಿಸಬೇಕು ಎಂದರು.  ಪೇದೆಗಳು, ಎಸ್ ಐ ಗಳು, ಇನ್ಸ್ ಪೆಕ್ಟರ್ ಗಳೇ ಹೆಚ್ಚೆಚ್ಚು ಕೆಲಸ ಮಾಡ್ತಾರೆ. ಇವರ ಯೋಗಕ್ಷೇಮ ಕೂಡ ನಮ್ಮ ಜವಾಬ್ದಾರಿ.  ಪೊಲೀಸ್ ಸಿಬ್ಬಂದಿಯ ಗೃಹ ಯೋಜನೆಯನ್ನು ಸರ್ಕಾರ ಮುಂದುವರೆಸುತ್ತದೆ ಎಂದು ಇದೇ ಸಂದರ್ಭದಲ್ಲಿ ಸಿಎಂ ಭರವಸೆ ನೀಡಿದರು.

More articles

Latest article