ಜ್ಞಾನಭಾರತಿ ಕ್ಯಾಂಪಸ್‌ ನಲ್ಲಿ ಶ್ರೀಗಂಧ ಕಳವು; 20 ಲಕ್ಷ ರೂ ಬೆಲೆ ಬಾಳುವ ಶ್ರೀಗಂಧ ವಶ

Most read

ಬೆಂಗಳೂರು: ಶ್ರೀಗಂಧದ ತುಂಡುಗಳನ್ನು ಅಕ್ರಮವಾಗಿ ಸಾಗಾಣೆ ಮಾಡುತ್ತಿದ್ದ ಮತ್ತು ಶ್ರೀಗಂಧವನ್ನು ಕಡಿದು ಕಳವು ಮಾಡುತ್ತಿದ್ದ ಎರಡು ಪ್ರತ್ಯೇಕ ಪ್ರಕರಣಗಳಲ್ಲಿ ಇಬ್ಬರು ಆರೋಪಿಗಳನ್ನು ಸುಬ್ರಹ್ಮಣ್ಯಪುರ ಮತ್ತು ಜ್ಞಾನಭಾರತಿ ಪೊಲೀಸರು ಬಂಧಿಸಿದ್ದಾರೆ.

ಜ್ಞಾನಭಾರತಿ ಠಾಣೆ ಪೊಲೀಸರು ಶ್ರೀಗಂಧ ಕಳವು ಮಾಡುತ್ತಿದ್ದ ರಾಮನಗರ ಜಿಲ್ಲೆ ಇರುಳಿಗರ ದೊಡ್ಡಿ ಗ್ರಾಮದ ಸಾಕಯ್ಯ ಅಲಿಯಾಸ್ ‘ಸಾಕ’ ಎಂಬಾತನನ್ನು ಬಂಧಿಸಿದ್ದಾರೆ. ತಲೆ ಮರೆಸಿಕೊಂಡಿರುವ ಮತ್ತಿಬ್ಬರು ಆರೋಪಿಗಳಾದ ರಮೇಶ್, ಮಲ್ಲೇಶ್, ಸಂತು ಅವರಿಗಾಗಿ ಹುಡುಕಾಟ ನಡೆಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ. ಬಂಧಿತ ಸಾಕನಿಂದ 15 ಲಕ್ಷ ಮೌಲ್ಯದ 115 ಕೆ.ಜಿ ತೂಕದ ಶ್ರೀಗಂಧದ ತುಂಡುಗಳನ್ನು ವಶಪಡಿಸಿಕೊಳ್ಳಲಾಗಿದೆ.

ಜ್ಞಾನಭಾರತಿ ಕ್ಯಾಂಪಸ್‌ನ ಕಾವಲುಗಾರ, ಹಲಸೂರು ನಿವಾಸಿ ತೆಂಗಮಂಗಲಂ ಅವರು ನೀಡಿದ್ದ ದೂರನ್ನು ಆಧರಿಸಿ ಆರೋಪಿಯನ್ನು ಬಂಧಿಸಲಾಗಿದೆ. ಈತ ವರ್ಷದ ನವೆಂಬರ್ ಹಾಗೂ 2015, 2017ರಲ್ಲಿ ದಾಖಲಾಗಿದ್ದ ಶ್ರೀಗಂಧ ಕಳ್ಳತನ ಪ್ರಕರಣಗಳು ಪತ್ತೆಯಾಗಿವೆ. ನವೆಂಬರ್ 13 ರಂದು ರಾತ್ರಿ ಜ್ಞಾನಭಾರತಿ ಆವರಣದಲ್ಲಿ ನಾಲ್ವರು ಆರೋಪಿಗಳು ಶ್ರೀಗಂಧದ ಮರವನ್ನು ಕಡಿಯುತ್ತಿದ್ದರು. ಅಲ್ಲಿಗೆ ಕಾವಲುಗಾರ ತೆರಳಿದಾಗ ಅವರನ್ನು ಕಂಡ ಕಳ್ಳರು ಪರಾರಿಯಾಗಿದ್ದರು ಎಂದು ಪೊಲೀಸರು ಹೇಳಿದ್ದಾರೆ.

ಮತ್ತೊಂದು ಪ್ರಕರಣದಲ್ಲಿ ಶ್ರೀಗಂಧದ ತುಂಡುಗಳನ್ನು ಅಕ್ರಮವಾಗಿ ಸಾಗಣೆ ಮಾಡುತ್ತಿದ್ದ ಆರೋಪಿ ಶರತ್ ಎಂಬಾತನನ್ನು ಸುಬ್ರಹ್ಮಣ್ಯನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ. ಈತನಿಂದ ರೂ. 14.60 ಲಕ್ಷ ಮೌಲ್ಯದ 146 ಕೆ.ಜಿ ಶ್ರೀಗಂಧದ ತುಂಡುಗಳನ್ನು ಜಪ್ತಿ ಮಾಡಿಕೊಳ್ಳಲಾಗಿದೆ. ಕನಕಪುರ ಮುಖ್ಯರಸ್ತೆಯ ಗುಬ್ಬಲಾಳದ ಮೂಲಕ ಉತ್ತರಹಳ್ಳಿ ಕಡೆಗೆ ಟ್ರಕ್‌ನಲ್ಲಿ ಶ್ರೀಗಂಧದ ಮರದ ತುಂಡುಗಳನ್ನು ಬೆಂಗಳೂರಿಗೆ ಸಾಗಣೆ ಮಾಡಲಾಗುತ್ತಿತ್ತು. ಖಚಿತ ಮಾಹಿತಿ ಆಧರಿಸಿ ಆರೋಪಿಯನ್ನು ಬಂಧಿಸಲಾಯಿತು ಎಂದು ಪೊಲೀಸ್‌ ಮೂಲಗಳು ಹೇಳಿವೆ. ಕೊಡಗು ಜಿಲ್ಲೆಯ ಸಿದ್ದಾಪುರ, ವಿರಾಜಪೇಟೆ ಬಾಗದ ಇಬರು ಆರೋಪಿಗಳು, ಸೌದೆ ತರುವ ನೆಪದಲ್ಲಿ ಅರಣ್ಯಕ್ಕೆ ಹೋಗಿ ಶ್ರೀಗಂಧದ ಮರಗಳನ್ನು ಕಡಯುತ್ತಿದ್ದರು. ನಂತರ ಈ ತುಂಡುಗಳನ್ನು ಭರತ್‌ ಗೆ ಮಾರಾಟ ಮಾಡುತ್ತಿದ್ದರು ಎನ್ನುವುದು ತನಿಖೆಯಿಂದ ತಿಳಿದು ಬಂದಿದೆ.

More articles

Latest article