ಪ್ರೀತಿ ನಿರಾಕರಿಸಿದ್ದಕ್ಕೆ ಮಹಿಳೆಯನ್ನು ಕೊಂದು ಆತ್ಮಹತ್ಯೆ ಮಾಡಿಕೊಂಡ ಯುವಕ

Most read

ಬೆಂಗಳೂರು: ವಿವಾಹಿತ ಮಹಿಳೆಯೊಬ್ಬರಿಗೆ ಪ್ರೀತಿಸುವಂತೆ ಪೀಡಿಸುತ್ತಿದ್ದ ಯುವಕನೊಬ್ಬ ಪ್ರೀತಿ ನಿರಾಕರಿಸಿದ್ದಕ್ಕೆ ಆಕೆಯನ್ನು ಚಾಕುವಿನಿಂದ ಇರಿದು ಭೀಕರವಾಗಿ ಹತ್ಯೆ ಮಾಡಿ ನಂತರ ತಾನೂ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ವೈಟ್‌ ಫೀಲ್ಡ್‌ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

ಪಶ್ಚಿಮ ಬಂಗಾಳದ ಮೊಹುವಾ ಮಂಡಲ್(26) ಕೊಲೆಯಾದ ಮಹಿಳೆ. ಈಕೆಯ ಕೊಲೆ ಮಾಡಿದ ನಂತರ ಮಿಥುನ್ ಮಂಡಲ್ (26) ಮರಕ್ಕೆ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ. ಪಶ್ಚಿಮ ಬಂಗಾಳದ ಮೊಹುವಾ ಮಂಡಲ್ ಹಾಗೂ ಅವರ ಪತಿ ಹರಿಪ್ರಸಾದ್ ಮಂಡಲ್ ಮೂರು ವರ್ಷಗಳ ಹಿಂದೆ ಬೆಂಗಳೂರಿಗೆ ಉದ್ಯೋಗ ಹುಡುಕಿಕೊಂಡು ಬಂದಿದ್ದರು.

ವೈಟ್‌ಫೀಲ್ಡ್ ಸಮೀಪದ ಶೆಡ್‌ನಲ್ಲಿ ತಮ್ಮ ಮಗುವಿನ ಜತೆ ವಾಸಿಸುತ್ತಿದ್ದರು. ಮೊಹುವಾ, ಖಾಸಗಿ ಕಾಲೇಜಿನಲ್ಲಿ ಕ್ಲೀನಿಂಗ್‌ ಕೆಲಸ ಮಾಡುತ್ತಿದ್ದರು. ಹರಿಪ್ರಸಾದ್ ರಾಪಿಡೊ ಬೈಕ್ ಓಡಿಸುತ್ತಿದ್ದರು. ಆರೋಪಿ ಮಿಥುನ್ ಮಂಡಲ್, ಮೊಹುವಾ ಮಂಡಲ್ ಅವರು ಕೆಲಸ ಮಾಡುತ್ತಿದ್ದ ಕಾಲೇಜಿನಲ್ಲಿ ಸೆಕ್ಯೂರಿಟಿ ಗಾರ್ಡ್ ಆಗಿ ಕೆಲಸ ಮಾಡುತ್ತಿದ್ದ. ಈತನೂ ಮೂರು ವರ್ಷಗಳ ಹಿಂದೆ ಬೆಂಗಳೂರಿಗೆ ಆಗಮಿಸಿದ್ದು ಪಿಜಿಯಲ್ಲಿ ವಾಸವಾಗಿದ್ದ ಎಂದು
ಪೊಲೀಸರು ತಿಳಿಸಿದ್ದಾರೆ.

ಮಿಥುನ್ ಮತ್ತು ಮೊಹುವಾ ಇಬ್ಬರೂ ಒಂದೇ ಕಾಲೇಜಿನಲ್ಲಿ ಕೆಲಸ ಮಾಡುತ್ತಿದ್ದ ಕಾರಣಕ್ಕೆ ಪರಸ್ಪರ ಪರಿಚಯವಾಗಿದ್ದರು. ಕೆಲವು ದಿನಗಳ ನಂತರ ಆರೋಪಿ ತನ್ನನ್ನು ಪ್ರೀತಿಸುವಂತೆ ಒತ್ತಾಯ ಮಾಡುತ್ತಿದ್ದ. ಈ ಬೇಡಿಕೆಯನ್ನು ಮೊಹುವಾ ತಿರಸ್ಕರಿಸಿ ಇಂತಹ ಕೆಲಸ ಮಾಡಬಾರದು
ಎಂದು ಬುದ್ಧಿಮಾತು ಹೇಳಿದ್ದರು. ಆದರೂ ಆರೋಪಿ ಮಿಥುನ್‌, ಗಂಡ ಮತ್ತು ಮಗುವನ್ನು ಬಿಟ್ಟು ತನ್ನೊಂದಿಗೆ ಬಾಳುವಂತೆ ಒತ್ತಡ ಹೇರುತ್ತಿದ್ದ. ಇದರಿಂದ ಬೇಸತ್ತ ಮಹಿಳೆ ಬೇರೆ ಕಡೆ ಕೆಲಸ ಹುಡುಕಿ ಕೊಂಡಿದ್ದರು.

ಬುಧವಾರ ಸಂಜೆ ಆಕೆಯನ್ನು ಭೇಟಿ ಮಾಡಿದ್ದ ಆರೋಪಿ ತನ್ನ ಜತೆ ಬರುವಂತೆ ಬಲವಂತ ಮಾಡಿದ್ದ. ಆಕೆ ನಿರಾಕರಿಸಿದಾಗ ಚಾಕುವಿನಿಂದ ಆಕೆಯ ಹೊಟ್ಟೆ ಮತ್ತು ಎದೆಯ ಭಾಗಕ್ಕೆ ಇರಿದಿದ್ದ. ಇದರಿಂದ ಆಕೆ ಸ್ಥಳದಲ್ಲೇ ಮೃತಪಟ್ಟಿದ್ದಳು. ನಂತರ ಆತನೂ ನಲ್ಲೂರು ಸಮೀಪ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ.

More articles

Latest article