ಜ್ಞಾನಭಾರತಿ ಆವರಣದಲ್ಲಿ ಸರಕು ವಾಹನಗಳ ನಿಷೇಧ

Most read

ಬೆಂಗಳೂರು: ವಿಶ್ವವಿದ್ಯಾಲಯ ಜ್ಞಾನಭಾರತಿ ಆವರಣದಲ್ಲಿ ಸರಕು ವಾಹನಗಳ ಸಂಚಾರವನ್ನು ನಿಷೇಧಿಸಲಾಗಿದೆ. ಮೈಸೂರು ರಸ್ತೆಯಲ್ಲಿ ಸಂಚಾರ ದಟ್ಟಣೆಯನ್ನು ತಪ್ಪಿಸಿಕೊಳ್ಳಲು ಸರಕು ಸಾಗಣೆ ವಾಹನಗಳಾದ ಟಿಪ್ಪರ್ ಲಾರಿ, ಸರಕು ಆಟೋ, ಟೆಂಪೊ, ಮೊದಲಾದ ಸರಕು ಸಾಗಾಣೆ ವಾಹನಗಳು ವಿಶ್ವವಿದ್ಯಾಲಯದ ಆವರಣದಲ್ಲಿ ಸಂಚರಿಸುತ್ತಿದ್ದವು. ಇದರಿಂದ ವಿದ್ಯಾರ್ಥಿಗಳ ಶೈಕ್ಷಣಿಕ ಚಟುವಟಿಕೆಗಳಿಗೆ ಅಡಚಣೆ ಉಂಟಾಗುತ್ತಿತ್ತು. ವಿವಿ ಆವರಣದಲ್ಲಿ ಹಲವು ಬಾರಿ ಅಪಘಾತಗಳೂ ಸಂಭವಿಸಿದ್ದವು. ಆದ್ದರಿಂದ ಜ್ಞಾನಭಾರತಿ ಆವರಣದಲ್ಲಿ ಸರಕು ಸಾಗಣೆ ವಾಹನಗಳ ಸಂಚಾರಕ್ಕೆ ನಿಷೇಧ ಹೇರುವಂತೆ ವಿ.ವಿ ಆಡಳಿತ ಮಂಡಳಿ ಸಂಚಾರಿ ಪೊಲೀಸರನ್ನು
ಕೋರಿದ್ದರು.

ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರ ಹಿತದೃಷ್ಟಿಯಿಂದ ಸುಗಮ ಸಂಚಾರಕ್ಕೆ ಅವಕಾಶ ಮಾಡಿಕೊಡಲು ವಿಶ್ವವಿದ್ಯಾಲಯದ ಆವರಣದಲ್ಲಿ ಸರಕು ಸಾಗಣೆ ವಾಹನಗಳ ಸಂಚಾರವನ್ನು ನಿರ್ಬಂಧಿಸಿ ನಗರ ಪೊಲೀಸ್ ಕಮಿಷನರ್ ಬಿ.ದಯಾನಂದ ಅವರು ಆದೇಶ ಹೊರಡಿಸಿದ್ದಾರೆ. ಉಲ್ಲಾಳ, ಮರಿಯಪ್ಪನಪಾಳ್ಯ, ನಾಗರಬಾವಿ ಸರ್ಕಲ್, ಜ್ಞಾನಭಾರತಿ ಕಡೆಯಿಂದ ಯಾವುದೇ ಸರಕು ವಾಹನಗಳು ವಿಶ್ವವಿದ್ಯಾಲಯ ಪ್ರವೇಶಿಸುವಂತಿಲ್ಲ. ಬದಲಾಗಿ ಪರ್ಯಾಯ ಮಾರ್ಗಗಳನ್ನು ಬಳಸುವಂತೆ ಸೂಚಿಸಿದ್ದಾರೆ.

More articles

Latest article