ನವದೆಹಲಿ: 1961ರ ಚುನಾವಣಾ ನೀತಿ ನಿಯಮಗಳಿಗೆ ಕೇಂದ್ರ ಸರ್ಕಾರ ತಿದ್ದುಪಡಿಗಳನ್ನು ಮಾಡಿರುವುದನ್ನು ಪ್ರಶ್ನಿಸಿ ಕಾಂಗ್ರೆಸ್ ಸುಪ್ರೀಂ ಕೋರ್ಟ್ನಲ್ಲಿ ರಿಟ್ ಅರ್ಜಿ ಸಲ್ಲಿಸಿದೆ. ಇಂತಹ ತಿದ್ದಪಡಿಗಳಿಂದ ಚುನಾವಣಾ ಪ್ರಕ್ರಿಯೆಯ ಸಮಗ್ರತೆ ವೇಗವಾಗಿ ಕುಸಿಯುತ್ತಿದೆ ಎಂದು ಕಾಂಗ್ರೆಸ್ ಕಳವಳ ವ್ತಕ್ತಪಡಿಸಿದೆ. ಸಿಸಿಟಿವಿ ಕ್ಯಾಮೆರಾ ಮತ್ತು ವೆಬ್ ಕಾಸ್ಟಿಂಗ್ ದೃಶ್ಯಾವಳಿಗಳು ಮತ್ತು ಅಭ್ಯರ್ಥಿಗಳ ವೀಡಿಯೊ ರೆಕಾರ್ಡಿಂಗ್‌ಗಳಂತಹ ಕೆಲವು ಎಲೆಕ್ಟ್ರಾನಿಕ್ ದಾಖಲೆಗಳ ಸಾರ್ವಜನಿಕ ತಪಾಸಣೆಯನ್ನು ತಡೆಯಲು ಸರ್ಕಾರವು ಚುನಾವಣಾ ನಿಯಮವನ್ನು ತಿರುಚಿದೆ ಎಂದು ಕಾಂಗ್ರೆಸ್ ಆಪಾದಿಸಿದೆ.
ಮುಕ್ತ ಮತ್ತು ನ್ಯಾಯಸಮ್ಮತ ಚುನಾವಣೆ ನಡೆಸುವ ಹೊಣೆ ಹೊತ್ತಿರುವ ಚುನಾವಣಾ ಆಯೋಗವು ಇಂತಹ ಮಹತ್ವದ ಕಾನೂನನ್ನು ಏಕಪಕ್ಷೀಯವಾಗಿ ತಿದ್ದುಪಡಿ ಮಾಡಲು ಅವಕಾಶ ನೀಡುವುದಿಲ್ಲ ಎಂದು ಕಾಂಗ್ರೆಸ್ ಪಕ್ಷದ ನಾಯಕ ಜೈರಾಮ್ ರಮೇಶ್ ಹೇಳಿದ್ದಾರೆ. 1961ರ ಚುನಾವಣಾ ನಿಯಮಗಳ ಇತ್ತೀಚಿನ ತಿದ್ದುಪಡಿಗಳನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್ನಲ್ಲಿ ರಿಟ್ ಅರ್ಜಿ ಸಲ್ಲಿಸಲಾಗಿದೆ. ಚುನಾವಣಾ ಪ್ರಕ್ರಿಯೆಯ ಸಮಗ್ರತೆಯು ವೇಗವಾಗಿ ನಾಶವಾಗುತ್ತಿದೆ. ಅದನ್ನು ಮರುಸ್ಥಾಪಿಸಲು ಸುಪ್ರೀಂ ಕೋರ್ಟ್ ಸಹಾಯ ಮಾಡುತ್ತದೆ ಎಂದು ಭಾವಿಸುತ್ತೇವೆ ಎಂದು ಜೈರಾಮ್ ರಮೇಶ್ ಟ್ವೀಟ್ ಮಾಡಿದ್ದಾರೆ.
ಚುನಾವಣಾ ಆಯೋಗದ ಶಿಫಾರಸಿನ ಆಧಾರದ ಮೇಲೆ ಕೇಂದ್ರ ಕಾನೂನು ಸಚಿವಾಲಯವು ಡಿಸೆಂಬರ್ 20ರಂದು ಸಾರ್ವಜನಿಕ ತಪಾಸಣೆಗೆ ತೆರೆದಿರುವ ಪೇಪರ್ ಅಥವಾ ದಾಖಲೆಗಳ ಪ್ರಕಾರವನ್ನು ನಿರ್ಬಂಧಿಸಲು ಚುನಾವಣಾ ನಿಯಮಗಳ ನಡವಳಿಕೆ, 1961 ರ ನಿಯಮ 93(2)(a) ಅನ್ನು ತಿದ್ದುಪಡಿ ಮಾಡಿದೆ. ಮತಗಟ್ಟೆಯೊಳಗೆ ಸಿಸಿಟಿವಿ ಕ್ಯಾಮೆರಾಗಳಿಗೆ ಅವಕಾಶ ನೀಡುವುದರಿಂದ ಮತದಾರರ ಗೌಪ್ಯತೆಯನ್ನು ದುರುಪಯೋಗಪಡಿಸಿಕೊಳ್ಳಬಹುದು ಎಂದು ಚುನಾವಣಾಧಿಕಾರಿಗಳು ಆತಂಕ ವ್ಯಕ್ತಪಡಿಸಿದ್ದರು. ಈ ಕ್ರಮವು ಕಾಂಗ್ರೆಸ್‌ನಿಂದ ತೀವ್ರ ಟೀಕೆಗೆ ಗುರಿಯಾಗಿತ್ತು ಮತ್ತು ಇದು ಚುನಾವಣಾ ಪ್ರಕ್ರಿಯೆಯ ಸಮಗ್ರತೆಗೆ ಧಕ್ಕೆ ತರುತ್ತದೆ ಎಂದು ಕಾಂಗ್ರೆಸ್ ಟೀಕಿಸಿದ್ದನ್ನು ಇಲ್ಲಿ ಸ್ಮರಿಸಬಹುದಾಗಿದೆ.