ಬೆಂಗಳೂರು: ಶಿವಾಜಿನಗರ ಪೊಲೀಸ್ ಠಾಣಾ ವ್ಯಾಪ್ತಿಯ ಮೊಬೈಲ್ ಅಂಗಡಿಯೊಂದರಲ್ಲಿ ಕಳ್ಳತನ ಮಾಡಿರುವ ಕಳ್ಳರು ದುಬಾರಿ ಬೆಲೆಯ 54 ಮೊಬೈಲ್ ಗಳನ್ನು ಕಳವು ಮಾಡಿದ್ದಾರೆ. ಎಂಕೆ ರಸ್ತೆಯ ವಿಶ್ವಾಸ್ ಕಮ್ಯೂನಿಕೇಷನ್ಸ್ ಹೆಸರಿನ ಅಂಗಡಿಯಲ್ಲಿ ಈ ಕಳ್ಳತನ ನಡೆದಿದೆ. ಡಿ. 11ರಂದು ಮಧ್ಯರಾತ್ರಿ ಇಬ್ಬರು ಕಳ್ಳರು ಈ ಕೈಚಳಕ ತೋರಿದ್ದಾರೆ. ಈ ಕೃತ್ಯ ಅಂಗಡಿಯ ಸಿ.ಸಿ.ಟಿ.ವಿ. ಕ್ಯಾಮೆರಾದಲ್ಲಿ ಕಳ್ಳರು ಮೊಬೈಲ್ ಕದಿಯುತ್ತಿರುವ ದೃಶ್ಯ ಸೆರೆಯಾಗಿದೆ. ರೂ. 2 ಲಕ್ಷ ನಗದು ಹಾಗೂ ರೂ. 3 ಲಕ್ಷ ಮೌಲ್ಯದ ವಿವಿಧ ಕಂಪನಿಗಳ 54 ಮೊಬೈಲ್ ಫೋನ್ಗಳ ಕಳ್ಳತನವಾಗಿದೆ ಎಂದು ಅಂಗಡಿ ಮಾಲೀಕ ಅಬ್ದುಲ್ ಮುನಾಫ್ ದೂರು ನೀಡಿದ್ದಾರೆ. ಎಫ್ಐಆರ್ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಕಳ್ಳರು ಮುಖದ ಗುರುತು ಪತ್ತೆಯಾಗದಂತೆ ತಲೆಗೆ ಟೋಪಿ, ಮುಖಕ್ಕೆ ಮಾಸ್ಕ್ ಹಾಗೂ ಕೈಗಳಿಗೆ ಗ್ಲೌಸ್ ಧರಿಸಿದ್ದಾರೆ. ಮೊಬೈಲ್ ಟಾರ್ಚ್ ಹಾಕಿಕೊಂಡು ಕಳವು ಮಾಡಲಾಗಿದೆ. ನಂತರ ಬ್ಯಾಗ್ನಲ್ಲಿ ಮೊಬೈಲ್ ಗಳನ್ನಿಟ್ಟುಕೊಂಡು ಪರಾರಿಯಾಗಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.