ಬೆಂಗಳೂರು: ಲಿವಿಂಗ್ ಟುಗೆದರ್ ನಲ್ಲಿದ್ದಾಗ ಖಾಸಗಿ ಕ್ಷಣಗಳನ್ನು ಚಿತ್ರೀಕರಿಸಿಕೊಂಡು ಬ್ಲಾಕ್ ಮೇಲ್ ಮಾಡುತ್ತಿದ್ದ ಆರೋಪಿ ಮತ್ತು ಆತನ ಸಹಚರನನ್ನು ಪೊಲೀಸರು ಬಂಧಿಸಿದ್ದಾರೆ. ಎಲೆಕ್ಟ್ರಾನಿಕ್ ಸಿಟಿಯಲ್ಲಿ ಎಲೆಕ್ಟ್ರಾನಿಕ್ಸ್ ಉಪಕರಣಗಳ ಅಂಗಡಿಯ ಮಾಲೀಕನೂ ಆಗಿರುವ ಆರೋಪಿಗೆ 2017 ರಲ್ಲಿ ದೂರುದಾರ ಮಹಿಳೆ ಪರಿಚಯವಾಗಿರುತ್ತಾಳೆ ಮತ್ತು ಪರಸ್ಪರ ಸಮ್ಮತಿಯೊಂದಿಗೆ ಲಿವಿಂಗ್ ಟುಗೆದರ್ ಹೆಸರಿನಲ್ಲಿ ಒಂದೇ ಮನೆಯಲ್ಲಿ ವಾಸಿಸುತ್ತಿರುತ್ತಾರೆ.
ಆರೋಪಿಯು ಆಕೆಗೆ ತಿಳಿಯದಂತೆ ಆಕೆಯ ವೈಯಕ್ತಿಕ ಕ್ಷಣಗಳ ವಿಡಿಯೋ ಮಾಡಿಕೊಂಡಿರುತ್ತಾನೆ. ನಂತರ ಈಕೆಯನ್ನು ಕಪಲ್ಸ್ ಪಾರ್ಟಿಗಳಿಗೆ ಕರೆದುಕೊಂಡು ಹೋಗಿ, ಅಲ್ಲಿ ಸೇರುವ ಬೇರೆ ವ್ಯಕ್ತಿಗಳ ಜೊತೆ ಸಹಕರಿಸುವಂತೆ ಒತ್ತಾಯ ಮಾಡುತ್ತಿರುತ್ತಾನೆ. ಇದನ್ನು ತಿರಸ್ಕರಿಸುವ ಆಕೆ 2021 ರಿಂದ ಪ್ರತ್ಯೇಕವಾಗಿ ವಾಸಿಸುತ್ತಿರುತ್ತಾಳೆ. ಆರೋಪಿಗಳಿಬ್ಬರು ಅಶ್ಲೀಲ ಫೋಟೋ ಮತ್ತು ವಿಡಿಯೋಗಳನ್ನು ಮುಂದಿಟ್ಟುಕೊಂಡು ಆಕೆಯನ್ನು ಬೆದರಿಸಿ ತನ್ನ ಜೊತೆ ಸಹಕರಿಸುವಂತೆ ಪೀಡಿಸುತ್ತಿರುತ್ತಾನೆ. ಇಲ್ಲವಾದಲ್ಲಿ ಹಣ ನೀಡುವಂತೆ ಬೆದರಿಕೆ ಒಡ್ಡುತ್ತಿರುತ್ತಾರೆ.
ಇದರಿಂದ ಬೇಸತ್ತ ಅಕೆ ಸಿಸಿಬಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿರುತ್ತಾಳೆ. ಪ್ರಕರಣದ ತನಿಖೆಯನ್ನು ನಡೆಸಿದ ಪೊಲೀಸರು, ಆರೋಪಿಗಳಿಬ್ಬರನ್ನು ಬಂಧಿಸುತ್ತಾರೆ. ಅವರಿಂದ ಒಟ್ಟು 7 ಮೊಬೈಲ್ ಮತ್ತು ಒಂದು ಲ್ಯಾಪ್ಟಾಪ್ ಅನ್ನು ವಶಪಡಿಸಿಕೊಳ್ಳಲಾಗಿದೆ. ಮೊಬೈಲ್ ಮತ್ತು ಲ್ಯಾಪ್ಟಾಪ್ ಅನ್ನು ಪರಿಶೀಲಿಸಿದಾಗ, ಆರೋಪಿಗಳಿಬ್ಬರು ಕಪಲ್ಸ್ ಪಾರ್ಟಿಗಳನ್ನು ಆಯೋಜಿಸಿ ಅಕ್ರಮ ಚಟುವಟಿಕೆಯನ್ನು ನಡೆಸುತ್ತಿರುವ ಮತ್ತು ಬೇರೆ ಹೆಣ್ಣು ಮಕ್ಕಳ ಅಶ್ಲೀಲ ಪೋಟೋ ಮತ್ತು ವಿಡಿಯೋಗಳನ್ನು ಇಟ್ಟುಕೊಂಡು ಬೆದರಿಕೆ ಹಾಕುತ್ತಿರುವ ವಿಷಯ ತಿಳಿದು ಬಂದಿದೆ.