ಪುಷ್ಪ 2’ ಪ್ರೀಮಿಯರ್ ಶೋ ದುರಂತ; ಮೃತ ಮಹಿಳೆಯ ಕುಟುಂಬಕ್ಕೆ 20 ಕೋಟಿ ರೂ. ನೀಡಲು ಸಚಿವರ ಆಗ್ರಹ

Most read

ಹೈದರಾಬಾದ್: ‘ಪುಷ್ಪ 2’ ಪ್ರೀಮಿಯರ್ ಶೋದಲ್ಲಿ ಮೃತ ಪಟ್ಟ ಮಹಿಳೆಯ ಕುಟುಂಬಕ್ಕೆ ಚಿತ್ರದ ನಾಯಕ ನಟ ಅಲ್ಲು ಅರ್ಜುನ್ 20 ಕೋಟಿ ರೂಪಾಯಿ ನೀಡಬೇಕು ಎಂದು ತೆಲಂಗಾಣ ಸಿನಿಮಾಟೊಗ್ರಫಿ ಸಚಿವ ಕೊಮಟಿ ವೆಂಕಟ್ ರೆಡ್ಡಿ ಆಗ್ರಹಪಡಿಸಿದ್ದಾರೆ.

ಸಂಧ್ಯಾ ಥಿಯೇಟರ್ನಲ್ಲಿ ‘ಪುಷ್ಪ 2’ ಪ್ರೀಮಿಯರ್ ಶೋಗೆ ಚಿತ್ರದ ನಾಯಕ ನಟ ಅಲ್ಲು ಅರ್ಜುನ್ ಆಗಮಿಸಿದ್ದರು. ಈ ಸಂದರ್ಭದಲ್ಲಿ ಕಾಲ್ತುಳಿತ ಉಂಟಾಗಿ ಓರ್ವ ಮಹಿಳೆ ಮೃತಪಟ್ಟಿದ್ದು, ಆಕೆಯ ಮಗು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಅಲ್ಲು ಅರ್ಜುನ್ ಬಂಧನವೂ ಆಗಿತ್ತು. ಸಧ್ಯ ಅವರು ಜಾಮೀನು ಪಡೆದಿದ್ದಾರೆ. ಮೃತ ಮಹಿಳೆಯ ಕುಟುಂಬಕ್ಕೆ 1 ಕೋಟಿ ರೂ. ಪರಿಹಾರ ಕೊಡಬೇಕು ಎಂದು ಕೆಲವರು ಅಲ್ಲು ಅರ್ಜುನ್ ಅವರನ್ನು ಆಗ್ರಹಪಡಿಸಿದ್ದರು. ಆದರೆ ಇದೀಗ ತೆಲಂಗಾಣ ಸಿನಿಮಾಟೊಗ್ರಫಿ ಸಚಿವ ಕೊಮಟಿ ವೆಂಕಟ್ ರೆಡ್ಡಿ ಮೃತರ ಕುಟುಂಬಕ್ಕೆ ಅಲ್ಲು ಅರ್ಜುನ್ 20 ಕೋಟಿ ರೂಪಾಯಿ ನೀಡಬೇಕು ಎಂಬ ಹೊಸ ಬೇಡಿಕೆ ಇಟ್ಟಿದ್ದಾರೆ.

ಪುಷ್ಪ 2 ಸಿನಿಮಾ ಬಾಕ್ಸ್ ಆಫೀಸ್ನಲ್ಲಿ ಭರ್ಜರಿ ಗಳಿಕೆ ಮಾಡಿದೆ. ಅಲ್ಲು ಅರ್ಜುನ್ ಅವರು ಈ ಕಲೆಕ್ಷನ್ನಲ್ಲಿ 20 ಕೋಟಿ ರೂಪಾಯಿ ಹಣವನ್ನು ಕುಟುಂಬಕ್ಕೆ ನೀಡುವ ಮೂಲಕ ಸಂತ್ರಸ್ತ ಕುಟುಂಬಕ್ಕೆ ಸಹಾಯ ಮಾಡಬಹುದು ಎಂದು ಸಚಿವರು ಬೇಡಿಕೆ ಇಟ್ಟಿದ್ದಾರೆ.

ಅಲ್ಲು ಅರ್ಜುನ್ ಥಿಯೇಟರ್ ಬಳಿ ಬರಬಾರದಿತ್ತು. ಆದರೂ ಅವರು ಬಂದಿದ್ದರು. ಕಾರಿನ ಸನ್ರೂಫ್ ಬಳಿ ಬಂದು ಕೈ ಬೀಸಿದರು. ಇದರಿಂದ ಸಾಕಷ್ಟು ಜನರು ಸೇರುವಂತಾಯಿತು. ನಂತರ ಕಾಲ್ತುಳಿತ ಉಂಟಾಗಿ ಸಾವು ಸಂಭವಿಸಿತು. ಈ ಸಾವು ಗಮನಕ್ಕೆ ಬಂದ ನಂತರವೂ ಅಲ್ಲು ಅರ್ಜುನ್ ಸಿನಿಮಾ ನೋಡುವುದನ್ನು ಮುಂದುವರಿಸಿದರು. ಇದು ಅವರ ನಿರ್ಲಕ್ಷ್ಯವನ್ನು ತೋರಿಸುತ್ತದೆ ಎಂದು ಅವರು ಹೇಳಿದ್ದಾರೆ. ಸಿನಿಮಾ 2000 ಕೋಟಿ ರೂಪಾಯಿ ಗಳಿಸಿದೆ ಎಂದು ಹೆಮ್ಮೆಯಿಂದ ಹೇಳಿಕೊಳ್ಳುತ್ತಿದ್ದಾರೆ. ಹೀಗಿರುವಾಗ ಅವರ ಕುಟುಂಬಕ್ಕೆ 20 ಕೋಟಿ ರೂಪಾಯಿ ಕೊಡಲು ತೊಂದರೆ ಏನು ಎಂದು ಸಚಿವ ಕೊಮಟಿ ರೆಡ್ಡಿ ಆಗ್ರಹಿಸಿದ್ದಾರೆ.

More articles

Latest article