ಲೋಕಸಭೆಯಲ್ಲಿ ಚೊಚ್ಚಲ ಭಾಷಣದಲ್ಲೇ ಗಮನ ಸೆಳೆದ ಪ್ರಿಯಾಂಕಾ ಗಾಂಧಿ

Most read

ಹೊಸದಿಲ್ಲಿ : ಕೇರಳದ ವಯನಾಡ್ ಲೋಕಸಭಾ ಕ್ಷೇತ್ರದಿಂದ ಗೆಲುವು ಸಾಧಿಸಿರುವ ಕಾಂಗ್ರೆಸ್ ನ ಪ್ರಿಯಾಂಕಾ ಗಾಂಧಿ ಲೋಕಸಭೆಯಲ್ಲಿ ತಮ್ಮ ಚೊಚ್ಚಲ ಭಾಷಣದಲ್ಲೇ ಎಲ್ಲರ ಗಮನ ಸೆಳೆದಿದ್ದಾರೆ. ಸಂವಿಧಾನ, ಮೀಸಲಾತಿ ಮತ್ತು ರಾಷ್ಟ್ರವ್ಯಾಪಿ ಜಾತಿ ಗಣತಿ ಕುರಿತು ಅವರು ಮಾಡಿದ ಚೊಚ್ಚಲ ಭಾಷಣ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ.

ಸಂವಿಧಾನವನ್ನು ಅಳವಡಿಸಿಕೊಂಡ 75 ನೇ ವರ್ಷಾಚರಣೆ ಅಂಗವಾಗಿ ನಡೆಯುತ್ತಿರುವ ಚರ್ಚೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು ಸಂವಿಧಾನ ಸುರಕ್ಷಾ ಕವಚವಾಗಿರಬೇಕು. ಆದರೆ ಆದರೆ ಪ್ರಧಾನಿ ಮೋದಿ ಸರ್ಕಾರ ಈ ಸುರಕ್ಷಾ ಕವಚವನ್ನು ಮುರಿಯಲು ಪ್ರಯತ್ನಿಸುತ್ತಿದೆ. ಅಷ್ಟೇ ಏಕೆ ಸಂವಿಧಾನವನ್ನು ಬದಲಾಯಿಸಲೂ ಪ್ರಯತ್ನಿಸುತ್ತಿದೆ ಎಂದು ಆರೋಪ ಮಾಡಿದರು.

ಪ್ರಧಾನಿ ಮೋದಿ ಅವರಿಗೆ ಭಾರತದ ಸಂವಿಧಾನ ಅರ್ಥವಾಗುವುದಿಲ್ಲ. ಆದರೆ ಸಂಘದ ವಿಧಾನ ಮಾತ್ರ ಚೆನ್ನಾಗಿ ಅರ್ಥವಾಗುತ್ತಿದೆ ಎಂದು ಲೇವಡಿ ಮಾಡಿದರು. ದೇಶದಲ್ಲಿ ಮೀಸಲಾತಿ ವ್ಯವಸ್ಥೆಯನ್ನು ದುರ್ಬಲಗೊಳಿಸಲು ಪ್ರಯತ್ನ ಮಾಡಲಾಗುತ್ತಿದೆ. ಸರ್ಕಾರ ಕೂಡಲೇ ದೇಶಾದ್ಯಂತ ಜಾತಿ ಗಣತಿಯನ್ನು ಆರಂಭಿಸಬೇಕು. ಇಡೀ ದೇಶ ಜಾತಿ ಗಣತಿಗಾಗಿ ಆಗ್ರಹಪಡಿಸುತ್ತಿದ್ದರೆ ಬಿಜೆಪಿ ಮಾತ್ರ ಗೋವು, ಮಂಗಲಸೂತ್ರ ಕಳೆದುಹೋಗುತ್ತದೆ ಎಂಬ ಮಾತುಗಳನ್ನಾಡುತ್ತಾ ದಾರಿ ತಪ್ಪಿಸುತ್ತಿದೆ ಎಂದರು.
ತಮ್ಮ30 ನಿಮಿಷದ ಭಾಷಣದಲ್ಲಿ ವ್ಯಂಗ್ಯವಾಗಿ ಬಿಜೆಪಿಯನ್ನು ಲೇವಡಿ ಮಾಡುತ್ತಾ ಸಂವಿಧಾನವನ್ನು ದುರ್ಬಲಗೊಳಿಸುತ್ತಾ, 142 ಕೋಟಿ ಈ ದೇಶದ ನಾಗರೀಕರಿಗೆ ತೋರದ ಒಲವು ಬರೀ ಒಬ್ಬರ ಮೇಲೆ ಯಾಕೆ ಎಂದು ಪ್ರಶ್ನಿಸಿದರು.

ಉದ್ಯಮಿ ಗೌತಮ್ ಅದಾನಿ ಹೆಸರನ್ನು ಪ್ರಸ್ತಾಪಿಸದೇ ಪ್ರಿಯಾಂಕಾ ಒಬ್ಬರ ಲಾಭಕ್ಕಾಗಿ ಆಡಳಿತ ಪಕ್ಷವು ಕೆಲಸ ಮಾಡುತ್ತಿದೆಯೇ ಎಂಬ ಅನುಮಾನ ದೇಶದ ಜನರನ್ನು ಕಾಡುತ್ತಿದೆ ಎಂದು ಕಿಡಿಕಾರಿದ್ದಾರೆ. ಈ ಸಂದರ್ಭದಲ್ಲಿ ಅವರ ಭಾಷಣಕ್ಕೆ, ಕಾಂಗ್ರೆಸ್ ಸಂಸದರು ಮೇಜುಕುಟ್ಟಿ ಹುರುಪು ತುಂಬಿದರು
ಒಬ್ಬ ವ್ಯಕ್ತಿಯನ್ನು ರಕ್ಷಿಸಲು 142 ಕೋಟಿ ಜನರ ಹಿತವನ್ನು ಕಾಪಾಡದೇ ಇರುವುದು ಬಹಳ ದೊಡ್ಡ ದುರಂತ. ಈ ದೇಶದ ಎಲ್ಲಾ ಉದ್ಯಮಗಳು, ಹಣ ಮತ್ತು ಸಂಪನ್ಮೂಲಗಳು ಒಬ್ಬ ವ್ಯಕ್ತಿ ಕಡೆಗೆ ಹೋಗುತ್ತಿವೆ ಎಂದು ಪ್ರಿಯಾಂಕಾ ದೂರಿದರು.

More articles

Latest article