ಬೆಳಗಾವಿ: ವಕ್ಫ್ ಹೆಸರಿನಲ್ಲಿ ದೇವಸ್ಥಾನಗಳಿಗೆ ನೋಟಿಸ್ ಕೊಟ್ಟಿದ್ದರೆ ಹಿಂಪಡೆಯುತ್ತೇವೆ ಎಂದು ಈಗಾಗಲೇ ಸ್ಪಷ್ಟಪಡಿಸಿದ್ದೇವೆ. ಒಂದು ವೇಳೆ ದೇವಸ್ಥಾನ ವಕ್ಪ್ ಆಸ್ತಿಯಲ್ಲಿದ್ದರೆ ಅಂತಹ ಆಸ್ತಿಗಳನ್ನು ವಶಪಡಿಸಿಕೊಳ್ಳುವುದಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಪಷ್ಟಪಡಿಸಿದ್ದಾರೆ. ವಕ್ಫ್ ಸಚಿವ ಜಮೀರ್ ಅಹ್ಮದ್ ಖಾನ್ ಉತ್ತರ ನೀಡುತ್ತಿದ್ದ ವೇಳೆ ಮದ್ಯಪ್ರವೇಶಿಸಿದ ಮುಖ್ಯಮಂತ್ರಿಗಳು ಸ್ಪಷ್ಟನೆ ನೀಡಿದರು.
ಎಲ್ಲಾ ಸರ್ಕಾರಗಳ ಅವಧಿಯಲ್ಲೂ ನೋಟಿಸ್ ಕೊಡಲಾಗಿದೆ. 2014ರಲ್ಲಿ ಬಿಜೆಪಿಯವರು ತಮ್ಮ ಪ್ರಣಾಳಿಕೆಯಲ್ಲಿ ವಕ್ಪ್ ಆಸ್ತಿ ಕಬಳಿಕೆ ಮಾಡಿದ್ದರೆ ವಶಕ್ಕೆ ತೆಗೆದುಕೊಳ್ಳಬೇಕು ಎಂದು ಹೇಳಿದ್ದಾರೆ. ಒಂದು ವೇಳೆ ರೈತರಿಗೆ ತೊಂದರೆ ಆದರೆ ಒಕ್ಕಲೆಬ್ಬಿಸುವ ಕೆಲಸ ಮಾಡಲ್ಲ. ಯಾವುದು ರೈತರ ಅಥವಾ ದೇವಸ್ಥಾನದ ಆಸ್ತಿ ಅಲ್ಲ ಎಂದಾದಲ್ಲಿ ಮಾತ್ರ ಪರಿಶೀಲಿಸಿ ತೀರ್ಮಾನ ಮಾಡುತ್ತೇವೆ. ವಕ್ಪ್ ಆಸ್ತಿ 1 ಲಕ್ಷದ 10 ಸಾವಿರ ಎಕರೆ ಇತ್ತು, ಆದರೆ ಈಗ ಉಳಿದಕೊಂಡಿರುವುದು 20 ಸಾವಿರ ಎಕರೆ ಮಾತ್ರ. ಇದನ್ನು ರಕ್ಷಣೆ ಮಾಡಬೇಕು ಅಲ್ಲವೇ ಎಂದು ಸಿಎಂ ಪ್ರಶ್ನಿಸಿದರು.
ಸರ್ಕಾರದ ಪರವಾಗಿ ಉತ್ತರಿಸಿದ ಸಚಿವ ಜಮೀರ್ ಅಹ್ಮದ್ ಖಾನ್ ಸರ್ಕಾರದ ಒಂದು ಇಂಚು ಜಾಗವನ್ನು ವಕ್ಪ್ ಬೋರ್ಡ್ ತೆಗೆದುಕೊಂಡಿಲ್ಲ. 17,900 ಎಕರೆ ವಕ್ಪ್ ಆಸ್ತಿ ಅದಾಲತ್ ಗೆ ಮುಂದಾಗಿದ್ದೆವು. ವಕ್ಪ್ ಅದಾಲತ್ ಮಾಡುವಾಗ ಬೆಲ್ಲದ್ ಬಂದಿದ್ದರು. ವಿಜಯಪುರದಲ್ಲಿ ಯತ್ನಾಳ್ ಗೆ ಆಹ್ವಾನ ಕೊಟ್ಟಿದ್ದೆವು. ಆದರೆ, ಅವರು ಬರಲಿಲ್ಲ. ಮೂರು ದಿನ ಆದ ಮೆಲೆ ಪ್ರತಿಭಟನೆ ಮಾಡಿದ್ರು ಎಂದು ಹೇಳಿದರು.
ನೋಟಿಸ್ ಪದ್ದತಿ ಹೊಸದಾಗಿ ಮಾಡಿಲ್ಲ. ಬಿಜೆಪಿ, ಜೆಡಿಎಸ್ ಸರ್ಕಾರದಿಂದಲೂ ನೋಟಿಸ್ ಕೊಡಲಾಗಿದೆ. ಬಿಜೆಪಿ ಕಾಲದಲ್ಲೇ 5667 ನೋಟಿಸ್ ಕೊಡಲಾಗಿದೆ. ಕಾಂಗ್ರೆಸ್ ಕಾಲದಲ್ಲಿ 3286 ನೋಟಿಸ್ ಗಳನ್ನು ಕೊಟ್ಟಿದೆ ಎಂದರು. ಕೇಂದ್ರ ಸರ್ಕಾರ ಜಿಪಿಎಸ್ ಮ್ಯಾಪಿಂಗ್ ಮಾಡಲು ನಮ್ಮ ರಾಜ್ಯಕ್ಕೆ 6 ಕೋಟಿ ಅನುದಾನ ಕೊಟ್ಟಿದೆ. ಎಲ್ಲಾ ರಾಜ್ಯಗಳಂತೆ ಪ್ರತಿವರ್ಷ ನಮಗೆ ಸರ್ವೆ ಮಾಡಲು ಕೇಂದ್ರ ಸರ್ಕಾರ ಹೇಳುತ್ತದೆ ಎಂದು ಯಡಿಯೂರಪ್ಪ ಸಿಎಂ ಆಗಿದ್ದಾಗ ಮಾಡಿದ್ದ ಆದೇಶವನ್ನು ಸಚಿವ ಜಮೀರ್ ಓದಿ ಹೇಳಿದರು.