ರಾಮನಗರ: ರಾಮನಗರದ ಮಾಗಡಿ ರಸ್ತೆಯಲ್ಲಿ ವ್ಯಕ್ತಿಯೊಬ್ಬ ಕಂಠಪೂರ್ತಿ ಮದ್ಯ ಸೇವಿಸಿ ಅಡ್ಡಾದಿಡ್ಡಿಯಾಗಿ ಕಾರು ಚಲಾಯಿಸಿ ಆಟೊಗೆ ಡಿಕ್ಕಿ ಹೊಡೆದಿದ್ದಾನೆ. ಇದರಿಂದ ಆಟೊದಲ್ಲಿದ್ದ ಪ್ರಥಮ ದರ್ಜೆ ಸಹಾಯಕಿಯೊಬ್ಬರು ಮೃತಪಟ್ಟು, ನಾಲ್ವರು ಗಾಯಗೊಂಡಿದ್ದಾರೆ. ಈ ಅವಘಡದಲ್ಲಿ ಕಾರು ಸೇರಿದಂತೆ ನಾಲ್ಕು ವಾಹನಗಳು ಜಖಂಗೊಂಡಿದ್ದು, ಎರಡು ಅಂಗಡಿಗಳು ನಜ್ಜುಗುಜ್ಜಾಗಿವೆ.
ಮಂಡ್ಯ ಜಿಲ್ಲೆ ಮದ್ದೂರು ತಾಲ್ಲೂಕಿನ ಕೊಪ್ಪ ಗ್ರಾಮದ ಎಚ್. ರೂಪಾ ಮೃತ ದುರ್ದೈವಿ. ಇವರು ಮದ್ದೂರು ತಾಲ್ಲೂಕಿನ ಬಿಳಗುಂಬ ಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ರೂಪಾ ಅವರು ಪುತ್ರ ಹಾಗೂ ಪುತ್ರಿಯನ್ನು ಅಗಲಿದ್ದಾರೆ. ಅಪಘಾತ ಎಸಗಿದ ರಾಮನಗರದ ರಾಯರದೊಡ್ಡಿ ನಿವಾಸಿ ಪ್ರವೀಣನನ್ನು ಸಾರ್ವಜನಿಕರು ಸೆರೆ ಹಿಡಿದು, ಬಟ್ಟೆ ಬಿಚ್ಚಿ ಹಿಗ್ಗಾಮುಗ್ಗಾ ಥಳಿಸಿ ಪೊಲೀಸರಿಗೆ ಒಪ್ಪಿಸಿದ್ದಾರೆ. ಕಂಠಪೂರ್ತಿ ಕುಡಿದಿದ್ದ ಪ್ರವೀಣ್ ತನ್ನ ಎರ್ಟಿಗಾ ಕಾರಿನಲ್ಲಿ ಮಾಗಡಿ ರಸ್ತೆ ಕಡೆಯಿಂದ ರಾಮನಗರ ಕಡೆಗೆ ಬರುತ್ತಿದ್ದಾಗ ಈ ದುರಂತ ಸಂಭವಿಸಿದೆ. ಮೊದಲಿಗೆ ಕೆಂಪೇಗೌಡನ ದೊಡ್ಡಿ ಹತ್ತಿರ ಬಸ್ಗೆ ಗುದ್ದಿರುವ ಪ್ರವೀಣ್ ನಂತರ, ಅಲ್ಲಿಂದ ವೇಗವಾಗಿ ಕಾರು ಚಲಾಯಿಸಿಕೊಂಡು ಬಂದು ವಿಶ್ವೇಶ್ವರ ಬಾರ್ ಸಮೀಪ ಮುಂದಿದ್ದ ಆಟೊಗೆ ಡಿಕ್ಕಿ ಹೊಡೆದು, ಮುಂದಕ್ಕೆ ಹೋಗಿದ್ದಾನೆ ಎಂದು ಸ್ಥಳೀಯರು ತಿಳಿಸಿದ್ದಾರೆ.
ಡಿಕ್ಕಿಯ ರಭಸಕ್ಕೆ ಪಲ್ಟಿಯಾದ ಆಟೊ, ಮುಂದಿದ್ದ ಕೋಳಿ ಅಂಗಡಿ ಎದುರು ಇಟ್ಟಿದ್ದ ಕೋಳಿ ಬಾಕ್ಸ್ಗಳಿಗೆ ಬಡಿದಿದೆ. ಡಿಕ್ಕಿಯ ರಭಸಕ್ಕೆ ಆಟೊದಲ್ಲಿದ್ದ ಐವರು ಕುಳಿತಿದ್ದರು. ರೂಪಾ ಅವರ ತಲೆಗೆ ತೀವ್ರ ಪೆಟ್ಟು ಬಿದ್ದು, ಪ್ರಜ್ಞಾಹೀನರಾಗಿದ್ದಾರೆ. ಕೂಡಲೇ ಸ್ಥಳೀಯರು ರೂಪಾ ಅವರನ್ನು ಜಿಲ್ಲಾಸ್ಪತ್ರೆಗೆ ಸಾಗಿಸಿದ್ದಾರೆ. ಆದರೆ ಆ ವೇಳೆಗೆ ಅವರು ಮೃತಪಟ್ಟಿದ್ದಾರೆ ಎಂದು ವೈದ್ಯರು ಖಚಿತಪಡಿಸಿದ್ದಾರೆ. ಗಾಯಾಳುಗಳ ಪೈಕಿ ಇಬ್ಬರಿಗೆ ಗಂಭೀರ ಗಾಯಗಳಾಗಿದ್ದು, ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಆಟೋಗೆ ಡಿಕ್ಕಿ ಹೊಡೆದ ನಂತರ ಪ್ರವೀಣ್, ರಾಯರದೊಡ್ಡಿ ವೃತ್ತದವರೆಗೆ ಕಾರನ್ನು ಅಡ್ಡಾದಿಡ್ಡಿಯಾಗಿ ಚಲಾಯಿಸಿಕೊಂಡು ಬಂದಿದ್ದಾನೆ. ಅಲ್ಲಿ ಎಡಕ್ಕೆ ಕಾರು ತಿರುಗಿಸಿಕೊಂಡ ಪ್ರವೀಣ್ ಎರಡು ಮೂರು ದ್ವಿಚಕ್ರ ವಾಹನಗಳು ಹಾಗೂ ಅಂಗಡಿಗಳ ಸೈನ್ ಬೋರ್ಡ್ಗೆ ಗುದ್ದಿದ್ದಾನೆ. ನಂತರ ದಿನಸಿ ಅಂಗಡಿಯ ಹಾಲು ಸಂಗ್ರಹಿಸಿಟ್ಟಿದ್ದ ರೆಫ್ರಿಜರೇಟರ್ಗೆ ಡಿಕ್ಕಿ ಹೊಡೆದು, ಪಕ್ಕದ ಬಟ್ಟೆ ಅಂಗಡಿಯ ಸಿಮೆಂಟ್ ಕಟ್ಟೆಗೆ ಗುದ್ದಿದ್ದಾನೆ. ಆಗ ಜಖಂಗೊಂಡ ಕಾರು ನಿಂತಿದೆ. ಡಿಕ್ಕಿಯ ರಸಭಕ್ಕೆ ರೆಫ್ರಿಜರೇಟರ್ ಸಂಪೂರ್ಣವಾಗಿ ನಜ್ಜುಗುಜ್ಜಾಗಿದೆ.
ಈತ ಮತ್ತಷ್ಟು ಹಾನಿ ಮಾಡಬಹುದು ಎಂದು ಸ್ಥಳೀಯರು ಕಾರನ್ನು ಹಿಂಬಾಲಿಸಿಕೊಂಡು ಬಂದಿದ್ದಾರೆ. ಸಿಮೆಂಟ್ ಕಟ್ಟೆಗೆ ಡಿಕ್ಕಿ ಹೊಡೆದಿದ್ದರಿಂದ ಮತ್ತಷ್ಟು ಅನಾಹುತ ತಪ್ಪಿದಂತಾಗಿದೆ ಎಂದು ಅವರು ಹೇಳಿದ್ದಾರೆ. ಅಲ್ಲಿಯೇ ಇದ್ದ ಪೊಲೀಸ್ ವೊಬ್ಬರು ಆತನನ್ನು ಆಟೋ ಹತ್ತಿಸಿ ಪೊಲೀಸ್ ಠಾಣೆಗೆ ಕಳುಹಿಸಿದ್ದಾರೆ. ಪ್ರವೀಣ್ ಗೆ ನಿಂತುಕೊಳ್ಳಲೂ ಆಗುತ್ತಿರಲಿಲ್ಲ. ಅಷ್ಟು ಕುಡಿದಿದ್ದ ಎಂದು ಸ್ಥಳದಲ್ಲಿ ನೆರೆದಿದ್ದ ಸಾರ್ವಜನಿಕರು ಹೇಳಿದ್ದಾರೆ.